ಟಿಆರ್‌ಪಿ ಅಕ್ರಮ: ಪರಿಚಯಸ್ಥರ ಮನೆಯಲ್ಲೇ ಮೀಟರ್‌

7

ಟಿಆರ್‌ಪಿ ಅಕ್ರಮ: ಪರಿಚಯಸ್ಥರ ಮನೆಯಲ್ಲೇ ಮೀಟರ್‌

Published:
Updated:
ಟಿಆರ್‌ಪಿ ಅಕ್ರಮ: ಪರಿಚಯಸ್ಥರ ಮನೆಯಲ್ಲೇ ಮೀಟರ್‌

ಬೆಂಗಳೂರು: ಟಿಆರ್‌ಪಿ ಅಕ್ರಮ ಜಾಲದ ಕಿಂಗ್‌ಪಿನ್‌ ಟಿಆರ್‌ಪಿ ರಾಜು ಹಾಗೂ ಆತನ ಸಹಚರರು, ತಮ್ಮ ಪರಿಚಯಸ್ಥರ ಮನೆಗಳಲ್ಲೇ ಟಿಆರ್‌ಪಿ ಪ್ಯಾನಲ್‌ ಮೀಟರ್‌ಗಳನ್ನು ಅಳವಡಿಸಿದ್ದರು. ಆ ಮೂಲಕ ತಮಗೆ ಬೇಕಾದ ಧಾರಾವಾಹಿಗಳ ಟಿಆರ್‌ಪಿ ಹೆಚ್ಚು ಬರುವಂತೆ ನೋಡಿಕೊಳ್ಳುತ್ತಿದ್ದರು ಎಂಬ ಸಂಗತಿ ಬಯಲಾಗಿದೆ.

ಬಾರ್ಕ್‌ (ಬ್ರಾಡ್‌ಕಾಸ್ಟಿಂಗ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌) ಸಂಸ್ಥೆಯು ಬೆಂಗಳೂರಿನ ಶಾಂತಿನಗರದಲ್ಲಿರುವ ಹಂಸ ರಿಸರ್ಚ್‌ ಗ್ರೂಪ್‌ ಕಂಪನಿ ಮೂಲಕ ರಾಜ್ಯದ 2,000 ಮನೆಗಳಲ್ಲಿ ಮೀಟರ್‌ಗಳನ್ನು ಅಳವಡಿಸಿದೆ. ಆ ಪೈಕಿ 200ಕ್ಕೂ ಹೆಚ್ಚು ಮನೆಗಳು ಆರೋಪಿಗಳ ಪರಿಚಯದವರದ್ದೇ ಆಗಿವೆ.

ಮೀಟರ್‌ ಅಳವಡಿಕೆ ಹಾಗೂ ನಿರ್ವಹಣೆಗಾಗಿ ಹಂಸ ಕಂಪನಿಯು ತಂತ್ರಜ್ಞರನ್ನು ನೇಮಕ ಮಾಡಿಕೊಂಡಿದೆ. ಅವರಿಗೆ ತಿಂಗಳಿಗೆ ₹15 ಸಾವಿರದಿಂದ ₹20 ಸಾವಿರ ಸಂಬಳ ನೀಡುತ್ತಿದೆ. ಅಂಥ ಕೆಲ ತಂತ್ರಜ್ಞರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ತಿಂಗಳಿಗೆ ₹20 ಸಾವಿರದಿಂದ ₹30 ಸಾವಿರ ಕೊಡುವುದಾಗಿ ಹೇಳಿ ತಮ್ಮತ್ತ ಸೆಳೆಯುತ್ತಿದ್ದರು. ಬಳಿಕ ಆರೋಪಿಗಳು, ತನ್ನಿಷ್ಟದ ಕಡೆಗಳಲ್ಲೆಲ್ಲ ಅವರ ಮೂಲಕವೇ ಮೀಟರ್‌ ಅಳವಡಿಸಿಕೊಳ್ಳುತ್ತಿದ್ದರು. ಅಂಥ ಮೀಟರ್‌

ನೋಡಿದ್ದ ಪರಿಚಯಸ್ಥರು, ಏನೆಂದು ಪ್ರಶ್ನಿಸುತ್ತಿದ್ದರು.

ಸೆಟ್‌ ಟಾಪ್‌ ಬಾಕ್ಸ್‌, ಬೂಸ್ಟರ್‌ ಎಂದು ಹೇಳಿ ನಗದು ಹಾಗೂ ಉಡುಗೊರೆಗಳನ್ನು ಕೊಟ್ಟು ಅವರನ್ನು ಸುಮ್ಮನಾಗಿಸುತ್ತಿದ್ದರು ಎಂದು ಸಿಸಿಬಿಯ ಅಧಿಕಾರಿ ಹೇಳಿದರು.

ಗ್ರಾಹಕರಿಗೂ ಗೊತ್ತಿಲ್ಲ: ಮೀಟರ್‌ ಇರುವ ಮನೆಗಳಿಗೆ ಹೋಗಿ ಸಿಸಿಬಿಯ ಸಿಬ್ಬಂದಿ ಮಾಹಿತಿ ಕಲೆಹಾಕುತ್ತಿದ್ದಾರೆ. ‘ಟಿಆರ್‌ಪಿ ಮೀಟರ್‌ ನಮ್ಮಲ್ಲಿತ್ತು ಎಂಬುದೇ ಗೊತ್ತಿರಲಿಲ್ಲ’ ಎಂದು ಶೇ 40ರಷ್ಟು ಮನೆಯವರು ಉತ್ತರಿಸಿದ್ದಾರೆ. ಕೆಲ ಕೇಬಲ್‌ ಆಪರೇಟರ್‌ಗಳು ಅದನ್ನೇ ಹೇಳಿದ್ದಾರೆ.

ದಿನವಿಡೀ ಟಿ.ವಿ: ಕೆಲ ಮನೆಗಳಲ್ಲಿ ದಿನದ 24 ಗಂಟೆ ಟಿ.ವಿ ಚಾಲು ಇರುವಂತೆ ಆರೋಪಿಗಳು ನೋಡಿಕೊಳ್ಳುತ್ತಿದ್ದರು. ವಾಹಿನಿಯೊಂದರ ಟಿಆರ್‌ಪಿ ಹೆಚ್ಚಿಸುವುದಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದರು. ಈ ಬಗ್ಗೆ ಕೆಲ ಮನೆಯವರು ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮೀಟರ್‌ ಇದ್ದ ಕೆಲ ಮನೆಗಳ ಕೇಬಲ್‌ ಬಿಲ್‌ ಹಾಗೂ ವಿದ್ಯುತ್ ಬಿಲ್‌ ಅನ್ನು ಆರೋಪಿಗಳೇ ಪಾವತಿ ಮಾಡಿದ್ದರು. ಟಿ.ವಿ ಕೆಟ್ಟರೆ ಹೊಸ ಟಿ.ವಿ ಕೊಡಿಸುವುದಾಗಿ ಹೇಳುತ್ತಿದ್ದರು. ಹೀಗಾಗಿ 24 ಗಂಟೆಯೂ ಟಿ.ವಿ ಚಾಲು ಇದ್ದರೂ ಮನೆಯವರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದರು.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಕಸ್ಟಡಿ ಅವಧಿ ಮುಗಿದಿದ್ದರಿಂದ ಆರೋಪಿ ರಾಜು ಹಾಗೂ ಸುರೇಶ್‌ನನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಗುರುವಾರ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry