ಮನುಸ್ಮೃತಿಯೇ ಸಂವಿಧಾನ; ಆರ್‌ಎಸ್‌ಎಸ್‌ ಹುನ್ನಾರ

7
‘ಭಾರತ ಸಂವಿಧಾನ ವರ್ಸಸ್‌ ಕೋಮುವಾದಿ ರಾಜಕಾರಣ’ ವಿಚಾರ ಸಂಕಿರಣದಲ್ಲಿ ಜಿ.ಎನ್‌. ನಾಗರಾಜ್ ಆರೋಪ

ಮನುಸ್ಮೃತಿಯೇ ಸಂವಿಧಾನ; ಆರ್‌ಎಸ್‌ಎಸ್‌ ಹುನ್ನಾರ

Published:
Updated:
ಮನುಸ್ಮೃತಿಯೇ ಸಂವಿಧಾನ; ಆರ್‌ಎಸ್‌ಎಸ್‌ ಹುನ್ನಾರ

ಮೈಸೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮನುಸ್ಮೃತಿಯನ್ನು ದೇಶದ ಸಂವಿಧಾನ ಮಾಡಲು ಹೊರಟಿದೆ ಎಂದು ಸಿಪಿಎಂ ಮುಖಂಡ ಜಿ.ಎನ್‌. ನಾಗರಾಜ್ ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ‘ಭಾರತ ಸಂವಿಧಾನ ವರ್ಸಸ್‌ ಕೋಮುವಾದಿ ರಾಜಕಾರಣ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದಲೂ ಸಂವಿಧಾನ ಮತ್ತು ಮನುಸ್ಮೃತಿಯ ನಡುವೆ ಸಂಘರ್ಷ ನಡೆಯುತ್ತಿದೆ. 1949ರ ನವೆಂಬರ್‌ 25ರಂದು ಸಂವಿಧಾನ ಅಂಗೀಕಾರವಾಗಬೇಕಾದರೆ ಆರ್‌ಎಸ್‌ಎಸ್‌ ಪತ್ರಿಕೆಯಲ್ಲಿ ‘ಈ ಸಂವಿಧಾನ ಒಪ್ಪೋದಿಲ್ಲ’ ಎಂದು ಬರೆಯುತ್ತಾರೆ. ‘ಸಂವಿಧಾನದಲ್ಲಿ ಮನುಸ್ಮೃತಿ ಬಗ್ಗೆ ಉಲ್ಲೇಖವಿಲ್ಲ, ಶ್ಲೋಕಗಳನ್ನು ಸೇರಿಸಿಲ್ಲ, ಮನುಸ್ಮೃತಿ ನಮ್ಮ ಸಂವಿಧಾನ. ಈ ಸಂವಿಧಾನ ಸಂವಿಧಾನವೇ ಅಲ್ಲ’ ಎಂದರು. ಸಂವಿಧಾನ ಜಾರಿಗೆ ಬರುವುದನ್ನು ತಪ್ಪಿಸಲು ಪ್ರಯತ್ನಿಸಿದ್ದರು ಎಂದು ಟೀಕಿಸಿದರು.

1949ರ ಡಿಸೆಂಬರ್‌ 22ರ ಮಧ್ಯರಾತ್ರಿ ಬಾಬರಿ ಮಸೀದಿ ಒಳಗೆ ರಾಮನ ಮೂರ್ತಿ ಇಟ್ಟು ಕೋಮುಗಲಭೆ ಉಂಟು ಮಾಡುವ ತಂತ್ರ ಹೆಣೆಯುತ್ತಾರೆ. ಆದರೆ ಅದು ಫಲಿಸದೆ ಸಂವಿಧಾನ ಜಾರಿಯಾಯಿತು. ನಂತರ ಬಾಬರಿ ಮಸೀದಿ ಧ್ವಂಸವನ್ನೇ ಅಧಿಕಾರಕ್ಕೆ ಬರಲು ಮೆಟ್ಟಿಲು ಮಾಡಿಕೊಂಡರು. ಅಧಿಕಾರಕ್ಕೆ ಬಂದು ಪ್ರತಿನಿತ್ಯ ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸಂವಿಧಾನ ನುಂಗಲಾರದ, ಉಗುಳಲಾರದ ಕೆಂಡವಾಗಿದೆ. ಇದನ್ನು ಬದಲಾಯಿಸಿ ಮನುಸ್ಮೃತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಜಾತ್ಯತೀತ, ಪ್ರಜಾಪ್ರಭುತ್ವ, ಸಮಾನತೆ ತತ್ವ ನಮ್ಮ ದೇಶದ್ದಲ್ಲ. ವರ್ಣಾಶ್ರಮ ಧರ್ಮವೇ ನಮ್ಮ ಸಂಸ್ಕೃತಿ ಎಂದು ಹೇಳುತ್ತಾರೆ. ಜಾತಿವ್ಯವಸ್ಥೆಯೇ ನಮ್ಮ ಸಂಸ್ಕೃತಿ. ಜಾತಿ ಬೇರೆ ಬೇರೆಯಾಗಿರಬೇಕು, ‘ಕಕ್ಕಸು ತೆಗೆಯುವವರು ಅದನ್ನೇ ಮಾಡಬೇಕು, ಅದು ಅವರ ಧರ್ಮ, ಅದರಿಂದ ಮೋಕ್ಷ ಸಿಗುತ್ತದೆ. ಅದನ್ನು ತಪ್ಪಿಸಬೇಡಿ’ ಎಂದು ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದರು. ಆದರೆ ಇವರೇ ಆ ಕೆಲಸ ಮಾಡಲಿ, ಆ ಮೋಕ್ಷ ಇವರಿಗೇ ಸಿಗಲಿ ಎಂದು ವ್ಯಂಗ್ಯವಾಡಿದರು.

ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಪಂಪನ ಬನವಾಸಿ ನಾಡಿನಿಂದ ಬಂದ ಕೇಂದ್ರ ಸಚಿವರೊಬ್ಬರು ಸಂವಿಧಾನದ ಬಗ್ಗೆ ಅನಾಗರಿಕರಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ಣ ವ್ಯವಸ್ಥೆ, ಅಸ್ಪೃಶ್ಯತೆ, ಜಾತಿಪದ್ಧತಿ ಹಾಗೂ ಲಿಂಗಭೇದ ನೀತಿಯಂಥ ಅಸಮಾನತೆ ವಿರುದ್ಧ ಸಾವಿರಾರು ವರ್ಷಗಳಿಂದ ಹೋರಾಟ ನಡೆದಿದೆ. ಬಹಳ ವರ್ಷಗಳ ಕಾಲ ಪುರೋಹಿತರೇ ದೇವರೆಂದು ನಂಬಲಾಗಿತ್ತು. ಪುರೋಹಿತಶಾಹಿ ವರ್ಗದ ವಿರುದ್ಧ ಬುದ್ಧ, ಬಸವ ಧ್ವನಿ ಎತ್ತಿದರು ಎಂದು ಹೇಳಿದರು.

ಕುವೆಂಪು ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೀತಿ ಶ್ರೀಮಂಧರಕುಮಾರ್‌, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ಧಿ ಇದ್ದರು.

***

ಆರ್‌ಎಸ್‌ಎಸ್‌ ಅನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಕರೆಯುತ್ತಾರೆ, ನಾವೆಲ್ಲ ರಾಷ್ಟ್ರೀಯ ಸರ್ವನಾಶ ಸಂಘ ಎಂದು ಕರೆಯುತ್ತೇವೆ.

ಜಿ.ಎನ್‌.ನಾಗರಾಜ್‌, ಸಿಪಿಐ (ಎಂ) ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry