ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಸರ್ಕಾರಿ ಶಾಲೆಗಳು ಕಾಲೇಜುಗಳಲ್ಲಿ ನಡೆದ ಪಾಠ, ಪ್ರವಚನ, ಜನ ಜೀವನಕ್ಕೆ ಆಗದ ತೊಂದರೆ
Last Updated 26 ಜನವರಿ 2018, 10:09 IST
ಅಕ್ಷರ ಗಾತ್ರ

ತುಮಕೂರು: ಮಹಾದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳು ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‌ ನಿಮಿತ್ತ ಬೆಳಿಗ್ಗೆ ನಗರದ ಪ್ರಮುಖ ಜನನಿಬಿಡ ಪ್ರದೇಶಗಳಾದ ಬಸ್‌ ನಿಲ್ದಾಣ, ಎಂ.ಜಿ.ರಸ್ತೆಗಳು ಬೀಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ ಬೆಳಿಗ್ಗೆ 11ರ ಬಳಿಕ ಅಂಗಡಿ–ಮುಂಗಟ್ಟುಗಳು ಬಾಗಿಲು ತೆರೆಯುವ ಮೂಲಕ ನಗರ ಸಹಜ ಸ್ಥಿತಿಗೆ ಮರಳಿತು.

ಬೆಳಿಗ್ಗೆ ಸಂಚರಿಸಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು 9 ಗಂಟೆಯ ನಂತರ ರಸ್ತೆಗಿಳಿಯಲಿಲ್ಲ. ಹೀಗಾಗಿ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಆದರೆ ಸಂಜೆಯಷ್ಟಕ್ಕೆ ಮತ್ತೆ ಬಸ್‌ಗಳು ಸಂಚಾರವನ್ನು ಅರಂಭಿಸಿದವು. ಖಾಸಗಿ ಬಸ್‌ಗಳು ಬೆಳಿಗ್ಗೆ 11 ಗಂಟೆಯಿಂದಲೇ ಸಂಚಾರ ಆರಂಭಿಸಿದ್ದವು. ಆಟೊಗಳ ಸಂಚಾರ ಅಬಾಧಿತವಾಗಿತ್ತು.

‘ಇಂದು ಪ್ರದರ್ಶನವಿರುವುದಿಲ್ಲ’ ಎನ್ನುವ ಫಲಕಗಳನ್ನು ಚಲನಚಿತ್ರ ಮಂದಿರಗಳ ಎದುರು ಹಾಕಲಾಗಿತ್ತು. ನಗರದ ಶಾಲಾ–ಕಾಲೇಜುಗಳು, ಆಸ್ಪತ್ರೆಗಳು ಮತ್ತು ಹಲವಾರು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕೇಂದ್ರ ಸರ್ಕಾರ ನಡೆ ಹಾಗೂ ಮಹದಾಯಿ ವಿಚಾರದಲ್ಲಿ ಬಾಯಿ ಬಿಡದ ಪ್ರಧಾನಿ ಮೋದಿ ನಡೆಯನ್ನು ಖಂಡಿಸಿ ಪ್ರತಿಭಟನಾಕಾರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಏಕಾಏಕಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ತಡೆಯಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಟೌನ್‌ಹಾಲ್‌ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್‌.ರಾಮಯ್ಯ, ಸುನೀಲ್‌, ಚಿಕ್ಕರಂಗಯ್ಯ, ಟಿ.ಎನ್‌.ಮಧು, ಮಹೇಂದ್ರ, ಜಿ.ಎ.ಮಹೇಶ್‌, ಮಂಜುನಾಥ್‌, ಸಿ.ನಾಗರಾಜು, ರಂಗಸ್ವಾಮಿ, ಎಚ್‌.ಮನೋಜ್‌, ಕೃಷ್ಣಮೂರ್ತಿ, ಬಾಬಾ, ದಾಸಪ್ಪ, ರಂಜನ್‌ ಇದ್ದರು. ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ) ಬಣದ ಕಾರ್ಯಕರ್ತರು ಕೂಡ ಶಾಂತಿಯುತ ಪ್ರತಿಭಟನೆ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಿದರು.

ಕುಣಿಗಲ್‌ ವರದಿ: ತಾಲ್ಲೂಕಿನಲ್ಲಿ ಶಾಲಾ– ಕಾಲೇಜುಗಳು ಮತ್ತು ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ನಡೆಯಲಿಲ್ಲ. ಉಳಿದಂತೆ ಎಲ್ಲ ಚಟುವಟಿಕೆಗಳು ಎಂದಿನಂತೆ ನಡೆದವು.

ಹುಳಿಯಾರು ವರದಿ:  ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಸರ್ಕಾರಿ ಶಾಲಾ–ಕಾಲೇಜು, ಸರ್ಕಾರಿ ಕಚೇರಿ ಹಾಗೂ ಗುರುವಾರದ ಸಂತೆ, ಹೋಟೆಲ್‌, ಅಂಗಡಿಗಳು ಎಂದಿನಂತೆ ನಡೆದವು. ಜನ ಸಂಚಾರ ಎಂದಿನಂತೆ ಇತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇರಲಿಲ್ಲ.ಕೆಲ ಖಾಸಗಿ ಬಸ್‌ಗಳು ಸಂಚರಿಸಿದವು, ಕನ್ನಡಪರ ಸಂಘಟನೆಗಳ ಬೆಂಬಲ ಕೇವಲ ಮೆರವಣಿಗೆಗಷ್ಟೇ ಸೀಮಿತವಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಹೊಸಳ್ಳಿ ಚಂದ್ರಪ್ಪ ಬಣದ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಉಪತಹಶಿಲ್ದಾರ್ ಬಿ.ಜಿ.ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ಜಯಕರ್ನಾಟಕ ಸಂಘಟನೆಯ ಮೋಹನ್‌ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಕೋಳಿ ಶ್ರೀನಿವಾಸ್, ರೈತಸಂಘದ ಎಸ್.ಸಿ.ಬೀರಲಿಂಗಯ್ಯ, ಕರಿಯಪ್ಪ, ಜಗದೀಶ್, ಜಯಣ್ಣ ಇದ್ದರು.

ಶಿರಾ ವರದಿ:  ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬಂದ್ ಯಾವುದೇ ಪರಿಣಾಮವನ್ನು ಬೀರಲಿಲ್ಲ. ಮುಂಜಾಗ್ರತೆ ಕ್ರಮವಾಗಿ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿದ್ದವು. ಸರ್ಕಾರಿ ಶಾಲೆಗಳು ಎಂದಿನಂತೆ ನಡೆದಿದ್ದು ವಿಶೇಷವಾಗಿದೆ.

ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯದಿದ್ದ ಕಾರಣ ಕಚೇರಿಗಳಲ್ಲಿ ತುಮಕೂರು ಹಾಗೂ ವಿವಿಧ ಕಡೆಯಿಂದ ಬರುವ ಸರ್ಕಾರಿ ನೌಕರರ ಹಾಜರಾತಿ ಕಡಿಮೆ ಇತ್ತು. ಖಾಸಗಿ ಮತ್ತು ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ಸಂಚರಿಸಿದವು. ಆಟೊಗಳು ಎಂದಿನಂತೆ ಸಂಚರಿಸಿದ್ದು. ಅಂಗಡಿ, ಹೋಟಲ್ ಗಳು ಎಂದಿನಂತೆ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ. ಬಂದ್ ಸಾರ್ವಜನಿಕರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಕೊರಟಗೆರೆ ವರದಿ: ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಪಟ್ಟಣದಲ್ಲಿ ಗುರುವಾರ ವರ್ತಕರ ಅಂಗಡಿಗಳಿಗೆ ರಜೆ ಇರುವುದರಿಂದ ಪ್ರತಿ ವಾರದಂತೆ ಈ ಗುರುವಾರವೂ ಅಂಗಡಿಗಳು ಮುಚ್ಚಿದ್ದವು. ಬೆಳಿಗ್ಗೆ ಸಂಚಾರ ನಿಲ್ಲಿಸಿದ್ದ ಸಾರಿಗೆ ಸಂಸ್ಥೆ ಬಸ್‌ಗಳು ಮಧ್ಹಾಹ್ನದ ನಂತರ ರಸ್ತೆಗಿಳಿದವು.

ತಿಪಟೂರು ವರದಿ: ಪಟ್ಟಣದಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಯೆ ವ್ಯಕ್ತವಾಯಿತು. ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ನಗರದಲ್ಲಿ ಬೆಂಬಲ ಸಿಗಲಿಲ್ಲ. ಜನಜೀವನ ಯಥಾಸ್ಥಿತಿಯಲ್ಲಿತ್ತು. ಸಂಘಟನೆಗಳು ಬಂದ್‍ಗೆ ಸಹಕರಿಸದೆ ಇದ್ದುದರಿಂದ ಯಾವುದೇ ಪ್ರತಿಭಟನೆ ನಡೆಯಲಿಲ್ಲ. ಸರ್ಕಾರಿ ಶಾಲೆಗಳು ತೆರೆದಿದ್ದವು. ಬಸ್‌ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಪರದಾಡಿದರು.
**
ಬೆಂಬಲ ಸೂಚಿಸಿ ಪ್ರತಿಭಟನೆ

ಪಾವಗಡ: ಮಹದಾಯಿ ಹೋರಾಟಕ್ಕೆ ಬಂಬಲ ಸೂಚಿಸಿ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿದರು.

'ಕಳೆದ 20 ವರ್ಷಗಳಿಂದ  ಹೋರಾಟ ನಡೆಯುತ್ತಿದೆ. ಆದರೆ ನೆರೆಯ ಗೋವಾ, ಮಹರಾಷ್ಟ್ರ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿವೆ' ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ಮಾತನಾಡಿ, ’ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ರಾಜ್ಯಗಳ ನಡುವಿನ ನೀರಾವರಿ ವಿವಾದ ಪರಿಹರಿಸುವತ್ತ ಪ್ರಧಾನಿ ಮೋದಿ ಗಮನಹರಿಸಬೇಕು’ ಎಂದರು.

ಪಟ್ಟಣದ ಶನಿಮಹಾತ್ಮ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಹಶೀಲ್ದಾರ್ ಕಚೇರಿ ಮುಂದೆ ರಸ್ತೆ ತಡೆ ನಡೆಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಟಿ.ಕೆ.ತಿಪ್ಪೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹಸಿರು ಸೇನೆ ಪದಾಧಿಕಾರಿ ಕರಿಯಣ್ಣ, ಹನುಮಂತರಾಯಪ್ಪ, ತಿಮ್ಮರಾಯಪ್ಪ, ಓಂಕಾರನಾಯಕ, ಕರ್ನಾಟಕ ರಕ್ಷಣಾ ಪಡೆ ಅಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಹರೀಶ್, ಶ್ರೀರಾಮು, ಈಶ್ವರಪ್ಪ, ಪಾಂಡು, ಗಂಗಾಧರ ಇದ್ದರು.
***
ಬಸ್ಸಿಲ್ಲದೆ ಪರದಾಡಿದ ವಿದ್ಯಾರ್ಥಿಗಳು

ತುರುವೇಕೆರೆ: ಶಾಲಾ–ಕಾಲೇಜು, ಕಚೇರಿ, ಅಂಗಡಿ–ಮುಂಗಟ್ಟು, ಪೆಟ್ರೋಲ್‌ ಬಂಕ್, ಚಿತ್ರಮಂದಿರ, ಆಟೊಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡಿದರು.

ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಮಧ್ಯಾಹ್ನ ಮಾಯಸಂದ್ರ ರಸ್ತೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷ ಅಸ್ಲಾಂ ಪಾಷಾ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ, ದಂಡಿನಶಿವರ ಕುಮಾರ್, ರಹಮತ್, ಭೈರಪ್ಪ, ನಾಗರಾಜು, ಗೋವಿಂದರಾಜು, ದಿಗಂತ್ ಇದ್ದರು.
**
ಮುಚ್ಚಿದ ಶಾಲಾ–ಕಾಲೇಜು

ಮಧುಗಿರಿ: ಮಹದಾಯಿ ಹೋರಾಟ ಬೆಂಬಲಿಸಿ ಗುರುವಾರ ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಜಾಗೃತಿ ವೇದಿಕೆಯ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ಮುಂಜಾನೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೆಟ್ರೋಲ್ ಬಂಕ್, ಹೋಟೆಲ್, ಚಿತ್ರಮಂದಿರ, ಶಾಲೆ -ಕಾಲೇಜು, ಅಂಗಡಿ - ಮುಂಗಟ್ಟುಗಳು ಮುಚ್ಚಿದ್ದವು.

ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಮಹದಾಯಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ , ದೊಡ್ಡಮಾಳಯ್ಯ, ತಾಲ್ಲೂಕು ಅಧ್ಯಕ್ಷ ರಾಜಶೇಖರ್, ತಾಲ್ಲೂಕು ಕನ್ನಡ ಜಾಗೃತಿಯ ವೇದಿಕೆಯ ಗೌರವಾಧ್ಯಕ್ಷ ಕೇಬಲ್ ಸುಬ್ಬು, ಅಧ್ಯಕ್ಷ ರಾಘವೇಂದ್ರ , ಕಾರ್ಯದರ್ಶಿ ಮಂಜುನಾಥ ನಾಯಕ್, ಪದಾಧಿಕಾರಿಗಳಾದ ದಾದಪೀರ್, ದೇವರಾಜು , ಮಂಜು , ಮನು, ಪಾದಣ್ಣ ಇದ್ದರು.
***
ಇಚ್ಛಾಶಕ್ತಿಯ ಕೊರತೆ

ಚಿಕ್ಕನಾಯಕನಹಳ್ಳಿ: ‘ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೆ ಮಹಾದಾಯಿ ನೀರು ಹಂಚಿಕೆ ಸರಿಯಾಗಿ ಆಗಿಲ್ಲ. ರಾಜಕೀಯ ಪಕ್ಷಗಳ ಸ್ವಾರ್ಥದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ಸಾಹಿತಿ ಎಂ.ವಿ.ನಾಗರಾಜರಾವ್ ಹೇಳಿದರು.

ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಅಂಗವಾಗಿ ಪಟ್ಟಣದಲ್ಲಿ ಕನ್ನಡ ಮತ್ತು ರೈತ ಸಂಘಟನೆಗಳು ಬಂದ್ ಆಚರಿಸಿದವು.

ನೆಹರು ವೃತ್ತದಿಂದ ಮೆರವಣಿಗೆ ಹೊರಟ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕು ಕಚೇರಿಗೆ ತೆರಳಿ ತಹಶಿಲ್ದಾರ್ ಶಿವಲಿಂಗಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಮಧ್ಯಾಹ್ನದ ನಂತರ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಯಿತು.

ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಡಿವಿಪಿ ಶಾಲಾ ಕಾರ್ಯದರ್ಶಿ ಸಿ.ಎಸ್.ನಟರಾಜ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ಎಂ.ಎಸ್.ರವಿಕುಮಾರ್, ಪುರಸಭಾ ಸದಸ್ಯ ಕೆ.ಜಿ.ಕೃಷ್ಣೇಗೌಡ, ಸಿ.ಬಿ.ಲೋಕೇಶ್, ಸೀಮೇಎಣ್ಣೆ ವಿನಯ್, ಇಮ್ತಾಯಜ್, ಸಿ.ಹೆಚ್.ಪ್ರಕಾಶ್, ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT