ಕೆರೆ ತುಂಬಿಸುವ ಯೋಜನೆ ಜಾರಿಗೆ ಬದ್ಧ

7
ಜಗಳೂರು: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ

ಕೆರೆ ತುಂಬಿಸುವ ಯೋಜನೆ ಜಾರಿಗೆ ಬದ್ಧ

Published:
Updated:
ಕೆರೆ ತುಂಬಿಸುವ ಯೋಜನೆ ಜಾರಿಗೆ ಬದ್ಧ

ಜಗಳೂರು: ತುಂಗಭದ್ರಾ ಜಲಾಶಯದಿಂದ ಚಳ್ಳಕೆರೆ, ಪಾವಗಡಕ್ಕೆ ನೀರು ಪೂರೈಸುವ ಪೈಪ್‌ಲೈನ್ ಜಗಳೂರಿನಲ್ಲಿ ಹಾದುಹೋಗಲಿದ್ದು, ಇಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ 3ನೇ ದಿನವಾದ ಗುರುವಾರ ಅವರು ಮಾತನಾಡಿದರು.

‘ಬರಪೀಡಿತ ಜಗಳೂರು ಸೇರಿದಂತೆ ಎಲ್ಲೆಡೆ ಫ್ಲೋರೈಡ್ ಅಂಶ ಹೆಚ್ಚಿ, ಜನರು ತೀವ್ರ ಅನಾರೋಗ್ಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸಿರಿಗೆರೆ ಶ್ರೀಗಳ ಮಾರ್ಗದರ್ಶನದಿಂದ ಜಿಲ್ಲೆಯ 23 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನಮ್ಮ ಸರ್ಕಾರ ಆದ್ಯತೆಯ ಮೇಲೆ ಕೆರೆತುಂಬಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆತಂದಿದೆ. ಇಂದು ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ’ ಎಂದರು.

‘ಮೊನ್ನೆ ಈ ವೇದಿಕೆಯಲ್ಲಿ ರಾಜಕಾರಣಿಯೊಬ್ಬರು ತುಂಗಭದ್ರಾ ನದಿಯ ಜಾಕ್‌ವೆಲ್ ಬಗ್ಗೆ ಮಾತನಾಡಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ? ಅಧಿಕಾರ ಮುಖ್ಯ ಅಲ್ಲ. ಅದು ಬರುತ್ತದೆ, ಹೋಗುತ್ತದೆ. ಆದರೆ ಕೆಲಸ ಮಾಡಬೇಕು’ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಟಾಂಗ್ ನೀಡಿದ ಸಚಿವರು, ‘ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಕೆಲಸ ಮಾಡಿದೆ’ ಎಂದು ಹೇಳಿದರು.

ಕಳೆದ ಎರಡು ವರ್ಷ ಬರಗಾಲ ಎದುರಾಗಿತ್ತು. ಜಗಳೂರು ಸೇರಿದಂತೆ ಎಲ್ಲೂ ಕೂಲಿಕಾರ್ಮಿಕರು ಗುಳೆ ಹೋಗಲಿಲ್ಲ. ಹಸಿವುಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರು ಮತ್ತು ಶೋಷಿತರಿಗಾಗಿ ಉಚಿತ ಅಕ್ಕಿ ನೀಡುವ ಮೂಲಕ ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದಕ್ಕಾಗಿ ರಾಜ್ಯ ಸರ್ಕಾರ ₹ 1100ರ ಜತೆಗೆ ₹ 450 ಬೆಂಬಲ ಬೆಲೆ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಸಹಾಯಧನ ನೀಡದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ರಾಜಕೀಯದಲ್ಲಿ ನಿರತರಾಗಿರುವ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಮನವೊಲಿಸಲಿ ಎಂದು ತಿರುಗೇಟು ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಪಾಟೀಲ್ ಮಾತನಾಡಿದರು.

ವಚನಕಾರ್ತಿಯರ ಸಾಮಾಜಿಕ ಪ್ರಜ್ಞೆ ಕುರಿತು ಗಂಗಾಂಬಿಕೆ ಬಸವರಾಜ, ಕಣ್ಣು ಮತ್ತು ಆರೋಗ್ಯದ ಬಗ್ಗೆ ಡಾ. ರವೀಂದ್ರ ಬಣಕಾರ ಹಾಗೂ ಹಲ್ಲು ಮತ್ತು ಒಸಡು ರೋಗಗಳ ನಿಯಂತ್ರಣ ಕುರಿತು ಡಾ.ಎಂ.ಜಿ. ಜಯಚಂದ್ರ ಉಪನ್ಯಾಸ ನೀಡಿದರು.

ಶಾಸಕ ಎಚ್.ಪಿ. ರಾಜೇಶ್, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಎಸ್.ವಿ. ರಾಮಚಂದ್ರ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಬಿ. ಕಲ್ಲೇರುದ್ರೇಶ್, ಡಾ. ಮಂಜುನಾತ್ ಗೌಡಹಾಜರಿದ್ದರು. ನಿಧಿ ಸಂಗ್ರಹಣಾ ಸಮಿತಿ ಅಧ್ಯಕ್ಷ ಟಿ. ಗುರುಸಿದ್ಧನಗೌಡ ಸ್ವಾಗತಿಸಿದರು.

ಸಿರಿಗೆರೆಯ ತರಳಬಾಳು ಕಲಾಸಂಘ, ಜಗಳೂರಿನ ಎನ್.ಎಂ.ಕೆ ಪ್ರೌಢಶಾಲೆ ಮತ್ತು ನವಚೇತನ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ, ಸೋಲಿಗರ ನೃತ್ಯವನ್ನು ಪ್ರಸ್ತುಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry