ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವರತ್ನ’ದ ನಗುವಿನೊಡತಿಯ ಮಾಸದ ನೆನಪು...

Last Updated 25 ಜನವರಿ 2018, 19:42 IST
ಅಕ್ಷರ ಗಾತ್ರ

ನಾನು ಮತ್ತು ಕೃಷ್ಣಕುಮಾರಿ ಇಬ್ಬರೂ ಅವಳಿ–ಜವಳಿ ಮಕ್ಕಳ ತರಹವೇ ಬೆಳೆದಿದ್ದೇವೆ. ನಮ್ಮಿಬ್ಬರಿಗೆ ವಯಸ್ಸಿನಲ್ಲಿ ಒಂದು ವರ್ಷ ಮೂರು ತಿಂಗಳ ವ್ಯತ್ಯಾಸ. ನಾನು ಹುಟ್ಟಿದ್ದು 1931ರ ಡಿಸೆಂಬರ್ 12. ಅವಳು ಹುಟ್ಟಿದ್ದು 1933 ಮಾರ್ಚ್‌ 6ರಂದು. ಅವಳ ಹುಟ್ಟಿದ ಹಬ್ಬ ಹತ್ತಿರವೇ ಇದೆ. ‘ಅಲ್ಲಿಯವರೆಗೂ ನಾನು ಇರ್ತೇನಾ?’ ಎಂದು ಇತ್ತೀಚೆಗೆ ಒಮ್ಮೆ ಕೇಳಿದ್ದಳು.

ನಮ್ಮ ತಂದೆ ವೆಂಕೋಜಿ ರಾವ್‌ ಲಂಡನ್‌ನಲ್ಲಿ ಓದಿ ಬಂದವರು. ಕಾಗದ ತಯಾರಿಕಾತಜ್ಞರು. ತಾಯಿ ಶಚೀದೇವಿ. ತಂದೆ ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರು. ನಾನು ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ತಂಗಿ ಹುಟ್ಟಿದ್ದು ಕೋಲ್ಕತ್ತದಲ್ಲಿ.

ತಂದೆಯ ಕೆಲಸದ ಕಾರಣದಿಂದಾಗಿ ಬಿಹಾರ್‌, ಅಸ್ಸಾಂ, ಬಂಗಾಳ, ಚೆನ್ನೈ – ಹೀಗೆ ಬೇರೆ ಬೇರೆ ಸ್ಥಳಗಳಿಗೆ ವಸತಿ ಬದಲಾಯಿಸುತ್ತಲೇ ಇರುತ್ತಿದ್ದೆವು. ಹೀಗಾಗಿಯೇ ನಮಗೆ ಜಾಸ್ತಿ ಓದಲು ಅವಕಾಶ ಆಗುತ್ತಲೇ ಇರಲಿಲ್ಲ.

ನಾನು ಮದುವೆಯಾಗಿ ಒಂದು ಮಗಳಾದ ಮೇಲೆಯೇ ‘ಸಾಹುಕಾರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಕೃಷ್ಣಾ ಎರಡು ವರ್ಷ ಬಿಟ್ಟು ಚಿತ್ರರಂಗಕ್ಕೆ ಬಂದಳು.

ಮದ್ರಾಸ್‌ನಲ್ಲಿ ಒಂದು ದಿನ ಅಮ್ಮ ಮತ್ತು ಕೃಷ್ಣಾ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಅಲ್ಲಿ ಪಿ. ಸುಂದರರಾಜನ್‌ ಅಯ್ಯಂಗಾರ್‌ ಅವರು ಅವಳನ್ನು ನೋಡಿ ‘ನಿಮ್ಮ ಪರ್ಸನಾಲಿಟಿ ತುಂಬ ಚೆನ್ನಾಗಿದೆ. ಸಿನಿಮಾದಲ್ಲಿ ನಟಿಸುತ್ತೀರಾ?’ ಎಂದು ಕೇಳಿದರಂತೆ. ಕೃಷ್ಣಾಗೂ ಇಷ್ಟ ಆಗಿತ್ತು. ತಂದೆಯೂ ಇಂಗ್ಲೆಂಡಿನಲ್ಲಿ ಓದಿರುವವರಾಗಿದ್ದರಿಂದ ತುಂಬ ಮಡಿವಂತಿಕೆಯೇನೂ ಇರಲಿಲ್ಲ. ಮಕ್ಕಳಿಗೆ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಹೀಗೆ  ‘ನವ್ವಿತೆ ನವರತ್ನಾಲು’ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಆ ಸಿನಿಮಾದ ಶೀರ್ಷಿಕೆಯ ಅರ್ಥ ‘ನಕ್ಕರೆ ನವರತ್ನಗಳು’ ಎಂದು! ಇದು ಅವಳಿಗೆ ಅನ್ವರ್ಥವೂ ಆಗಿತ್ತು.

ಆಮೇಲೆ ಅವಳು ಎನ್‌.ಟಿ. ರಾಮರಾವ್‌, ನಾಗೇಶ್ವರರಾವ್‌ ಅವರಂಥವರ ಜತೆ ಬಹಳ ಗ್ಲ್ಯಾಮರಸ್‌ ಆಗಿ, ಸುಂದರವಾಗಿ ನಟಿಸಿದಳು. ತೆಲುಗಿನಲ್ಲಿಯೇ ನೂರಾ ಇಪ್ಪತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಎರಡು ಹಿಂದಿ ಸಿನಿಮಾ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಕನ್ನಡದಲ್ಲಿ ರಾಜಕುಮಾರ್‌, ಉದಯಕುಮಾರ್‌ ಜತೆಗೆ ನಟಿಸಿದ್ದಾಳೆ. .

17 ಸಿನಿಮಾ ಕ್ಯಾನ್ಸಲ್‌!: ತನ್ನ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ವೈಯಕ್ತಿಕ ಕಾರಣಗಳಿಂದ ತುಸು ಆಘಾತಗೊಂಡಿದ್ದಳು. ಆಗ ಎಲ್ಲ ಚಿತ್ರಮಂದಿರಗಳಲ್ಲಿಯೂ ಅವಳ ಸಿನಿಮಾಗಳೇ ಓಡುತ್ತಿದ್ದವು. ಆ ಸಮಯದಲ್ಲಿಯೇ ಮಾನಸಿಕವಾಗಿ ಜರ್ಝರಿತವಾಗಿ ‘ಇನ್ನು ಸಿನಿಮಾ ಸಹವಾಸ ಸಾಕು’ ಎಂದು ಒಂದೇ ದಿನ ಹದಿನೇಳು ಸಿನಿಮಾಗಳನ್ನು ಕ್ಯಾನ್ಸೆಲ್‌ ಮಾಡಿಬಿಟ್ಟಿದ್ದಳು!

ಅದಾಗಿ ಕೆಲವು ಕಾಲದ ನಂತರ ಅಜಯ್‌ ಮೋಹನ್‌ ಕೇತನ್‌ ಎನ್ನುವ ಬೆಂಗಳೂರಿನ ಉದ್ಯಮಿಯೊಬ್ಬರ ಪರಿಚಯವಾಯಿತು. ಅವರೇ ಮದುವೆ ಪ್ರಸ್ತಾಪ ಇಟ್ಟಿದ್ದರು. ಅವರ ಜತೆಗೆ ಕೃಷ್ಣಾ ಮದುವೆ ಆಗಿ ಮದ್ರಾಸ್‌ ಬಿಟ್ಟು ಬೆಂಗಳೂರಿಗೆ ಬಂದರು. ಎಷ್ಟೋ ಜನ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ತುಂಬ ಒತ್ತಾಯ ಮಾಡಿದ್ದರು. ಆದರೆ ಅವಳು ಖಡಾಖಂಡಿತವಾಗಿ ‘ಮದುವೆಯಾದ ಮೇಲೆ ನಟಿಸಲಾರೆ’ ಎಂದು ಹೇಳಿಬಿಟ್ಟಳು.

ಇಲ್ಲಿ ಸೈಟ್‌ ತೆಗೆದುಕೊಂಡು ಮನೆ ಕಟ್ಟಿಕೊಂಡು ಬದುಕು ಆರಂಭಿಸಿದರು. ಆದರೆ ಅವಳಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅನಾಥಾಶ್ರಮದಿಂದ ಒಂದು ಮಗುವನ್ನು ದತ್ತು ಪಡೆದುಕೊಂಡಳು. ದೀಪಾವಳಿ ದಿನದಂದು ದತ್ತು ಪಡೆದಿದ್ದರಿಂದ ‘ದೀಪಿಕಾ’ ಎಂದು ಹೆಸರಿಟ್ಟರು. ಈಗ ಐದು ವರ್ಷಗಳ ಹಿಂದೆ ಅವಳ ಪತಿ ಅಜಯ್‌ ಮೋಹನ್‌ ಕೇತನ್‌ ತೀರಿಕೊಂಡಿದ್ದರು.

ಕೃಷ್ಣಕುಮಾರಿ ಅವರ ಎಸ್ಟೇಟ್‌ನಲ್ಲಿಯೇ ನಾನು ಪುಟ್ಟ ಜಾಗ ಖರೀದಿಸಿ ಪುಟ್ಟ ಮನೆ ಕಟ್ಟಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ವಾಸವಾಗಿದ್ದೀನಿ.

ನಾವಿಬ್ಬರೂ ಸೇರಿಕೊಂಡು ಐದಾರು ಸಿನಿಮಾ ಮಾಡಿದ್ದೇವೆ. ನಮ್ಮಿಬ್ಬರ ನಡುವೆ ಪರಸ್ಪರ ಗೌರವ, ಪ್ರೀತಿ ಇದ್ದರೂ ಒಬ್ಬರ ವೈಯಕ್ತಿಕ ಜೀವನದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುತ್ತಿರಲಿಲ್ಲ.

‘ನಿನ್ನಷ್ಟು ಧೈರ್ಯ ಇರುತ್ತಿದ್ದರೆ...!’: ನನ್ನ ಥರ ಮುಕ್ತವಾಗಿ ಎಲ್ಲವನ್ನೂ ಹಂಚಿಕೊಳ್ಳುವ ಸ್ವಭಾವ ಅವಳದಾಗಿರಲಿಲ್ಲ. ಆಗಾಗ ‘ನಿನ್ನ ಥರ ನನಗೂ ಧೈರ್ಯ ಇದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಎಂದು ಹೇಳಿಕೊಳ್ಳುತ್ತಿದ್ದಳು. ಸಂಬಂಧಿಕರಿಗೆಲ್ಲ ಸಹಾಯ ಮಾಡಿದಾಳೆ. ಅವಳ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರನ್ನೂ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಅವರೆಲ್ಲರೂ ‘ನಮಗೆ ಇನ್ನು ಯಾರಿದ್ದಾರೆ’ ಎಂದು ಅಳುತ್ತಿದ್ದಾರೆ. ಅವರನ್ನು ಬಿಡಿ, ನನಗೇ ಅನಾಥಪ್ರಜ್ಞೆ ಕಾಡುತ್ತಿದೆ.

ಸಿನಿಮಾ ಎಂದರೆ ಪ್ರಾಣ: ಅವಳಿಗೆ ಸಿನಿಮಾ ನೋಡುವುದೆಂದರೆ ತುಂಬ ಖುಷಿ. ಅದು ಅವಳಿಗೆ ಅಪೂರ್ವವಾದ ಮೋಹ. ಮನೆಯಲ್ಲಿದ್ದಾಗಲೂ ಐಪ್ಯಾಡ್‌, ಟೀವಿಗಳಲ್ಲಿ ಹಳೆ ಸಿನಿಮಾಗಳನ್ನು ನೋಡುತ್ತಿದ್ದಳು. ಹೊಸ ಸಿನಿಮಾಗಳು ಬಿಡುಗಡೆಯಾದ ತಕ್ಷಣ ಮೊದಲ ದಿನವೇ ಹೋಗಿ ನೋಡುತ್ತಿದ್ದಳು; ಅಷ್ಟು ಪ್ರೀತಿ ಸಿನಿಮಾ ಎಂದರೆ.

ಕಳೆದ ಡಿಸೆಂಬರ್‌ 12ಕ್ಕೆ ನನ್ನ ಹುಟ್ಟುಹಬ್ಬ ಇತ್ತು. ಅವಳ ಮನೆಯಿಂದ ನನ್ನ ಮನೆಗೆ ಮೂವತ್ತು ಅಡಿ ಅಂತರ ಇರಬಹುದು. ನಮ್ಮಿಬ್ಬರ ಮಧ್ಯದಲ್ಲಿ ಗೋಡೆಗಳಿರಲಿಲ್ಲ. ಆದರೆ ಕೃಷ್ಣಾ ಸಾಕಷ್ಟು ಸೊರಗಿದ್ದಳು. ಹುಶಾರಿರಲಿಲ್ಲ. ಆದರೂ ಕಷ್ಟಪಟ್ಟು ನನ್ನ ಮನೆಗೆ ಬಂದು ಡೈನಿಂಗ್‌ ಟೇಬಲ್‌ ಎದುರು ಕೂತು ನನಗೆ ಸಿಹಿ ತಿನಿಸು ಕೊಟ್ಟು, ಹೂಗುಚ್ಛ ಕೊಟ್ಟು, ಅಂದವಾದ ಗ್ರೀಟಿಂಗ್‌ ಕಾರ್ಡ್‌ ಮೇಲೆ ಸಹಿ ಮಾಡಿ ಕೊಟ್ಟು ಶುಭ ಹಾರೈಸಿದ್ದಳು. ‘ಏನಮ್ಮಾ ಕೃಷ್ಣಾ, ನಾನೇ ಬರ್ತಿದ್ನಲ್ಲ. ಅಡುಗೆ ಮುಗಿಸಿ ಸ್ವಲ್ಪ ಪಾಯಸ ತೆಗೆದುಕೊಂಡು ನೀನಿದ್ದಲ್ಲಿ ಬಂದು ಕೂತುಕೊಳ್ಳಬೇಕು ಅಂತಿದ್ದೆ’ ಎಂದು ಹೇಳಿದೆ. ಅವಳು ‘ಇಲ್ಲ, ನಿನ್ನನ್ನು ನೋಡಬೇಕು ಅನಿಸುತ್ತಿದೆ’ ಎಂದು ನಕ್ಕಳು. ಆ ಅವಳ ಪ್ರೀತಿ ತುಂಬಿದ ಕಣ್ಣುಗಳು ಇನ್ನೂ ಜ್ಞಾಪಕ ಇದೆ ನನಗೆ.

ಗೊತ್ತಿಲ್ಲದೆ ಬೀಸಿದ ಯಮಪಾಶ: ಒಂದು ವರ್ಷದಿಂದ ಅವಳ ರಕ್ತದಲ್ಲಿ ಹಿಮೊಗ್ಲೋಬಿನ್‌ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತಿತ್ತು. ಆದರೆ ಪರೀಕ್ಷೆ
ಯಲ್ಲಿ ಕ್ಯಾನ್ಸರ್‌ ಎಂದು ತೋರಿಸುತ್ತಿರಲಿಲ್ಲ. ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಸಾವಿರ ಕ್ಯಾನ್ಸರ್‌ ರೋಗಿಗಳಲ್ಲಿ ಮೂರೋ ನಾಲ್ಕೋ ಜನರಿಗೆ ಮಾತ್ರ ಈ ರೀತಿಯ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆಯಂತೆ. ನಮ್ಮ ದುರದೃಷ್ಟಕ್ಕೆ ಕೃಷ್ಣಾ ಆ ನಾಲ್ಕು ಜನರಲ್ಲಿ ಒಬ್ಬಳಾಗಿದ್ದಳು. ಅವಳ ವಯಸ್ಸಿನ ಕಾರಣಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿರಲಿಲ್ಲ.

ಮೂರು ವಾರಗಳ ಹಿಂದೆಯಷ್ಟೆ ಇದು ಕ್ಯಾನ್ಸರ್‌ ಎಂದು ವೈದ್ಯರು ಹೇಳಿದ್ದರು. ಈ ಕಾಯಿಲೆಯ ಬಗ್ಗೆ ಗೊತ್ತಾದಮೇಲೂ ಅವಳು ತನ್ನ ನೋವನ್ನು ತೋರಿಸಿಕೊಳ್ಳುತ್ತಿರಲಿಲ್ಲ. ದೇಹ ಕೃಶವಾಗುತ್ತಿದೆ. ಮನಸ್ಸಿನಲ್ಲಿ ಸಾವು ಸಮೀಪಿಸುತ್ತಿರುವುದು ತಿಳಿಯುತ್ತಿದೆ. ಆದರೂ ಕೊನೆಯವರೆಗೂ ‘ನಾನು ಇರ್ತೀನಿ’ ಎಂಬ ಆಸೆಯಲ್ಲಿಯೇ ಇದ್ದಳು. ಕೊನೆಯ ದಿನದವರೆಗೂ ಮನಸ್ಸು ತುಂಬ ಕ್ರಿಯಾಶೀಲವಾಗಿತ್ತು.

ಸೂಪು ಬಯಸಿದ್ದಳು: 22ನೇ ತಾರೀಕು  ಇಡೀ ದಿನ ನಾನು ಅವಳ ಜತೆಗೇ ಇದ್ದೆ. ಕೈ, ತಲೆ ಉಜ್ಜುತ್ತಿದ್ದೆ. ಶ್ವಾಸವನ್ನು ತೆಗೆದುಕೊಳ್ಳಲು ತೊಂದರೆಯಾಗುತ್ತಿತ್ತು. ಅವಳ ಎದೆ ನೀವುತ್ತಾ ಸಾಯಿಯನ್ನು ಪ್ರಾರ್ಥಿಸುತ್ತಾ ‘ಏನು ಬೇಕು ಕೃಷ್ಣಾ? ಏನು ಮಾಡಿಕೊಡಲಿ?’ ಎಂದು ಕೇಳಿದೆ. ಮೆತ್ತಗೆ ಕಣ್ಣು ತೆರೆದು ‘ಸೂಪು’ ಎಂದಳು. ಸೂಪು ಮಾಡಿ ಕಳಿಸಿದೆ. ಸ್ವಲ್ಪ ದಿನಗಳಿಂದ ಊಟ ಮಾಡುವುದೂ ನಿಂತುಹೋಗಿತ್ತು. ಎರಡು ದಿನ ಅದೇ ಸೂಪನ್ನು ಸೇವಿಸುತ್ತಿದ್ದಳಂತೆ.

ಅವತ್ತು ಬಾತ್‌ರೂಂಗೆ ಹೋಗಬೇಕು ಅಂದಿದ್ದಾಳೆ. ಹೋದವಳು ಏನೋ ನಿತ್ರಾಣಳಾಗಿ ಅಲ್ಲಿಯೇ ಕೂತುಬಿಟ್ಟಿದ್ದಾಳೆ. ಮೂರು ಜನ ಸೇರಿ ಹೊತ್ತು ತಂದು ಹಾಸಿಗೆಯಲ್ಲಿ ತಂದು ಮಲಗಿಸಿದ್ದಾರೆ. ನಂತರ ನೀರು ಕುಡಿದಿದ್ದಾಳೆ; ಹಾಗೇ ತೀರಿಕೊಂಡಿದ್ದಾಳೆ.

ಅವಳ ಅಂತ್ಯಕ್ರಿಯೆಯನ್ನು ಜ. 25ರಂದು ಮಾಡಬೇಕಾಗಿತ್ತು. ಆದರೆ ಕರ್ನಾಟಕ ಬಂದ್‌. ನಾವು ವೈಷ್ಣವ ಬ್ರಾಹ್ಮಣರಾಗಿದ್ದರಿಂದ ದೇಹವನ್ನು ಹುಗಿಯುವುದಿಲ್ಲ. ಸುಡುತ್ತೇವೆ. ಆದ್ದರಿಂದ ತರಾತುರಿಯಲ್ಲಿ 24ಕ್ಕೇ ಅಂತ್ಯಕ್ರಿಯೆ ಮಾಡಬೇಕಾಯ್ತು. ವಿಲ್ಸನ್‌ಗಾರ್ಡನ್‌ನ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಿದರು.

ಅವಳನ್ನು ಕಳಿಸಿಕೊಟ್ಟು, ಅವಳ ಮುಖ ನೋಡದೆ, ಅವಳೊಂದಿಗೆ ಮಾತನಾಡದೆ ಹೇಗೆ ಕಳೆಯುವುದೋ ತಿಳಿಯುತ್ತಿಲ್ಲ. ಒಳ್ಳೆಯತನದಿಂದ ಬದು
ಕಿದ ಜೀವ ಅದು. ಅವಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸುವುದಷ್ಟೇ ನನ್ನ ಕೈಲಾಗುವುದು.

ನಿರೂಪಣೆ: ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT