ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ವಿರುದ್ಧ ತನಿಖೆಗೆ ಆಗ್ರಹ

Last Updated 26 ಜನವರಿ 2018, 9:14 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಎಲ್ಲಾ ಆರೋಪಗಳ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಉನ್ನತ ಮಟ್ಟದ ತನಿಖೆಗೆ ಒತ್ತಾಯ ಮಾಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದ ಅವರು, ಅವರು, ಬೇಲೂರು ತಾಲ್ಲೂಕಿನ ಡಣಾನಾಯಕನ ಹಳ್ಳಿಯಲ್ಲಿ 150 ಪರಿಶಿಷ್ಟ ಜಾತಿ ಕುಟುಂಬಗಳಿವೆ. ಸರ್ವೆ ನಂ. 53/52ರಲ್ಲಿ 20 ಗುಂಟೆ ಜಾಗ ರುದ್ರಭೂಮಿಗೆ ನೀಡಲು ಜಿಲ್ಲಾ ಉಸ್ತುವಾರಿ, ಕಂದಾಯ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಡಿ. 19ರಂದು ಯಗಚಿ ಹಿನ್ನೀರಿನಲ್ಲಿ ಬೋಟಿಂಗ್ ನಡೆಸುವ ಕೃಷ್ಣ ತನ್ನ ವ್ಯವಹಾರಕ್ಕೆ ತೊಂದರೆ ಕೊಡುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಎರಡು ಸಲ ಸ್ಥಳಕ್ಕೆ ಹೋಗಿ ಬಂದರು. ಬಳಿಕ ಪೊಲೀಸರ ಮೇಲೆ ಒತ್ತಡ ತಂದು ಠಾಣಾ ವ್ಯಾಪ್ತಿಯಲ್ಲಿ ರಾಜಿಯಲ್ಲಿ ಮಕ್ತಾಯವಾಗಬೇಕಿದ್ದ ವಿಷಯಕ್ಕೆ ಪ್ರಕರಣ ದಾಖಲಿಸಿ 55 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಮಾಡಿದರು’ ಎಂದು ಆರೋಪಿಸಿದರು.

ಅಮಾಯಕ ದಲಿತರು ಕೊಲೆ ಮಾಡಿದ್ದರಾ? ಆಸ್ತಿ ಹಾನಿ ಮಾಡಿದ್ದರಾ ? ಅತ್ಯಾಚಾರ ಮಾಡಿದ್ದರಾ ? ಇದು ಒಂದು ಜನಪರ ಆಡಳಿತವಾ? ನಾಚಿಕೆಯಾಗಬೇಕು ಎಂದು ಟೀಕಿಸಿದರು.

‘ರೋಹಿಣಿ ಅವರು ಮೇಲ್ನೋಟಕ್ಕೆ ಪ್ರಾಮಾಣಿಕರು, ದಕ್ಷರು. ಆದರೆ ಜಿಲ್ಲೆಯ ಕಂದಾಯ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ತಡೆಯುತ್ತಿಲ್ಲ’ ಎಂದರು.

‘ರೋಹಿಣಿ ಅವರಿಂದ ನಡೆದಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದೆ’ ಎಂದು ಸ್ಪಷ್ಟ ಪಡಿಸಿದರು.

ಅರಸೀಕೆರೆ ತಾಲ್ಲೂಕಿನ ಮಾವುತನಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹ 2 ಕೋಟಿ ಹಣವನ್ನು ಸಿ.ಎಂ ಆದೇಶದಂತೆ ಬಿಡುಗಡೆ ಮಾಡಿ, ಜಿಲ್ಲಾಧಿಕಾರಿ ಖಾತೆಗೆ ಜಮೆಯಾಗಿದ್ದರೂ ಈವರೆಗೆ ಕಾಮಗಾರಿ ಕೈಗೆತ್ತಿಕೊಳ್ಳುವ ಭೂ ಸೇನಾ ನಿಗಮಕ್ಕೆ ಹಣ ನೀಡಿಲ್ಲ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಯೇ ಸೂಚಿಸಿದರೂ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.

*
ಶೌಚಾಲಯ, ಕಾಂಪೌಂಡ್‌ ನಾಶ

ಹಾಸನ: ಡಣಾಯಕನಹಳ್ಳಿ ಗ್ರಾಮಸ್ಥರು ಕೇಳಿದ್ದ ಸರ್ವೆ ನಂ. 52ರಲ್ಲೇ ಅಂತ್ಯಕ್ರಿಯೆಗೆ ಹೋಗಿ ಬರಲು ಅನುಕೂಲವಾಗುವಂತೆ ರಸ್ತೆ ಬದಿ ಸ್ಮಶಾನಕ್ಕೆ 20 ಗುಂಟೆ ಭೂಮಿ ಮಂಜೂರು ಮಾಡಲಾಗಿದೆ.

ಕಾವೇರಿ ನೀರಾವರಿ ನಿಗಮದ ಅನುಮತಿ ಪಡೆದು ಕೃಷ್ಣ ಎಂಬುವರು ಕ್ಯಾಪ್ಚರ್‌ ಸಂಸ್ಥೆ ಹೆಸರಿನಲ್ಲಿ ಯಗಚಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆ ನಡೆಸುತ್ತಿದ್ದಾರೆ. ಈ ಪ್ರದೇಶದ ಒತ್ತುವರಿ, ಶೌಚಾಲಯ ಹಾಗೂ ಕಾಂಪೌಂಡ್‌ಗೆ ಸ್ಥಳೀಯರು ಹಾನಿ ಮಾಡಿದ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ದೂರು ಆಧರಿಸಿ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

*

ಸಮಸ್ಯೆ ಹೇಳಿಕೊಳ್ಳಲು ಬಂದವರು, ಪ್ರತಿಭಟನೆ ಮಾಡುವವರನ್ನು ದೂರ ಕಳುಹಿಸಿ ಬ್ಯಾರಿಕೇಡ್ ಹಾಕಿಕೊಂಡಿದ್ದು ಜಿಲ್ಲಾಧಿಕಾರಿ ರೋಹಿಣಿ ಸಾಧನೆ.

–ಬಿ.ಶಿವರಾಂ, ಕೆಪಿಸಿಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT