ಅಕ್ರಮ ವಿದ್ಯುತ್ ಸಂಪರ್ಕ: ಮೂವರ ಅಮಾನತು

7

ಅಕ್ರಮ ವಿದ್ಯುತ್ ಸಂಪರ್ಕ: ಮೂವರ ಅಮಾನತು

Published:
Updated:

ವಿಜಯಪುರ: ಬೆಸ್ಕಾಂನ ನಿರಂತರ ಜ್ಯೋತಿ ವಿದ್ಯುತ್‌ನ್ನು ನೀರಾವರಿ ಪಂಪ್ ಸೆಟ್‌ಗಳಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿರುವ ಆರೋಪದಲ್ಲಿ ಬೆಸ್ಕಾಂ ಕಚೇರಿಯ ಮೂರು ಮಂದಿ ಸಿಬ್ಬಂದಿಯನ್ನು ಹೊಸಕೋಟೆ ವಿಭಾಗೀಯ ಕಾರ್ಯ ನಿರ್ವಹಣಾಧಿಕಾರಿ ಬಸವಣ್ಣಪ್ಪ ಗುರುವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ವಿಭಾಗದ ಸೋಮತ್ತನಹಳ್ಳಿ ಫೀಡರ್‌ನಿಂದ 15ಕ್ಕೂ ಹೆಚ್ಚು ಹಳ್ಳಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಪೂರೈಕೆ ಮಾಡುವ ಮಾರ್ಗದಲ್ಲಿ ರೈತರ ಐ.ಪಿ.ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕರ್ತವ್ಯ ಲೋಪವೆಸಗಿರುವುದರ ಜೊತೆಗೆ ದಿನಕ್ಕೆ 18 ಗಂಟೆಗಳಂತೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಇಲಾಖೆಗೆ ಆರ್ಥಿಕ ನಷ್ಟವುಂಟು ಮಾಡಿದ ಹಿನ್ನೆಲೆಯಲ್ಲಿ ಬೆಸ್ಕಾಂ ಮೆಕಾನಿಕ್ ದರ್ಜೆ 2 - ಸಿ.ಭಕ್ತಿರಾಜು, ಸಹಾಯಕ ಮಾರ್ಗದಾಳು ಡಿ.ಎಂ.ವೆಂಕಟಸ್ವಾಮಿ, ಕಿರಿಯ ಮಾರ್ಗದಾಳು ಎನ್.ಮಧುಸೂದನ್ ಅವರನ್ನು ಅಮಾನತುಗೊಳಿಸಲಾಗಿದೆ.

ರೈತರ ಪಂಪ್ ಸೆಟ್‌ಗಳಿಗೆ ದಿನಕ್ಕೆ 6ಗಂಟೆಗಳ ವಿದ್ಯುತ್ ಸಬ್ಸಿಡಿ ನೀಡಬೇಕು. ಆದರೆ, ಸಿಬ್ಬಂದಿ ಹೆಚ್ಚುವರಿಯಾಗಿ 18 ಗಂಟೆಗಳ ಕಾಲ ಹೆಚ್ಚುವರಿಯಾಗಿ ವಿದ್ಯುತ್ ಪೂರೈಕೆ ಮಾಡಿ, ನಷ್ಟವುಂಟು ಮಾಡಿದ್ದಾರೆ.

ಇಲಾಖೆಗೆ ನೀಡಿದ ದೂರಿನಂತೆ ಸೂಪರಿಟೆಡೆಂಟ್ ಎಂಜಿನಿಯರ್ ಶ್ರೀರಾಮೇಗೌಡ ಸ್ಥಳ ಪರಿಶೀಲಿಸಿದಾಗ ಐ.ಪಿ.ಸೆಟ್ ಗಳಿಗೆ ಅಕ್ರಮವಾಗಿ ಅಳವಡಿಕೆ ಮಾಡಿದ್ದ ಸಂಪರ್ಕ ತರಾತುರಿಯಲ್ಲಿ ತೆರವುಗೊಳಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಮೇಲಧಿಕಾರಿಗೆ ಸೂಚನೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry