ಪಿಂಛಿಧಾರಿಗಳ ಕರ್ನಾಟಕ

7

ಪಿಂಛಿಧಾರಿಗಳ ಕರ್ನಾಟಕ

Published:
Updated:

ಜಂಗಲ್ವಾಲೇ ಬಾಬಾ ಎಂದೇ ಪ್ರಖ್ಯಾತರಾಗಿರುವ ಪೂಜ್ಯಶ್ರೀ ಚಿನ್ಮಯಸಾಗರರು ಸಂತ ಕವಿಯಾಗಿರುವ ಓರ್ವ ದಿಗಂಬರ ಮುನಿಗಳು.

ಇಂಥ ದಿಗಂಬರ ಮುನಿಗಳ ಕೈಯಲ್ಲಿ ಪಿಂಛಿ ಇರುತ್ತದೆ. ಪಿಂಛಿ ಎಂದರೆ, ನವಿಲು ಸಹಜವಾಗಿ ತನ್ನ ಮೈಯಿಂದ ಉದುರಿಸಿದ ನವಿಲುಗರಿಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ಜೋಡಿಸಿದ ಗುಚ್ಛ. ಅಹಿಂಸೆಯ ಆರಾಧಕರಾದ ದಿಗಂಬರ ಮುನಿಗಳು ಪಿಂಛಿಯಿಲ್ಲದೆ ಒಂದು ಹೆಜ್ಜೆಯೂ ಸಂಚರಿಸಕೂಡದು. ಕೂರುವಾಗ ಆಸನದ ಮೇಲೆ ಇರಬಹುದಾದ ಸೂಕ್ಷ್ಮಜೀವಿಗಳಿಗೆ ಹಾನಿ ಆಗಬಾರದೆಂದು ಪಿಂಛಿಯಿಂದ ಗುಡಿಸುತ್ತಾರೆ. ತಮ್ಮ ಮೈಮೇಲೆ ಏನಾದರೂ ಕಣ್ಣಿಗೆ ಕಾಣದ ಜೀವಿಗಳಿದ್ದರೆ, ಅವುಗಳನ್ನು ಪಿಂಛಿಯಿಂದ ನಿವಾರಿಸುತ್ತಾರೆ. ಹೀಗೆ ಅನೇಕ ರೀತಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ರಕ್ಷಣೆ ಆಗುವುದು. ಆದ್ದರಿಂದಲೇ ಪಿಂಛಿಯು ಜೈನ ಧರ್ಮದ ಪ್ರತೀಕವಾಗಿ, ಅಹಿಂಸೆಯ ಪ್ರತೀಕವಾಗಿ, ಪರೋಪಕಾರದ ಪ್ರತೀಕವಾಗಿದೆ.

ಇಂಥವರಿಗೆ ಮೂರು ಲೋಕದಲ್ಲಿ ಜಯ ಜಯಕಾರವಾಗಲಿ ಎಂದು ಹಾರೈಸಿದ್ದಾರೆ. ಪಿಂಛಿಧಾರಿಗಳು ದಿನದಲ್ಲಿ ಒಮ್ಮೆ ಮಾತ್ರ ಶುದ್ಧ ಆಹಾರ, ಪಾನೀಯವನ್ನು ಸ್ವೀಕರಿಸುವಂಥ ಕಠಿಣ ವ್ರತ ಪಾಲಿಸುತ್ತಾರೆ. ಇದು ಅವರ ತಪದ ಒಂದು ಭಾಗ. ಅಂತ್ಯದಲ್ಲಿ ಎಲ್ಲರೂ ಪಿಂಛಿಧಾರಿಗಳಾಗಿ ತಪಸ್ವಿಗಳಾಗಬೇಕೆಂದು ಸಂತ ಕವಿ ಹೀಗೆ ಅಪೇಕ್ಷಿಸುತ್ತಾರೆ-ಪಿಂಛಿಧಾರಿಗೆ ಒಂದು ಸಲ ಮೀರಿ ಭೋಜನ ಬೇಡ

ಪಿಂಛಿ ಇಲ್ಲದವರ ಪಾದ ಪೂಜನವೂ ಬೇಡ

ಪಿಂಛಿಯ ಮಹಿಮೆ ಮರೆಯೋದು ಬೇಡ

ಪಿಂಛಿಯನ್ನು ಪಡೆಯದೆ ಇರೋದು ಬೇಡ

ಸಂತ ಕವಿ ಕರ್ನಾಟಕದವರು. ಇಲ್ಲಿ ಹುಟ್ಟಿ, ಬೆಳೆದು, ಇಲ್ಲಿಯ ನೆಲ, ಜಲ ಹಾಗೂ ಸಾಂಸ್ಕೃತಿಕ ಚಿನ್ನದಗಣಿ ಕಂಡವರು. ಇವೆಲ್ಲ ನೆನಪು ಅವರಲ್ಲಿ ಸದಾ ಹಸಿರಾಗಿದೆ. ಅವರಿಗೆ ಯಾವಾಗಲೂ ಕೃಷ್ಣ ಕಾವೇರಿಯ ಕಲಕಲ ಧ್ವನಿ ಕೇಳಿಸುತ್ತಿದೆ. ಅವರ ಹೃದಯ ಸತತವಾಗಿ ಇಲ್ಲಿಯ ಸಾಧು-ಸಂತ-ಮುನಿಗಳ ಜಿನವಾಣಿಯ ಝೇಂಕಾರದ ಪ್ರತಿಧ್ವನಿ ಆಲಿಸುತ್ತಿದೆ. ಆದ್ದರಿಂದ ಅವರಿಗೆ ಕರ್ನಾಟಕದ ಹೆಸರು ಕೆಡದಿರಲಿ, ಕರ್ನಾಟಕದವರ ಯುಕ್ತಿ, ಶಕ್ತಿ ಮತ್ತು ಭಾವಶಕ್ತಿ ಎಂದೂ ಬಾಡದಿರಲಿ ಎಂದೆನಿಸಿದೆ. ಅವರು ಪಿಂಛಿಧಾರಿಗಳ ಆರಾಧ್ಯದೈವವಾದ ಇಲ್ಲಿಯ ಭವ್ಯ ಬಾಹುಬಲಿ ಮೂರ್ತಿಗಳೊಂದಿಗೆ ಕರ್ನಾಟಕದ ಕೀರ್ತಿ ಜಗದಗಲ ಹರಡಿರುವ ಸೋಜಿಗವನ್ನು ಈ ಮುಕ್ತಕದಲ್ಲಿ ಅಭಿವ್ಯಕ್ತಿಸಿದ್ದಾರೆ-

ಸತ್ಯ-ಅಹಿಂಸೆ-ತ್ಯಾಗದ ಸಂದೇಶ ಸಾರುವ

ಏನದು ಭವ್ಯ ಬಾಹುಬಲಿ ಮೂರ್ತಿ !

ಏನದು ಶಿಕ್ಷಣ ! ಏನದು ಸ್ಫೂರ್ತಿ !!

ಏನದು ಜಗದಗಲ ಹರಡಿದೆ ಕರ್ನಾಟಕದ ಕೀರ್ತಿ !!!

ಕರ್ನಾಟಕದ ಕೀರ್ತಿಯು ಧ್ವಜಸ್ತಂಭವಾದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮೊದಲ ಬಾರಿಗೆ ಐದು ನೂರಕ್ಕೂ ಹೆಚ್ಚು ಪಿಂಛಿಧಾರಿಗಳು ಆಗಮಿಸುತ್ತಿರುವುದು ಒಂದು ಸೋಜಿಗ !

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry