ಜಿಲ್ಲಾಧಿಕಾರಿ ವರ್ಗಾವಣೆ: ಚುನಾವಣಾ ಆಯೋಗಕ್ಕೆ ಪತ್ರ

7

ಜಿಲ್ಲಾಧಿಕಾರಿ ವರ್ಗಾವಣೆ: ಚುನಾವಣಾ ಆಯೋಗಕ್ಕೆ ಪತ್ರ

Published:
Updated:
ಜಿಲ್ಲಾಧಿಕಾರಿ ವರ್ಗಾವಣೆ: ಚುನಾವಣಾ ಆಯೋಗಕ್ಕೆ ಪತ್ರ

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ತಾತ್ಕಾಲಿಕ ತಡೆ ನೀಡಿದ್ದರೂ, ಕಾಂಗ್ರೆಸ್– ಜೆಡಿಎಸ್ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ಮುಂದುವರಿಸಿದ್ದಾರೆ.

ಸರ್ಕಾರದ ನಿರ್ಧಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಸಂಸದ ಎಚ್.ಡಿ.ದೇವೇಗೌಡ, ಜಿಲ್ಲಾಧಿಕಾರಿ ವರ್ಗಾವಣೆ ಮತ್ತು ನಂತರದ ಬೆಳವಣಿಗೆ ಕುರಿತು ದಾಖಲೆ ಆಧರಿಸಿ ಚುನಾವಣಾ ಆಯೋಗಕ್ಕೆ ಪರಿಣಾಮಕಾರಿಯಾಗಿ ಪತ್ರ ಬರೆಯುವುದಾಗಿ ಗುರುವಾರ ಹೇಳಿದರು.

‘ಚುನಾವಣೆ ಸಿದ್ಧತಾ ಕಾರ್ಯ ನಡೆಯುತ್ತಿರುವಾಗ ಚುನಾವಣಾ ಆಯೋಗದ ನಿರ್ದೇಶನ ಉಲ್ಲಂಘನೆ ಮಾಡಿ ರೋಹಿಣಿ ಅವರನ್ನು ವರ್ಗ ಮಾಡಿದ್ದು ಏಕೆ? ನ್ಯಾಯಸಮ್ಮತ ಚುನಾವಣೆ ನಡೆಸುತ್ತೇನೆ ಎಂದು ನಾಡಿನ ಜನರ ಮುಂದೆ ಹೇಳುವ ಆತ್ಮಸಾಕ್ಷಿ ಮುಖ್ಯಮಂತ್ರಿಗೆ ಇದೆಯೇ. ಇದ್ದರೆ ಹೇಳಲಿ’ ಎಂದು ಸವಾಲು ಹಾಕಿದರು.

‘ಶ್ರವಣಬೆಳಗೊಳದಲ್ಲಿ ಅಟ್ಟಣಿಗೆ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದ ಮುಖ್ಯಮಂತ್ರಿ, ಸಚಿವ ಎ.ಮಂಜು ಮೇಲಿಂದ ಮೇಲೆ ಪತ್ರ ಬರೆದ ಮೇಲೆ ಕೆಆರ್‌ಡಿಸಿಎಲ್‌ಗೆ ಹಸ್ತಾಂತರ ಮಾಡಿದರು. ಎ.ಮಂಜು ಅವರನ್ನು ಏಜೆಂಟ್‌ ಆಗಿ ಇಟ್ಟುಕೊಂಡಿದ್ದರಾ? ಎಲ್ಲದರಲ್ಲೂ ಹಣ ತಿಂದರೆ ಅಜೀರ್ಣವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಮಂಜುಗೆ ಮುಖ್ಯಮಂತ್ರಿ ಹೆದರುವುದಾದರೆ ಯಾವ ಸರ್ಕಾರ ಇದು. ಇವರೆಲ್ಲಾ ಹೈಕಮಾಂಡ್‌ ಮಂತ್ರಿಗಳು. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರೂ ತಮ್ಮ ಸೇವಾವಧಿ ವಿಸ್ತರಣೆಗಾಗಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಒತ್ತಡ ಹೇರಿದ್ದು ಮಂಜು: ‘ಜಿಲ್ಲಾಧಿಕಾರಿ ರೋಹಿಣಿ ಅವರನ್ನು ವರ್ಗ ಮಾಡಿಸಿದ್ದು ನಾನಲ್ಲ. ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದು, ಉಸ್ತುವಾರಿ ಸಚಿವ ಎ.ಮಂಜು’ ಎಂದು ಈ ಮಧ್ಯೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಬಹಿರಂಗಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ಆರೋಪಗಳ ಸುರಿಮಳೆಗೈದರು. ‘ರೋಹಿಣಿ ಅವರು ಮೇಲ್ನೋಟಕ್ಕೆ ಪ್ರಾಮಾಣಿಕರು, ದಕ್ಷರು. ಆದರೆ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ದೂರಿದರು.

‘ಮಸ್ತಕಾಭಿಷೇಕ ಕೆಲಸ ಮಾಡುತ್ತಿರುವವರು ಇವರು ಒಬ್ಬರೇನಾ? ಎಂದು ಪ್ರಶ್ನಿಸಿದರು. ಎಲ್ಲಾ ಆರೋಪಗಳ ಬಗ್ಗೆ ಗೃಹ ಸಚಿವರಿಗೆ ದೂರು ನೀಡಿ ಉನ್ನತ ಮಟ್ಟದ ತನಿಖೆಗೆ ಒತ್ತಾಯ ಮಾಡಲಾಗುವುದು’ ಎಂದರು.

‘ರುದ್ರಭೂಮಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಸರ್ಕಾರಕ್ಕೆ ಗುಪ್ತ ವರದಿ ನೀಡುವುದಾಗಿ ರೋಹಿಣಿ ಬೆದರಿಕೆ ಹಾಕಿದ್ದರು’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry