ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರಜ್ಞೆ ಮೆರೆದ ಹೋರಾಟಗಾರರು

ಟೈರ್‌ಗೆ ಬೆಂಕಿ ಹಚ್ಚದೆ ನಡೆದ ಹುಬ್ಬಳ್ಳಿ ಬಂದ್‌; ‘ಪ್ರಜಾವಾಣಿ’ ವಿಶೇಷ ವರದಿಗೆ ಸ್ಪಂದನೆ
Last Updated 26 ಜನವರಿ 2018, 10:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಂದ್‌, ಪ್ರತಿಭಟನೆ ವೇಳೆ ಟೈರ್‌ ಸುಟ್ಟು, ಪರಿಸರ ಮಾಲಿನ್ಯಕ್ಕೆ ಕಾರಣವಾಗಬೇಡಿ, ಜನರ ಆರೋಗ್ಯ ಹಾಳು ಮಾಡಬೇಡಿ’ ಎಂಬ ಸಾರ್ವಜನಿಕರ ಅಭಿಪ್ರಾಯವನ್ನು ಆಧರಿಸಿದ್ದ ‘ಪ್ರಜಾವಾಣಿ’ಯ ವಿಶೇಷ ವರದಿಗೆ ಸ್ಪಂದಿಸಿದ ಮಹದಾಯಿ ಹೋರಾಟಗಾರರು ಗುರುವಾರ ನಡೆದ ಬಂದ್‌ ವೇಳೆ ಒಂದೇ ಒಂದು ಟೈರ್‌ಗೆ ಬೆಂಕಿ ಹಚ್ಚದೇ ಪ್ರತಿಭಟಿಸಿದರು.

ಬಂದ್‌, ಪ್ರತಿಭಟನೆಯ ಕಾವನ್ನು ಹೆಚ್ಚಿಸಲು ಮತ್ತು ಸರ್ಕಾರದ ಗಮನ ಸೆಳೆಯಲು ಪ್ರತಿಭಟನಾಕಾರರು ನಗರದ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಹತ್ತಾರು ಟೈರ್‌ಗಳನ್ನು ಸುಡುತ್ತಿದ್ದರು. ಇದರಿಂದ ದಟ್ಟ ಹೊಗೆ ಆವರಿಸಿ, ಇಡೀ ಪ್ರದೇಶ ಮಲಿನವಾಗುತ್ತಿತ್ತು. ಅಲ್ಲದೆ, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು.

ಟೈರ್‌ಗಳನ್ನು ಸುಡುವುದರಿಂದ ಪರಿಸರ, ಜನರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಕುರಿತು ಜ.10ರಂದು ಟೈರ್‌ ಭಸ್ಮ: ಆರೋಗ್ಯ, ರಸ್ತೆ, ಪರಿಸರ ಹಾಳು ತಲೆಬರಹದಡಿ ‘ಪ್ರಜಾವಾಣಿ’ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಆಗ ರೈತರು, ಕನ್ನಡಪರ ಹಾಗೂ ಇತರೆ ಸಂಘಟನೆಗಳ ಮುಖಂಡರು ‘ಇನ್ನು ಮುಂದೆ ಟೈರ್ ಸುಡುವುದಿಲ್ಲ’ ಎಂದು ವಾಗ್ದಾನ ಮಾಡಿ, ಅಭಿಪ್ರಾಯ ಹಂಚಿಕೊಂಡಿದ್ದರು.

ಗುರುವಾರ ಬಂದ್ ವೇಳೆ ಚನ್ನಮ್ಮ ವೃತ್ತದಲ್ಲಿ ಟೈರ್‌ಗಳನ್ನು ಸುಡಲು ಕೆಲವರು ಮುಂದಾದರಾದರೂ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಅದನ್ನು ತಡೆದು ಬೆಂಕಿಯನ್ನು ಆರಿಸಿದರು. ಇದನ್ನು ಹೊರತುಪಡಿಸಿ ಬೇರೆಲ್ಲೂ ಟೈರ್‌ಗಳನ್ನು ಸುಡಲಿಲ್ಲ. ಆದರೆ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ಪ್ರತಿಕೃತಿಗಳು ಮತ್ತು ಅಣಕು ಶವಯಾತ್ರೆ ಮಾಡಿ ಅವುಗಳನ್ನು ದಹಿಸಲಾಯಿತು.

ಪೊಲೀಸರ ಮನವಿಗೆ ಸ್ಪಂದನೆ:

ಕರ್ನಾಟಕ ಬಂದ್‌ ಶಾಂತಿಯುತವಾಗಿ ನಡೆಸುವ ಮೂಲಕ ಸಹಕರಿಸುವಂತೆ ರೈತ, ಕನ್ನಡಪರ ಮತ್ತು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಬುಧವಾರ ಸಂಜೆ ಸಭೆ ನಡೆಸಿ, ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ ಮನವಿ ಮಾಡಿದ್ದರು.

‘ಬಂದ್‌ ವೇಳೆ ಯಾವುದೇ ಕಾರಣಕ್ಕೂ ಟೈರ್‌ಗಳನ್ನು ಸುಡಬಾರದು. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ದಟ್ಟವಾಗಿ ಹೊಗೆ ಆವರಿಸುವುದರಿಂದ ಪರಿಸರದ ಮೇಲೆ ಹಾನಿಯಾಗಲಿದೆ. ದಟ್ಟ ಹೊಗೆಯನ್ನು ಸೇವಿಸುವ ಹೋರಾಟಗಾರರು, ಸಾರ್ವಜನಿಕರು ಮತ್ತು ಪೊಲೀಸರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಸಂಘಟಕರ ಮನವೊಲಿಸಿದ್ದರು.

‘ಈ ಹಿಂದೆ ನಡೆದ ಅನೇಕ ಪ್ರತಿಭಟನೆ ವೇಳೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಟೈರ್‌ಗಳನ್ನು ಸುಡಲಾಗುತ್ತಿತ್ತು. ಇದರಿಂದ ಆಗುವ ದುಷ್ಪರಿಣಾಮ ಕುರಿತ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿ ನಮ್ಮ ಕಣ್ತೆರೆಸಿದೆ. ಪರಿಸರ ಹಾಳು ಮಾಡದಂತೆ ಮುಂದೆ ಹೋರಾಟ ಮಾಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಹುಬ್ಬಳ್ಳಿ ಘಟಕದ ಅಧ್ಯಕ್ಷ ಅಮೃತ ಇಜಾರಿ ತಿಳಿಸಿದರು.

‘ಪರಿಸರ ಮತ್ತು ಜನರ ಆರೋಗ್ಯದ ಕಾಳಜಿ ನಮಗೂ ಇದೆ. ಇನ್ನು ಮುಂದೆ ಟೈರ್‌ಗಳನ್ನು ಸುಡದೇ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ’ ಎಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯ ಘಟಕ ಅಧ್ಯಕ್ಷ ಸಂಜೀವ ದುಮ್ಮಕನಾಳ ತಿಳಿಸಿದರು.

**

ಟೈರ್‌ ಸುಡದಂತೆ ‘ಪ್ರಜಾವಾಣಿ’ಯ ವರದಿ ಜನರ ಕಣ್ತೆರೆಸಿದೆ. ವರದಿ ಕುರಿತು ಹೋರಾಟಗಾರರ ಬಳಿ ಚರ್ಚಿಸಿದ್ದು ಫಲ ನೀಡಿದೆ.
–ಎಂ.ಎನ್. ನಾಗರಾಜ, ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT