ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆಗೆ ಜಗ್ಗದ ‘ಪದ್ಮಾವತ್’ ವೀಕ್ಷಕರು

ನಾಲ್ಕು ರಾಜ್ಯಗಳಲ್ಲಿ ಮುಂದುವರಿದ ಹಿಂಸಾತ್ಮಕ ಪ್ರತಿಭಟನೆ
Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ವರ್ಷಕ್ಕೂ ಹೆಚ್ಚು ಕಾಲ ದೇಶದಾದ್ಯಂತ ಪರ–ವಿರೋಧ ಚರ್ಚೆ ಹುಟ್ಟುಹಾಕಿದ್ದ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರ ಗುರುವಾರ ಬಿಗಿ ಭದ್ರತೆ ಮತ್ತು ಬಿಗುವಿನ ವಾತಾವರಣದಲ್ಲಿ ದೇಶದಾದ್ಯಂತ ಬಿಡುಗಡೆಯಾಗಿದೆ.

ವಿವಿಧ ರಜಪೂತ ಸಂಘಟನೆಗಳ ಬೆದರಿಕೆಗೆ ಮಣಿಯದ ಚಿತ್ರ ರಸಿಕರು, ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಹರಿದು ಬಂದಿದ್ದಾರೆ.

₹150 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಚಿತ್ರವು ದೇಶದಾದ್ಯಂತ 4,000 ಪರದೆಗಳಲ್ಲಿ ಬಿಡುಗಡೆಯಾಗಿದೆ ಎಂದು ಮೂಲಗಳು ಹೇಳಿವೆ.

ಕಾನೂನು ಸುವ್ಯವಸ್ಥೆ ಸರಿ ಇಲ್ಲದಿರುವ ಕಾರಣದಿಂದ ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ ಮತ್ತು ಗೋವಾದಲ್ಲಿ ಚಿತ್ರ ಬಿಡುಗಡೆಯಾಗಿಲ್ಲ ಎಂದು ಭಾರತೀಯ ಮಲ್ಟಿಪ್ಲೆಕ್ಸ್‌ ಒಕ್ಕೂಟ ಹೇಳಿದೆ.

ಇತಿಹಾಸವನ್ನು ತಿರುಚಲಾಗಿದೆ ಮತ್ತು ತಮ್ಮ ರಾಣಿ ಪದ್ಮಿನಿಯನ್ನು ಅವಮಾನಿಸಲಾಗಿದೆ ಎಂದು ರಜಪೂತ ಗುಂಪುಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದರೂ ಆರಂಭಿಕ ವರದಿಗಳ ಪ್ರಕಾರ ‘ಪದ್ಮಾವತ್‌’ ಒಳ್ಳೆಯ ಗಳಿಕೆ ದಾಖಲಿಸಿದೆ. ಗುರುವಾರ ಬೆಳಿಗ್ಗೆ ಒಂಬತ್ತು ಗಂಟೆಯ ಮೊದಲು ಪ್ರದರ್ಶನಕ್ಕೆ ದೆಹಲಿಯಲ್ಲಿ ಶೇ 60–70ರಷ್ಟು ಆಸನಗಳು ಭರ್ತಿಯಾಗಿವೆ. ಮುಂಬೈಯಲ್ಲಿ ಈ ಪ್ರಮಾಣ ಶೇ 40–45ರಷ್ಟಿತ್ತು.

ನಂತರದ ಪ್ರದರ್ಶನಗಳಲ್ಲಿ ಜನರು ತುಂಬಿದ್ದರು. ದೀರ್ಘ ವಾರಾಂತ್ಯದಿಂದಾಗಿ ಗಳಿಕೆ ಇನ್ನಷ್ಟು ಉತ್ತಮವಾಗುವ ನಿರೀಕ್ಷೆ ಇದೆ ಎಂದು ಬಾಕ್ಸ್‌ ಆಫೀಸ್‌ ವಿಶ್ಲೇಷಕರು ಆಭಿಪ್ರಾಯಪಟ್ಟಿದ್ದಾರೆ.

‘ಸಿನಿಮಾದ ವಿರುದ್ಧ ನಡೆದ ಪ್ರತಿಭಟನೆ ಮತ್ತು ಹಿಂಸೆಯನ್ನು ಅದರಲ್ಲೂ ಮುಖ್ಯವಾಗಿ ಗುರುಗ್ರಾಮದಲ್ಲಿ ಶಾಲಾ ಬಸ್‌ಗೆ ಕಲ್ಲೆಸೆದಿರುವುದನ್ನು ಸಿನಿಮಾ ನೋಡಿದ ಹೆಚ್ಚಿನವರು ಖಂಡಿಸಿದ್ದಾರೆ. ಸಿನಿಮಾದಲ್ಲಿ ಆಕ್ಷೇಪಾರ್ಹವಾದದ್ದು ಏನೂ ಇಲ್ಲ’ ಎಂದು ಭಾರತೀಯ ಸಿನಿಮಾ ಮಂದಿರ ಮಾಲೀಕರು ಮತ್ತು ಪ್ರದರ್ಶಕರ ಸಂಘದ ಸದಸ್ಯ ನಿತಿನ್‌ ದಾತಾರ್‌ ಹೇಳಿದ್ದಾರೆ.

ಕೆಲವು ಚಿತ್ರಮಂದಿರಗಳ ಮೊದಲ ಸಾಲುಗಳಲ್ಲಿ ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿಯೇ ಕುಳಿತಿದ್ದರು. ಚಿತ್ರಮಂದಿರದವರೇ ನೇಮಕ ಮಾಡಿದ್ದ ಭದ್ರತಾ ಸಿಬ್ಬಂದಿಯೂ (ಬೌನ್ಸರ್‌) ಇದ್ದರು.

ಆತ್ಮಾಹುತಿ ಯತ್ನ: ಚಿತ್ರದ ವಿರುದ್ಧವಾಗಿ ಉತ್ತರ ಪ್ರದೇಶದ ವಾರಾಣಸಿಯ ಸಿಗ್ರಾ ಪ್ರದೇಶದಲ್ಲಿ  ಮಾಲೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾನೆ. ಪೊಲೀಸರು ಆ ಯತ್ನವನ್ನು ವಿಫಲಗೊಳಿಸಿದರು.

ತಮಿಳುನಾಡಿನಲ್ಲೂ ವಿರೋಧ: ಚಿತ್ರವನ್ನು ವಿರೋಧಿಸಿ ತಮಿಳುನಾಡಿನ ಚೆನ್ನೈ, ಕೊಯಮತ್ತೂರುಗಳಲ್ಲೂ ಗುರುವಾರ ಪ್ರತಿಭಟನೆ ನಡೆದಿದೆ.

ಘೂಮರ್‌ ಹಾಡು ಪ್ರದರ್ಶಿಸದಿರಲು ಶಾಲೆಗಳಿಗೆ ಸೂಚನೆ
ಜೈಪುರ:
ಗಣರಾಜ್ಯೋತ್ಸವ ದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಪದ್ಮಾವತ್‌’ ಚಿತ್ರದ ಘೂಮರ್‌ ಹಾಡನ್ನು ಪ್ರದರ್ಶಿಸದಂತೆ ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ರಾಜಸ್ಥಾನ ಸರ್ಕಾರ ಸೂಚಿಸಿದೆ.

ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ಹಾಡನ್ನು ಪ್ರದರ್ಶನದಲ್ಲಿ ಬಳಸಬಾರದು ಎಂದು ಉದಯ್‌ಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸುಭಾಷ್‌ಚಂದ್‌ ಶರ್ಮಾ ಆದೇಶದಲ್ಲಿ ತಿಳಿಸಿದ್ದಾರೆ.

‘ಸಂಭಾವ್ಯ ಅಹಿತಕರ ಘಟನೆಯನ್ನು ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ’ ಎಂದು ಉದಯ್‌ಪುರ ಜಿಲ್ಲಾಧಿಕಾರಿ ವಿಷ್ಣು ಚರಣ್‌ ಮಲ್ಲಿಕ್‌ ಹೇಳಿದ್ದಾರೆ.

ಮುಂದುವರಿದ ಹಿಂಸಾಚಾರ
ರಜಪೂತ ಕರ್ಣಿಸೇನಾ ಸೇರಿದಂತೆ ವಿವಿಧ ರಜಪೂತ ಸಂಘಟನೆಗಳು ಗುರುವಾರವೂ ವಿವಿಧ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದವು.

ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿಲ್ಲ. ಹಾಗಿದ್ದರೂ, ಉದ್ರಿಕ್ತ ಪ್ರತಿಭಟನಾಕರರು ಆಸ್ತಿಗಳಿಗೆ ಹಾನಿ ಮಾಡಿದರು. ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಬೈಕ್‌ ರ‍್ಯಾಲಿಗಳನ್ನು ನಡೆಸಿದರು.

ಹರಿಯಾಣದ ಗುರುಗ್ರಾಮದಲ್ಲಿ ಶಾಲೆಗಳು ಮುಚ್ಚಿದ್ದವು. ಮಧ್ಯಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದಿದ್ದರೂ, ಪ್ರಮುಖ ನಗರಗಳಲ್ಲಿ ವಾಣಿಜ್ಯ ಮಳಿಗೆಗೆಗಳು ಮುಚ್ಚಿದ್ದವು.

ಗುಜರಾತ್‌ನಲ್ಲಿ ಬಂದ್‌ಗೆ ಕರ್ಣಿ ಸೇನಾ ಕರೆ ನೀಡಿತ್ತಾದರೂ, ಅಷ್ಟೇನು ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಉತ್ತರ ಪ್ರದೇಶದ ಬಹುತೇಕ ಕಡೆಗಳಲ್ಲಿ ಬಿಗಿ ಭದ್ರತೆಯಲ್ಲಿ ‘ಪದ್ಮಾವತ್‌’ ಪ್ರದರ್ಶನಗೊಂಡಿದೆ. ಹಲವು ಕಡೆಗಳಲ್ಲಿ ರಜಪೂತ ಸಂಘಟನೆಗಳು ಹಿಂಸಾಚಾರದಲ್ಲಿ ತೊಡಗಿದ್ದವು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು.

ಎರಡು ಮಾಲ್‌ಗಳ ಮೇಲೆ ಉದ್ರಿಕ್ತರು ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ.

ಲಖನೌ, ಅಲಹಾಬಾದ್‌, ಆಗ್ರಾ, ಬರೇಲಿ ಸೇರಿದಂತೆ ಹಲವು ನಗರಗಳಲ್ಲಿ ಚಿತ್ರಮಂದಿರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಹಾಗಿದ್ದರೂ, ಕೆಲವು ಚಿತ್ರಮಂದಿರಗಳ ಮಾಲೀಕರು ಭದ್ರತೆಯ ಕಾರಣ ನೀಡಿ ಚಿತ್ರ ಪ್ರದರ್ಶಿಸಲು ನಿರಾಕರಿಸಿದರು. ಮಥುರಾ, ಕಾನ್ಪುರ, ಇಟಾವ, ಷಹಜಾನ್‌ಪುರಗಳಲ್ಲಿ ಚಿತ್ರ ಪ್ರದರ್ಶನ ನಡೆದಿಲ್ಲ ಎಂದು ವರದಿಯಾಗಿದೆ.

ನೇರಪ್ರಸಾರ
ಬೆಂಗಳೂರು:
‘ಪದ್ಮಾವತ್‌’ ಚಿತ್ರ ಬಿಡುಗಡೆಯಾದ ದಿನವೇ ಫೇಸ್‌ಬುಕ್‌ ಲೈವ್‌ ಸ್ಟ್ರೀಮ್‌ ಮೂಲಕ ಸೋರಿಕೆಯಾಗಿದೆ.

‌‘ಜಾಟೋಂಕಾ ಅಡ್ಡಾ’ ಹೆಸರಿನ ಫೇಸ್‌ಬುಕ್‌ ಪುಟವು ‘ಪದ್ಮಾವತ್‌’ ಸಿನಿಮಾವನ್ನು ಚಿತ್ರಮಂದಿರದಿಂದ ನೇರವಾಗಿ ಪ್ರದರ್ಶಿಸಿದೆ. ಈ ಲಿಂಕ್‌ ಅನ್ನು 15 ಸಾವಿರಕ್ಕೂ ಹೆಚ್ಚು ಜನರು ಶೇರ್‌ ಮಾಡಿದ್ದಾರೆ. ಜತೆಗೆ ಇದು 3.5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಕೆಲ ಸಮಯದ ಬಳಿಕ ಪುಟದಿಂದ ವಿಡಿಯೊ ತೆಗೆದು ಹಾಕಲಾಗಿದೆ.

‘ಪದ್ಮಾವತ್‌’ ಪ್ರತಿಕ್ರಿಯಗಳು

ದೀಪಿಕಾ ಪಡುಕೋಣೆ ಅವರ ಅಭಿನಯ ವೀಕ್ಷಿಸಲು ನಾನು ಈ ಸಿನಿಮಾಗೆ ಹೋಗಿದ್ದೆ. ಹಾಗೆಯೇ, ಐತಿಹಾಸಿಕ ಸಿನಿಮಾಗಳು ನನಗೆ ಬಹಳ ಇಷ್ಟ. ಈ ಸಿನಿಮಾದಲ್ಲಿ ರಜಪೂತ ಸಮುದಾಯವನ್ನು ನಕಾರಾತ್ಮಕವಾಗಿ ತೋರಿಸಿಲ್ಲ. ರಣವೀರ್ ಸಿಂಗ್ ಚೆನ್ನಾಗಿ ಅಭಿನಯಿಸಿದ್ದಾರೆ. ದ್ವಿತೀಯಾರ್ಧ ಚೆನ್ನಾಗಿದೆ. ಬೋರು ಹೊಡೆಸುವುದಿಲ್ಲ. ಕೊಟ್ಟ ಹಣಕ್ಕೆ ಮೋಸವಿಲ್ಲ.
–ಜಯಶ್ರೀ (ಸಿನಿಮಾ ನಟಿ), ಬೆಂಗಳೂರು

*
ಸಿನಿಮಾ ಸಾಧಾರಣವಾಗಿದೆ. ವಿವಾದಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಅವುಗಳಿಗೆ ಕಾರಣ ಏನಿರಬಹುದು ಎಂಬುದನ್ನು ತಿಳಿಯಲು ಹೋಗಿದ್ದೆ. ರಜಪೂತ ಮಹಿಳೆಯರು ಸಾಮೂಹಿಕ ಜೌಹರ್‌ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದು ಒಂದೆಡೆ ಇರಲಿ, ಕನಿಷ್ಠಪಕ್ಷ ಪ್ರತಿಭಟನೆಗೆ ಕಾರಣವಾಗುವಂಥ ಅಂಶ ಸಹ ಈ ಸಿನಿಮಾದಲ್ಲಿ ಇಲ್ಲ. ಇದರಲ್ಲಿ ರಜಪೂತರನ್ನು ಸಾಹಸಿಗಳು, ಮಾತಿಗೆ ತಪ್ಪದವರು ಎಂದು ತೋರಿಸಲಾಗಿದೆ. ಅವರ ಗೌರವಕ್ಕೆ ಧಕ್ಕೆ ತರುವಂಥದ್ದು ಏನೂ ಇಲ್ಲ.
–ಕೃಷಿಕ ಎ.ವಿ., ನವದೆಹಲಿ

*
ಸಿನಿಮಾ ನನಗೆ ಇಷ್ಟವಾಯಿತು. ಗಲಾಟೆ, ಪ್ರತಿಭಟನೆ ಮಾಡುವಂಥದ್ದು ಸಿನಿಮಾದಲ್ಲಿ ಏನಿತ್ತು ಎಂಬುದು ಈಗ ನನ್ನಲ್ಲಿ ಮೂಡಿರುವ ಪ್ರಶ್ನೆ. ಆಕ್ಷೇಪಿಸುವಂಥ ಅಂಶಗಳು ಕೂಡ ಅದರಲ್ಲಿ ಇಲ್ಲ. ಸಿನಿಮಾ ತಂಡವು ರಜಪೂತರಿಗೆ ಸಲ್ಲಬೇಕಾದ ಗೌರವ ಸಲ್ಲಿಸಿದೆ. ಈ ಸಿನಿಮಾ ವಿರುದ್ಧ ರಜಪೂತರು ಪ್ರತಿಭಟನೆ ನಡೆಸಲು ಕಾರಣಗಳು ಇಲ್ಲ.
–ಕೌಶಿಕ್, ಬೆಂಗಳೂರು

*
ರಾಣಿ ಪದ್ಮಾವತಿಯ ಇತಿಹಾಸ ನನಗೆ ತುಸು ತಿಳಿದಿದೆ. ಇತಿಹಾಸಕ್ಕೆ ಅಪಚಾರ ಆಗದಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಈ ಸಿನಿಮಾವನ್ನು ಶ್ರೀ ರಜಪೂತ್ ಕರ್ಣಿ ಸೇನಾದವರು ಒಮ್ಮೆ ನೋಡಬೇಕು. ಸಿನಿಮಾದಲ್ಲಿ ರಜಪೂತರಿಗೆ ಬಹಳ ಗೌರವ ಕೊಟ್ಟಿದ್ದಾರೆ. ಅವರ ಭಾವನೆಗೆ ಧಕ್ಕೆಯಾಗುವಂಥದ್ದು ಇದರಲ್ಲಿ ಏನೂ ಇಲ್ಲ.
–ಕಿರಣ್ ಕುಮಾರ್, ಹೈದರಾಬಾದ್

*
ಸಿನಿಮಾ ಬಗ್ಗೆ ಬಂದ ನಕಾರಾತ್ಮಕ ವಿಮರ್ಶೆಗಳನ್ನು ಕಂಡು ನನಗೆ ಬೇಸರ ಆಯಿತು. ಸಿನಿಮಾದ ಪಾತ್ರಗಳು ಅದ್ಭುತವಾಗಿವೆ. ಸಿನಿಮಾವನ್ನು ಕಟ್ಟಿಕೊಟ್ಟ ಬಗೆ ಕೂಡ ಅತ್ಯದ್ಭುತ. ನೋಡುವವನ ಕಣ್ಣಿಗೆ ಒಂದು ಹಬ್ಬ ಈ ಸಿನಿಮಾ. ಗಲಾಟೆ ಮಾಡುವಂಥದ್ದು ಇದರಲ್ಲಿ ಏನೂ ಇಲ್ಲ. ರಜಪೂತರ ಬಗ್ಗೆ ಹೆಮ್ಮೆ ಮೂಡಿಸುವಂತಹ ಸಿನಿಮಾ ಇದು. ಯಾರಿಗೂ ಮುಜುಗರ ಆಗುವಂಥ ದೃಶ್ಯ ಇದರಲ್ಲಿಲ್ಲ.
–ಮಾಧುರಿ ಪರಶುರಾಮ್, ಬೆಂಗಳೂರು

*
ಅವರು ಮುಸ್ಲಿಮರನ್ನು ಕೊಂದರು, ದಲಿತರನ್ನು ಜೀವಂತ ಸುಟ್ಟರು, ಈಗ ನಮ್ಮ ಮಕ್ಕಳ ಮೇಲೆ ಕಲ್ಲೆಸೆಯಲು ಆರಂಭಿಸಿದ್ದಾರೆ. ನಮ್ಮ ಮನೆಗೇ ನುಗ್ಗುತ್ತಿದ್ದಾರೆ. ಇನ್ನು ಸುಮ್ಮನಿರಬೇಡಿ, ಮಾತನಾಡಿ.
–ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

*
ಸಿನಿಮಾಗಳು ಯಾವುದೇ ಜಾತಿ ಅಥವಾ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು. ಹಾಗೆಯೇ, ಚರಿತ್ರೆ ಆಧರಿಸಿ ಸಿನಿಮಾ ಮಾಡುವಾಗ ಚಾರಿತ್ರಿಕ ಅಂಶಗಳಿಂದ ದೂರ ಸರಿಯಬಾರದು.
–ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ಮುಖಂಡ

*
ಭಾರತದಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಉದ್ಯಮಗಳಿಗೆ ಮೋದಿ ಅವರು ಕರೆ ನೀಡಿದ ಅದೇ ದಿನ ಅಹಮದಾಬಾದ್‌ ಹಿಂಸೆಯಿಂದ ನಲುಗಿ ಹೋಗಿತ್ತು.
ಪಿ. ಚಿದಂಬರಂ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT