ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

7
ಎಂದಿನಂತೆ ಜನಜೀವನ, ಮಾರುಕಟ್ಟೆಯಲ್ಲಿ ವಹಿವಾಟು

ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

Published:
Updated:
ಬಂದ್ ಕರೆಗೆ ನೀರಸ ಪ್ರತಿಕ್ರಿಯೆ

ರಾಯಚೂರು: ಮಹದಾಯಿ ನೀರಿಗಾಗಿ ನಡೆದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳು ಹಾಗೂ ರೈತ ಸಂಘಟನೆ ಸಾಂಕೇತಿಕ ಪ್ರತಿಭಟನೆ ನಡೆಸಿ, ನದಿ ನೀರಿನ ಸಮಸ್ಯೆ ಪರಿಹರಿಸುವಂತೆ ಪ್ರಧಾನಮಂತ್ರಿಗೆ ಒತ್ತಾಯಿಸಿದರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಮೂಲಕ ಬೇರೆ ಜಿಲ್ಲೆಗೆ ಸಂಚರಿಸಬೇಕಿದ್ದ ಸರ್ಕಾರಿ ಬಸ್‌ಗಳ ಸೇವೆಯನ್ನು ರದ್ದುಪಡಿಸಲಾಗಿತ್ತು. ಇನ್ನುಳಿದಂತೆ ಸರ್ಕಾರಿ ಬಸ್‌ಗಳ ಸಂಚಾರ ಸೇವೆಗೆ ಯಾವುದೇ ತೊಂದರೆ ಆಗಲಿಲ್ಲ. ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಜನಜೀವನದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕಗಳು ಶೆಟ್ಟಿಬಾವಿ ವೃತ್ತದಿಂದ ಭಗತ್‌ಸಿಂಗ್‌ ವೃತ್ತದವರೆಗೂ ಪ್ರತಿಭಟನೆ ನಡೆಸಿದವು. ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಹಾಗೂ ನೀರಾವರಿ ಸಚಿವ ವಿನೋದ ಪಾಲೇಕರ್‌ ಅವರ ಪ್ರತಿಕೃತಿಗಳಿಗೆ ಚಪ್ಪಲಿ ಏಟು ನೀಡಿ ಘೋಷಣೆಗಳನ್ನು ಕೂಗಿದರು. ಆನಂತರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ದಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಜೈನ್‌ ಮಾತನಾಡಿ, ‘ಗೋವಾದ ಮುಖ್ಯಮಂತ್ರಿ ಎರಡು ನಾಲಿಗೆ ಹೊಂದಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಮಹದಾಯಿ ನೀರು ಹರಿಸಬೇಕು ಎಂದು ಹೇಳಿಕೆ ನೀಡಿದ್ದ ಮರುದಿನವೆ ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

‘ಗೋವಾ ನೀರಾವರಿ ಸಚಿವರ ಹೇಳಿಕೆ ಖಂಡನೀಯ. ಕನ್ನಡಿಗರನ್ನು ಅವಮಾನಿಸಿದ್ದಕ್ಕಾಗಿ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಗೂ ಬಳೆಗಳನ್ನು ಹಾಕಿದ್ದೇವೆ. ಕೂಡಲೇ ಅವರನ್ನು ಗೋವಾದಿಂದ ಗಡಿಪಾರು ಮಾಡಬೇಕು’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡ ಚಾಮರಸ ಮಾಲಿಪಾಟಿಲ ಮಾತನಾಡಿ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಅರ್ಧಗಂಟೆಯಲ್ಲಿ ಸಮಸ್ಯೆ ಇತ್ಯರ್ಥ ಮಾಡಬಹುದು. ಆದರೆ ನೀರಿನ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಪಕ್ಷಗಳು ಪ್ರಾಮಾಣಿಕವಾಗಿ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು.

ಕುಡಿಯುವುದಕ್ಕೆ ಬೇಕಾಗಿರುವುದು ಕೇವಲ 7.5 ಟಿಎಂಸಿ ನೀರು. ಮಹದಾಯಿ ನದಿಯಿಂದ ಕೂಡಲೇ ಗೋವಾ ಸರ್ಕಾರವು ನೀರು ಒದಗಿಸಬೇಕು. ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಮುಂದುವರಿಸಿ ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ವಶಕ್ಕೆ ಪಡೆದು, ಆನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

ಮುಖಂಡರಾದ ವಿ.ಎ.ಮಾಲಿಪಾಟೀಲ, ಮಲ್ಲಿಕಾರ್ಜುನ, ಎಂ.ಆರ್‌.ಭೇರಿ, ಜಾನ್‌ವೇಸ್ಲಿ, ಬಾಬಾ ಅಸ್ಲಾಂ ಇದ್ದರು.

ಕಾರ್ಯಕರ್ತರ ಬಂಧನ, ಬಿಡುಗಡೆ:

ಮಹದಾಯಿ ನದಿ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ರೆಡ್ಡಿ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕೂಡಲೇ ಪೊಲೀಸರು ಅವರನ್ನು ಬಂಧಿಸಿ, ಆನಂತರ ಬೇರೆ ಸ್ಥಳದಲ್ಲಿ ಬಿಡುಗಡೆ ಮಾಡಿದರು.

ಜಿಲಾನಿಪಾಷಾ, ಬಸನಗೌಡ, ವಿರುಪಾಕ್ಷಿ, ಚಾಂದಪಾಷಾ, ಕೊಂಡಪ್ಪ, ಸೈಯದ್‌ ಶಹಾನವಾಜ್‌, ಸಾದಿಕ್‌, ಫಿರೋಜ್‌, ಅಬೂಬಕರ್‌, ರವಿಕುಮಾರ ಹೊಸಪೇಟೆ, ಅಜೀಜ್‌ಪಾಷಾ, ಗೋಪಾಲ, ಇರ್ಫಾನ್‌ ಚೌದರಿ, ಅನಿಲಕುಮಾರ, ಮಲ್ಲಯ್ಯ ಇದ್ದರು.

***

ರಾಜ್ಯದ ಜನರನ್ನು ಪ್ರತಿನಿಧಿಸುವ ಸಂಸದರು ಈ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸುತ್ತಿಲ್ಲ. ಜನರ ನೋವಿಗೆ ಸರಿಯಾಗಿ ಸ್ಪಂದಿಸದ ಸಂಸದರ ನಿಲುವು ಖಂಡನೀಯ.

ಅಶೋಕ ಜೈನ್‌, ಅಧ್ಯಕ್ಷ, ಕರವೇ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry