ಹನುಮಂತಪ್ಪ ಕೊಪ್ಪದ ಪುತ್ಥಳಿ ಸ್ಥಾಪನೆ ಇಂದು

7
ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ: ಮಹಾದೇವಿ ಆರೋಪ

ಹನುಮಂತಪ್ಪ ಕೊಪ್ಪದ ಪುತ್ಥಳಿ ಸ್ಥಾಪನೆ ಇಂದು

Published:
Updated:
ಹನುಮಂತಪ್ಪ ಕೊಪ್ಪದ ಪುತ್ಥಳಿ ಸ್ಥಾಪನೆ ಇಂದು

ಕುಂದಗೋಳ/ಹುಬ್ಬಳ್ಳಿ: ಹುತಾತ್ಮ ಯೋಧ ಹ‌ನುಮಂತಪ್ಪ ಕೊಪ್ಪದ ಅವರ ಕಂಚಿನ ಪುತ್ಥಳಿ ಸ್ಥಾಪನೆ ಜ.26ರಂದು (ಶುಕ್ರವಾರ) ಕುಂದಗೋಳ ತಾಲ್ಲೂಕಿನ ಬೆಟದೂರಿನಲ್ಲಿ ನಡೆಯಲಿದೆ. ಆದರೆ, ಕಾರ್ಯಕ್ರಮ ದಿನಾಂಕ ಆಯೋಜನೆ ಬಗ್ಗೆ ಕೊಪ್ಪದ ಅವರ ಪೋಷಕರು ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿವೆ.‌‌

ಬೆಟದೂರ ಗ್ರಾಮದ ಮನೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಹನುಮಂತಪ್ಪ ಅವರ ತಾಯಿ ಬಸಮ್ಮ ‘ಮಗ ಇಲ್ಲದಾಗಿನಿಂದ ಇಲ್ಲಿಯವರೆಗೆ ಶಾಸಕ ಸಿ.ಎಸ್‌. ಶಿವಳ್ಳಿ ನಮ್ಮ ಕುಟುಂಬದವರಿಗೆ ಎಲ್ಲವನ್ನು ತಿಳಿಸುತ್ತಾ ಬಂದಿದ್ದಾರೆ. ಮಗನ ಕಂಚಿನ ಪುತ್ಥಳಿ ನಿರ್ಮಾಣ ಹಾಗೂ ಬಣ್ಣ ಆಯ್ಕೆಯಲ್ಲೂ ನಮ್ಮ ಕುಟುಂಬದವರು ಮತ್ತು ಸೊಸೆ ಮಹಾದೇವಿಯ ಒಪ್ಪಿಗೆ ಪಡೆದಿದ್ದಾರೆ. ಮಹಾದೇವಿ ಈಗ ಶಾಸಕರ ವಿರುದ್ದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ’ ಎಂದರು.

‘ಗಣರಾಜೋತ್ಸವ ದಿನದಂದು ಪುತ್ಥಳಿ ಸ್ಥಾಪನೆಗೊಂಡರೆ ಅದಕ್ಕಿಂತ ಶ್ರೇಷ್ಠ ಇನ್ನೊಂದಿಲ್ಲ. ನಾವು ಶಾಸಕರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ಮಹಾದೇವಿ ಯಾರದೊ ಮಾತು ಕೇಳಿ 26ಕ್ಕೆ ಪುತ್ಥಳಿ ಸ್ಥಾಪನೆ ಬೇಡ ಎಂದು ಹೇಳುತ್ತಿರುವುದಕ್ಕೆ ನನ್ನ ಸಮ್ಮತಿ ಇಲ್ಲ’ ಎಂದು ಸ್ಪಷ್ಪಪಡಿಸಿದರು.

ಕಾರ್ಯಕ್ರಮದಲ್ಲಿ ಮಹಾದೇವಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹನುಮಂತಪ್ಪ ಸಹೋದರ ಗೋವಿಂದಪ್ಪ, ‘ಬರುವುದು, ಬಿಡುವುದು ಅವರಿಗೆ ಬಿಟ್ಟದ್ದು. ಕಾರ್ಯಕ್ರಮವಂತೂ ನಡೆಯುತ್ತದೆ’ ಎಂದರು.

ತಮ್ಮನಗೌಡ ಪಾಟೀಲ, ಗೋವಿಂದಪ್ಪ ಕೊಪ್ಪದ, ಲಕ್ಮಪ್ಪ ಕೊಪ್ಪದ ಹಾಜರಿದ್ದರು.

**

‘ರಾಜಕಾರಣ ಮಾಡಬೇಡಿ’

‘ಪತಿ ಮೃತಪಟ್ಟು ಫೆ.11ಕ್ಕೆ ಎರಡು ವರ್ಷವಾಗುತ್ತದೆ. ಆ ದಿನದಂದೇ ಪುತ್ಥಳಿ ಸ್ಥಾಪಿಸಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ, ಶಾಸಕ ಶಿವಳ್ಳಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಮಹಾದೇವಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಪುತ್ಥಳಿ ಕುಂದಗೋಳಕ್ಕೆ ಬರುವ ವಿಷಯ ಕೂಡ ನನಗೆ ಬೇಗನೆ ತಿಳಿಸಿಲ್ಲ. ಶಾಸಕರು ಮನೆಯ ಗಟ್ಟಿತನವನ್ನು ಒಡೆಯುತ್ತಿದ್ದಾರೆ. ದೇಶದ ಯೋಧರು ಶಾಸಕರಿಗಷ್ಟೇ ಸಂಬಂಧಪಟ್ಟವರಲ್ಲ. ಸೈನಿಕರ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಇದರ ಬಗ್ಗೆ ಮಾತನಾಡಲು ದೂರವಾಣಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry