ಕುಸುರಿಯ ಮೇಲೆ ಕ್ರೌರ್ಯದ ಬೆವರು

7

ಕುಸುರಿಯ ಮೇಲೆ ಕ್ರೌರ್ಯದ ಬೆವರು

Published:
Updated:
ಕುಸುರಿಯ ಮೇಲೆ ಕ್ರೌರ್ಯದ ಬೆವರು

ಗೇಯ–ನಾಟಕಕ್ಕೆ ಹಿಡಿದಿಟ್ಟುಕೊಳ್ಳುವ ಲಾಲಿತ್ಯವಿದೆ. ಅದು ಬಿಡಿ ಬಿಡಿ ದೃಶ್ಯಗಳನ್ನೇ ನೋಡುತ್ತಾ ಮೈಮರೆಯುವಂತೆ ಮಾಡಬಲ್ಲುದು. ‘ಪದ್ಮಾವತ್’ ಸಿನಿಮಾ ಕೂಡ ಹಾಗೆಯೇ. 16ನೇ ಶತಮಾನದಲ್ಲಿ ಮಲಿಕ್ ಮುಹಮ್ಮದ್ ಜಾಯಸಿ ಬರೆದ ‘ಪದ್ಮಾವತ್’ ಕಾವ್ಯವನ್ನು ಆಧರಿಸಿದ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮತನದ ಕುಸುರಿಯ ರೆಕ್ಕೆಪುಕ್ಕ ಹಚ್ಚಿಯೇ ಕಟ್ಟಿಕೊಟ್ಟಿದ್ದಾರೆ.

ಸಿನಿಮಾದಲ್ಲಿ ಮುಖ್ಯವಾಗಿ ಇರುವುದು ಇತಿಹಾಸದ ಮೂರು ಪಾತ್ರಗಳು. ಅಲ್ಲಾವುದ್ದೀನ್ ಖಿಲ್ಜಿ, ಪದ್ಮಾವತಿ ಹಾಗೂ ಮಹಾರಾವಲ್ ರತನ್ ಸಿಂಗ್. ಶೀರ್ಷಿಕೆಯ ಅನ್ವಯ ಪದ್ಮಾವತಿಯೇ ಮುಖ್ಯಪಾತ್ರವಾದರೂ ಚಿತ್ರದಲ್ಲಿ ಹೆಚ್ಚು ಪೋಷಣೆ ಸಿಕ್ಕಿರುವುದು ಖಿಲ್ಜಿಯ ಪಾತ್ರಕ್ಕೆ.

ಚಿತ್ತೂರು ರಾಜ ಮಹಾರಾವಲ್ ರತನ್ ಸಿಂಗ್ ಮೊದಲನೇ ಹೆಂಡತಿಗೆ ಮುತ್ತುಗಳನ್ನು ತರಲೆಂದು ಸಿಂಹಳಕ್ಕೆ ಹೋದವನು ಮುತ್ತಿನಂಥ ಎರಡನೇ ಹೆಂಡತಿಯನ್ನೇ ತರುತ್ತಾನೆ. ಅವಳೇ ಪದ್ಮಾವತಿ. ರೂಪವತಿಯೂ ಗುಣವತಿಯೂ ಆದ ಅವಳು ಸಿಂಹಳದವಳಾದರೂ ರಜಪೂತರ ಪಾತಿವ್ರತ್ಯ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುವವಳು. ಅವಳನ್ನು ಪಡೆದರೆ ಜಗತ್ತನ್ನೇ ಗೆಲ್ಲಬಲ್ಲ ಸಾಮರ್ಥ್ಯ ತನ್ನದಾಗುತ್ತದೆ ಎಂಬ ಅಫೀಮಿನ ನಶೆಯಲ್ಲಿ ಖಿಲ್ಜಿ ಚಿತ್ರದುದ್ದಕ್ಕೂ ವರ್ತಿಸತೊಡಗುತ್ತಾನೆ. ಪದ್ಮಾವತಿಯ ‘ಜೋಹರ್’ (ಅಗ್ನಿ ಆಹುತಿಯಾಗುವ ‘ಸತಿ’ ಪದ್ಧತಿಗೆ ಸಮಾನ

ವಾದ ಆಚರಣೆ)ನಿಂದಾಗಿ ಖಿಲ್ಜಿಯ ಅಭೀಪ್ಸೆ ಈಡೇರದೆ ಇರುವುದು ಚಿತ್ರದ ಸಂಕ್ಷಿಪ್ತ ಕಥನ.

ರಜಪೂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳು ಚಿತ್ರದಲ್ಲಿವೆ ಎಂದೇ ಭಾವಿಸಿ ಅನೇಕರು ಸಿನಿಮಾ ತೆರೆಕಾಣದಂತೆ ಪ್ರತಿಭಟನೆ ನಡೆಸಿದ್ದರು. ಕೆಲವರು ಹಿಂಸಾಮಾರ್ಗ ಹಿಡಿಯುವ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ, ಸಿನಿಮಾದಲ್ಲಿ ರಜಪೂತರ ಶೌರ್ಯ, ಆತ್ಮಗೌರವದ ಕುರಿತು ಹೆಚ್ಚೇ ಗುಣವಿಶೇಷಣಗಳಿರುವ ಸಂಭಾಷಣೆಗಳಿವೆ. ಖಿಲ್ಜಿಯನ್ನು ಅತಿ ಮದೋನ್ಮತ್ತನ ಪಾತ್ರದಲ್ಲಿ ನಿರ್ದೇಶಕರು ಕಟೆದಿದ್ದಾರೆ. ಕೆಲವು ದೃಶ್ಯಗಳಲ್ಲಂತೂ ಅವನು ಮೃಗೀಯವಾಗಿ ವರ್ತಿಸುತ್ತಾನೆ.

ಪಾತ್ರಗಳ ರೂಹುಗಳಿಗೆ ತಕ್ಕಂತೆ ನಿರ್ದೇಶಕರು ನೆರಳು–ಬೆಳಕು, ಬಣ್ಣಗಳನ್ನೂ ಆಯ್ಕೆ ಮಾಡಿಕೊಂಡಿರುವುದು ಅವರ ಗೇಯಪ್ರಿಯತೆಗೆ ಸಾಕ್ಷಿ. ಖಿಲ್ಜಿ ಸದಾ ಮಂದಬಣ್ಣದ ವಸ್ತ್ರಗಳಿಂದ, ಢಾಳಾದ ಕಾಡಿಗೆಯ ಚೌಕಟ್ಟಿನಲ್ಲಿನ ಸಣ್ಣ ಕಣ್ಣುಗಳಿಂದಲೇ ಪ್ರಕಟಗೊಳ್ಳುತ್ತಾನೆ. ಅವನ ನಡೆ–ನುಡಿ, ನರ್ತನ ಎಲ್ಲದರಲ್ಲೂ ಮೃಗೀಯ ಧೋರಣೆ ತುಂಬಿ ತುಳುಕಿದೆ.

ಅದೇ ಚಿತ್ತೂರಿನ ರಾಜನ ಉಡುಗೆಗಳದ್ದು ಹೊಳೆಯುವ ಬಣ್ಣ. ಅವನ ವದನದಲ್ಲೂ ತೀಡಿದಂಥ ಹೊಳಪು. ಪದ್ಮಾವತಿಯ ಕಂಗಳಲ್ಲಿ ಸದಾ ತುಂಬಿಕೊಂಡ ನೀರು ಅವಳೊಳಗಿನ ಸಂದಿಗ್ಧ ದಾಟಿಸಿದರೆ, ಆಡುವ ಮಾತುಗಳಲ್ಲಿನ ಖಚಿತತೆ ವ್ಯಕ್ತಿತ್ವದ ತೂಕಕ್ಕೆ ಕನ್ನಡಿ ಹಿಡಿಯುತ್ತದೆ.

ಖರ್ಚಿನ ವಿಷಯದಲ್ಲಿಯೂ ಬನ್ಸಾಲಿ ಜಾಣರು. ಅವರು ಯುದ್ಧದ ದೃಶ್ಯಗಳನ್ನು ಎಷ್ಟು ಬೇಕೋ ಅಷ್ಟೇ ತೋರಿಸುತ್ತಾರೆ. ಹಿನ್ನೆಲೆ ಸಂಗೀತ ಹಾಗೂ ನೆರಳು–ಬೆಳಕಿನ ಆಟಗಳ ಮೂಲಕ ಶಾಟ್‌ಗಳಿಗೆ ದಿಢೀರನೆ ‘ಕಟ್’ ಹೇಳಿರುವುದರಲ್ಲಿ ಬಜೆಟ್‌ ಲೆಕ್ಕಾಚಾರ ಇರಬಹುದು. ಆದರೆ, ಅದರಿಂದ ಅವರ ಉದ್ದೇಶ ಮುಕ್ಕಾಗಿಲ್ಲ.

ಸಿನಿಮಾಟೊಗ್ರಫರ್ ಸಂದೀಪ್ ಚಟರ್ಜಿ ಚಿತ್ರದಲ್ಲಿ ಹೆಚ್ಚೇ ತಲೆ ಉಪಯೋಗಿಸಿದ್ದಾರೆ. ಬಹುಪಾಲು ದೃಶ್ಯಗಳಿಗೆ ಮಂದಬೆಳಕನ್ನು ಅವರು ಆಯ್ಕೆ ಮಾಡಿಕೊಂಡಿರುವುದು ದೀಪಗಳ ಸಣ್ಣ ಸಣ್ಣ ಪಲುಕುಗಳ ವೈಭವ ಎದ್ದುಕಾಣಲು ಕಾರಣವಾಗಿದೆ. ವಸ್ತ್ರವಿನ್ಯಾಸ, ಅದ್ದೂರಿ ಸ್ಟೇಜ್‌ಗಳು, ಸಮೂಹ ನೃತ್ಯಗಳಲ್ಲಿ ಲೆಕ್ಕಕ್ಕೆ ಸಿಗಬಾರದಷ್ಟು ಜನರನ್ನು ಇಡುಕಿರುವುದು... ಎಲ್ಲವೂ ಗೇಯ–ನಾಟಕಕ್ಕೆ ಅಗತ್ಯವಿರುವ ವೈಭವದ ಚೌಕಟ್ಟನ್ನು ಒದಗಿಸಿವೆ.

ಅಭಿನಯದಲ್ಲಿ ರಣವೀರ್ ಸಿಂಗ್ ಎಲ್ಲರನ್ನೂ ಹುರಿದು ಮುಕ್ಕಿದ್ದಾರೆ. ಮುಖದ ಪ್ರತಿ ಗೆರೆಯಲ್ಲೂ ಮೃಗೀಯ ಭಾವನೆಯನ್ನು, ಮಾತಿನ ಬೀಸಿನಲ್ಲಿ ಕತ್ತಿಯ ವೇಗವನ್ನು ಅಭಿವ್ಯಕ್ತಿಸಿದ್ದಾರೆ. ಹುರಿಗಟ್ಟಿದ ಅವರ ದೇಹ ಕೂಡ ಅದಕ್ಕೆ ಚೆನ್ನಾಗಿ ಸ್ಪಂದಿಸಿದೆ. ಕಣ್ಣರೆಪ್ಪೆಗಳನ್ನು ಅಪರೂಪಕ್ಕೆ ಬಡಿಯುವ ಅವರ ನಟನಾ ತಾದಾತ್ಮ್ಯವನ್ನು ಮೆಚ್ಚಲೇಬೇಕು.

ಚಿತ್ತೂರಿನ ರಾಜನಾಗಿ ಶಾಹಿದ್ ಕಪೂರ್ ಪೀಚೆನಿಸಲು ಅವರ ಮಂದಸ್ಥಾಯಿಯ ಶಾರೀರವೇ ಕಾರಣ. ವೇಷಭೂಷಣಗಳ ಗಾಢತೆಯಲ್ಲಿ ದೀಪಿಕಾ ಪಡುಕೋಣೆ ಅವರ ಅಭಿನಯ ಹುದುಗಿಹೋದಂತೆ ಕಾಣುತ್ತದೆ. ಸಂಭಾಷಣೆಯ ಏರಿಳಿತ (ಪ್ರಕಾಶ್ ಕಪಾಡಿಯ ಬರೆದ ಮಾತುಗಳು) ಹದವರಿತಂತೆ ಇದೆ. ಅತಿ ಕಡಿಮೆ ಎನ್ನಬಹುದಾದ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅವರ ಕೆನ್ನೆ ಮೇಲೆ ಬೀಳುವ ಕೆಂಬೆಳಕು ನಾಚಿದೆ.

‘ಪದ್ಮಾವತಿ’ಯ ಜಾಣ್ಮೆಗೆ ಕೆಲವೇ ಉದಾಹರಣೆಗಳನ್ನು ಕೊಡುವ ಸಿನಿಮಾದಲ್ಲಿ ಆ ಪಾತ್ರದ ತೂಕವನ್ನು ಇನ್ನೂ ಹೆಚ್ಚಿಸಬಹುದಾಗಿತ್ತು. ಬಣ್ಣ–ಬೆಳಕಿನ ಕುಸುರಿಯು ಪಾವಿತ್ರ್ಯದ ನವಿರಾದ ಕಥನವಾಗಿ ಕಂಗೊಳಿಸದೆ, ಖಿಲ್ಜಿಯ ಕ್ರೌರ್ಯದ ಬೆವರಿನಲ್ಲಿ ಕಮರಿದಂತಾಗುತ್ತದೆ. ಇದು ಚಿತ್ರಶಿಲ್ಪದ ಕೊರತೆಯೇನೋ ಎಂಬ ಪ್ರಶ್ನೆಯನ್ನೂ ಉಳಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry