ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೊದಲ ಸ್ಥಾನ

7
ಮಂಗಳೂರು ಸಂಸದ ನಳಿನಕುಮಾರ್ ಕಟೀಲ್ ಆರೋಪ

ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೊದಲ ಸ್ಥಾನ

Published:
Updated:
ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೊದಲ ಸ್ಥಾನ

ಯಾದಗಿರಿ: ‘ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ಸ್ಥಾನ ದಕ್ಕಿಸಿಕೊಟ್ಟಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ’ ಎಂದು ಮಂಗಳೂರು ಸಂಸದ ನಳಿನಕುಮಾರ ಕಟೀಲ್ ದೂರಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಬೂತ್‌ ಸಶಕ್ತೀಕರಣ ಕುರಿತು ಹಮ್ಮಿಕೊಂಡಿ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಇದುವರೆಗೂ 3,500 ರೈತರು ಆತ್ಮಹತ್ಯೆ ಆಗಿದೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅತಿ ಹೆಚ್ಚು ರೈತರು ಸಾವಿಗೆ ಶರಣಾಗಿದ್ದಾರೆ. ರೈತರಿಗೆ ಮಾರಕವಾಗಿರುವ ಇಂತಹ ಸರ್ಕಾರದ ಆಡಳಿತ ಕೊಣೆಗಾಣಿಸುವ ದಿನ ಬರುತ್ತಿದೆ. ಜನರು ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಾತಿ ರಾಜಕಾರಣ ಮತ್ತು ಕೋಮುವಾದ ಸೃಷ್ಟಿ ಮಾಡುವ ಮೂಲಕ ಕಾಲಹರಣ ಮಾಡಿದೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತವನ್ನು ಜಗತ್ತಿನ ನಾಯಕರು ಪ್ರಶಂಸೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಭಿವೃದ್ದಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹೈದರಾಬಾದ್ ಭಾಗದಲ್ಲಿ 45 ವರ್ಷಗಳ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡಲು ಸಂಪೂರ್ಣ ಸೋತಿದೆ. ಸುಧೀರ್ಘಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಬಡತನ, ನಿರುದ್ಯೋಗ, ಗುಳೆ ಹೋಗುವುದನ್ನು ತಪ್ಪಿಸಲು ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಯುವಕರ ಸಾವುಗಳು ಹೆಚ್ಚಿದೆ. ಜಾತಿ ಜಾತಿಗಳ ಮಧ್ಯೆ ಜಗಳ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೂಡಾ ಶ್ರಮಿಸಿದಾಗ ಪರಿವರ್ತನೆ ನಿಶ್ಚಿತವಾಗಲಿದೆ’ ಎಂದು ಅವರು ಹೇಳಿದರು.

ತೆಲಂಗಾಣ ರಾಜ್ಯದ ಚುನಾವಣಾ ಉಸ್ತುವಾರಿ ನಾಮೋಜಿ, ಜಿಲ್ಲಾ ಉಸ್ತುವಾರಿ ಎನ್. ಶಂಕರೆಪ್ಪ, ಡಾ.ವೀರಬಸವಂತರೆಡ್ಡಿ ಮುದ್ನಾಳ, ನಾಗರತ್ನಾಕುಪ್ಪಿ, ಡಾ.ಭೀಮಣ್ಣ ಮೇಟಿ, ವೆಂಕಟರೆಡ್ಡಿ ಮದ್ನಾಳ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ದೇವೀಂದ್ರನಾಥ ನಾದ, ಖಂಡಪ್ಪ ದಾಸನ ಇದ್ದರು.

**

ರಾಮಲಿಂಗಾರೆಡ್ಡಿ ಗ್ರಹಚಾರ ಮಂತ್ರಿ: ನಳಿನಕುಮಾರ್

ಯಾದಗಿರಿ: ‘ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರ ಕೊಲೆಗಳಾಗುತ್ತಿವೆ. ಕೊಲೆ ಆರೋಪಿಗಳನ್ನು ಬಂಧಿಸಿದ್ದರೂ ತನಿಖೆ ಮಾತ್ರ ದಿಕ್ಕು ತಪ್ಪುತ್ತಿದೆ. ರಾಜ್ಯದ ಪಾಲಿಗೆ ಗೃಹ ಸಚಿವರಾಗಿರುವ ರಾಮಲಿಂಗಾರೆಡ್ಡಿ ರಾಜ್ಯದ ಜನರ ಪಾಲಿಗೆ ಗ್ರಹಚಾರ ಮಂತ್ರಿಯಾಗಿದ್ದಾರೆ’ ಎಂದು ಸಂಸದ ನಳಿನಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗಳಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಸಮಾಜದ ಭಾವನೆಗಳನ್ನು ಅವರು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ. ಅದನ್ನು ವಿರೋಧಿಗಳು ತಪ್ಪಾಗಿ ಅರ್ಥೈಸುತ್ತಿದ್ದಾರೆ’ ಎಂದು ಸಮರ್ಥಿಸಿದರು.

‘ಅಲ್ಪಸಂಖ್ಯಾತರ, ಬಹುಸಂಖ್ಯಾತರ ತಾರತಮ್ಯವನ್ನು ಸೃಷ್ಟಿಸಿದ್ದೇ ಕಾಂಗ್ರೆಸ್. ರಾಜ್ಯದಲ್ಲಿ ಇದುವರೆಗೂ 3,500 ರೈತರ ಆತ್ಮಹತ್ಯೆಗಳಾಗಿವೆ. ಯುವಕರ ಕೊಲೆ ನಡೆಯುತ್ತಿವೆ. ಸರ್ಕಾರ ಯಾವುದನ್ನು ತಡೆಗಟ್ಟಿದೆ ಹೇಳಿ ಎಂದು ಪ್ರಶ್ನಿಸಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಿ ಕ್ರಮಕೈಗೊಳ್ಳಬೇಕಾದ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry