ರೈಫಲ್‌ನಿಂದ ನಾಲ್ವರು ಪೊಲೀಸರ ತಲೆದಂಡ!

7
ರೈಫಲ್ ಪತ್ತೆಗೆ 40 ಪೊಲೀಸರು, 2 ಜೆಸಿಬಿ ಬಳಕೆ

ರೈಫಲ್‌ನಿಂದ ನಾಲ್ವರು ಪೊಲೀಸರ ತಲೆದಂಡ!

Published:
Updated:
ರೈಫಲ್‌ನಿಂದ ನಾಲ್ವರು ಪೊಲೀಸರ ತಲೆದಂಡ!

ಬೆಂಗಳೂರು: ಕಳ್ಳರು ಗಸ್ತು ಪೊಲೀಸರಿಗೆ ಹೊಡೆದು ರೈಫಲ್ ಕಿತ್ತುಕೊಂಡು ಹೋದ ಪ್ರಕರಣದಲ್ಲಿ ಕೊಡಿಗೇಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಮೂವರು ಪೊಲೀಸರ ತಲೆದಂಡವಾಗಿದೆ.

ಇನ್‌ಸ್ಪೆಕ್ಟರ್ ಎನ್‌.ರಾಜಣ್ಣ, ಎಎಸ್‌ಐ ಮುನಿರೆಡ್ಡಿ, ಕಾನ್‌ಸ್ಟೆಬಲ್‌ಗಳಾದ ಪರಮೇಶಪ್ಪ ಹಾಗೂ ಸಿದ್ಧಪ್ಪ ಅವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿರುವ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್, ಮುಂದಿನ ಆದೇಶದವರೆಗೂ ಕಾಯುವಂತೆ ಸೂಚಿಸಿದ್ದಾರೆ. ಆ ನಾಲ್ವರೂ ಸಿಬ್ಬಂದಿ ಇದೀಗ ಸಮವಸ್ತ್ರ ಕಳಚಿಟ್ಟು ಸಾಮಾನ್ಯ ಉಡುಪಿನಲ್ಲಿ ರೈಫಲ್ ಶೋಧದಲ್ಲಿ ತೊಡಗಿದ್ದಾರೆ.

ಜ.19ರ ನಸುಕಿನ ವೇಳೆ (1.50ಕ್ಕೆ) ನಾಲ್ವರು ಅಪರಿಚಿತರು ಟಾಟಾ ನಗರದ ಕೆಲ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿ, ಆವರಣದಲ್ಲಿದ್ದ ವಾಹನ ಕದಿಯಲು ಯತ್ನಿಸುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪರಮೇಶಪ್ಪ ಹಾಗೂ ಸಿದ್ಧಪ್ಪ ಅವರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದ ಕಳ್ಳರು, ನಂತರ .303 ರೈಫಲ್ ಕಸಿದುಕೊಂಡು ಹೋಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಜಿ–ಐಜಿಪಿ ನೀಲಮಣಿ ಎನ್‌.ರಾಜು, ‘ಕೈಲಿ ಶಸ್ತ್ರಾಸ್ತ್ರ ಇದ್ದರೂ ಕಳ್ಳರನ್ನು ಬೆದರಿಸಲು ಆಗಲಿಲ್ಲವೆಂದರೆ ಏನು ಅರ್ಥ? ರೈಫಲ್ ಕಳವಾಗಿ ಐದು ದಿನಗಳಾದರೂ ಪತ್ತೆಗೆ ಏಕೆ ಕ್ರಮ ತೆಗೆದುಕೊಂಡಿಲ್ಲ? ಇದಕ್ಕೆ ಸಂಬಂಧಪಟ್ಟ ಎಲ್ಲ ಸಿಬ್ಬಂದಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳಿ’ ಎಂದು ಕಮಿಷನರ್‌ಗೆ ಬುಧವಾರ ಸೂಚನೆ ಕೊಟ್ಟಿದ್ದರು. ಅಂತೆಯೇ ಅವರು ಕ್ರಮ ಜರುಗಿಸಿದ್ದಾರೆ.

ಜೇಬಿನಲ್ಲಿ ಗುಂಡುಗಳು: ‘ಸಿಬ್ಬಂದಿ ಗಸ್ತು ತಿರುಗಲು ಹೋಗುವಾಗ ಕಡ್ಡಾಯವಾಗಿ ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಬೇಕು ಎಂದು ಪೊಲೀಸ್ ಕೈಪಿಡಿಯಲ್ಲಿದೆ. ಅಂತೆಯೇ ರೈಫಲ್ ತೆಗೆದುಕೊಂಡು ಹೋಗಿದ್ದ ನೀವು, ಅದಕ್ಕೆ ಹಾಕಬೇಕಿದ್ದ ಗುಂಡುಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದೇಕೆ? ಅವುಗಳು ರೈಫಲ್‌ನಲ್ಲೇ ಇದ್ದಿದ್ದರೆ, ಹಲ್ಲೆಗೆ ಮುಂದಾದ ಕಳ್ಳರತ್ತ ಗುಂಡು ಹಾರಿಸಿ ಬಂಧಿಸಬಹುದಿತ್ತು. ಈ ವಿಚಾರದಲ್ಲಿ ತಮ್ಮಿಂದ ಕರ್ತವ್ಯ ಲೋಪವಾಗಿದೆ’ ಎಂದು ಹೇಳಿ ಪರಮೇಶಪ್ಪ ಹಾಗೂ ಸಿದ್ಧಪ್ಪ ಅವರಿಗೆ ಅಮಾನತು ಆದೇಶದ ಪ್ರತಿಯನ್ನು ನೀಡಲಾಗಿದೆ.

‘ಬೈಕ್‌ನಲ್ಲಿ ಸಾಗುವಾಗ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಅಚಾತುರ್ಯ ಸಂಭವಿಸಬಹುದು ಎಂಬ ಭಯದಲ್ಲಿ ಗುಂಡುಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದೆ’ ಎಂದು ಪರಮೇಶಪ್ಪ ಸಮರ್ಥನೆ ಕೊಟ್ಟಿದ್ದಾರೆ.

ತಡವಾಗಿ ಬಂದಿದ್ದೇಕೆ?: ‘ದುಷ್ಕರ್ಮಿಗಳು 2.10ಕ್ಕೆ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ. ಗಸ್ತು ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ನೀವು, 35 ನಿಮಿಷಗಳ ನಂತರ ಸ್ಥಳಕ್ಕೆ ಹೋಗಿದ್ದೀರಿ. ಅಷ್ಟು ತಡವಾಗಿ ತೆರಳಿದ್ದೇಕೆ’ ಎಂದು ಎಎಸ್‌ಐಗೆ ನೀಡಿರುವ ಲಿಖಿತ ಆದೇಶದಲ್ಲಿ ಪ್ರಶ್ನಿಸಿದ್ದಾರೆ.

ವಿಳಂಬ ಮಾಡಿದ್ದೇಕೆ?: ‘ರಾತ್ರಿಯೇ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ, ಕಳ್ಳರ ಬಂಧನಕ್ಕೆ ಸುತ್ತಮುತ್ತಲ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಬಹುದಿತ್ತು. ಅವರು ಪರಾರಿಯಾದ ನಂತರ ಆ ಪ್ರಕ್ರಿಯೆ ಮಾಡಿದ್ದೀರಿ. ಪ್ರಕರಣ ನಡೆದು ಇಷ್ಟು ದಿನ ಕಳೆದರೂ, ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ರೈಫಲ್ ಪತ್ತೆಗೂ ಕ್ರಮ ಕೈಗೊಂಡಿಲ್ಲ’ ಎಂಬ ಕಾರಣಗಳನ್ನು ನೀಡಿ ಇನ್‌ಸ್ಪೆಕ್ಟರ್‌ ರಾಜಣ್ಣ ಅವರನ್ನು ಅಮಾನತು ಮಾಡಲಾಗಿದೆ.

ರೈಫಲ್ ಪತ್ತೆಗೆ 40 ಪೊಲೀಸರು!

ಅಮಾನತುಗೊಂಡ ನಾಲ್ವರು ಸಿಬ್ಬಂದಿ ಸೇರಿದಂತೆ ಸುತ್ತಮುತ್ತಲ ಠಾಣೆಗಳ 40 ಪೊಲೀಸರು ಟಾಟಾ ನಗರ ಹಾಗೂ ಆಮ್ಕೋ ಲೇಔಟ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ರೈಫಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

‘ಟಾಟಾ ನಗರ ರೈಲ್ವೆ ಪ್ರದೇಶದಲ್ಲಿ ರಾಜಕಾಲುವೆ ಇದೆ. ಆರೋಪಿಗಳು ಅದೇ ಮಾರ್ಗವಾಗಿ ಸಾಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಫಲ್ ತೆಗೆದುಕೊಂಡು ಹೋಗುವುದು ಕಷ್ಟವೆಂದು ಅವರು ರಾಜಕಾಲುವೆಯಲ್ಲೇ ಎಸೆದು ಹೋಗಿರುವ ಅನುಮಾನವಿದೆ. ಹೀಗಾಗಿ, ಎರಡು ಜೆಸಿಬಿಗಳನ್ನು ಬಳಸಿಕೊಂಡು ರಾಜಕಾಲುವೆಯಲ್ಲಿ ಶೋಧ ನಡೆಸುತ್ತಿದ್ದೇವೆ. ಕೃತ್ಯ ನಡೆದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯ ಪ್ರತಿ ರಸ್ತೆಯಲ್ಲೂ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

*

ಈಶಾನ್ಯ ರಾಜ್ಯಗಳ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ಬಗ್ಗೆ ಸುಳಿವು ಸಿಕ್ಕಿದ್ದು, ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

–ಎಸ್‌.ಗಿರೀಶ್, ಡಿಸಿಪಿ,

ಈಶಾನ್ಯ ವಿಭಾಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry