ಮಾಜಿ ಕಾರ್ಪೊರೇಟರ್‌ ಹತ್ಯೆ; ಸಿಸಿಬಿಗೆ ವರ್ಗ

7

ಮಾಜಿ ಕಾರ್ಪೊರೇಟರ್‌ ಹತ್ಯೆ; ಸಿಸಿಬಿಗೆ ವರ್ಗ

Published:
Updated:
ಮಾಜಿ ಕಾರ್ಪೊರೇಟರ್‌ ಹತ್ಯೆ; ಸಿಸಿಬಿಗೆ ವರ್ಗ

ಬೆಂಗಳೂರು: ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ 2017ರ ಡಿ. 9ರಂದು ನಡೆದಿದ್ದ ಮಾಜಿ ಕಾರ್ಪೊರೇಟರ್‌ ಗೋವಿಂದೇಗೌಡ (59) ಹತ್ಯೆ ಪ್ರಕರಣ ಸಿಸಿಬಿಗೆ ವರ್ಗವಾಗಿದೆ.

ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗೋವಿಂದೇಗೌಡ, ಕಾರ್ಯಕರ್ತರನ್ನು ಭೇಟಿಯಾಗಲೆಂದು ಕೆ.ಟಿ.ಜೆ ರಸ್ತೆಗೆ ಹೋಗಿದ್ದರು. ಅವರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

2016ರಲ್ಲಿ ನಡೆದಿದ್ದ ಚಿಕ್ಕತಿಮ್ಮೇಗೌಡ ಎಂಬುವರ ಕೊಲೆಗೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ಗೋವಿಂದೇಗೌಡ ಅವರನ್ನು ಹತ್ಯೆ ಮಾಡಿರುವುದನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದರು. ಬಳಿಕ ಚಿಕ್ಕತಿಮ್ಮೇಗೌಡ ಅವರ ಸಹೋದರ ನಟರಾಜ್‌, ಲಕ್ಷ್ಮಣ, ದೇವರಾಜ್‌ ಸೇರಿದಂತೆ 9 ಮಂದಿಯನ್ನು ಕೆಲ ವಾರಗಳ ಹಿಂದಷ್ಟೇ ಬಂಧಿಸಿದ್ದರು. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆ ಇರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ.

ಜಾಮೀನು ಅರ್ಜಿ ತಿರಸ್ಕೃತ: ಬಂಧಿತರ ಪೈಕಿ ಲಕ್ಷ್ಮಣ ಹಾಗೂ ದೇವರಾಜ್‌, ಜಾಮೀನು ಕೋರಿ 61ನೇ ಸಿಟಿ ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಸುರೇಶ್‌ ಕೆ.ವಿ. ಅರ್ಜಿಗಳನ್ನು ತಿರಸ್ಕರಿಸಿದರು.

ಪ್ರಕರಣದ ಮತ್ತೊಬ್ಬ ಆರೋಪಿ ಪ್ರಸನ್ನ ಕುಮಾರ್‌ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನೂ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶೈಲಜಾ ಕೃಷ್ಣ ನಾಯಕ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry