ಮತದಾನದಿಂದ ಪ್ರಜಾಪ್ರಭುತ್ವ ಸದೃಢ

7
ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಧೀಶ ಸದಾನಂದ ಎನ್.ನಾಯಕ ಅಭಿಮತ

ಮತದಾನದಿಂದ ಪ್ರಜಾಪ್ರಭುತ್ವ ಸದೃಢ

Published:
Updated:
ಮತದಾನದಿಂದ ಪ್ರಜಾಪ್ರಭುತ್ವ ಸದೃಢ

ಯಾದಗಿರಿ: ‘ಪ್ರತಿಯೊಬ್ಬ ಮತದಾರರು ಮತದಾನದ ಹಕ್ಕು ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಸದೃಢವಾಗಲು ಸಾಧ್ಯ’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸದಾನಂದ ಎನ್.ನಾಯಕ ಅಭಿಪ್ರಾಯಪಟ್ಟರು.

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮತದಾನದ ಹಕ್ಕು ಹೊಂದಿದ್ದರೂ ಕೂಡ ಸರಿಯಾದ ಮತದಾನವಾಗುತ್ತಿಲ್ಲ. ಹೀಗಾಗಿ ಶೇ 50ರಷ್ಟು ಮತದಾನ ಆಗುತ್ತಿದೆ. ಶೇ80 ರಷ್ಟು ಮತದಾನವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರರು ಮತದಾನದ ಹಕ್ಕು ಚಲಾಯಿಸಿ ಮತದಾನದ ಪಾವಿತ್ರ್ಯ ಕಾಪಾಡಬೇಕು’ ಎಂದು ಸಲಹೆ ನೀಡಿದರು.

‘ಯುವಕರ ಕೈಯಲ್ಲಿ ಸದೃಢ ರಾಷ್ಟ ನಿರ್ಮಾಣ ಮಾಡುವ ಶಕ್ತಿ ಅಡಗಿದೆ. ಹೀಗಾಗಿ, ಪ್ರಜೆಗಳೇ ಇಲ್ಲಿ ಪ್ರಭುಗಳಾಗಿದ್ದಾರೆ. ಈ ಪ್ರಜೆಗಳು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮರೆತರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳು ಸಡಿಲವಾಗುತ್ತವೆ ಎಂಬುದನ್ನು ಮನಗಾಣಬೇಕು’ ಎಂದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ,‘ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಬರುತ್ತದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಯಾದಗಿರಿ ಜಿಲ್ಲೆಯ ಗುರುಮಠಕಲ್, ಸುರಪುರ, ಶಹಾಪುರ, ಯಾದಗಿರಿ ಕ್ಷೇತ್ರಗಳಲ್ಲಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 4.72 ಲಕ್ಷ ಮಹಿಳಾ ಮತದಾರರು, 4.70 ಲಕ್ಷ ಪುರುಷ ಮತದಾರರು ಇದ್ದು, ಒಟ್ಟು 9 ಲಕ್ಷಕ್ಕೂ ಹೆಚ್ಚು ಮತರಾರರಿದ್ದಾರೆ. ಹೊಸ ಮತದಾರರ ಸೇರ್ಪಡೆಗೊಂಡ ನಂತರ ನಿರ್ದಿಷ್ಟ ಮತದಾರರ ಸಂಖ್ಯೆ ಸಿಗಲಿದೆ. ಈಗಾಗಲೇ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಒಟ್ಟು 1,177 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೇ ವರ್ಷ ವಿವಿ ಪ್ಯಾಕ್ಟ್‌ (ಮತದಾನ ಪರಿಶೀಲನೆ ಯಂತ್ರ) ಪರಿಚಯಿಸಲಾಗುತ್ತಿದ್ದು, ಅದರ ಬಗ್ಗೆ ಮತದಾರರಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಪ್ರತಿಜ್ಞಾವಿಧಿ ಬೋಧಿಸಿದರು.

ಉತ್ತಮ ಕಾರ್ಯನಿರ್ವಹಿಸಿದ ಬಿಎಲ್‌ಒಗಳಾದ ಶಂಕರ ಚವ್ಹಾಣ, ಇಂದಿರಾ, ತಾಯಪ್ಪ ಅವರಿಗೆ ಪ್ರಶಸ್ತಿ ನೀಡಲಾಯಿತು. ನಂತರ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಆಯ್ಕೆಯಾದ

ದೇವಪ್ಪ(ಪ್ರಥಮ), ದಾನಪ್ಪ (ದ್ವಿತೀಯ) ಹಾಗೂ ಶ್ರೀದೇವಿ (ತೃತೀಯ) ಮತ್ತು ರಸ ಪ್ರಶ್ನೆಯಲ್ಲಿ ಆಯ್ಕೆಯಾದ ಮಹಾಂತೇಶ (ಪ್ರಥಮ), ಚೆನ್ನಬಸಪ್ಪ (ದ್ವಿತೀಯ) ಹಾಗೂ ರೇಣುಕಾ(ತೃತೀಯ) ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಕೆ.ಸಾಲಮಂಟಪಿ, ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ್ ಬನಸೊಡೆ, ಹೆಚ್ಚುವರಿ ಸಿವಿಲ್ ನ್ಯಾಯಧೀಶ ಕಾಡಪ್ಪ ಹುಕ್ಕೇರಿ, ಜಿಲ್ಲಾ ಉಪ ಕಾರ್ಯದರ್ಶಿ ವಂಸತ ವಿ.ಕುಲಕರ್ಣಿ, ಚುನಾವಣಾ ಶಾಖೆ ಶಿರಸ್ತೇದಾರ್ ಪರಶುರಾಮ್ ಇದ್ದರು.

ಜಿಲ್ಲಾ ಸಹಾಯಕ ಆಯುಕ್ತ ಮಂಜುನಾಥ್ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಿಜಯಕುಮಾರಿ ಪ್ರಾರ್ಥನೆ ಗೀತೆ ಹಾಡಿದರು.

**

ಶೇ 80ರಷ್ಟು ಮತದಾನವಾದಾಗ ಮಾತ್ರ ಪ್ರಜಾಪ್ರಭುತ್ವದ ಬೇರುಗಳು ಸದೃಢವಾಗಲು ಸಾಧ್ಯ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು.

ಸದಾನಂದ ಎನ್.ನಾಯಕ, ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry