ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಭತ್ಯೆ ಫಾರಂ ಮೇಲೆ ಸಹಿ!

ಒಂದೇ ದಿನಕ್ಕೆ ಸೀಮಿತಗೊಂಡ ಜಿಲ್ಲಾಮಟ್ಟದ ಯುವ ಜನಮೇಳ, ಸಂಶಯ ಮೂಡಿಸಿದ ಅಧಿಕಾರಿಗಳ ಕ್ರಮ, ಕ್ರೀಡಾಪಟುಗಳಿಂದ ಭ್ರಷ್ಟಾಚಾರದ ಆರೋಪ
Last Updated 26 ಜನವರಿ 2018, 7:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಜನವರಿ 24 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 2017-18ನೇ ಸಾಲಿನ ಜಿಲ್ಲಾಮಟ್ಟದ ಯುವ ಜನಮೇಳ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಂದ ಖಾಲಿ ಭತ್ಯೆ ಫಾರಂ ಮೇಲೆ ಸಹಿ ಮಾಡಿಸಿಕೊಳ್ಳುವ ಜತೆಗೆ ಎರಡು ದಿನಗಳ ಕಾರ್ಯಕ್ರಮವನ್ನು ಒಂದೇ ದಿನ ನಡೆಸಿ ಅಕ್ರಮ ನಡೆಸಲಾಗಿದೆ ಎಂದು ಕೆಲ ಕ್ರೀಡಾಪಟುಗಳು ಆರೋಪಿಸಿದ್ದಾರೆ.

ಮೇಳದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ನೀಡಿದ ಪ್ರಯಾಣ ಭತ್ಯೆ, ದಿನಭತ್ಯೆ ನಮೂದಿಸದೆ ಖಾಲಿ ಫಾರಂನಲ್ಲಿ ಸ್ಪರ್ಧಾಳುಗಳಿಂದ ಸಹಿ ಪಡೆದುಕೊಂಡಿರುವ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸ್ಪರ್ಧಾಳುಗಳಿಗೆ ಭತ್ಯೆ ನೀಡುವುದು ಒಂದು, ದಾಖಲೆಗಳಲ್ಲಿ ಬರೆದುಕೊಳ್ಳುವುದು ಮತ್ತೊಂದು. ಇಂತಹ ಅಕ್ರಮಗಳ ಸರಮಾಲೆಯೇ ಕ್ರೀಡಾ ಇಲಾಖೆಯಲ್ಲಿದೆ’ ಎಂದು ಕ್ರೀಡಾಪಟು ಜಯಂತಿಗ್ರಾಮದ ನಾರಾಯಣಸ್ವಾಮಿ ಆರೋಪಿಸಿದರು.

‘ಜಿಲ್ಲೆಯಲ್ಲಿ 180 ಯುವಕ ಸಂಘಗಳಿವೆ. ಆ ಪೈಕಿ 60 ಸಂಘಗಳು ಸಕ್ರಿಯವಾಗಿವೆ. ಆದರೆ ಯುವ ಜನಮೇಳದ ಬಗ್ಗೆ ಯುವಜನರಿಗೆ ಪೂರ್ವಭಾವಿಯಾಗಿ ಮಾಹಿತಿ ಕೊಟ್ಟಿಲ್ಲ. ಗೌರಿಬಿದನೂರಿನ ಕೆಲ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಕರೆತಂದು ಕಾರ್ಯಕ್ರಮ ‘ಶಾಸ್ತ್ರ’ ಮುಗಿಸಿದ್ದಾರೆ. ನಾವೇ ಆ ಕಾರ್ಯಕ್ರಮದಲ್ಲಿ ಹಾಜರಿದ್ದು ಕಂಡಂತೆ ಸುಮಾರು 50–60 ಜನರು ಮೇಳದಲ್ಲಿ ಭಾಗವಹಿಸಿದ್ದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾಮಟ್ಟದ ಯುವ ಜನಮೇಳ ಆಯೋಜನೆಗಾಗಿಯೇ ಸರ್ಕಾರ ₨4.30 ಲಕ್ಷ ಅನುದಾನ ನೀಡಿದೆ. ಎರಡು ದಿನಗಳ ಕಾಲ ನಡೆಸಬೇಕಾದ ಕಾರ್ಯಕ್ರಮವನ್ನು ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕ ಬಿ.ರುದ್ರಪ್ಪ ಅವರು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿದ್ದಾರೆ. ಅಷ್ಟಕ್ಕೂ ಭತ್ಯೆ ಫಾರಂನಲ್ಲಿ ಮೊತ್ತ ನಮೂದಿಸದೆ ಸಹಿ ಪಡೆದಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 2016ರ ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ಕೂಡ ಸ್ಪರ್ಧಾಳುಗಳಿಗೆ ₨195 ಭತ್ಯೆ ಕೊಟ್ಟು ಕಳುಹಿಸಲಾಗಿತ್ತು. ಆದರೆ ನಾವು ಮಾಹಿತಿ ಹಕ್ಕು ಕಾಯ್ದೆ ಅಡಿ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ ಕ್ರೀಡಾ ಇಲಾಖೆಯ ಅಂದಿನ ಸಹಾಯಕ ನಿರ್ದೇಶಕರು ಫಾರಂನಲ್ಲಿ ₨349 ಭತ್ಯೆ ನೀಡಿರುವುದಾಗಿ ನಮೂದಿಸಿದ್ದಾರೆ. ಇಂತಹ ಅಕ್ರಮಗಳು ಕ್ರೀಡಾ ಇಲಾಖೆಯಲ್ಲಿ ಸತತವಾಗಿ ನಡೆದುಕೊಂಡು ಬರುತ್ತಿವೆ’ ಎಂದು ದೂರಿದರು.

‘ಕಳೆದ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಜನಮೇಳ ಕಾರ್ಯಕ್ರಮದಲ್ಲಿ ಸುಮಾರು 120 ಜನರ ಒಳಗೆ ಭಾಗವಹಿಸಿದ್ದರು. ಆದರೆ ದಾಖಲೆಗಳಲ್ಲಿ ಸಹಾಯಕ ನಿರ್ದೇಶಕರು 1,200 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ನಮೂದಿಸಿದ್ದಾರೆ. ನಕಲಿ ದಾಖಲೆಗಳ ಸೃಷ್ಟಿಸುವ ಮೂಲಕ ಸರ್ಕಾರ ಯೋಜನೆಗಳ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಮನಸೋಇಚ್ಛೆ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಕಳೆದ ಅಕ್ಟೋಬರ್ 27 ರಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರು ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಿದ್ಯಾರ್ಥಿ ವಸತಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ರುದ್ರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ತಿಳಿಸಿದರು.

‘ರುದ್ರಪ್ಪ ಅವರ ಜತೆ ಹಾಕಿ ತರಬೇತುದಾರ ಮುಸ್ತಾಕ್ ಅಹಮ್ಮದ್‌ ಅವರು ಸೇರಿಕೊಂಡು ಅನುದಾನ ದುರ್ಬಳಕೆ ಮಾಡಿಕೊಂಡು ಕ್ರೀಡಾಪಟುಗಳಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಕ್ರೀಡಾಪಟುಗಳು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಮುಸ್ತಾಕ್‌ ಅವರನ್ನು ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರು ವರ್ಗಾವಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಇಲ್ಲಿಯೇ ಮುಂದುವರಿಯುತ್ತಿದ್ದಾರೆ’ ಎಂದು ಆರೋಪಿಸಿದರು.

ಏನಂತಾರೆ ರುದ್ರಪ್ಪ?

‘ಕೆಲವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಆರೋಪ ಮಾಡುತ್ತ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಿದ್ಧನಾಗಿದ್ದೇನೆ. ಪ್ರತಿಯೊಬ್ಬರ ಭತ್ಯೆ ಮೊತ್ತ ಸ್ಥಳದಲ್ಲೇ ಬರೆಯುವುದು ಕಷ್ಟವಾಗುತ್ತದೆ ಎನ್ನುವ ಉದ್ದೇಶಕ್ಕೆ ಖಾಲಿ ಫಾರಂ ಮೇಲೆ ಸಹಿ ಪಡೆದುಕೊಂಡಿದ್ದೇವೆ. ಯಾವುದೇ ಅಕ್ರಮ ಎಸಗಿಲ್ಲ’ ಎಂದು ರುದ್ರಪ್ಪ ತಿಳಿಸಿದರು.

ಜಿಲ್ಲಾಡಳಿತ ವೈಫಲ್ಯ

‘ಸರ್ಕಾರ ಯುವ ಜನರಿಗಾಗಿ ರೂಪಿಸಿದ ಕಾರ್ಯಕ್ರಮಗಳು ಅವರಿಗೆ ತಲುಪುತ್ತಿಲ್ಲ. ಇನ್ನೊಂದೆಡೆ ಕ್ರೀಡಾಪಟುಗಳ ಸಿಗಬೇಕಾದ ಪ್ರೋತ್ಸಾಹವೂ ಸಿಗುತ್ತಿಲ್ಲ. ಕ್ರೀಡಾ ಇಲಾಖೆಯಿಂದ ಬರುವ ಲಕ್ಷಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳು ಯಾರಿಗೂ ಅಂಜುತ್ತಿಲ್ಲ. ಜಿಲ್ಲಾಡಳಿತ ಇದನ್ನೆಲ್ಲ ಕಂಡರೂ ಕಣ್ಮುಚ್ಚಿಕೊಂಡು ಕುಳಿತಿದೆ. ಅದರ ವೈಫಲ್ಯದಿಂದಾಗಿಯೇ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ’ ಎಂದು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನನಗದರ ಐಡಿಯಾ ಇಲ್ಲಾ!

ಎಷ್ಟು ಜನ ಭಾಗವಹಿಸಿದ್ದರು ಎಂಬ ಪ್ರಶ್ನೆಗೆ ರುದ್ರಪ್ಪ, ‘ಮೇಳದಲ್ಲಿ 480 ಜನರು ಭಾಗವಹಿಸಿದ್ದರು’ ಎಂದರು. ಪ್ರತಿಯೊಬ್ಬರಿಗೂ ತಲಾ ಎಷ್ಟು ಭತ್ಯೆ ನೀಡಿದ್ದೀರಿ ಎಂದು ವಿಚಾರಿಸಿದರೆ, ‘ಸದ್ಯ ನಾನು ಕಚೇರಿಯಿಂದ ಹೊರಗಡೆ ಇದ್ದೇನೆ. ಅದರ ಐಡಿಯಾ ಇಲ್ಲಾ. ಈ ಬಾರಿ ಅನುದಾನ ಪೂರ್ತಿ ಖರ್ಚು ಆಗಲ್ಲ. ಉಳಿಯುತ್ತದೆ’ ಎಂದರು.

ಯಾರದು ಸತ್ಯ? ಯಾರದು ಸುಳ್ಳು?

‘ಯಾವುದೋ ದುರುದ್ದೇಶವಿಟ್ಟುಕೊಂಡು ನಾರಾಯಣಸ್ವಾಮಿ ಮತ್ತು ಶ್ರೀನಿವಾಸ್ ಅವರು ನನ್ನನ್ನು ಬ್ಲಾಕ್‌ಮೇಲ್‌ ಮಾಡಲು ಹೊರಟಿದ್ದಾರೆ. ಪದೇ ಪದೇ ಇಂತಹ ಆರೋಪ ಮಾಡುತ್ತಿದ್ದಾರೆ’ ಎಂದು ರುದ್ರಪ್ಪ ಆರೋಪಿಸುತ್ತಾರೆ.

ಈ ಕುರಿತು ನಾರಾಯಣಸ್ವಾಮಿ ಮತ್ತು ಶ್ರೀನಿವಾಸ್ ಅವರನ್ನು ಕೇಳಿದರೆ, ‘ರುದ್ರಪ್ಪ ಈ ಹಿಂದೆ ಬೇರೆಯಲ್ಲಿ ಭ್ರಷ್ಟಾಚಾರ ಮಾಡಿ ಅಮಾನತುಗೊಂಡು ಇಲ್ಲಿಗೆ ವರ್ಗಾವಣೆಗೊಂಡು ಬಂದಿದ್ದಾರೆ. ಇಲ್ಲಿನ ಅಕ್ರಮಗಳೂ ಬಯಲಾದರೆ ತಲೆದಂಡವಾಗುತ್ತದೆ ಎನ್ನುವ ಭಯಕ್ಕೆ ಆರಂಭದಲ್ಲಿ ನಮಗೂ ಹಣದ ಆಮಿಷ ತೋರಿಸಿದರು. ಅದಕ್ಕೆ ನಾವು ಬಲಿಯಾಗದೆ ಹೋರಾಡುತ್ತಿರುವ ಕಾರಣ ನಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ತಕ್ಷಣವೇ ಮಾಧ್ಯಮಗಳ ಎದುರು ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

*

ಕ್ರೀಡಾ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ, ಜಿಲ್ಲಾಡಳಿತ ವೈಫಲ್ಯ ಖಂಡಿಸಿ ಜಿಲ್ಲಾಡಳಿತ ಭವನದ ಎದುರು ಕ್ರೀಡಾಪಟುಗಳು ಉಪವಾಸ ಸತ್ಯಾಗ್ರಹ ಮಾಡುತ್ತೇವೆ.
-ಮಂಚನಬಲೆ ಶ್ರೀನಿವಾಸ್, ಹಿರಿಯ ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT