ಹೆಸರಲ್ಲೇ ಚೂರಿ ಇರುವಂಥ ಊರು...

7
ಚೂರಿ ಕಟ್ಟೆ

ಹೆಸರಲ್ಲೇ ಚೂರಿ ಇರುವಂಥ ಊರು...

Published:
Updated:
ಹೆಸರಲ್ಲೇ ಚೂರಿ ಇರುವಂಥ ಊರು...

ಸಿನಿಮಾ: ಚೂರಿ ಕಟ್ಟೆ

ನಿರ್ಮಾಪಕರು: ಎಸ್‌. ನಯಾಜುದ್ದೀನ್‌, ಎಂ. ತುಳಸಿರಾಮುಡು

ನಿರ್ದೇಶಕ: ರಾಘು ಶಿವಮೊಗ್ಗ

ತಾರಾಬಳಗ: ಪ್ರವೀಣ್‌ ತೇಜು, ಪ್ರೇರಣಾ, ಬಾಲಾಜಿ ಮನೋಹರ್‌, ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ, ಮಂಜುನಾಥ್‌ ಹೆಗಡೆ

ಆ ಊರಿನ ಹೆಸರಿನಲ್ಲಿಯೇ ಚೂರಿ ಇದೆ. ಚೂರಿಗಂಟಿಕೊಂಡ ನೆತ್ತರೂ, ಆ ನೆತ್ತರ ವಾಸನೆಯನ್ನು ಆಘ್ರಾಣಿಸುವ ಕ್ರೌರ್ಯವೂ ಇದೆ. ಚೂರಿಗಿಂತ ಮಿಗಿಲಾಗಿ ದೂರದಿಂದಲೇ ದೇಹ ಸೀಳುವ ಗುಂಡುಗಳ ಮೊರೆತ, ಆ ಮೊರೆತದ ನಡುವೆ ಜರ್ಜರಿತವಾಗುವ ನವಿರು ಪ್ರೇಮದ ಮಿಡಿತವಿದೆ.

ಮನುಷ್ಯನ ವಿಕಾರಗಳನ್ನೆಲ್ಲ ಒಡಲೊಳಗಿಟ್ಟುಕೊಂಡು ಒಳಗೊಳಗೇ ಗಾಯಗೊಂಡು ದುಗುಡ ತುಂಬಿಕೊಂಡಿರುವ ಮಲೆನಾಡಿನ ಕಾಡಿದೆ. ತೆರೆದ ಹಾಗೇ ಅಚಾನಕ್ಕಾಗಿ ಮುಚ್ಚಿಹೋಗುವ, ನಿರಾಳಭಾವದಷ್ಟೇ ನಿಗೂಢ ಭಯವನ್ನೂ ಹುಟ್ಟಿಸುವ ದಟ್ಟ ಕಾಡಿನಷ್ಟೇ ಥ್ರಿಲ್ಲರ್‌ ಹುಟ್ಟಿಸುವ ಕಥೆಯನ್ನು ‘ಚೂರಿ ಕಟ್ಟೆ’ಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಘು ಶಿವಮೊಗ್ಗ.

ಶೀರ್ಷಿಕೆಯಲ್ಲಿರುವ ‘ಚೂರಿ’ಯನ್ನು ಈ ಸಿನಿಮಾ ವಿಶ್ಲೇಷಣೆಗೆ ಉಪಮೆಯಾಗಿಯೂ ಬಳಸಬಹುದು. ಇದು ಗಟ್ಟಿ ಹಿಡಿಕೆ ಇರುವ ಚೂರಿ. ಬುಡದಲ್ಲಿ ಕೊಂಚ ಮೊಂಡು. ಮುಂದೆ ಹೋಗುತ್ತ ಹೋಗುತ್ತ ಹರಿತಗೊಳ್ಳುತ್ತ, ಕೊನೆಯಲ್ಲಿ ಮಿರಿಮಿರಿ ಮಿಂಚು. ಮತ್ತೆ ಈ ಚೂರಿಗೆ ತತ್ವದ ದ್ವಂದ್ವವಿಲ್ಲ, ಸಂದೇಶ ನೀಡಲೇಬೇಕು ಎಂಬ ಜರೂರಿಲ್ಲ.

ಪ್ರಥಮಾರ್ಧದಲ್ಲಿ ಅನಗತ್ಯ ಬಿಲ್ಡಪ್‌, ಮಸಾಲೆಗೆ ಇರಲಿ ಎಂದು ಸೇರಿಸಿದ ಒಂದು ಹಾಡು, ಕಥೆಯ ಭಿತ್ತಿಯಿಂದ ಹೊರಗೇ ನಿಲ್ಲುವ ಒಂದೆರಡು ದೃಶ್ಯಗಳಿಂದ ಚಿತ್ರಕಥೆ ಕೊಂಚ ಜಾಳುಜಾಳಾಗಿದೆ. ನಾಯಕನೂ ತನ್ನ ಅಸಹಜ ಮಾತು, ವರ್ತನೆಗಳಿಂದ ಕೃತಕವಾಗಿಯೇ ಕಾಣುತ್ತಾನೆ. ಕೆಲವು ಕಡೆಗಳಲ್ಲಿ ಸಂಭಾಷಣೆಗಳೂ ಕೊಂಚ ಅಸ್ಪಷ್ಟವಾಗಿ ಕೇಳಿಸುತ್ತವೆ.

ಚೂರಿ ಕಟ್ಟೆ ಎಂಬ ಊರಿನಲ್ಲಿ ಪ್ರಕಾಶ ಶೆಟ್ಟಿ (ಶರತ್ ಲೋಹಿತಾಶ್ವ) ನಿರಾತಂಕವಾಗಿ ಗಂಧದ ಕಳ್ಳಸಾಕಣೆ ಮಾಡುತ್ತಿರುತ್ತಾನೆ. ಅವನ ಸಹಾಯಕ ಸೀನು (ಬಾಲಾಜಿ ಮನೋಹರ್). ಅಲ್ಲಿನ ಭ್ರಷ್ಟ ಅರಣ್ಯಾಧಿಕಾರಿಯೂ ಅವನ ಜತೆ ಶಾಮೀಲಾಗಿರುತ್ತಾನೆ. ಆ ಊರಿಗೆ ಬರುವ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ರವಿಕಾಂತ್‌ ಅವರ ದಂಧೆಗೆ ಅಡ್ಡಗಾಲಾಗುತ್ತಾನೆ. ಅಲ್ಲಿಂದ ಪೊಲೀಸ್‌ ಮತ್ತು ಖೂಳರ ನಡುವಿನ ಕಣ್ಣಾಮುಚ್ಚಾಲೆಯಾಟ ಶುರು. ತನ್ನ ಗೆಳತಿ ಕಲಾಳನ್ನು ಮೆಚ್ಚಿಸಲಿಕ್ಕಾಗಿ ಆದಿ, ಪೊಲೀಸ್‌ ರಿವಾಲ್ವರ್‌ ಕದಿಯುವ ಮೂಲಕ ಆ ಆಟದಲ್ಲಿ ಗೊತ್ತಿಲ್ಲದೆಯೇ ಸೇರಿಕೊಂಡು ಬಿಡುತ್ತಾನೆ. ನಂತರ ಆಗುವ ಅವಘಡಗಳಲ್ಲೆಲ್ಲ ಪರೋಕ್ಷವಾಗಿ ಅವನಿಗೂ ಪಾಲು ಸಲ್ಲುತ್ತಲೇ ಹೋಗುತ್ತದೆ.

ಮೈಮರೆತು ನೋಡಲು ಬೇಕಿರುವಷ್ಟು ತಿರುವುಗಳಿರುವ ಕಥೆಯನ್ನು ಬಿಗಿಯಾಗಿ ನಿರೂಪಿಸುತ್ತಾ ಹೋಗುವ ನಿರ್ದೇಶಕರ ಪ್ರತಿಭೆ ಪ್ರಖರಗೊಳ್ಳುವುದು ದ್ವಿತೀಯಾರ್ಧದಲ್ಲಿ. ಅಲ್ಲಿಗೆ ಅದು ನಾಯಕಕೇಂದ್ರದಿಂದ ಕೊಂಚ ಜರುಗಿ ಕಥನಕೇಂದ್ರಿತ ‘ವೈಡ್ ಆ್ಯಂಗಲ್‌’ಗೆ ಹಿಗ್ಗುತ್ತದೆ.

ನಿರೂಪಣೆಯಲ್ಲಿನ ಬಂಧಕ್ಕೆ ರೋಚಕತೆಯ ಹೊಳಪು ನೀಡಿರುವುದು ನಾಬಿನ್‌ ಪೌಲ್‌ ಅವರ ಹಿನ್ನೆಲೆ ಸಂಗೀತ. ಆರಂಭದಲ್ಲಿ ಮಂದ್ರಸ್ಥಾಯಿಯಲ್ಲಿದ್ದುಕೊಂಡು ಕೊನೆಯಲ್ಲಿ ತಾರಕಕ್ಕೆ ತಲುಪುವ ಅವರ ಸಂಯೋಜನೆಯೇ ಸಿನಿಮಾದ ಸಣ್ಣಪುಟ್ಟ ದೋಷಗಳನ್ನು ಮುಚ್ಚಿಬಿಡುವಷ್ಟು ಶಕ್ತವಾಗಿದೆ. ವಾಸುಕಿ ವೈಭವ್‌ ಅವರ ಸಂಯೋಜನೆಯ ಹಾಡುಗಳೂ ತಾಜಾತನದಿಂದ ಮನಸಲ್ಲಿ ಉಳಿಯುತ್ತವೆ. ಮಲೆನಾಡಿನ ರಾತ್ರಿಯನ್ನೂ, ನೀರಬಾನಿಯಲ್ಲಿ ಕದಡಿಹೋದ ಮುಖಬಿಂಬವನ್ನೂ, ಮಳೆಹನಿಗಳಲ್ಲಿ ಹೊಳೆಯುತ್ತ ನಡೆಯುವ ಹೊಡೆದಾಟವನ್ನೂ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ ಅದ್ವೈತ ಗುರುಮೂರ್ತಿ.

ಇಡೀ ಚಿತ್ರವನ್ನು ಆವರಿಸಿಕೊಂಡಿರುವುದು ಬಾಲಾಜಿ ಮನೋಹರ್‌. ಸಿನಿಮೀಯ ಕ್ರೌರ್ಯಾಭಿವ್ಯಕ್ತಿಗೆ ಹೇಳಿಮಾಡಿಸಿದಂತಿರುವ ಅವರ ರೂಪವನ್ನೂ, ಪ್ರತಿಭೆಯನ್ನೂ ನಿರ್ದೇಶಕರು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿ ಅಚ್ಯುತ್‌ ಕುಮಾರ್‌ ಸಹ ಅತಿರೇಕವಿಲ್ಲದ ಪ್ರಖರ ಅಭಿನಯದಿಂದ ಇಷ್ಟವಾಗುತ್ತಾರೆ. ಶರತ್‌ ಲೋಹಿತಾಶ್ವ, ಮಂಜುನಾಥ ಹೆಗಡೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಂಥ ಘಟಾನುಘಟಿ ಕಲಾವಿದರ ನಡುವೆಯೂ ಪ್ರವೀಣ್‌ ತೇಜ ಕಳೆಗುಂದದಂತೆ ನಟಿಸಿದ್ದಾರೆ. ಒಬ್ಬ ಭರವಸೆಯ ನಟನನ್ನು ಅವರಲ್ಲಿ ಕಾಣಬಹುದು. ಮಲೆನಾಡಿನ ಹುಡುಗಿಯಾಗಿ ಕಾಣಿಸಿಕೊಂಡಿರುವ ಪ್ರೇರಣಾ ತಮಗೆ ದೊರೆತ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಒಟ್ಟಾರೆ, ಮೊದಲರ್ಧದಲ್ಲಿ ಕೊಂಚ ತಾಳ್ಮೆಯಿಂದ ಕೂತಿದ್ದರೆ ದ್ವಿತಿಯಾರ್ಧದಲ್ಲಿ ಮೈಮರೆತು ನೋಡಬಹುದಾದ ಚಿತ್ರವಿದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry