ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

7

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Published:
Updated:
ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಳ್ಳಾರಿ: ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಗುರುವಾರ ನೀಡಿದ್ದ ‘ಕರ್ನಾಟಕ ಬಂದ್‌’ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಬಂದ್ ನೀರಸವಾಗಿತ್ತು. ಸಂಡೂರು, ಕೂಡ್ಲಿಗಿಯಲ್ಲಿ ಎಂದಿನಂತೆ ಜನಜೀವನ ನಡೆದಿತ್ತು.

ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬೆಳಿಗ್ಗೆ 6.30ರ ವೇಳೆಗೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿದ ಘಟನೆಯನ್ನು ಹೊರತುಪಡಿಸಿದರೆ ಬಂದ್‌ ಶಾಂತಿಯುತವಾಗಿತ್ತು. ಕನ್ನಡಿಗರನ್ನು ‘ಹರಾಮಿಗಳು’ ಎಂದು ಕರೆದಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್ ಅವರ ಪ್ರತಿಕೃತಿಯನ್ನು ಅದೇ ವೃತ್ತದಲ್ಲಿ ಮಧ್ಯಾಹ್ನ ಕಾರ್ಯಕರ್ತರು ಸುಟ್ಟು ಪ್ರತಿಭಟಿಸಿದರು.

ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ನಿಂತಿತ್ತು. ಬಹುತೇಕರು ಆಟೋರಿಕ್ಷಾ ಮತ್ತು ಟೆಂಪೋ ಟ್ರ್ಯಾಕ್ಸ್‌ಗಳನ್ನು ಅವಲಂಬಿಸಿದರು. ಹೊರ ಊರುಗಳಿಂದ ನಗರದ ಹೊಸ ಬಸ್‌ ನಿಲ್ದಾಣಕ್ಕೆ ಬಂದವರು ಬಸ್‌ ಸೌಕರ್ಯವಿಲ್ಲದೆ ಪರದಾಡಿದರು. ಸಂಜೆ 4ರ ಬಳಿಕ ಬಸ್‌ ಸಂಚಾರ ಆರಂಭವಾಯಿತು.

ನಗರವನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸಿದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಬಹುತೇಕ ಖಾಸಗಿ ಶಾಲೆಗಳು ಮುಚ್ಚಿದ್ದವು.

ಅಂಗಡಿಗಳು ಬಂದ್‌: ನಗರದ ಎಲ್ಲೆಡೆ ಅಂಗಡಿಗಳು ಮುಚ್ಚಿದ್ದವು. ಕೆಲವೆಡೆ ತಳ್ಳುಗಾಡಿ ಹೋಟೆಲ್‌ಗಳು, ಹೂವಿನ ಅಂಗಡಿಗಳು, ಡಬ್ಬಿ ಅಂಗಡಿಗಳು ಮಾತ್ರ ತೆರೆದಿದ್ದವು.

ಜೈನ್‌ ಮಾರುಕಟ್ಟೆ, ಬೆಂಗಳೂರು ರಸ್ತೆ, ತೇರು ಬೀದಿ, ಕಾಳಮ್ಮ ಗುಡಿ ಬೀದಿ, ಗಾಂಧಿನಗರ, ಕೌಲ್‌ಬಜಾರ್‌, ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿಗಳನ್ನು ಮುಚ್ಚಲಾಗಿತ್ತು, ಕೆಲವೆಡೆ ಕಾರ್ಯಕರ್ತರು ತೆರಳಿ ಅಂಗಡಿಗಳನ್ನು ಮುಚ್ಚಿಸಿದ ಘಟನೆಯೂ ನಡೆಯಿತು.

ರೈಲು ತಡೆಯಲು ಯತ್ನ: ನಗರದಲ್ಲಿ ಬೆಳಿಗ್ಗೆ 8.30ರ ವೇಳೆಗೆ ಕುರ್ಲಾ ಎಕ್ಸ್‌ಪ್ರೆಸ್‌ ರೈಲು ತಡೆಯಲು ಮುಂದಾದ ಕಾರ್ಯಕರ್ತರನ್ನು ತಡೆದ ರೈಲ್ವೆ ಪೊಲೀಸರು, ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಅದರಿಂದ ಹಿಂಜರಿದ ಕಾರ್ಯಕರ್ತರು ನಿಲ್ದಾಣದ ಹೊರಗೆ ಕೆಲಕಾಲ ಧರಣಿ ನಡೆಸಿ ನಿರ್ಗಮಿಸಿದರು.

ನೀರಸ ಪ್ರತಿಕ್ರಿಯೆ

ಕುರುಗೋಡು: ಪಟ್ಟಣದಲ್ಲಿ ಗುರುವಾರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ವಾರದ ಸಂತೆ ಎಂದಿನಂತೆ ನಡೆಯಿತು. ಅಂಗಡಿಗಳು ತೆರೆದಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕರವೇ ಪ್ರವೀಣ್ ಶೆಟ್ಟಿ ಮತ್ತು ಶಿವರಾಮೇಗೌಡರ ಬಣದ ಕಾರ್ಯಕರ್ತರು ಪಟ್ಟಣದ ಮುಖ್ಯವೃತ್ತದಲ್ಲಿ ಸೇರಿ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಣಗಳ ಅಧ್ಯಕ್ಷರಾದ ಮೃತ್ಯುಂಜಯ ಯಾದವ್, ವಿ. ದುರ್ಗಾ ಪ್ರಸಾದ್, ವೆಂಕಟೇಶ್, ಲೋಕೇಶ್, ಕಗ್ಗಲ್ ಬಸವರಾಜ, ಉಮೇಶ್, ಕಾಳೇಶ್, ಬಸವರಾಜ್, ಪ್ರಭಣ್ಣ, ವಿ. ರಾಮು, ನಾಗರಾಜ ಇದ್ದರು.

**

ವಾಹನ ತಡೆಯದಂತೆ ತಾಕೀತು

ಬಳ್ಳಾರಿ: ಮಹಿಳೆಯರು ಮತ್ತು ಮಕ್ಕಳಿರುವ ವಾಹನಗಳನ್ನು ತಡೆಯಬಾರದು ಎಂದು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಕಾರ್ಯಕರ್ತರಿಗೆ ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಗಾಯತ್ರಿ ತಾಕೀತು ಮಾಡಿದರು.

ಚೆನ್ನಪ್ಪ ವೃತ್ತವನ್ನು ಹೆಚ್ಚು ಕೇಂದ್ರೀಕರಿಸಿದ್ದ ಕಾರ್ಯಕರ್ತರು ಉಳಿದ ವೃತ್ತಗಳ ಕಡೆಗೆ ಗಮನ ಹರಿಸದ ಪರಿಣಾಮ ಅಲ್ಲಿ ಬಂದ್‌ ತೀವ್ರತೆ ಕಂಡುಬರಲಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry