ಯುದ್ಧದ ವೈಫಲ್ಯ, ಸಾಹಿತ್ಯದ ಸಾಫಲ್ಯ

7
ಚೌಕಟ್ಟುಗಳಿಲ್ಲದ ವಿಶ್ವದ ಬಗ್ಗೆ ಪಿಕೊ ಅಯ್ಯರ್‌ ಪ್ರತಿಪಾದನೆ

ಯುದ್ಧದ ವೈಫಲ್ಯ, ಸಾಹಿತ್ಯದ ಸಾಫಲ್ಯ

Published:
Updated:
ಯುದ್ಧದ ವೈಫಲ್ಯ, ಸಾಹಿತ್ಯದ ಸಾಫಲ್ಯ

ಜೈಪುರ: ಡ್ರೋಣ್‌ ದಾಳಿಗಳು ಹಾಗೂ ಯುದ್ಧಗಳಿಂದ ಸಾಧ್ಯವಾಗದೆ ಹೋಗುವ ಬದಲಾವಣೆ ಸಾಹಿತ್ಯದಿಂದ ಸಾಧ್ಯವಾಗುತ್ತದೆ. ನಾವು ಬಯಸಿದಂತೆ ವಿಶ್ವವನ್ನು ಬದಲಿಸುವ ಶಕ್ತಿಯನ್ನು ಶಬ್ದಗಳು ಹಾಗೂ ಚಿಂತನೆಗಳು ಹೊಂದಿವೆ ಎಂದು ಬ್ರಿಟಿಷ್‌ ಮೂಲದ ಅಮೆರಿಕನ್‌ ಕಾದಂಬರಿಕಾರ ಪಿಕೊ ಅಯ್ಯರ್‌ ಅಭಿಪ್ರಾಯಪಟ್ಟರು.

ಡಿಗ್ಗಿ ಪ್ಯಾಲೇಸ್‌ನಲ್ಲಿ ಗುರುವಾರ ಆರಂಭಗೊಂಡ ವಿಶ್ವ ಪುಸ್ತಕ ಪ್ರಿಯರ ಬಹುದೊಡ್ಡ ವಾರ್ಷಿಕ ಜಾತ್ರೆ ’ಜೈಪುರ ಲಿಟರೇಚರ್‌ ಫೆಸ್ಟಿವಲ್‌’ನಲ್ಲಿ (ಜೆಎಲ್‌ಎಫ್‌) ಆಶಯ ಭಾಷಣ ಮಾಡಿದ ಅವರು, ’ಚೌಕಟ್ಟುಗಳಿಲ್ಲದ ವಿಶ್ವ’ ಎಂಬ ವಿಷಯದ ಕುರಿತು ಮಾತನಾಡಿದರು.

ನಿರ್ಭೀತಿಯಿಂದ ಪ್ರವಾಸ ಕೈಗೊಳ್ಳುವುದು ಕಷ್ಟವಾಗಿರುವ ಸಂದರ್ಭದಲ್ಲಿ ಚೌಕಟ್ಟುಗಳನ್ನು ಉಲ್ಲಂಘಿಸುವ ಸಾಹಿತ್ಯ ಅತ್ಯಂತ ಮಹತ್ವದ್ದಾಗಿದೆ ಎಂದರು.

ಹೊಸ ಬೆಳಕಿನ ಅಗತ್ಯ: ಎಪ್ಪತ್ತರ ದಶಕದಲ್ಲಿ ಸತತವಾಗಿ ಎಂಟು ವರ್ಷಗಳ ಕಾಲ ತಾವು ಸಾಹಿತ್ಯದ ಅಧ್ಯಯನದಲ್ಲಿ ಮಾತ್ರ ತೊಡಗಿಕೊಂಡಿದ್ದನ್ನು ನೆನಪಿಸಿಕೊಂಡ ಅವರು, ಬರಹಗಾರರು ತಮ್ಮ ಸುತ್ತಲಿನ ಸಮಾಜಕ್ಕೆ ಸ್ಪಂದಿಸುವುದು ಅಗತ್ಯ ಎಂದರು. ದೂಳು ಹಿಡಿದ ಕಿಟಕಿ–ಬಾಗಿಲುಗಳನ್ನು ಸಾಹಿತ್ಯಕ್ಕಷ್ಟೇ ತೆರೆದುಕೊಳ್ಳದೆ, ಹೊಸ ಕಥನಗಳಿಗೆ ಹಾಗೂ ಚರಿತ್ರೆಯ ಹೊಸ ಪಠ್ಯಗಳಿಗೆ ಲೇಖಕರು ತೆರೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಜೈಪುರ ಸಾಹಿತ್ಯೋತ್ಸವವನ್ನು ವಿಶ್ವದ ಬಹು ರೋಚಕ ಹಾಗೂ ರಮಣೀಯ ಸಾಹಿತ್ಯ ಮೇಳ ಎಂದು ಬಣ್ಣಿಸಿದ ಅವರು, ಮಿಲನ್‌ನಲ್ಲಿ ನೆಲೆಸಿರುವ ತಮ್ಮ ಸಹಪಾಠಿ ಹಾಗೂ ಸಿಯಾಟಲ್‌ನಲ್ಲಿನ ಪ್ರಕಾಶಕ ಸೇರಿದಂತೆ ವಿಶ್ವದ ಖ್ಯಾತ ಬರಹಗಾರರನ್ನು ಒಂದೆಡೆ ಭೇಟಿ ಮಾಡುವ ಸ್ಥಳ ಇದಾಗಿದೆ ಎಂದರು.

ಮುಂಬಯಿ ಸಾಹಿತ್ಯದ ರಾಜಧಾನಿ: ಲಂಡನ್‌ 19ನೇ ಶತಮಾನದಲ್ಲಿ ಹೊಸ ಬರಹಗಾರರ ಸಾಹಿತ್ಯದ ರಾಜಧಾನಿಯಾಗಿ ಗುರ್ತಿಸಿಕೊಂಡಿತ್ತು. 20ನೇ ಶತಮಾನದಲ್ಲಿ ಆ ಸ್ಥಾನ ನ್ಯೂಯಾರ್ಕ್‌ಗೆ ಸಲ್ಲುತ್ತದೆ. ಪ್ರಸ್ತುತ ಮುಂಬಯಿ 21ನೇ ಶತಮಾನದ ಹೊಸ ವಿಶ್ವ ಸಾಹಿತ್ಯದ ರಾಜಧಾನಿ ಎನ್ನಿಸಿಕೊಂಡಿದೆ. ಈ ಮಹಾನಗರ ಅನೇಕ ಪ್ರಮುಖ ಬರಹಗಾರರ ಕಥನಗಳಿಗೆ ಅಭಿವ್ಯಕ್ತಿಯಾಗಿ, ಕ್ಯಾನ್ವಾಸ್‌ ಆಗಿ ಒದಗಿ ಬಂದಿದೆ ಎಂದು ಪಿಕೊ ಹೇಳಿದರು.

ಪಶ್ಚಿಮದ ದೇಶಗಳಲ್ಲಿ ಪ್ರಕಾಶಕರು ಹಾಗೂ ಪುಸ್ತಕ ಮಳಿಗೆಗಳ ಮಾಲೀಕರು ನಿರುತ್ಸಾಹದ ಮಾತುಗಳನ್ನಾಡುತ್ತಾರೆ. ನಿಯತಕಾಲಿಕೆಗಳು ಒಂದೊಂದಾಗಿ ಮುಚ್ಚುತ್ತಲೇ ಇವೆ. ಆದರೆ, ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ಇಲ್ಲಿ ಹೊಸ ನಿಯತಕಾಲಿಕೆಗಳು ಶುರುವಾಗಿರುವುದನ್ನು ಹಾಗೂ ಇಲ್ಲಿನ ಓದುಗರು ಹೊಸ ಕೃತಿಗಳ ಬಗ್ಗೆ ಉತ್ಸಾಹದಿಂದ ಮಾತನಾಡುವುದನ್ನು ನೋಡಿದ್ದೇನೆ ಎಂದು ಭಾರತೀಯ ಸಾಹಿತ್ಯ ಸಂಸ್ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವಸುಂಧರಾ ಗೈರು: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೂ ಸಾಹಿತ್ಯೋತ್ಸವಕ್ಕೂ ನಿಕಟ ನಂಟು. ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಹಬ್ಬಕ್ಕೆ ಚಾಲನೆ ನೀಡುತ್ತಿದ್ದುದು ಅವರೇ. ಆದರೆ, ಈ ಬಾರಿಯ ಉದ್ಘಾಟನೆ ಮುಖ್ಯಮಂತ್ರಿಯ ಗೈರುಹಾಜರಿಯಲ್ಲಿ ನಡೆಯಿತು. ಹೆಚ್ಚು ಗದ್ದಲ ಹಾಗೂ ವಿವಾದವಿಲ್ಲದೆ ಆರಂಭವಾದ ಉತ್ಸವಕ್ಕೆ ಪಿಕೊ ಅಯ್ಯರ್‌ ಹಾಗೂ ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಚಾಲನೆ ನೀಡಿದರು.

5 ದಿನ, 200 ಗೋಷ್ಠಿ: ಐದು ದಿನಗಳ ಉತ್ಸವದಲ್ಲಿ ಸುಮಾರು 200ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿದ್ದು, 380ಕ್ಕೂ ಹೆಚ್ಚು ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಏಕ ಕಾಲಕ್ಕೆ ಏಳು ವೇದಿಕೆಗಳಲ್ಲಿ ವಿವಿಧ ವಿಷಯಗಳ ಚರ್ಚೆ–ಸಂವಾದ ನಡೆಯಲಿದೆ. ಗದ್ಯ–ಪದ್ಯ, ಪರಿಸರ, ವಿಜ್ಞಾನ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ಸಿನಿಮಾ, ಪ್ರವಾಸ – ಹೀಗೆ ಹಲವು ಸಂಗತಿಗಳ ಚರ್ಚೆಗೆ ’ಜೆಎಲ್‌ಎಫ್‌’ ಸಾಕ್ಷಿಯಾಗಲಿದೆ ಎಂದು ಉತ್ಸವದ ನಿರ್ದೇಶಕರಲ್ಲಿ ಒಬ್ಬರಾದ ನಮಿತಾ ಗೋಖಲೆ ಹೇಳಿದರು.

ಬಹು ಭಾಷೆ, ಬಹು ಸಂಸ್ಕೃತಿಗಳನ್ನು ಬಿಂಬಿಸುವ ಹಾಗೂ ಸಮಾಜದ ಅನೇಕ ಕಿರುಧಾರೆಗಳನ್ನು ಮುಖ್ಯವಾಹಿನಿಗೆ ಬೆಸೆಯುವ ಈ ಉತ್ಸವದಲ್ಲಿ 15 ಭಾರತೀಯ ಭಾಷೆಗಳು ಹಾಗೂ 20 ಅಂತರರಾಷ್ಟ್ರೀಯ ಭಾಷೆಗಳನ್ನು ಪ್ರತಿನಿಧಿಸುವ ಲೇಖಕರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಟಿಆರ್‌ಪಿಗಿಂತಲೂ ಆತ್ಮಸಾಕ್ಷಿ ಮುಖ್ಯ

ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳಿಗಿಂತಲೂ ಆಮ್ಲಜನಕದ ಮುಖವಾಡವನ್ನು ಧರಿಸಿ ರಸ್ತೆಯಲ್ಲಿ ಓಡಾಡುವ ಬಾಲಕ ನನ್ನಲ್ಲಿ ಹೆಚ್ಚು ಆತಂಕ ಹುಟ್ಟಿಸುತ್ತಾನೆ ಎಂದು ಪ್ರಸಿದ್ಧ ತಬಲಾ ವಾದಕ ಜಾಕೀರ್ ಹುಸೇನ್‌ ಹೇಳಿದರು.

’ಜೆಎಲ್‌ಎಫ್‌’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪದ್ಮಾವತ್‌’ ಸಿನಿಮಾ ಸೇರಿದಂತೆ ಯಾವುದೇ ಸಾಂಸ್ಕೃತಿಕ ವಿವಾದಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಇಂಥ ಸಂಗತಿಗಳನ್ನು ಚರ್ಚಿಸುವ ಬದಲು, ಪರಿಸರದಲ್ಲಿನ ಏರುಪೇರುಗಳು ಹಾಗೂ ಅದರಿಂದ ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಾವು ಮಾತನಾಡಬೇಕಿದೆ‘ ಎಂದರು.

ಮಾಧ್ಯಮಗಳು ಕೇವಲ ಟಿಆರ್‌ಪಿ ಬಗ್ಗೆ ಯೋಚಿಸದೆ, ಸಮಾಜದ ಹಿತಕ್ಕೆ ಪೂರಕವಾದ ವಿಷಯಗಳ ಕುರಿತು ಹೆಚ್ಚು ವರದಿ ಮಾಡಬೇಕಿದೆ. ಮಾಧ್ಯಮಗಳಿಗೆ ಟಿಆರ್‌ಪಿಗಿಂತಲೂ ಆತ್ಮಸಾಕ್ಷಿ ಮುಖ್ಯವಾಗಬೇಕು ಎಂದು ಹೇಳಿದರು.

’ಜೆಸಿಬಿ’ ಪ್ರಶಸ್ತಿ!

ನಿರ್ಮಾಣ ಕಾಮಗಾರಿಗಳಲ್ಲಿ ಹಾಗೂ ಭೂಮಿಯನ್ನು ಅಗೆಯುವುದಕ್ಕಾಗಿ ಬಳಸುವ ಜೆಸಿಬಿ ಯಂತ್ರಗಳಿಗೂ ಸಾಹಿತ್ಯಕ್ಕೂ ಎತ್ತಣ ಸಂಬಂಧ? ಅಂಥದೊಂದು ಸಂಬಂಧವನ್ನು ಕಲ್ಪಿಸಲು ’ಜೆಸಿಬಿ’ ಸಂಸ್ಥೆ ಮುಂದಾಗಿದೆ. ಭಾರತದ ಸೃಜನಶೀಲ ಸಾಹಿತಿಗಳನ್ನು ಗೌರವಿಸುವ ಹಾಗೂ ಭಾರತೀಯ ಭಾಷೆಗಳ ನಡುವೆ ಅನುವಾದಗಳನ್ನು ಉತ್ತೇಜಿಸುವ ದೃಷ್ಟಿಯಿಂದ ’ಜೆಸಿಬಿ ಸಾಹಿತ್ಯ ಪ್ರತಿಷ್ಠಾನ’ ಪ್ರಸಕ್ತ ವರ್ಷದಿಂದ ಪ್ರಶಸ್ತಿಯೊಂದನ್ನು ನೀಡುತ್ತಿದೆ.

ಪ್ರಶಸ್ತಿಯು ₹25 ಲಕ್ಷ ಮೊತ್ತವನ್ನು ಒಳಗೊಂಡಿದ್ದು, ವಿಜೇತರ ಜೊತೆಗೆ ಅಂತಿಮ ಸುತ್ತಿಗೆ ನಾಮಕರಣ ಹೊಂದುವ ಇತರೆ ಐವರು ಬರಹಗಾರರಿಗೆ ತಲಾ ₹1 ಲಕ್ಷ ಬಹುಮಾನ ದೊರೆಯಲಿದೆ. ಬಹುಮಾನಿತ ಕೃತಿ ಇಂಗ್ಲಿಷ್‌ಗೆ ಅನುವಾದಗೊಂಡಿದ್ದರೆ, ಅದರ ಅನುವಾದಕರಿಗೆ ಕೂಡ ₹5 ಲಕ್ಷ ಬಹುಮಾನ ದೊರೆಯಲಿದೆ.

ಮಾರ್ಚ್‌ 1ರಿಂದ ಪುಸ್ತಕಗಳ ನಾಮಕರಣ ಪ್ರಕ್ರಿಯೆ ಶುರುವಾಗಿದ್ದು, ವಿವರಗಳು thejcbprize.org ಜಾಲತಾಣದಲ್ಲಿ ಲಭ್ಯ.

’ಭಾಷಾ ಭಾರತಿ’ಯ ಮಾದರಿ

ಅನುವಾದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ’ಕುವೆಂಪು ಭಾಷಾ ಭಾರತಿ’ ದೇಶಕ್ಕೇ ಮಾದರಿಯಾದ ಸಂಸ್ಥೆಯಾಗಿದೆ ಎಂದು ಕನ್ನಡ ಲೇಖಕ ವಿವೇಕ ಶಾನಭಾಗ ಹೇಳಿದರು.

ಭಾರತೀಯ ಪುಸ್ತಕೋದ್ಯಮದಲ್ಲಿನ ’ಬೆಸ್ಟ್‌ ಸೆಲ್ಲಿಂಗ್‌’ ಪರಿಕಲ್ಪನೆ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ’ಅನುವಾದ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಅನುವಾದಕರಿಗೆ ತರಬೇತಿ ನೀಡುವ ಕೆಲಸವನ್ನು ’ಭಾಷಾ ಭಾರತಿ’ ಮಾಡುತ್ತಿದೆ. ಸರ್ಕಾರದಿಂದ ರೂಪುಗೊಂಡು ಕಾರ್ಯ ನಿರ್ವಹಿಸುತ್ತಿರುವ ಇಂಥ ಮತ್ತೊಂದು ಸಂಸ್ಥೆ ದೇಶದಲ್ಲಿ ಇರಲಿಕ್ಕಿಲ್ಲ. ಅನುವಾದಗಳ ಮೂಲಕ ಭಾಷೆಗಳನ್ನು ಹತ್ತಿರ ತರುವ ಇಂಥ ಸಂಸ್ಥೆಗಳು ಎಲ್ಲೆಡೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry