ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಅತೃಪ್ತಿ, ಇತರ ಕಡೆಗಳಲ್ಲಿ ಸಂತೃಪ್ತಿ: ರಾಜ್ಯ ಸರ್ಕಾರ ಸಾಧನೆಯ ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ

Last Updated 25 ಜನವರಿ 2018, 22:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಯ ಬಗ್ಗೆ ಬೆಂಗಳೂರಿನ ಜನರಲ್ಲಿ ಹೆಚ್ಚು ಅತೃಪ್ತಿ ಇದೆ. ಆದರೆ, ರಾಜ್ಯದ ಇತರೆಡೆಗಳಲ್ಲಿ ಸಂತೃಪ್ತಿಯ ಪ್ರಮಾಣ ಹೆಚ್ಚು ಎಂದು ಲೋಕನೀತಿ–ಐಎಸ್‌ಡಿಎಸ್‌ ನಡೆಸಿದ ಸಮೀಕ್ಷೆ ಹೇಳಿದೆ.

ಹೆಚ್ಚು ಪ್ರಬಲವಲ್ಲದ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಲ್ಲಿ ಸರ್ಕಾರದ ಸಾಧನೆಯ ಬಗ್ಗೆ ಹೆಚ್ಚು ತೃಪ್ತಿ ಇದೆ. ದಕ್ಷಿಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಜನರು ಸರ್ಕಾರದ ಬಗ್ಗೆ ಹೆಚ್ಚು ಸಂತೃಪ್ತರಾಗಿದ್ದರೆ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಬೆಂಗಳೂರಿನ ಜನರು ಹೆಚ್ಚು ಅತೃಪ್ತರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ವಿಧಾನಸಭೆ ಚುನಾವಣೆ ಬಳಿಕ ‘ಮುಖ್ಯಮಂತ್ರಿ ಯಾರಾಗಬೇಕು ಎಂದು ಬಯಸುತ್ತೀರಿ’ ಎಂಬ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆ ಕೇಳಲಾಗಿತ್ತು. ಮೂರನೇ ಒಂದಕ್ಕಿಂತ ಹೆಚ್ಚು ಜನರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದೆಯೂ ಮುಖ್ಯಮಂತ್ರಿ ಆಗಬೇಕು ಎಂಬ ಭಾವನೆ ಹೊಂದಿದ್ದಾರೆ ಎಂದು ಈ ಪ್ರಶ್ನೆಗೆ ಉತ್ತರ ಬಂದಿದೆ. 

ಜನವರಿ ಎರಡನೇ ವಾರದಲ್ಲಿ ಕರ್ನಾಟಕದ ಜನರು ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಎಂಬುದನ್ನು ಈ ಸಮೀಕ್ಷೆ ಹೇಳಿದೆ. ಆದರೆ, ಚುನಾವಣೆ ನಡೆಯಲು ಇನ್ನೂ ಮೂರು ತಿಂಗಳಿದೆ. ರಾಜಕಾರಣದಲ್ಲಿ 15 ವಾರ ಬಹಳ ದೊಡ್ಡ ಅವಧಿಯೇ ಆಗಿದೆ ಎಂದು ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

ಮೂಡ್‌ ಆಫ್‌ ದ ನೇಷನ್‌ ಸರ್ವೆ

ಮಹತ್ವದ ರಾಜಕೀಯ ವಿಚಾರಗಳು, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಜನರ ಭಾವನೆಗಳೇನು ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಲೋಕನೀತಿ–ಸಿಎಸ್‌ಡಿಎಸ್‌ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ‘ದೇಶದ ಜನರ ಮನದಲ್ಲೇನಿದೆ’ (ಮೂಡ್‌ ಆಫ್‌ ದ ನೇಷನ್‌ ಸರ್ವೆ) ಎಂಬ ಸಮೀಕ್ಷೆ ನಡೆಸುತ್ತಿದೆ.

ಕರ್ನಾಟಕದಲ್ಲಿ ಸಮೀಕ್ಷೆ ನಡೆಸುವಾಗ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಬಗ್ಗೆಯೂ ಹೆಚ್ಚುವರಿ ಪ್ರಶ್ನೆಗಳನ್ನು
ಕೇಳಲಾಗಿತ್ತು. ಅದರ ಆಧಾರದಲ್ಲಿ ಈ ಸಮೀಕ್ಷಾ ವರದಿಯನ್ನು
ಸಿದ್ಧಪಡಿಸಲಾಗಿದೆ.

ಜೈನ್ ಡೀಮ್ಡ್‌ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ರಿಸರ್ಚ್‌ ಇನ್‌ ಸೋಷಿಯಲ್‌ ಸೈನ್ಸಸ್‌ ಎಂಡ್‌ ಎಜುಕೇಷನ್‌ನಲ್ಲಿರುವ (ಸಿಇಆರ್‌ಎಸ್‌ಎಸ್‌ಇ) ಲೋಕನೀತಿಯ ದಕ್ಷಿಣ ಕೇಂದ್ರವು ಕರ್ನಾಟಕದ ‘ಜನರ ಮನದಲ್ಲೇನಿದೆ ಸಮೀಕ್ಷೆ’ಯನ್ನು ನಡೆಸಿದೆ. ಲೋಕನೀತಿ ನೆಟ್‌ವರ್ಕ್‌ನ ರಾಷ್ಟ್ರೀಯ ಸಂಯೋಜಕ ಮತ್ತು ಜೈನ್‌ ಸಂಸ್ಥೆಯ ಕುಲಪತಿ ಡಾ. ಸಂದೀಪ್‌ ಶಾಸ್ತ್ರಿ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆದಿದೆ. ಡಾ. ವೀಣಾ ದೇವಿ ಮತ್ತು ಡಾ. ರೀತಿಕಾ ಸಯಾಲ್‌ ಅವರು ಸಮೀಕ್ಷೆಯ ಸಂಯೋಜಕರಾಗಿದ್ದರು.

‘ಈಗಲೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಭಾರಿ ಮುನ್ನಡೆ’; ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ 10ರಲ್ಲಿ ಸುಮಾರು 6ರಷ್ಟು ಮಂದಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT