ಸಂಚಾರ ಸ್ಥಗಿತ: ವ್ಯಾಪಾರ–ವಹಿವಾಟು ಅಭಾದಿತ

7
ಕರ್ನಾಟಕ ಬಂದ್: ವಿವಿಧ ಸಂಘಟನೆಗಳಿಂದ ರಾಮನಗರದಲ್ಲಿ ಪ್ರತಿಭಟನೆ

ಸಂಚಾರ ಸ್ಥಗಿತ: ವ್ಯಾಪಾರ–ವಹಿವಾಟು ಅಭಾದಿತ

Published:
Updated:
ಸಂಚಾರ ಸ್ಥಗಿತ: ವ್ಯಾಪಾರ–ವಹಿವಾಟು ಅಭಾದಿತ

ರಾಮನಗರ: ಕಳಸಾ ಬಂಡೂರಿ ಯೋಜನೆ ಅನುಷ್ಟಾನ ಹಾಗೂ ಮಹದಾಯಿ ನೀರಿಗೆ ಆಗ್ರಹಿಸಿ ಗುರುವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಸಾಮಾನ್ಯ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಮನಗರದಲ್ಲಿ ಬೆಳಿಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಬಹುತೇಕ ಬಸ್‌ಗಳು ಡಿಪೊನಲ್ಲಿಯೇ ಉಳಿದು ಕೊಂಡವು. ಹೀಗಾಗಿ ಇಡೀ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮಾಹಿತಿ ತಿಳಿಯದೆಯೇ ನಿಲ್ದಾಣಕ್ಕೆ ಬಂದವರು ಪರದಾಡಿದರು. ಆದರೆ, ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇದ್ದು, ಮುಂಜಾನೆ ಪ್ರಯಾಣಿಕರ ದಟ್ಟಣೆ ಕಂಡು ಬಂದಿತು. ಬಿಡದಿಯಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿಯೂ ಮುಂಜಾನೆಯಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಬೆಂಗಳೂರಿಗೆ ತೆರಳುವವರು ರೈಲು ನಿಲ್ದಾಣದತ್ತ ಮುಖ ಮಾಡಿದರು. ಹೀಗಾಗಿ ಬೆಳಿಗ್ಗೆ ರೈಲುಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಖಾಸಗಿ ವಾಹನಗಳು, ಆಟೊ ಸಂಚಾರಕ್ಕೆ ಯಾವುದೇ ಅಡ್ಡಿ ಆಗಲಿಲ್ಲ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಎಂದಿಗಿಂತ ಕಡಿಮೆ ಇತ್ತು.

ಬೆಳಿಗ್ಗೆ 8ರ ಸುಮಾರಿಗೆ ನಗರದಲ್ಲಿನ ಕೆಲವು ಹೋಟೆಲ್‌ಗಳು ಹಾಗೂ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಸಮಯ ಕಳೆದಂತೆ ಬಹುತೇಕ ಅಂಗಡಿ–ಮುಂಗಟ್ಟುಗಳು ಎಂದಿನಂತೆ ತೆರೆದವು. ವ್ಯಾಪಾರ ವಹಿವಾಟಿಗೆ ಹೆಚ್ಚಿನ ತೊಂದರೆ ಆಗಲಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ, ರೇಷ್ಮೆಗೂಡು ಮಾರುಕಟ್ಟೆಗಳು ಎಂದಿನಂತೆ ವಹಿವಾಟು ನಡೆಸಿದವು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಎಲ್ಲ ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದರೆ, ಪದವಿ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ವಿದ್ಯಾರ್ಥಿಗಳ ಹಾಜರಾತಿ ಮಾತ್ರ ಕಡಿಮೆ ಇತ್ತು. ಖಾಸಗಿ ವಲಯದ ಕೆಲವು ಬ್ಯಾಂಕ್‌ಗಳು ಬೆಳಿಗ್ಗೆ ಬಾಗಿಲು ಮುಚ್ಚಿದ್ದವು. ಆದರೆ, ಸರ್ಕಾರಿ ವಲಯದ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ನೌಕರರ ಹಾಜರಾತಿ ಕೊಂಚ ಕಡಿಮೆಯೇ ಇತ್ತು.

ಪ್ರತಿಭಟನೆಗಳ ಕಾವು: ಬಂದ್‌ ಬೆಂಬಲಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ಮುಂಜಾನೆ ಆರರ ಹೊತ್ತಿಗೆ ಕರುನಾಡ ಸೇನೆ ಸಂಘಟನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್‌ ಪ್ರತಿಕೃತಿ ದಹಿಸಿ, ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕಕ್ಕೆ ದ್ರೋಹ ಬಗೆಯದೇ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಅಧ್ಯಕ್ಷ ಜಗದೀಶ್‌ ನೇತೃತ್ವ ವಹಿಸಿದ್ದರು.

ಕನ್ನಡ ಜನಮನ ಸಂಘಟನೆ: ಸಂಘಟನೆಯ ಕಾರ್ಯಕರ್ತರು ಅಧ್ಯಕ್ಷ ಕನ್ನಡ ರಾಜು ನೇತೃತ್ವದಲ್ಲಿ ಮುಂಜಾನೆ ಪ್ರತಿಭಟನೆ ನಡೆಸಿದರು.

ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿ ಗೋವಾ ಸರ್ಕಾರದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ, ರಾಜ್ಯ ಸಂಚಾಲಕ ಎಲ್. ನಾಗೇಂದ್ರ ಇದ್ದರು.

ರೈತ ಸಂಘ: ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮಧ್ಯಾಹ್ನ ಐಜೂರು ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜಕೀಯ ಕೆಸರೆರೆಚಾಟ ಬಿಟ್ಟು ರೈತರ ನೆರವಿಗೆ ಧಾವಿಸಬೇಕು. ದಶಕದಿಂದ ನಡೆದಿರುವ ರೈತರ ಹೋರಾಟಕ್ಕೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ರಾತ್ರಿ ಹೊತ್ತಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುತ್ತಿದೆ. ಹೊಲಗಳಿಗೆ ತೆರಳುವ ರೈತರು, ಚಿರತೆ, ಕರಡಿ, ಆನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್‌, ಪದಾಧಿಕಾರಿಗಳಾದ ಮೆಳೆಹಳ್ಳಿ ಶಿವಕುಮಾರ್‌, ಎಸ್‌.ಆರ್. ದೇವರಾಜು, ಗುಂಗರಹಳ್ಳಿ ಚನ್ನೇಗೌಡ ನೇತೃತ್ವ ವಹಿಸಿದ್ದರು.

ಎಸ್‌ಡಿಪಿಐ: ಬಂದ್ ಬೆಂಬಲಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗೋವಾ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು ಕನ್ನಡಿಗರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಜೀಜ್‌ವುಲ್ಲಾ ಷರೀಫ್‌, ಚಾನ್‌ಪಾಷಾ, ಶಕೀಲ್ ಅಹಮ್ಮದ್, ಬಕಾಶ್‌, ಮೊಹಮ್ಮದ್ ಷರೀಫ್‌ ನೇತೃತ್ವ ವಹಿಸಿದ್ದರು.

***

ಪೊಲೀಸ್ ಕಾವಲು‌

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದರು. ಐಜೂರು ವೃತ್ತದಲ್ಲಿ ವಿಶೇಷ ತುಕಡಿಯನ್ನು ನಿಯೋಜಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಸಿಬ್ಬಂದಿ ಎಚ್ಚರ ವಹಿಸಿದ್ದರು.

ಮಧ್ಯಾಹ್ನದ ನಂತರ ರಾಮನಗರದಲ್ಲಿ ಬಸ್ ಸಂಚಾರ ಎಂದಿನಂತೆ ಆರಂಭಗೊಂಡಿತಾದರೂ, ಹೆಚ್ಚಿನ ಪ್ರಯಾಣಿಕರು ಇರಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry