ಶಾಸಕ ಸ್ಥಾನಕ್ಕೆ ರಾಜೀನಾಮೆ 27ಕ್ಕೆ

7
ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಘೋಷಣೆ

ಶಾಸಕ ಸ್ಥಾನಕ್ಕೆ ರಾಜೀನಾಮೆ 27ಕ್ಕೆ

Published:
Updated:

ಹೊಸಪೇಟೆ: ‘ಇದೇ 27ರಂದು ರಾಜಧಾನಿ ಬೆಂಗಳೂರಿಗೆ ಹೋಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಘೋಷಿಸಿದರು.

ಗುರುವಾರ ರಾತ್ರಿ ನಗರದಲ್ಲಿ ನಡೆದ ಆಪ್ತರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದರು.

‘ನನ್ನ ಮುಂದಿನ ನಡೆ ಏನಾಗಿರುತ್ತದೆ ಎಂದು ಮಾಧ್ಯಮದವರು ಬಹಳ ಕುತೂಹಲದಿಂದ ಕಾಯುತ್ತಿದ್ದೀರಿ. ಅವರಿಗೆ ನಾನು ಹೇಳುವುದಿಷ್ಟೇ, ನನ್ನ ನಡೆ ಎಲ್ಲ ಕಡೆಗೂ ಇದೆ. ಮಾಧ್ಯಮದವರೂ ಅದನ್ನು ನೋಡಬಹುದು’ ಎಂದು ಸಭಿಕರತ್ತ ತೋರಿಸಿದರು. ಅಲ್ಲಿ ಕಿಕ್ಕಿರಿದು ನೆರೆದಿದ್ದ ಜನ ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಹಸ್ತದ ಚಿಹ್ನೆ ತೋರಿಸಿದರು. ‘ಇಲ್ಲಿ ಸೇರಿರುವ ಜನ ತೋರಿಸಿದ್ದೇ ನನ್ನ ನಡೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದರು.

‘ಈ ಸಲದ ರಾಜ್ಯ ಬಜೆಟ್‌ನಲ್ಲಿ ಹೊಸಪೇಟೆ ನಗರಕ್ಕೆ ₹120 ಕೋಟಿ, ಗ್ರಾಮೀಣ ಭಾಗಕ್ಕೆ ₹200 ಕೋಟಿ ಘೋಷಣೆ ಮಾಡಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ಎರಡು ತಿಂಗಳು ಶಾಸಕನಲ್ಲದಿದ್ದರೂ ಕೆಲಸ ಮಾಡುವ ಶಕ್ತಿ ನನಗಿದೆ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಸೇರುವುದನ್ನು ಮತ್ತಷ್ಟು ಪುಷ್ಟೀಕರಿಸಿದರು.

‘ನಾನು ಒಂಬತ್ತು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಜನ ನನಗೆ ಜೈಕಾರ ಹಾಕಿದ್ದು ಕೇಳಿದ್ದೆ. ಆದರೆ, ಈ ದಿನ ಆನಂದ್‌ ಸಿಂಗ್‌ಗೆ ಧಿಕ್ಕಾರ ಎಂದು ಕೂಗಿದ್ದಾರೆ. ಆದರೆ, ಇದರಿಂದ ಯಾರು ಆಘಾತಕ್ಕೆ ಒಳಗಾಗಬಾರದು. ಧಿಕ್ಕಾರ ಹಾಕಿದವರನ್ನು ಜತೆಗೆ ಕೊಂಡೊಯ್ಯುವ ವ್ಯಕ್ತಿ ನಾನು’ ಎಂದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕ್ಷೇತ್ರದ ಮತದಾರರು ಸತತ ಮೂರನೇ ಬಾರಿಗೆ ಗೆಲ್ಲಿಸುತ್ತಾರೆ ಎಂಬ ಭರವಸೆ ಕೂಡ ಇದೆ. ನನ್ನ ಹಾಗೂ ನಾನು ಪ್ರತಿನಿಧಿಸುತ್ತಿರುವ ಪಕ್ಷದ ನಡುವೆ ಬಿರುಕು ಬಿಟ್ಟಿದೆ. ಅದನ್ನು ಸರಿಪಡಿಸುವ ಕೆಲಸ ಯಾರೂ ಮಾಡುತ್ತಿಲ್ಲ. ಈಗಿನ ಸ್ಥಿತಿಯಲ್ಲಿ ಅದನ್ನು ಸರಿಪಡಿಸಲು ಆಗುವುದಿಲ್ಲ. ಜನವರಿ 6ರಂದು ನಡೆದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲೇ ಈ ಬಿರುಕು ಉಂಟಾಗಿತ್ತು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಭಾವಿಸಿ ಇಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.

**

‘ನೀವೇ ನನ್ನ ಶಕ್ತಿ’

‘ಇಡೀ ದೇಶದಾದ್ಯಂತ ಮೋದಿ ಅಲೆ ಇದೆ. ಆದರೆ, ಗೌರವಕ್ಕಿಂತ ಯಾವುದೂ ಹೆಚ್ಚಲ್ಲ. ನೀವೇ ನನ್ನ ಶಕ್ತಿ. ನೀವಿದ್ದರೆ ನಾನು ಶಾಸಕ. ನನ್ನ ಒಂಬತ್ತು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಗಲಭೆ, ಅಶಾಂತಿಗೆ ಆಸ್ಪದ ಮಾಡಿಕೊಟ್ಟಿಲ್ಲ. ಏನೇ ಘಟನೆ ನಡೆದರೂ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದ್ದೇನೆ’ ಎಂದು ಆನಂದ್ ಸಿಂಗ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry