ವಿವಿಧೆಡೆ ತೊಗರಿ ಖರೀದಿ ಕೇಂದ್ರ ಆರಂಭ

7
ಸರ್ಕಾರದ ನಿರ್ಧಾರಕ್ಕೆ ಹರ್ಷ: ಖರೀದಿ ಅವಧಿ ವಿಸ್ತರಣೆಗೆ ರೈತರ ಆಗ್ರಹ

ವಿವಿಧೆಡೆ ತೊಗರಿ ಖರೀದಿ ಕೇಂದ್ರ ಆರಂಭ

Published:
Updated:
ವಿವಿಧೆಡೆ ತೊಗರಿ ಖರೀದಿ ಕೇಂದ್ರ ಆರಂಭ

ಶರಣಸೋಮನಾಳ (ಬಸವನಬಾಗೇ ವಾಡಿ): ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ತೊಗರಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆ ತೊಗರಿ ಖರೀದಿಗೆ ಪಿಕೆಪಿಎಸ್‌ ಬ್ಯಾಂಕ್‌ ಅಧ್ಯಕ್ಷ ಅಯ್ಯನಗೌಡ ಪಾಟೀಲ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ ಪ್ರತಿ ದಿನಕ್ಕೆ 30 ರೈತರ ತೊಗರಿ ಖರೀದಿಗೆ ಅನುಮತಿ ನೀಡಲಾಗಿದೆ. ಒಬ್ಬ ರೈತರಿಂದ ಎಕರೆಗೆ 4 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು, ಗರಿಷ್ಠ 5 ಎಕರೆಗೆ ಅಂದರೆ 20 ಕ್ವಿಂಟಲ್ ತೊಗರಿ ಖರೀದಿಗೆ ಅನುಮತಿ ಇದೆ. ರೈತರು ತಮ್ಮ ಸರದಿ ಬಂದಾಗ ತೊಗರಿಯನ್ನು ಖರೀದಿ ಕೇಂದ್ರಕ್ಕೆ ತಂದು ತೂಕ ಮಾಡಿಸಬೇಕು. ಆಧಾರ ಕಾರ್ಡ್‌, ಉತಾರಾ, ಬ್ಯಾಂಕ್‌ ಪಾಸ್ ಬುಕ್, ದೂರವಾಣಿ ಸಂಖ್ಯೆ ತಪ್ಪದೆ ಸಿಬ್ಬಂದಿಗೆ ನೀಡಬೇಕು ಎಂದು ಹೇಳಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಸಿ.ಎಸ್.ಕಚನೂರ, ಸದಸ್ಯರಾದ ಶಿವನಗೌಡ ಬಿರಾದಾರ, ಬಸನಗೌಡ ನಾಡಗೌಡ, ಮಲ್ಲಣ್ಣ ಅವಟಿ, ಬಸವರಾಜ ಗಂಜಾಳ ಮಲ್ಲಣ್ಣ ದೋರನಹಳ್ಳಿ, ಶಕುಂತಲಾ ಬಿರಾದಾರ, ಪ್ರಭಾವತಿ ಬಿರಾದಾರ, ಸೋಮಪ್ಪ ಮಾದರ, ಬ್ಯಾಂಕ್‌ನ ವ್ಯವಸ್ಥಾಪಕ ಎಸ್.ಎಂ.ದೇಸಾಯಿ ಇದ್ದರು.

ಸಿಂದಗಿ ವರದಿ: ಈ ಭಾಗದಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವ ಜಿಲ್ಲಾಡಳಿತಕ್ಕೆ ಸಮಸ್ತ ರೈತರ ಪರವಾಗಿ ಅಭಿನಂದನೆ ಸಲ್ಲಿಸುವು ದಾಗಿ ಗೋಲಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪ್ರಭುಗೌಡ ಪಾಟೀಲ ಡಂಬಳ ತಿಳಿಸಿದರು.

ತಾಲ್ಲೂಕಿನ ಗೋಲಗೇರಿಯಲ್ಲಿ ಗುರುವಾರ ತೊಗರಿ ಖರೀದಿ ಕೇಂದ್ರದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಚಳ್ಳಗಿ, ಮಾಂತೇಶ ಸಾತಿಹಾಳ, ಬಸ ವರಾಜ ಮಾರಲಬಾವಿ, ಮಮ್ಮೂಸಾಬ ಮುಲ್ಲಾ, ಬಸನಗೌಡ ಪಾಟೀಲ, ಶಂಕರ ಮಾಣಸುಣಗಿ, ವೀರಭದ್ರ ಚನ್ನೂರ, ಓಂಪ್ರಕಾಶ ಪಾಟೀಲ, ರಾಘವೇಂದ್ರ ಕುಲಕರ್ಣಿ, ಗೊಲ್ಲಾಳಪ್ಪ ನಾಗಣಸೂರ ಇವರು ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಡಗುಂದಿ ವರದಿ:

ಪಟ್ಟಣದ ಹೊರವಲಯದ ವಾಲ್ಮೀಕಿ ಸಮುದಾಯ ಭವನದಲ್ಲಿ ನಿಡಗುಂದಿ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಎಪಿಎಂಸಿ ಸಹಯೋಗದಲ್ಲಿ ತೊಗರಿ ಖರೀದಿ ಕೇಂದ್ರ ಗುರುವಾರ ಆರಂಭಿಸಲಾಯಿತು.

ವಿಜಯಪುರ ಎಪಿಎಂಸಿ ಅಧ್ಯಕ್ಷ ಸಿ.ಪಿ. ಪಾಟೀಲ ಮಾತನಾಡಿ, ಸರ್ಕಾರ ತೊಗರಿ ಖರೀದಿ ಕೇಂದ್ರ ಗ್ರಾಮೀಣ ಪ್ರದೇಶದಲ್ಲಿಯೂ ನಾನಾ ಕಡೆ ಆರಂಭಿಸಿದೆ, ಇದರಿಂದ ಮುಕ್ತ ಮಾರುಕಟ್ಟೆಗಿಂತಲೂ ರೈತರಿಗೆ ಹೆಚ್ಚಿನ ಬೆಲೆ ದೊರೆಯುತ್ತದೆ, ಅಲ್ಲದೇ ರೈತರ ಸಾಗಾಣಿಕೆ ವೆಚ್ಚ ಉಳಿಯುತ್ತದೆ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮೌಲಾಸಾಬ್ ಅತ್ತಾರ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, ತೊಗರಿ ಮಾರಾಟಕ್ಕೆ ಹೆಸರು ನೋಂದಾಯಿಸಲು ರೈತರಿಗೆ ಜಿಲ್ಲಾಡಳಿತ ನೀಡಿದ ಕಾಲಾವಧಿ ಅತ್ಯಲ್ಪವಾಗಿದ್ದು, ಕೂಡಲೇ ಮತ್ತಷ್ಟು ಕಾಲ ಅವಧಿ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.

ನಿಡಗುಂದಿ ಭಾಗದಲ್ಲಿ ಇಲ್ಲಿಯವರೆಗೆ 1100 ಜನ ರೈತರು ಮಾತ್ರ ಇದುವರೆಗೂ ತಮ್ಮ ಹೆಸರನ್ನು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ್ದಾರೆ. ಇನ್ನೂ ಸಾಕಷ್ಟು ಜನ ಅನ್ನದಾತರು ಸರ್ಕಾರದ ಈ ಖರೀದಿ ಯೋಜನೆಯಿಂದ ಹೊರಗುಳಿಯುವ ಆತಂಕ ಮನೆ ಮಾಡಿದೆ ಎಂದರು.

ಪ್ರತಿ ರೈತರಿಂದ ಕೇವಲ 20 ಕ್ವಿಂಟಲ್ ಮಾತ್ರ ತೊಗರಿ ಖರೀದಿಗೆ ಅವಕಾಶ ಕಲ್ಪಿಸಿದ್ದು ಸರಿಯಾದ ಮಾರ್ಗವಲ್ಲ. ಹೆಚ್ಚು ಬೆಳೆದಂತೆ ರೈತರು ವಾಮಮಾರ್ಗದಲ್ಲಿ ಮತ್ತೊಬ್ಬ ರೈತರ ಉತಾರದ ಮೂಲಕ ಮಾರಾಟ ಮಾಡಲು ಪರೋಕ್ಷ ಅವಕಾಶ ನೀಡಿದಂತಾಗುತ್ತದೆ. ಕನಿಷ್ಟ ಪ್ರತಿ ರೈತರಿಗೆ 50 ಕ್ವಿಂಟಲ್ ತೊಗರಿ ಮಾರಾಟಕ್ಕೆ ಅನುಮತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪಿಕೆಪಿಎಸ್ ಅಧ್ಯಕ್ಷ ಸಂಗಣ್ಣ ಕೋತಿನ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕ ಸುರೇಶ ತಳವಾರ, ಬಸವರಾಜ ಕುಂಬಾರ, ಬಸವರಾಜ ಸಾಲಿಮಠ, ಸಂಗಮೇಶ ಬಳಿಗಾರ, ನೀಲಮ್ಮ ದೊಡಮನಿ, ಕರವೀರಪ್ಪ ಕುಪ್ಪಸ್ತ, ಮಲ್ಲಪ್ಪ ಸಜ್ಜನ, ನಿಂಗಪ್ಪ ಹುಗ್ಗಿ, ಮಲ್ಲನಗೌಡ ಬಿರಾದಾರ ಇದ್ದರು.

**

ಗರಿಷ್ಠ 20 ಕ್ವಿಂಟಲ್ ಮಾರಾಟಕ್ಕೆ ಅವಕಾಶ ನೀಡಿರುವುದು ಸರಿಯಲ್ಲ ಕನಿಷ್ಠ 50 ಕ್ವಿಂಟಲ್‌ಗೆ ಅವಕಾಶ ನೀಡಬೇಕು.

- ಅಯ್ಯನಗೌಡ ಪಾಟೀಲ, ಪಿಕೆಎಸ್ ಬ್ಯಾಂಕ್ ಅಧ್ಯಕ್ಷ, ಶರಣಸೋಮನಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry