ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 35 ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು?

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಮೂಲ ವೇತನಕ್ಕೆ ಶೇ 30ರಿಂದ ಶೇ 35ರಷ್ಟು ಫಿಟ್‌ಮೆಂಟ್‌ ನೀಡುವಂತೆ ಆರನೇ ವೇತನ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಫಿಟ್‌ಮೆಂಟ್ ಅನ್ನು ಹೆಚ್ಚಿಸಿದರೆ ಈಗಿರುವ ₹9,600 ಇರುವ ಕನಿಷ್ಠ ಮೂಲವೇತನ ₹17,420ರಿಂದ ₹17,950ರವರೆಗೆ ಏರಿಕೆಯಾಗಲಿದೆ.

ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯೋಗದ ಅವಧಿ ಇದೇ 31ಕ್ಕೆ ಮುಕ್ತಾಯವಾಗಲಿದೆ. ಈ ತಿಂಗಳ ಕೊನೆಗೆ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲು ತಯಾರಿ ನಡೆದಿದೆ ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೇಂದ್ರ ಸರ್ಕಾರ ಹಾಗೂ ಅಕ್ಕಪಕ್ಕದ ರಾಜ್ಯಗಳ ವೇತನ ಶ್ರೇಣಿಗಳನ್ನು ಅಧ್ಯಯನ ಮಾಡಿರುವ ಆಯೋಗ, ವೇತನ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸು ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಶಿಫಾರಸುಗಳನ್ನು ಎರಡು ಪ್ರತ್ಯೇಕ ವರದಿಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ಹೇಳಿವೆ.

ತಾರತಮ್ಯ ನಿವಾರಣೆಗೆ ಯತ್ನ: ರಾಜ್ಯ ಸರ್ಕಾರಿ ನೌಕರರ ಆರಂಭಿಕ ವೇತನ ಶ್ರೇಣಿ (ಡಿ ಗ್ರೂಪ್ ನೌಕರ) ₹9,600 ಇದೆ. ಅಕ್ಕಪಕ್ಕದ ರಾಜ್ಯಗಳು ಕಳೆದ ಮೂರು ವರ್ಷಗಳ ಹಿಂದೆ ಪರಿಷ್ಕರಿಸಿದ ವೇತನ ಶ್ರೇಣಿಗೆ ಹೋಲಿಸಿದರೆ ಆಂಧ್ರಪ್ರದೇಶದಲ್ಲಿ ಆರಂಭಿಕ ವೇತನ ಶ್ರೇಣಿ ₹13,000 ಇದ್ದು, ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ನೀಡಿದ ವಾರ್ಷಿಕ ವೇತನ ಬಡ್ತಿ ಸೇರಿ, ಮೂಲವೇತನದ ಪ್ರಮಾಣ ಅಲ್ಲಿ ₹14,200ರ ಆಸುಪಾಸಿನಲ್ಲಿದೆ. ಆದರೆ, ಮಹಾರಾಷ್ಟ್ರ, ತಮಿಳುನಾಡು, ಕೇರಳ ನೌಕರರು ಇದಕ್ಕಿಂತಲೂ ಹೆಚ್ಚಿನ ಮೊತ್ತ ಪಡೆಯುತ್ತಿದ್ದು, ಕೇರಳದಲ್ಲಿ ಆರಂಭಿಕ ವೇತನ ಶ್ರೇಣಿ (ವಾರ್ಷಿಕ ವೇತನ ಬಡ್ತಿ ಮೊತ್ತ ಬಿಟ್ಟು) ₹16,500 ಇದೆ.

ಕೇಂದ್ರ ಸರ್ಕಾರ ಏಳನೇ ವೇತನ ಆಯೋಗ ಜಾರಿ ಮಾಡಿದಾಗ ಮೊದಲು ₹18,000ಕ್ಕೆ ನಿಗದಿ ಮಾಡಲಾಗಿತ್ತು. ನೌಕರರ ಬೇಡಿಕೆ ಆಧರಿಸಿ ಈಗ ₹21,000ಕ್ಕೆ ನಿಗದಿ ಮಾಡಲಾಗಿದೆ. ಕೇಂದ್ರ ನೌಕರರ ವೇತನಕ್ಕೆ ಸಮಾನವಾಗಿ ವೇತನ ಪರಿಷ್ಕರಿಸಬೇಕು ಎಂಬ ಬೇಡಿಕೆ ನೌಕರರ ಸಂಘದ್ದಾಗಿದೆ. ಆದರೆ, ಅಷ್ಟು ಬೃಹತ್ ಪ್ರಮಾಣದಲ್ಲಿ ಸಾಮಾನ್ಯವಾಗಿ ಹೆಚ್ಚಳ ಮಾಡುವ ಪರಿಪಾಠ ಇಲ್ಲ. ಹೀಗಾಗಿ, ನೆರೆಯ ರಾಜ್ಯಗಳ ವೇತನ ಪ್ರಮಾಣಕ್ಕೆ ಸರಿದೂಗಿಸುವ ಮಟ್ಟದಲ್ಲಿ ಹೆಚ್ಚಳಕ್ಕೆ ಶಿಫಾರಸು ಮಾಡಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.

ವೇತನ ಪರಿಷ್ಕರಣೆ ಮಾಡುವಾಗ ಹಾಲಿ ಇರುವ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನ ಮಾಡಲಾಗುತ್ತದೆ. ಇದರ ಜತೆಗೆ ಫಿಟ್‌ಮೆಂಟ್ ನೀಡುವ ಪದ್ಧತಿ ಚಾಲ್ತಿಯಲ್ಲಿದೆ.

ಸದ್ಯ ಕನಿಷ್ಠ ಮೂಲವೇತನ ₹9,600 ಇದೆ. ಶೇ 45.25ರಷ್ಟಿರುವ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನ ಮಾಡಿದರೆ ₹3,800 ಸೇರ್ಪಡೆಯಾಗಿ ಕನಿಷ್ಠ ಮೂಲವೇತನ ₹13,400ಕ್ಕೆ ಏರಿಕೆಯಾಗಲಿದೆ.  2012ರಲ್ಲಿ ವೇತನ ಪರಿಷ್ಕರಣೆ ಮಾಡಿದಾಗ
ತುಟ್ಟಿಭತ್ಯೆ ಶೇ 100ರಷ್ಟಿತ್ತು. ಅದನ್ನು ವಿಲೀನ ಮಾಡುವುದರ ಜತೆಗೆ ಶೇ 22ರಷ್ಟು ಫಿಟ್‌ಮೆಂಟ್‌ ನೀಡಲಾಗಿತ್ತು. ಈ ಬಾರಿ ತುಟ್ಟಿಭತ್ಯೆ ಶೇ 45.25ರಷ್ಟು ಇರುವುದರಿಂದ ಶೇ 40ರಿಂದ ಶೇ 45ರಷ್ಟು ಫಿಟ್‌ಮೆಂಟ್‌ ನೀಡಿದರೆ ಮಾತ್ರ ತಾರತಮ್ಯ ನಿವಾರಣೆಯಾಗಲಿದೆ ಎಂದು ನೌಕರರ ಸಂಘಟನೆಗಳು ಪ್ರತಿಪಾದಿಸಿವೆ.

ಇದನ್ನು ಅಂದಾಜಿಸಿರುವ ಆಯೋಗ, ಶೇ 30ರಿಂದ ಶೇ 35 ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ. ಶೇ 30ರಷ್ಟು ಫಿಟ್‌ಮೆಂಟ್ ನೀಡಿದರೆ ವಾರ್ಷಿಕ ₹7,000 ಕೋಟಿ, ಶೇ 40ರಷ್ಟು ಕೊಟ್ಟರೆ  ₹ 9,000 ಕೋಟಿಯಿಂದ ₹ 10,000 ಕೋಟಿಯಷ್ಟು ಬೊಕ್ಕಸಕ್ಕೆ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಫಿಟ್‌ಮೆಂಟ್ ಎಂದರೇನು?

ಮೂಲವೇತನದಲ್ಲಿ ತುಟ್ಟಿಭತ್ಯೆ ವಿಲೀನ ಮಾಡಿದರೆ ತುಟ್ಟಿಭತ್ಯೆ ಶೂನ್ಯವಾಗಲಿದೆ. ಹೀಗಾದಲ್ಲಿ ಮೂಲವೇತನ ಹೆಚ್ಚಳವಾದರೂ ತಿಂಗಳಲ್ಲಿ ಕೈಗೆ ಸಿಗುವ ಸಂಬಳದಲ್ಲಿ ದೊಡ್ಡ ಮೊತ್ತದ ಹೆಚ್ಚಳವಾಗುವುದಿಲ್ಲ. ವೇತನ ಪರಿಷ್ಕರಿಸಿದಾಗ ವೇತನ ಹೆಚ್ಚಳವಾಗುವಂತೆ ಮಾಡಲು ‘ತಾರತಮ್ಯ ಸರಿದೂಗಿಸುವ ಮೊತ್ತ’ವನ್ನು ನೀಡಲಾಗುತ್ತದೆ. ಇದನ್ನು ಫಿಟ್‌ಮೆಂಟ್ ಎಂದು ಕರೆಯಲಾಗುತ್ತದೆ.

ಏರಿಕೆಯಾದ ಕನಿಷ್ಠ ಮೂಲವೇತನದ ಮೊತ್ತಕ್ಕೆ ಶೇಕಡಾವಾರು ಪ್ರಮಾಣದಲ್ಲಿ ಫಿಟ್‌ಮೆಂಟ್ ನಿಗದಿ ಮಾಡುವುದರಿಂದ ನೌಕರರ ವೇತನ ಶ್ರೇಣಿಗೆ ತಕ್ಕಂತೆ ವೇತನ ಹೆಚ್ಚಳ ಆಗಲಿದೆ.

ಅವಧಿ ವಿಸ್ತರಿಸಲು ಆಯೋಗ ಕೋರಿಕೆ

ಆಡಳಿತ ಸುಧಾರಣೆಗೆ ಸಂಬಂಧಿಸಿದ ವರದಿ ನೀಡಲು ಇನ್ನೂ ಮೂರು ತಿಂಗಳು ಅವಧಿ ವಿಸ್ತರಿಸಬೇಕು ಎಂದು ಕೋರಿ ಆಯೋಗ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದೆ.

ವೇತನ ಪರಿಷ್ಕರಣೆಗೆ ಸಂಬಂಧಿಸಿದ ವರದಿಯನ್ನು ಕಾಲಮಿತಿಯಲ್ಲಿ ನೀಡಲಾಗುವುದು. ಆದರೆ, ಆಡಳಿತ ಸುಧಾರಣೆ ಕುರಿತು ಇನ್ನಷ್ಟು ಅಧ್ಯಯನ ನಡೆಸಲು ಸಮಯಾವಕಾಶ ಬೇಕಾಗಿದೆ ಎಂದು ಆಯೋಗ ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT