ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಛಿತ

ಮಸ್ಕಿಯಲ್ಲಿ ಮಾನಪ್ಪ ವಜ್ಜಲ್‌ ಹೇಳಿಕೆ
Last Updated 26 ಜನವರಿ 2018, 11:04 IST
ಅಕ್ಷರ ಗಾತ್ರ

ಮಸ್ಕಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಜೊತೆಗೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಛಿತ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಹೇಳಿದರು.

ಗುರುವಾರ ಪಟ್ಟಣದಲ್ಲಿ ಭ್ರಮರಾಂಬ ದೇವಸ್ಥಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ಜೆಡಿಎಸ್‌ನಲ್ಲಿ ಉಸಿರು ಕಟ್ಟುವ ವಾತಾವರಣ ಇತ್ತು. ಪಕ್ಷದ ವರಿಷ್ಠರ ವರ್ತನೆಯಿಂದ ಬೇಸತ್ತು ನಾನು ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಮೂಲ ಪಕ್ಷವಾದ ಬಿಜೆಪಿಗೆ ಸೇರಿದ್ದೇನೆ’ ಎಂದರು.

‘ಸರ್ಕಾರದ ಯೋಜನೆಗಳಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ, ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ಕನಸಿನ ಮಾತು, ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಸ್ಪಷ್ಠ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ’ ಭವಿಷ್ಯ ನುಡಿದರು.

‘ಲಿಂಗಸುಗೂರಿನ ಬಿಜೆಪಿ ಮುಖಂಡ ಹಿಂದೆ ಬಿಎಸ್‌ಆರ್‌ನಿಂದ ಸ್ಪರ್ಧಿಸಿ ಬಿಜೆಪಿ ಬಂದವರು. ಅವರಿಂದ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲವು ಸಾಧಿಸಲು ಆಗಿಲ್ಲ’ ಎಂದರು.

‘ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತ ಎಂದರು, ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಭಾರಿ ಬದಲಾವಣೆಗಳು ಆಗಲಿದೆ’ ಎಂದರು.

ಬಿಜೆಪಿ ಮುಖಂಡ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ, ಭೋವಿ ಸಮಾಜದ ಅಧ್ಯಕ್ಷ ದುರಗಪ್ಪ ಚಿಗರಿ, ಕೃಷ್ಣ ಚಿಗರಿ, ಮೌನೇಶ ಮುರಾರಿ, ಜಿ. ವೆಂಕಟೇಶ ನಾಯಕ, ಮಲ್ಲಯ್ಯ ಛಾವಣಿ, ಮಲ್ಲಯ್ಯ ನಾಗರಾಳ, ನಾಗರಾಜ ಯಂಬಲದ ಇದ್ದರು.

ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಮಸ್ಕಿಗೆ ಬಂದ ಮಾನಪ್ಪ ವಜ್ಜಲ್‌ ಅವರನ್ನು ಭೋವಿ ಸಮಾಜದ ಯುವಕರು ಹೂ ಮಾಲೆ ಹಾಕಿ ಸ್ವಾಗತಿಸಿದರು.

***
ಬಿಜೆಪಿ ಬಲವರ್ಧನೆಗೆ ಶ್ರಮಿಸಲು ಮನವಿ

ಲಿಂಗಸುಗೂರು:  ‘ಬಿಜೆಪಿ ಸೇರ್ಪಡೆಯಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಂದಿರಬಹುದು. ಅಂತಹ ವಿಚಾರಗಳಿಗೆ ಕಿವಿಗೊಡದೆ ಹಳಬರು, ಹೊಸಬರು ಎನ್ನದೆ ಒಗ್ಗಟ್ಟಾಗಿ ಬಿಜೆಪಿ ಬಲವರ್ಧನೆಗೆ ಶ್ರಮಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಶರಣಪ್ಪಗೌಡ ಮನವಿ ಮಾಡಿದರು.

ಗುರುವಾರ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು, ‘ಮಾಜಿ ಶಾಸಕರಾದ ಮಾನಪ್ಪ ವಜ್ಜಲ, ಡಾ. ಶಿವರಾಜ ಪಾಟೀಲ ಸೇರ್ಪಡೆ ಬಿಜೆಪಿಗೆ ಬಲ ತಂದುಕೊಟ್ಟಿದೆ. ಪಕ್ಷದ ಸಂಘಟನೆಗೆ ಹಗಲಿರಳು ಶ್ರಮಿಸಿದ ಕಾರ್ಯಕರ್ತರನ್ನು ಕಡೆಗಣಿಸದೆ ಒಂದೆ ಕುಟುಂಬ ಸದಸ್ಯರಂತೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಸಂಘಟಿತರಾಗಬೇಕು’ ಎಂದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಆರ್‌. ತಿಮ್ಮಯ್ಯ ಮಾತನಾಡಿ, ‘ಮಾನಪ್ಪ ವಜ್ಜಲ ಬಿಜೆಪಿಗೆ ಹೊಸಬರಲ್ಲ. ಬಿಟ್ಟು ಹೋಗಿದ್ದ ಮನೆಗೆ ಮರಳಿ ಬಂದಿದ್ದಾರೆ. ಕ್ಷೇತ್ರದಲ್ಲಿನ ಎಲ್ಲ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾನಪ್ಪ ವಜ್ಜಲ ಅವರು ಗೆಲವು ಸಾಧಿಸುವ ಜೊತೆಗೆ ಹೈಕಮಾಂಡ್‌ನ 150 ಸ್ಥಾನಗಳ ಗುರಿಗೆ ಮುಂದಾಗಬೇಕು’ ಎಂದು ಹೇಳಿದರು.

ಮಾನಪ್ಪ ವಜ್ಜಲ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರಿಂದ ದಿನಾಂಕ ನಿಗದಿಪಡಿಸಿ ತಮ್ಮ ಹಳೆಯ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಪಕ್ಷಕ್ಕೆ ಸ್ವಾಗತಿಸಿಕೊಳ್ಳುವೆ. ಈ ಮೊದಲಿನಂತೆ ತಮ್ಮೆಲ್ಲರ ವಿಶ್ವಾಸ ಗಳಿಸಿ ಬಿಜೆಪಿ ಸಾಧನೆಗಳನ್ನು ಮನೆ ಮನೆಗೆ ತಲುಪಿಸೋಣ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಜಿಲ್ಲಾ ರೈತ ಮೋರ್ಚಪ್ರಧಾನಕಾರ್ಯದರ್ಶಿ ಪ್ರಭುಸ್ವಾಮಿ ಅತ್ನೂರು, ಮುಖಂಡರಾದ ಟಿ.ಆರ್‌. ನಾಯ್ಕ, ಶಾಂತಕುಮಾರ ಪಟ್ಟೇದ, ಶಶಿಧರ ಮಸ್ಕಿ, ಲಕ್ಷ್ಮಿಕಾಂತರೆಡ್ಡಿ ಮುನ್ನೂರು, ಸಂಗಮೇಶ ಹತ್ತಿಗುಡ್ಡ, ಡಾ. ಶಿವಬಸಪ್ಪ ಹೆಸರೂರು, ಜಗನ್ನಾಥ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT