ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಏಳು ತಾಲ್ಲೂಕು ಕಾರ್ಯಾರಂಭ

ಆಲಮೇಲ ಹೊರತುಪಡಿಸಿ ಉಳಿದ ಎಲ್ಲೆಡೆ ಸಂಭ್ರಮೋತ್ಸವ; ಮನೆ ಮಾಡಿದ ಸಂಭ್ರಮ
Last Updated 26 ಜನವರಿ 2018, 9:23 IST
ಅಕ್ಷರ ಗಾತ್ರ

ವಿಜಯಪುರ: ದಶಕದ ಹೋರಾಟಕ್ಕೆ ಇದೀಗ ಫಲ ದೊರೆತಿದೆ. ಘೋಷಿತ ನೂತನ ತಾಲ್ಲೂಕು ಕೇಂದ್ರಗಳು ಅಸ್ಥಿತ್ವಕ್ಕೆ ಬಂದಿದ್ದು, ಕಂದಾಯ ಇಲಾಖೆ ಕಾರ್ಯಾರಂಭ ಮಾಡಿದೆ.

ಚಡಚಣ, ತಾಳಿಕೋಟೆ, ದೇವರಹಿಪ್ಪರಗಿ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ ತಾಲ್ಲೂಕು ಕೇಂದ್ರಗಳಾಗಿ ಸುತ್ತಮುತ್ತಲಿನ ಜನರಿಗೆ ಸೇವೆ ಒದಗಿಸಲು ಸಜ್ಜಾಗಿವೆ. ಇದು ಈ ಭಾಗದ ಜನರಲ್ಲಿ ಹರ್ಷದ ಹೊನಲು ಹರಿಸಿದೆ.

ನೂತನ ತಾಲ್ಲೂಕು ಕೇಂದ್ರ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ತಹಶೀಲ್ದಾರ್‌ ಗ್ರೇಡ್‌–1 ಹುದ್ದೆ ಸೃಷ್ಟಿಸಿದ್ದು, ಜಿಲ್ಲಾಡಳಿತ ಸದ್ಯದ ಮಟ್ಟಿಗೆ ಈ ಹುದ್ದೆಗಳಿಗೆ ಪ್ರಭಾರ ಅಧಿಕಾರಿಗಳನ್ನು ನಿಯೋಜಿಸಿದೆ.

ಜ 26ರ ಶುಕ್ರವಾರ ಗಣರಾಜ್ಯೋತ್ಸ ವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ಈ ಏಳು ತಾಲ್ಲೂಕು ಕೇಂದ್ರಗಳ ತಹಶೀಲ್ದಾರ್‌ ಕಚೇರಿ ಮುಂಭಾಗ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘೋಷಿತ ನೂತನ ಏಳು ತಾಲ್ಲೂಕು ಕೇಂದ್ರ ಜಿಲ್ಲೆಯಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಸಾಫ್ಟ್‌ವೇರ್‌ನ ಕೆಲ ತಂತ್ರಾಂಶ ಬದಲಾವಣೆ ಪ್ರಕ್ರಿಯೆ ನಡೆದಿದೆ. ಇದೂವರೆಗೂ ಹೋಬಳಿ ಕೇಂದ್ರ ಎಂದು ನಮೂದಾಗುತ್ತಿದ್ದ ಕಡೆ ತಾಲ್ಲೂಕು ಕೇಂದ್ರ ಎಂಬುದನ್ನು ಸೇರ್ಪಡೆ ಮಾಡಲಾಗುತ್ತಿದೆ. ಸಾಫ್ಟ್‌ವೇರ್‌ನಲ್ಲಿನ ದತ್ತಾಂಶ ವಿಭಜನೆಯೂ ನಡೆದಿದೆ.

ದೇವರಹಿಪ್ಪರಗಿ, ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಮಾತ್ರ ಕೊಂಚ ಗೊಂದಲವಿದೆ. ಇಂದಿಗೂ ಕೆಲ ಹಳ್ಳಿಗಳ ಜನರು ನಮ್ಮದು ಈ ತಾಲ್ಲೂಕಿಗಿರಲಿ. ಆ ತಾಲ್ಲೂಕಿಗೆ ಬೇಡ ಎಂಬ ತಕರಾರು ಮನವಿ ಸಲ್ಲಿಸುತ್ತಿದ್ದಾರೆ. ಉಳಿದ ಐದು ಕಡೆ ಇಂತಹ ಕಿರಿಕಿರಿಯಿಲ್ಲ.

ಎಲ್ಲವನ್ನೂ ಗಮನಿಸಲಾಗಿದೆ. ಉನ್ನತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೆಲ ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿವೆ. ಇದೀಗ ಚುನಾವಣಾ ಪ್ರಕ್ರಿಯೆ ಆರಂಭವಾ ಗಿರುವುದರಿಂದ ಅಧಿಕಾರಿಗಳ ವರ್ಗಾವಣೆ ಕಷ್ಟ ಸಾಧ್ಯ. ಆದ್ದರಿಂದ ವಿಧಾನಸಭಾ ಚುನಾವಣೆ ಬಳಿಕ ನೂತನ ತಾಲ್ಲೂಕು ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಘೋಷಿತ ತಾಲ್ಲೂಕು ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಸ್ಥಳೀಯ ಶಾಸಕರು, ಸಚಿವರ ಲಭ್ಯತೆ, ಸಮಯ ನಿಗದಿಪಡಿಸಿಕೊಂಡು ಆಯಾ ಶಾಸಕರಿಂದ ಅಧಿಕೃತವಾಗಿ ತಾಲ್ಲೂಕು ಕೇಂದ್ರಗಳನ್ನು ಉದ್ಘಾಟಿಸಲಾಗುವುದು. ಇದನ್ನು ನೂತನ ತಾಲ್ಲೂಕು ಆಡಳಿತವೇ ನಿರ್ಧರಿಸಲಿದೆ’ ಎಂದು ಕೆ.ಬಿ.ಶಿವಕುಮಾರ ತಿಳಿಸಿದರು.

ಹೋರಾಟಕ್ಕೆ ಸಿಕ್ಕ ಮನ್ನಣೆ: ತಾಲ್ಲೂಕು ಕೇಂದ್ರದ ಸ್ಥಾನಮಾನ ದೊರೆತು, ಅಧಿಕೃತವಾಗಿ ತಹಶೀಲ್ದಾರ್ ಕಚೇರಿ ಕಾರ್ಯಾ ರಂಭಗೊಳ್ಳುತ್ತಿದ್ದಂತೆ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ. ದಶಕಗಳ ಹೋರಾಟಕ್ಕೆ ಮನ್ನಣೆ ತಡವಾಗಿಯಾದರೂ ದೊರೆಯಿತು ಎಂಬ ಅನಿಸಿಕೆ ವ್ಯಕ್ತವಾಗಿದೆ.

ಕೊಲ್ಹಾರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು 1985ರಿಂದ ಹೋರಾಟ ನಡೆದಿತ್ತು. 32 ವರ್ಷಗಳ ಬಳಿಕ ಮನ್ನಣೆ ದೊರೆತಿರುವುದಕ್ಕೆ ಅಪಾರ ಸಂತಸವಾಗಿದೆ ಎಂದು ಪಟ್ಟಣದ ಟಿವಿಎಸ್‌ ಶೋ ರೂಂನ ಮಾಲೀಕ ಅಲ್ಲಾಭಕ್ಷ ತಹಶೀಲ್ದಾರ್‌ ಪ್ರತಿಕ್ರಿಯಿಸಿದರು.

‘ದಶಕದ ಕನಸು ಈಡೇರಿತು. ಈಗಾಗಲೇ ವಿಳಂಬವಾಗಿದೆ. ಮತ್ತಷ್ಟು ವಿಳಂಬಕ್ಕೆ ಆಸ್ಪದ ನೀಡದೆ ಸರ್ಕಾರಿ ಕಚೇರಿಗಳನ್ನು ಶೀಘ್ರ ಗತಿಯಲ್ಲಿ ಆರಂಭಿಸಿ, ಈ ಭಾಗದ ಜನರ ಅಲೆದಾಟ ತಪ್ಪಿಸಬೇಕು’ ಎಂದು ವ್ಯಾಪಾರಿ ವಿಜಯ ಪತಂಗಿ ಹೇಳಿದರು.

‘ದೇವರಹಿಪ್ಪರಗಿ ತಾಲ್ಲೂಕು ಕಾರ್ಯಾರಂಭಕ್ಕೆ ಪಟ್ಟಣದ ಜನತೆ ಸಂಭ್ರಮಿಸಿದೆ. ಸರ್ಕಾರ ಕೂಡಲೇ ನೂತನ ತಾಲ್ಲೂಕು ಕೇಂದ್ರಗಳನ್ನು ಮಾದರಿ ತಾಲ್ಲೂಕುಗಳನ್ನಾಗಿ ಅಭಿವೃದ್ಧಿ ಪಡಿಸಲು ಕಾರ್ಯ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು’ ಎಂದು ವಕೀಲ ಎ.ಎಂ.ತಾಂಬೋಳಿ ಆಗ್ರಹಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಹಿಪ್ಪರಗಿ ಕಲಾದಗಿ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿತ್ತು. ಸ್ವಾತಂತ್ರ್ಯ ದೊರೆತು ಏಳು ದಶಕ ಗತಿಸಿದ ಬಳಿಕ ಮತ್ತೆ ತಾಲ್ಲೂಕು ಕೇಂದ್ರದ ಸ್ಥಾನಮಾನ ಹೊಂದಿದ್ದು, ನಮಗೆಲ್ಲಾ ಅಪಾರ ಸಂತಸ ತಂದಿದೆ. ಎಲ್ಲ ಸರ್ಕಾರಿ ಕಚೇರಿಗಳು ಶೀಘ್ರದಲ್ಲೇ ಆರಂಭಗೊಳ್ಳಿ’ ಎಂದು ವ್ಯಾಪಾರಿ ಸಿದ್ದಲಿಂಗಯ್ಯ ಬುದ್ನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
**
ಆಲಮೇಲದಲ್ಲಿ ಅಸಮಾಧಾನ

ಆಲಮೇಲ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸದಿರುವುದಕ್ಕೆ ಆ ಭಾಗದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಾಸಕ ರಮೇಶ ಭೂಸನೂರ, ಸಚಿವ ಎಂ.ಬಿ.ಪಾಟೀಲ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಲಮೇಲ ತಾಲ್ಲೂಕು ಕೇಂದ್ರದ ಹೋರಾಟ ಸುದೀರ್ಘ ಇತಿಹಾಸ ಹೊಂದಿದೆ. 82 ಜನರು 13 ದಿನ ದರ್ಗಾ ಜೈಲು ವಾಸವನ್ನು ಅನುಭವಿಸಿದ್ದೇವೆ. ಎಲ್ಲ ಆಡಳಿತಾರೂಢ ಸರ್ಕಾರಗಳು ಆಲಮೇಲವನ್ನು ಕೊನೆ ಕ್ಷಣದಿಂದ ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಎಸಗುತ್ತಿವೆ.

ಪ್ರಾಮಾಣಿಕ ಹೋರಾಟಕ್ಕೆ ಬೆಲೆ ಸಿಗದಾಗಿದೆ. ಶಾಸಕ ರಮೇಶ ಭೂಸನೂರ ಪಿತೂರಿಯಿಂದಲೇ ಆಲಮೇಲಕ್ಕೆ ದಶಕದಿಂದಲೂ ತಾಲ್ಲೂಕು ಕೇಂದ್ರದ ಸ್ಥಾನಮಾನ ದೊರೆತಿಲ್ಲ’ ಎಂದು ಹೋರಾಟಗಾರ ಶಿವಾನಂದ ಮಾರ್ಸನಳ್ಳಿ ತಿಳಿಸಿದರು.

‘ತಮ್ಮ ಮತಕ್ಷೇತ್ರದಲ್ಲಿ ಎರಡು ತಾಲ್ಲೂಕು ಕೇಂದ್ರ ರಚಿಸಿಕೊಂಡಿರುವ ಸಚಿವ ಎಂ.ಬಿ.ಪಾಟೀಲ, ಎರಡು ದಶಕದ ಬೇಡಿಕೆಗೆ ಮನ್ನಣೆ ನೀಡಿಲ್ಲ. ಎಲ್ಲ ಅರ್ಹತೆಗಳಿದ್ದರೂ ಆಲಮೇಲ ತಾಲ್ಲೂಕು ಕೇಂದ್ರವಾಗಲಿಲ್ಲ. ಐತಿಹಾಸಿಕ ಪಟ್ಟಣಕ್ಕೆ ತಾಲ್ಲೂಕಿನ ಸ್ಥಾನಮಾನ ತಪ್ಪಿದ್ದು, ಈ ಭಾಗದ ಜನರ ಮನದಲ್ಲಿ ನೋವುಂಟು ಮಾಡಿದೆ’ ಎಂದು ರಮೇಶ ಭಂಟನೂರ ತಿಳಿಸಿದರು.
**
ತಹಶೀಲ್ದಾರ್‌ಗಳ ನೇಮಕ

ಸರ್ಕಾರದ ಆದೇಶದಂತೆ ನೂತನ ತಾಲ್ಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಂತೆ ತಹಶೀಲ್ದಾರ್‌ ಗ್ರೇಡ್‌–1 ಹುದ್ದೆ ಸೃಜಿಸಿ, ಜ 17ರಂದೇ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ಬಬಲೇಶ್ವರ ತಹಶೀಲ್ದಾರ್‌–ಎಂ.ಎಸ್‌.ಅರಕೇರಿ (ವಿಶೇಷ ತಹಶೀಲ್ದಾರ್‌, ಬಬಲೇಶ್ವರ), ದೇವರ ಹಿಪ್ಪರಗಿ–ವೀರೇಶ ಬಿರಾದಾರ (ಸಿಂದಗಿ ತಹಶೀಲ್ದಾರ್‌, ಹೆಚ್ಚುವರಿ ಪ್ರಭಾರ), ತಿಕೋಟಾ–ಎಂ.ಎನ್‌.ಬಳಿಗಾರ (ವಿಜಯಪುರ ತಹಶೀಲ್ದಾರ್‌, ಹೆಚ್ಚುವರಿ ಪ್ರಭಾರ), ಚಡಚಣ–ಎಚ್‌.ಎಚ್‌.ಮೆಳ್ಳಿಗೇರಿ (ವಿಶೇಷ ತಹಶೀಲ್ದಾರ್‌, ಚಡಚಣ).

ನಿಡಗುಂದಿ–ಎಂ.ಬಿ.ನಾಗಠಾಣ (ವಿಶೇಷ ತಹಶೀಲ್ದಾರ್‌, ನಿಡಗುಂದಿ), ತಾಳಿಕೋಟೆ–ಎಚ್‌.ಎಚ್‌.ಅರಕೇರಿ (ವಿಶೇಷ ತಹಶೀಲ್ದಾರ್‌, ತಾಳಿಕೋಟೆ), ಕೊಲ್ಹಾರ–ಎಂ.ಬಿ.ನಾಗಠಾಣ (ವಿಶೇಷ ತಹಶೀಲ್ದಾರ್‌, ನಿಡಗುಂದಿ, ಹೆಚ್ಚುವರಿ ಪ್ರಭಾರ).
**
ಕಂದಾಯ ಇಲಾಖೆ ಆಡಳಿತ ಪ್ರಕ್ರಿಯೆ ಆರಂಭಗೊಂಡಿದೆ. ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಮೂಲ ಸೌಕರ್ಯ ಒದಗಿಸಲಾಗಿದೆ.
  - ಕೆ.ಬಿ.ಶಿವಕುಮಾರ, ಜಿಲ್ಲಾಧಿಕಾರಿ
**
ಕೊಲ್ಹಾರ ಸುತ್ತಮುತ್ತಲಿನ ಮುಳುಗಡೆ ಪ್ರದೇಶದ ಜನ ಸಾಮಾನ್ಯರ ಅನುಕೂಲಕ್ಕಾಗಿ ನ್ಯಾಯಾಲಯ ಸಂಕೀರ್ಣವನ್ನು ಶೀಘ್ರಗತಿಯಲ್ಲಿ ಆರಂಭಿಸಬೇಕು.
  - ಆರ್‌.ಬಿ.ಗಣಕುಮಾರ, ಕೊಲ್ಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT