ಕ್ಷೇತ್ರವಾರು ಸಮಸ್ಯೆಗಳೊಂದಿಗೆ ಪ್ರಣಾಳಿಕೆ ತಯಾರಿ

7
ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಉಸ್ತುವಾರಿ ಅಶ‍್ವತ್ಥನಾರಾಯಣ

ಕ್ಷೇತ್ರವಾರು ಸಮಸ್ಯೆಗಳೊಂದಿಗೆ ಪ್ರಣಾಳಿಕೆ ತಯಾರಿ

Published:
Updated:
ಕ್ಷೇತ್ರವಾರು ಸಮಸ್ಯೆಗಳೊಂದಿಗೆ ಪ್ರಣಾಳಿಕೆ ತಯಾರಿ

ಚಿತ್ರದುರ್ಗ: ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ, ಅಲ್ಲಿನ ಜನರಿಂದ ಮಾಹಿತಿ ಪಡೆದು ಚುನಾವಣಾ ಪ್ರಣಾಳಿಕೆ ಸಿದ್ಧ ಪಡಿಸುವುದಕ್ಕಾಗಿ ಪ್ರಣಾಳಿಕೆ ಸಮಿತಿ ರಚಿಸಲಾಗಿದೆ ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಉಸ್ತುವಾರಿ ಅಶ‍್ವತ್ಥ ನಾರಾಯಣ ತಿಳಿಸಿದರು.

ನಗರದ ಕ್ರೀಡಾ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು 'ತಳಮಟ್ಟದ ಜನರಿಂದ ಸಮಸ್ಯೆಗಳನ್ನು ಅರಿತುಕೊಂಡು, ಅವರಿಗೆ ಏನು ಬೇಕೋ ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎನ್ನುತ್ತಾರೆ. ಹಾಗೆಯೇ ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬ ಪದಾಧಿಕಾರಿಯಿಂದ ಕೆಲಸ ಮಾಡಿಸುತ್ತಾರೆ. ಈಗ ಪ್ರಣಾಳಿಕೆ ಸಮಿತಿಗೂ ಅದೇ ಜವಾಬ್ದಾರಿ ವಹಿಸಿದ್ದಾರೆ. ಹಾಗಾಗಿ ಪ್ರತಿ ಕ್ಷೇತ್ರವಾರು ಭೇಟಿ ನೀಡಿ ಜನರಿಂದ ಮಾಹಿತಿ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಮೊದಲು ಪಕ್ಷದ ಕೆಲವು ಮುಖಂಡರು ಸೇರಿ ಚುನಾವಣಾ ಪ್ರಣಾಳಿಕೆ ರಚಿಸುತ್ತಿದ್ದರು. ಇದರಿಂದ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ನೀಡಲು ಆಗುತ್ತಿರಲಿಲ್ಲ. ಈ ಸಮಿತಿ ಮೂಲಕ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಪಕ್ಷದ ಕಾರ್ಯಕರ್ತರಿಂದ ಸ್ಥಳೀಯ ಸಮಸ್ಯೆಗಳನ್ನು ತಿಳಿದು ಪ್ರಣಾಳಿಕೆಯಲ್ಲಿ ಸೇರಿಲಾಗುತ್ತಿದೆ' ಎಂದು ಹೇಳಿದರು.

ಚುನಾವಣಾ ಪ್ರಣಾಳಿಕೆ ಸಮಿತಿಯ ಮತ್ತೊಬ್ಬ ಉಸ್ತುವಾರಿ ರಾಜೀವ್ ಪಟೇಲ್, 'ಇಲ್ಲಿ ಅನೇಕರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.   ಪ್ರತಿಯೊಬ್ಬರಿಗೂ ಒಂದೊಂದು ಅರ್ಜಿಯನ್ನು ಕೊಡುತ್ತೇವೆ. ಅದರಲ್ಲಿ ನಿಮ್ಮ ಕ್ಷೇತ್ರದಲ್ಲಿ ಅರಿವಿಗೆ ಬಂದ ಸಮಸ್ಯೆಗಳನ್ನು ಭರ್ತಿ ಮಾಡಿ. ಹಾಗೆಯೇ ಪರಿಹಾರ ನೀಢಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿಖರವಾಗಿ ತಿಳಿಸಬೇಕು. ಅರ್ಜಿಯ ಕೆಳಭಾಗದಲ್ಲಿ ನಿಮ್ಮ ಹೆಸರು, ಊರು, ಮೊಬೈಲ್ ಸಂಖ್ಯೆ ನಮೂದಿಸಿದರೆ, ಪುನಃ  ಸಂಪರ್ಕಿಸಲು ಅನುಕೂಲವಾಗುತ್ತದೆ' ಎಂದು ವಿವರಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, 'ರಾಜ್ಯದಲ್ಲಿ ಬಡವರ್ಗದವರು ಹೆಚ್ಚು ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅವರಿಗೆ ರೋಗಕ್ಕೆ ಚಿಕಿತ್ಸೆ ಪಡೆಯಲು ಹಣವಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಆಸ್ಪತ್ರೆಗೆ ಹಣ ಹಾಕುವ ಬದಲು, ರೋಗಿಗಳ ಹೆಸರಲ್ಲಿ ವೈದ್ಯಕೀಯ ವಿಮೆಯನ್ನು ಸರ್ಕಾರವೇ ಪಾವತಿಸಿದರೆ ಉತ್ತಮ. ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು' ಎಂದು ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳಿಗೆ ವಾರ್ಷಿಕ ಹೆಚ್ಚಿನ ಅನುದಾನ ಬಿಡುಗಡೆ ಆಗಬೇಕು ಮತ್ತು ಹೆಚ್ಚಿನ ಅಧಿಕಾರ ನೀಡುವ ಅಂಶವನ್ನು ಸೇರಿಸಲು ತಿಳಿಸಿದರು.

ಇಂಗಳದಾಳ್ ತಿಪ್ಪೇಸ್ವಾಮಿ ಮಾತನಾಡಿ, 'ನಮ್ಮ ಗ್ರಾಮದಲ್ಲಿರುವ ಚಿನ್ನದ ಗಣಿ ಸ್ಥಗಿತಗೊಂಡಿದೆ. ಅದನ್ನು ಪುನಶ್ಚೇತನಗೊಳಿಸಿದರೆ ಎಂಟರಿಂದ ಹತ್ತು ಹಳ್ಳಿಗಳ ಜನರಿಗೆ ಉದ್ಯೋಗ ದೊರೆಯುತ್ತದೆ' ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಬೇಕು. ₹ 25 ಸಾವಿರ ವೇತನ ನೀಡಬೇಕು. ಗಣಿ ಕಂಪನಿಗಳೀಂದ ಸಂಗ್ರಹವಾಗುವ ರಾಯಧನವನ್ನು ಗಣಿಬಾಧಿತ ಪ್ರದೇಶಗಳಿಗೆ ಸಮರ್ಪ ಕವಾಗಿ ಬಳಕೆ ಮಾಡಬೇಕು. ಬರಪೀಡಿತ ಚಿತ್ರದುರ್ಗ ಜಿಲ್ಲೆಯನ್ನು 371(ಜೆ) ಪಟ್ಟಿಗೆ ಸೇರಿಸಬೇಕು ಎಂಬ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.

ಗುಜರಾತ್‍ನಲ್ಲಿರುವಂತೆ ಇಲ್ಲೂ ಮದ್ಯ ನಿಷೇಧವಾಗಲಿ ಎಂಬುದು ಮುಖಂಡ ಕೃಷ್ಣಪ್ಪ ಸಲಹೆ ನೀಡಿದರು.

ನೀರಿನ ಕೊರತೆ ನೀಗಿಸಲು ದೂರದಿಂದ ಕೋಟಿ ಹಣ ಖರ್ಚು ಮಾಡಿ ನೀರು ತರುವ ಬದಲು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಕೆಯನ್ನು ಒಂದು ನೀತಿಯನ್ನಾಗಿ ರೂಪಿಸಬೇಕು. ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಸಲಹೆ ನೀಡಿದರು.

ಮತದಾನ ಪ್ರಮಾಣ ಇಳಿಮುಖವಾಗುತ್ತಿದೆ. ಹಾಗಾಗಿ ಕಡ್ಡಾಯ ಮತದಾನ ಜಾರಿಗೊಳಿಸಲು ಕಾನೂನು ರೂಪಿಸಬೇಕು ಎಂದು ಗುತ್ತಿನಾಡಿನ ಚಿದಾನಂದಮೂರ್ತಿ ಸಲಹೆ ನೀಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಲೀಲಾಧರ ಠಾಕೂರ್, ಖಾಸಗಿ ಶಾಲಾ ಕಾಲೇಜುಗಳಲ್ಲಿ ಡೊನೇಷನ್ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ರೂಪಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ್‌ನಾಯ್ಕ್ ಮಾತನಾಡಿ,  ಹೋಬಳಿಗೊಂದು ಮಾಹಿತಿ ಕೇಂದ್ರ ಬೇಕು ಎಂದರೆ, ಗಾರೆಹಟ್ಟಿ ಚಂದ್ರ, 'ರೈಲ್ವೆ ಗೇಟ್‌ಗಳಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಹಾಗೂ ಸಮಯ ಉಳಿಸಲು ಕೆಳ ಅಥವಾ ಮೇಲು ಸೇತುವೆಗಳನ್ನು ನಿರ್ಮಿಸಬೇಕು ಎಂದು ಸಲಹೆ ಕೊಟ್ಟರು.

ಬಿಜೆಪಿ ಮುಖಂಡರಾದ ಟಿ.ಜಿ.ನರೇಂದ್ರನಾಥ್, ಎಪಿಎಂಸಿ ಸದಸ್ಯ ಎಚ್. ರಾಜಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ್, ಕರಿಬಸಪ್ಪ, ಶಾಂತಮ್ಮ, ಶ್ರೀಧರ್, ಮುಕ್ಕಣ್ಣ, ಕರಿಯಪ್ಪ, ಹರೀಶ್, ಸುನಂದ ತಿಪ್ಪೇಸ್ವಾಮಿ, ತುಳಸಿ, ಗೌರಣ್ಣ, ಶಂಭು, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಸಭೆಯಲ್ಲಿ ಹಾಜರಿದ್ದರು.

**

‘ಗರ್ಭಿಣಿಯರಿಗೆ ಆರ್ಥಿಕ ನೆರವು: ಪ್ರಚುರ ಪಡಿಸಿ’

ಗರ್ಭಿಣಿಯರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ  ‘ಮಾತೃ ವಂದನಾ ಭಾಗ್ಯ' ಕಾರ್ಯಕ್ರಮ ಜಾರಿ ಮಾಡಿದೆ. ಈ ಕುರಿತು ಜನರಿಗೆ ಮಾಹಿತಿ ನೀಡಿ ಎಂದು ಅಶ್ವತ್ಥ ನಾರಾಯಣ್ ಕಾರ್ಯಕರ್ತರಿಗೆ ತಿಳಿಸಿದರು.

ಈ ಯೋಜನೆಯಡಿ ಗರ್ಭಿಣಿಯರಿಗೆ ಮೂರು ತಿಂಗಳಿಗೆ ₹ 1500. 6 ತಿಂಗಳಿಗೆ ಮತ್ತೆ ₹ 1500 ಹಾಗೂ 9 ತಿಂಗಳ ಅವಧಿಯಲ್ಲಿ ಪುನಃ ₹ 3000 ಕೊಡಲಾಗುತ್ತದೆ. ಗರ್ಭಿಣಿ - ಪ್ರಸವ ಅವಧಿಯಲ್ಲಿ ಒಟ್ಟು ₹ 6 ಸಾವಿರ ಆ ಗರ್ಭಿಣಿಯರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ಕುರಿತು ಜನರಿಗೆ ತಿಳಿಸಿ ಹೇಳಬೇಕು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry