ಹಳ್ಳಿಗೆ ಹುಡುಕಿಕೊಂಡು ಬಂದ ‘ಪದ್ಮಶ್ರೀ’ ಗೌರವ

7
ಗಣರಾಜ್ಯೋತ್ಸವ ಮುನ್ನಾ ದಿನ ಹಬ್ಬದ ಸಂಭ್ರಮ, ಸಡಗರ

ಹಳ್ಳಿಗೆ ಹುಡುಕಿಕೊಂಡು ಬಂದ ‘ಪದ್ಮಶ್ರೀ’ ಗೌರವ

Published:
Updated:
ಹಳ್ಳಿಗೆ ಹುಡುಕಿಕೊಂಡು ಬಂದ ‘ಪದ್ಮಶ್ರೀ’ ಗೌರವ

ತುಮಕೂರು: ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿ ಗುರುವಾರ ಘೋಷಣೆಯಾಗಿರುವುದು ಕುಟುಂಬದ ಸದಸ್ಯರಿಗಷ್ಟೇ ಅಲ್ಲ, ಜಿಲ್ಲೆಯ ಜನರಿಗೆ ಗಣರಾಜ್ಯೋತ್ಸವ ಮುನ್ನ ದಿನ ಸಂಭ್ರಮಕ್ಕೆ ಸಾಕ್ಷಿಯಾಯಿತು. 1,500ಕ್ಕೂ ಹೆಚ್ಚು ಹೆರಿಗೆ ಮಾಡಿಸಿ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಪಾವಗಡ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ನರಸಮ್ಮ ಹನ್ನೆರಡು ಮಕ್ಕಳ ತಾಯಿ. ಇದರಲ್ಲಿ 8 ಮಂದಿ ಗಂಡು ಮಕ್ಕಳು, 4 ಮಂದಿ ಹೆಣ್ಣು ಮಕ್ಕಳು. ಈಗ 4 ಮಂದಿ ಹೆಣ್ಣು ಮಕ್ಕಳು, 4 ಮಂದಿ ಗಂಡು ಮಕ್ಕಳು ಇದ್ದಾರೆ. 30 ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಇದ್ದಾರೆ.

ಕಳೆದ ಒಂದು ತಿಂಗಳಿಂದ ಉಸಿರಾಟ ಮತ್ತು ಮೂಳೆ ಸವೆತಕ್ಕೆ ನಗರದ ಆದರ್ಶ ನರ್ಸಿಂಗ್ ಹೋಮ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೈಕೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ನಿರತರಾಗಿದ್ದಾರೆ. ಈ ಹೊತ್ತಿನಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಕಂಡು ಬಂದಿತು.

ಸ್ವತಃ ನರಸಮ್ಮನವರೇ ಮೂಗುಳ್ನಗೆ ನಗುತ್ತಾ ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಗಲ್ಲ ಮುಟ್ಟಿ ಖುಷಿ ಪಟ್ಟರು. ಪ್ರಶಸ್ತಿ ಕುರಿತು ಮಾತನಾಡಿಸಿದಾಗ, ಸುಮ್ಮನೆ ನಕ್ಕರು. ಬಳಿಕ ‘ಒಳ್ಳೆಯದಾಗಲಿ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ’ ಎಂದು ಕೈ ಎತ್ತಿ ಹರಸಿದರು. ಕನ್ನಡ ಪೂರ್ಣ ಬಾರದಿದ್ದರೂ ತೆಲುಗು ಕನ್ನಡ ಮಿಶ್ರಿತವಾಗಿ ಮಾತನಾಡಿದರು.

2013ರಲ್ಲಿ ವಯೋಶ್ರೇಷ್ಠ ರಾಷ್ಟ್ರೀಯ ಸಮ್ಮಾನ್ ಪ್ರಶಸ್ತಿ ನರಸಮ್ಮ ಅವರಿಗೆ ಲಭಿಸಿತ್ತು. ಈಗ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ಇಳಿ ವಯಸ್ಸಿನಲ್ಲೂ ಅವರ ಅನುಭವ ಮಾಸಿಲ್ಲ ಎಂಬುದನ್ನು ಕುಟುಂಬದ ಸದಸ್ಯರು ಹೇಳುತ್ತಾರೆ. ನಮ್ಮ ಕುಟುಂಬದಲ್ಲಿ ಎಲ್ಲ ಹೆರಿಗೆಗಳನ್ನೂ ಅವರೇ ಮಾಡಿಸಿದ್ದಾರೆ ಎಂದು ಹೇಳುತ್ತಾರೆ.

ಸೊಸೆ ಪ್ರತಿಕ್ರಿಯೆ: ’ನರಸಮ್ಮನವರ ಸೊಸೆ ಎಂಬುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ. ಅಂತಹ ಮಹಾ ತಾಯಿ ಸೇವೆ ಮಾಡುವುದು ನಮ್ಮ ಭಾಗ್ಯವಾಗಿದೆ’ ಎಂದು ನರಸಮ್ಮನವರ 12ನೇ ಮಗ ಪಾವಗಡ ಶ್ರೀರಾಮ್ ಅವರ ಪತ್ನಿ ಸವಿತಾ ’ಪ್ರಜಾವಾಣಿ’ಗೆ ತಿಳಿಸಿದರು.

’ಈಗ ಅವರಿಗೆ 97 ವರ್ಷ. ಈಗಲೂ ಗರ್ಭಿಣಿಯ ಹೊಟ್ಟೆಯ ಮೇಲೆ ಅವರು ಕೈ ಇಟ್ಟರೆ ಸಾಕು. ಹೊಟ್ಟೆಯಲ್ಲಿ ಮಗು ಹೇಗೆ ಬೆಳೆದಿದೆ. ಅದರ ಆರೋಗ್ಯ ಹೇಗಿದೆ. ಹೆಣ್ಣು ಮಗುವೊ, ಗಂಡು ಮಗುವೊ ಎಂಬುದನ್ನು ಹೇಳುತ್ತಾರೆ. ಅಂತಹ ಅದ್ಭುತ ಶಕ್ತಿಯನ್ನು ದೇವರು ಅವರಿಗೆ ಕರುಣಿಸಿದ್ದಾರೆ’ ಎಂದು ಭಾವಪರವಶರಾಗಿ ನುಡಿದರು.

ಮಗನ ಪ್ರತಿಕ್ರಿಯೆ: ‘ಅಮ್ಮನಿಗೆ ಆ ದೇವರು ಕೊಟ್ಟ ಶಕ್ತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅವರಿಗೆ ಈ ಪ್ರಶಸ್ತಿ ಲಭಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನಾವೆಲ್ಲ ಒಂದು ತಿಂಗಳಿಂದ ಅವರ ಆರೈಕೆಯಲ್ಲಿ ಮಗ್ನರಾಗಿದ್ದೆವು. ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸೇವೆ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ’ ಎಂದು

ಪಾವಗಡ ಶ್ರೀರಾಮ್ ಸಂಭ್ರಮ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry