ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಘೇರಾವ್‌

7

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಘೇರಾವ್‌

Published:
Updated:
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಘೇರಾವ್‌

ಹೊಸಪೇಟೆ: ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಇಲ್ಲಿ ಪ್ರದೇಶ ಕಾಂಗ್ರೆಸ್‌ (ಕೆಪಿಸಿಸಿ) ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅವರಿಗೆ ಘೇರಾವ್‌ ಹಾಕಿ, ಘೋಷಣೆಗಳನ್ನು ಕೂಗಿದರು.

ಫೆ.10ರಂದು ಇಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್‌ ಪರಿಶಿಷ್ಟ ಪಂಗಡ (ಎಸ್‌ಟಿ) ಸಮಾವೇಶದ ಪೂರ್ವಸಿದ್ಧತೆ ಪರಿಶೀಲನೆಗೆ ಆಗಮಿಸಿದ್ದ ಅವರನ್ನು ಕಾರುಸಮೇತ ತಡೆದು ಪ್ರತಿಭಟಿಸಿದರು. ‘ಆನಂದ್‌ ಸಿಂಗ್‌ ಡೌನ್‌...ಡೌನ್...’ ಎಂಬ ಘೋಷಣೆ ಕೂಗಿದ ಕಾರ್ಯಕರ್ತರು, ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

‘ಇನ್ನು ಅಂತಿಮವಾಗಿಲ್ಲ, ಸುಮ್ಮನಿರಿ’ ಎಂದು ಪರಮೇಶ್ವರ್‌ ಸಮಾಧಾನಪಡಿಸಲು ಯತ್ನಿಸಿದರೂ ಕಾರ್ಯಕರ್ತರು ಸುಮ್ಮನಾಗಲಿಲ್ಲ. ಅಮರಾವತಿ ಅತಿಥಿ ಗೃಹದಲ್ಲಿ ಪರಮೇಶ್ವರ್‌ ಇರುವುದನ್ನು ತಿಳಿದ ಕಾರ್ಯಕರ್ತರು, ಅಲ್ಲಿಗೂ ಹೋಗಿ ಸಿಂಗ್‌ ವಿರುದ್ಧ ಧಿಕ್ಕಾರ ಕೂಗಿದರು. ಅತಿಥಿ ಗೃಹದೊಳಕ್ಕೆ ನುಗ್ಗಲು ಯತ್ನಿಸಿದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರು– ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

‘ಆನಂದ್‌ ಸಿಂಗ್‌ ಕಾಂಗ್ರೆಸ್‌ ಸೇರುತ್ತಾರೆ ಎನ್ನುವುದು ಕೇವಲ ಊಹಾಪೋಹ. ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ನಂತರ ತೀರ್ಮಾನ ತಗೆದುಕೊಳ್ಳಲಾಗುವುದು. ನಿಮ್ಮ ಅಭಿಪ್ರಾಯಗಳನ್ನು ಅವರಿಗೆ ತಿಳಿಸುತ್ತೇನೆ’ ಎಂದು ಪರಮೇ‌ಶ್ವರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry