ಭ್ರಷ್ಟಾಚಾರ, ಕೋಮುವಾದಕ್ಕೆ ಇಲ್ಲ ಮನ್ನಣೆ

7
ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಅಭಿಮತ

ಭ್ರಷ್ಟಾಚಾರ, ಕೋಮುವಾದಕ್ಕೆ ಇಲ್ಲ ಮನ್ನಣೆ

Published:
Updated:
ಭ್ರಷ್ಟಾಚಾರ, ಕೋಮುವಾದಕ್ಕೆ ಇಲ್ಲ ಮನ್ನಣೆ

ಶಿವಮೊಗ್ಗ:  ಕುವೆಂಪು, ಅನಂತಮೂರ್ತಿ, ಗೋಪಾಲಗೌಡ ಅವರಂತಹ ಮಹನೀಯರು ಹುಟ್ಟಿದ ತಾಲ್ಲೂಕಿನ ಜನರು ಬ್ರಹ್ಮಾಂಡ ಭ್ರಷ್ಟಾಚಾರಿಗಳಿಗೆ, ಕೋಮುವಾದಿಗಳಿಗೆ ಮಣೆ ಹಾಕುವುದಿಲ್ಲ ಎಂದು ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಪ್ರತಿಪಾದಿಸಿದರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎರಡು ಬಾರಿ ಸೋಲು ಕಂಡು, ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮೂರು ವರ್ಷ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಸಚಿವನಾಗಿ ಪಿಯು ಕಾಲೇಜು ಶಿಕ್ಷಕರಿಗೆ ವೇತನ ಸಹಿತ ಬಿ.ಇಡಿ ಮಾಡಲು ಅವಕಾಶ ಮಾಡಿಕೊಟ್ಟೆ, ಹಲವು ಕಾರ್ಯಗಳು ದಾಖಲೆಗಳಾಗಿ ಉಳಿದಿವೆ’ ಎಂದು ವಿವರ ನೀಡಿದರು.

‘ಶಾಸಕನಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ₹ 850 ಕೋಟಿಗೂ ಹೆಚ್ಚಿನ ಮೊತ್ತದ ಅನುದಾನ ತಂದಿದ್ದೇನೆ. ಆಗುಂಬೆಯಿಂದ ಶಿವಮೊಗ್ಗವರೆಗಿನ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಕೆಲಸಗಳು ಸಂಪೂರ್ಣ ತೃಪ್ತಿ ತಂದಿಲ್ಲ. ಬಹುದೊಡ್ಡ ಕ್ಷೇತ್ರ ತೀರ್ಥಹಳ್ಳಿ. ಇತರೆ ಕ್ಷೇತ್ರಗಳಷ್ಟೇ ಅನುದಾನ ನೀಡಿದ ಕಾರಣ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗಿಲ್ಲ’ ಎಂದು ವಿಶ್ಲೇಷಿಸಿದರು.

‘ಕ್ಷೇತ್ರದ ಜನರಿಗೆ ತಾವು ಮಾಡಿದ ಕೆಲಸ ಕುರಿತು ತೃಪ್ತಿ ಇದೆ. ಜಾತಿ, ಧರ್ಮ, ಪಕ್ಷ ಭೇದ ಮಾಡದೇ ಕೆಲಸ ಮಾಡಿದ್ದೇನೆ. ಸಾಮಾನ್ಯ ಜನರಲ್ಲಿ ಯಾವುದೇ ಅತೃಪ್ತಿ ಇಲ್ಲ. ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಿದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಿದೆ. ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿ ಹಕ್ಕು ನೀಡಿದೆ. ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳು ಜನರನ್ನು ತಲುಪಿವೆ. ಹಾಗಾಗಿ, ಆಡಳಿತ ವಿರೋಧಿ ಅಲೆಯೂ ಇಲ್ಲ. ಕಾಂಗ್ರೆಸ್‌ ಸ್ಥಿತಿ ಉತ್ತಮವಾಗಿದೆ’ ಎಂದು ಸಮರ್ಥಿಸಿಕೊಂಡರು.

ಕ್ಷೇತ್ರದಲ್ಲಿ ವಿದ್ಯಾರ್ಥಿನಿಯೊಬ್ಬರ ಸಾವಿನ ಪ್ರಕರಣವನ್ನು ಕೆಲವರು ರಾಜಕೀಯ ಕಾರಣಕ್ಕೆ ಬಳಸಿಕೊಂಡರು. ಗಲಭೆ ಹುಟ್ಟುಹಾಕಲು ಪ್ರಯತ್ನಿಸಿದರು. ಅಂತಹ ಪ್ರವೃತ್ತಿ ಈಗಲೂ ಮುಂದುವರಿದಿದೆ. ನಂದಿತಾ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಆಣೆ ಮಾಡಿದ್ದು ನಿಜ. ಪ್ರಮಾಣಕ್ಕೆ ಸಾಂವಿಧಾನಿಕ ಮಾನ್ಯತೆ ಇದೆ. ಯಾವ ಜನಪ್ರತಿನಿಧಿಗಳೂ ಪ್ರಮಾಣ ಮಾಡದೇ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಕ್ರಿಯಾಶೀಲತೆ, ಒಳ್ಳೆ ಕೆಲಸಕ್ಕೆ ಒತ್ತು: ‘ರಾಜಕೀಯ ಜೀವನದಲ್ಲಿ ಒಳ್ಳೆಯ ಕೆಲಸಕ್ಕೆ ಒತ್ತು ನೀಡಿದ್ದೇನೆ. ಕ್ರಿಯಾಶೀಲನಾಗಿ ಕೆಲಸ ಮಾಡಿದ್ದೇನೆ. 2009ರಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂದು ಆಗಿನ ಮುಖ್ಯಮಂತ್ರಿ, ಸಭಾಧ್ಯಕ್ಷರು, ಸಭಾಪತಿ ಸೇರಿದಂತೆ 300 ಶಾಸಕರಿಗೆ ಪತ್ರ ಬರೆದಿದ್ದೆ. ಶಾಸಕರಿಗೆ ನೀಡುತ್ತಿರುವ ವೇತನ ಹೆಚ್ಚಳ, ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರಿಗೂ ಮಾತನಾಡುವ ಅವಕಾಶ ಕುರಿತು ಧ್ವನಿ ಎತ್ತಿದ್ದೆ. ಯಾವುದೇ ಕಾಯಿದೆ ಜಾರಿಗೆ ತರುವ ಎರಡು ತಿಂಗಳು ಮೊದಲು ಅಂತರ್ಜಾಲಕ್ಕೆ ಹಾಕಬೇಕು. ಪ್ರಚಾರ ನೀಡಬೇಕು. ಸಾರ್ವಜನಿಕರಿಂದ ಸಲಹೆ, ಸೂಚನೆ ಪಡೆಯಬೇಕು. ಸಮಗ್ರ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದ್ದೆ’ ಎಂದು ವಿವರ ನೀಡಿದರು. ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಉಪಸ್ಥಿತರಿದ್ದರು.

**

ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರು ಕಳೆದ ಬಾರಿ ಕೆಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದಾಗ ಜನರಿಗೆ ಅವರ ಭ್ರಷ್ಟಾಚಾರದ ಅರಿವು ಇರಲಿಲ್ಲ. ಹಾಗಾಗಿ, ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಅವರ ಬಣ್ಣ ಬಯಲಾಗಿದೆ. ಭ್ರಷ್ಟಾಚಾರದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಹಾಗಾಗಿ ಅವರು ಜೆಡಿಎಸ್‌ ಸೇರಿದರೂ ಕ್ಷೇತ್ರದ ಮತದಾರರು ಅವರಿಗೆ ಮಣೆ ಹಾಕುವುದಿಲ್ಲ. ಪ್ರತಿಸ್ಪರ್ಧಿಯೂ ಆಗುವುದಿಲ್ಲ. ಬಿಜೆಪಿ, ಕಾಂಗ್ರೆಸ್ ಮಧ್ಯೆ ಈ ಬಾರಿ ನೇರ ಸ್ಪರ್ಧೆ ಎಂದು ಅಭಿಪ್ರಾಯಪಟ್ಟರು.

ಇದು ಕೊನೆಯ ಚುನಾವಣೆ: ಇದು ತಾವು ಸ್ಪರ್ಧಿಸುವ ಕೊನೆಯ ಚುನಾವಣೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಲ್ಲ. ಈ ಬಾರಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry