ಕರೆ ಪರಿವರ್ತಿಸುತ್ತಿದ್ದ ಚಾಲಾಕಿ ಸೆರೆ

7

ಕರೆ ಪರಿವರ್ತಿಸುತ್ತಿದ್ದ ಚಾಲಾಕಿ ಸೆರೆ

Published:
Updated:
ಕರೆ ಪರಿವರ್ತಿಸುತ್ತಿದ್ದ ಚಾಲಾಕಿ ಸೆರೆ

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಗೆ ₹ 10.50 ಕೋಟಿ ನಷ್ಟ ಉಂಟು ಮಾಡಿದ್ದ ಗೋಪಾಲಕೃಷ್ಣ ವರ್ಮ (35) ಎಂಬ ಡಿಪ್ಲೊಮಾ ಪದವೀಧರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಹೈದರಾಬಾದ್‌ನ ಗೋಪಾಲಕೃಷ್ಣ, ಒಂದೂವರೆ ವರ್ಷಗಳಿಂದ ಹೆಣ್ಣೂರಿನ ಡಿವಿಆರ್ ಲೇಔಟ್‌ನಲ್ಲಿ ನೆಲೆಸಿದ್ದ. ಬುಧವಾರ ಮಧ್ಯಾಹ್ನ ಆತನ ಮನೆ ಮೇಲೆ ದಾಳಿ ನಡೆಸಿ ನಾಲ್ಕು ಗೇಟ್‌ವೇ, 40 ಸಿಮ್‌ಕಾರ್ಡ್‌ಗಳು, ಕಂಪ್ಯೂಟರ್, ಮೊಬೈಲ್, ಅಡಾಪ್ಟರ್ ಹಾಗೂ ಕೇಬಲ್‌ಗಳನ್ನು ಜಪ್ತಿ ಮಾಡಿದ್ದೇವೆ. ಆರೋಪಿಯು ಬಿಎಸ್‍ಎನ್‍ಎಲ್ ಸಂಸ್ಥೆಗೆ ಸುಮಾರು ₹ 9.50 ಕೋಟಿ ಹಾಗೂ ಕೇಂದ್ರ ಸರ್ಕಾರಕ್ಕೆ ₹ 75 ಲಕ್ಷ (ತೆರಿಗೆ ರೂಪದಲ್ಲಿ ಬರಬೇಕಿದ್ದ) ನಷ್ಟವಾಗುವಂತೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

‘ಮೊದಲು ಹೈದರಾಬಾದ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನಿಗೆ ಅಮೆರಿಕದ ಗುಡ್‌ವಿನ್ ಎಂಬ ವ್ಯಕ್ತಿಯ ಪರಿಚಯವಾಯಿತು. ಆತನ ಮೂಲಕ ಷಿಕಾಗೊದ ‘ಯುನಿಟೆಲ್’ ಕಂಪನಿ ಜತೆ ಸಂಪರ್ಕ ಬೆಳೆಯಿತು. ಹಣದಾಸೆಗೆ ಆ ಕಂಪನಿ ಆಡಳಿತ ಮಂಡಳಿ ಜತೆ ಒಡನಾಟ ಬೆಳೆಸಿಕೊಂಡ ಆರೋಪಿ, ಮೊಬೈಲ್‌ ಕರೆ ವಿನಿಮಯ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ದಂಧೆ ಪ್ರಾರಂಭಿಸಿದ್ದ.’

‘ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿದ್ದ ಆರೋಪಿ, ಎಫ್‌ಸಿಟಿ ಬಾಕ್ಸ್, ಮೋಡಮ್‌, ರೂಟರ್‌ ಮತ್ತಿತರ ಎಲೆಕ್ಟ್ರಾನಿಕ್‌ ಉಪಕರಣಗಳ ಮೂಲಕ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿಗೆ ಪರಿವರ್ತಿಸುತ್ತಿದ್ದ. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ನಿಗದಿಯಾಗುತ್ತಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ಗೊತ್ತಾಗಿದ್ದು ಹೇಗೆ?: ‘ಅಂತರರಾಷ್ಟ್ರೀಯ ಕರೆಗಳನ್ನು ಪರಿವರ್ತಿಸುವ ಜಾಲ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಗತಿ ಇತ್ತೀಚೆಗೆ ದೂರ ಸಂಪರ್ಕ ಇಲಾಖೆಯ ಗಮನಕ್ಕೆ ಬಂದಿತ್ತು. ಆ ವಿಚಾರವನ್ನು ಇಲಾಖೆ ಅಧಿಕಾರಿಗಳು ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸತೀಶ್‌ ಕುಮಾರ್ ಅವರಿಗೆ ತಿಳಿಸಿದ್ದರು. ತಾಂತ್ರಿಕ ವಿಧಾನಗಳನ್ನು ಬಳಸಿ, ನಿರ್ದಿಷ್ಟವಾಗಿ ಯಾವ ಪ್ರದೇಶದಿಂದ ಆರೋಪಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚಿದೆವು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಎಫ್‌ಸಿಟಿ ಬಾಕ್ಸ್?

ಹಲವು ಸಿಮ್‌ಕಾರ್ಡ್‌ಗಳನ್ನು ಅಳವಡಿಸಿ, ಏಕಕಾಲದಲ್ಲೇ ಆ ಎಲ್ಲಾ ಸಿಮ್‌ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುವ ಉಪಕರಣ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್. ಖಾಸಗಿ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಮತ್ತು ದೂರಸಂಪರ್ಕ ಕಂಪನಿಗಳಲ್ಲಿ ಎಫ್‌ಸಿಟಿ ಬಾಕ್ಸ್‌ಗಳನ್ನು ಬಳಸಲಾಗುತ್ತದೆ.

ಸೌದಿ ಕಂಪನಿ ಜತೆಗೂ ಒಪ್ಪಂದ

ಆರೋಪಿಯು ಸೌದಿ ಅರೇಬಿಯಾ ಸೇರಿದಂತೆ ಮಧ್ಯ ಏಷ್ಯಾದ ರಾಷ್ಟ್ರಗಳ ಕೆಲ ಕಂಪನಿಗಳ ಜತೆಗೂ ಒಪ್ಪಂದ ಮಾಡಿಕೊಂಡಿದ್ದ. ಅಲ್ಲಿಂದ ಬರುತ್ತಿದ್ದ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಆ ಕಂಪನಿಗಳು ಪ್ರತಿ ತಿಂಗಳು ₹ 1.50 ಲಕ್ಷವನ್ನು ಆರೋಪಿಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದವು ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry