ಸಂವಿಧಾನ: ಹಗುರ ಮಾತು ಸಲ್ಲದು

7
ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ವಾಗ್ದಾಳಿ

ಸಂವಿಧಾನ: ಹಗುರ ಮಾತು ಸಲ್ಲದು

Published:
Updated:
ಸಂವಿಧಾನ: ಹಗುರ ಮಾತು ಸಲ್ಲದು

ಚಿಂಚೋಳಿ: ‘ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನತೆ ಮತ್ತು ಸ್ವಾಭಿಮಾನದ ಬದುಕು ನೀಡಿದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವವರು ಅವಿವೇಕಿಗಳು’ ಎಂದು ಪ್ರವಾ ಸೋದ್ಯಮ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಗುರುವಾರ ತಾಲ್ಲೂಕಿನ ಹಸರಗುಂಡಗಿಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಮಾಡಿ ಅವರು ಮಾತನಾಡಿದರು.

‘ಭಾರತಕ್ಕೆ ಒಂದು ಸಮರ್ಥ ಸಂವಿಧಾನ ತಂದುಕೊಡಲು ಅಂಬೇಡ್ಕರ್ ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಜಗತ್ತಿನ ಹಲವಾರು ರಾಷ್ಟ್ರಗಳ ಸಂವಿಧಾನ ಅಧ್ಯಯನ ನಡೆಸಿ, ಭಾರತಕ್ಕೆ ಅತ್ಯಂತ ಸೂಕ್ತವಾದ ಸಂವಿಧಾನವನ್ನು ಅವರು ನೀಡಿದರು.

ಅಂದಿನ ಸಂಸತ್ತಿನಲ್ಲಿ 2ವರ್ಷ 11 ತಿಂಗಳು ಚರ್ಚೆ ನಡೆಸಿ, ಸುಮಾರು 3,500 ಪ್ರಶ್ನೆಗಳಿಗೆ 20ಸಾವಿರ ಪುಟಗಳ ಉತ್ತರಗಳನ್ನು ನೀಡಿದರು. ಆಗ ದೇಶ ಸಂವಿಧಾನವನ್ನು ಒಪ್ಪಿಕೊಂಡಿದೆ. ಆದರೆ, ಇದರ ಅರಿವು ಇಲ್ಲದ ಕೆಲವರು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದರು.

ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಬಗ್ಗೆ ಏನೆಲ್ಲಾ ಹೇಳುತ್ತಾರೆ. ಆದರೆ, ತಮ್ಮ ಸಂಪುಟದ ಸಚಿವರ ಹೇಳಿಕೆ ಕುರಿತು ಮೌನವಹಿಸಿದ್ದು ಏಕೆ? ಎಂದು ಪ್ರಶ್ನಿಸಿದ ಪ್ರಿಯಾಂಕ್‌, ‘ಇದೇನಾ ನಿಮ್ಮ ಸಬಕಾ ಸಾಥ್; ಸಬಕಾ ವಿಕಾಸ್’ ಎಂದು ವ್ಯಂಗ್ಯವಾಡಿದರು.

ಸಮರಂಭ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕಾನೂನು ಪಂಡಿತರಾಗಿದ್ದ ಅಂಬೇಡ್ಕರ್ ಅವರು ಸ್ವಾತಂತ್ರ್ಯ ನಂತರ ಭಾರತ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಬಗ್ಗೆ ಸಮರ್ಥ ಸಂವಿಧಾನ ನೀಡಿ ದಾರಿ ತೋರಿದ್ದಾರೆ. ಆದರೆ, ಈ ಬಗ್ಗೆ ತಿಳಿದುಕೊಳ್ಳದ ಅಜ್ಞಾನಿಗಳು ಸಂವಿಧಾನ ಬದಲಾವಣೆಯ ಮಾತುಗಳಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್ ಮಾತನಾಡಿ, ‘ಮತದಾರರ ದಿನಾಚರಣೆಯ ದಿನದಂದು ಹಸರಗುಂಡಗಿಯಲ್ಲಿ ಅಂಬೇಡ್ಕರ್ ಮೂರ್ತಿ ಅನಾವರಣ ಮಾಡಿದ್ದು ಪ್ರಸ್ತುತವಾಗಿದೆ’ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಭೀಮರಾವ್ ತೇಗಲತಿಪ್ಪಿ ಮಾತನಾಡಿದರು. ಗೌತಮ ಪಾಟೀಲ, ದೀಪಕನಾಗ ಪುಣ್ಯಶೆಟ್ಟಿ, ರಾಜೇಶ ಗುತ್ತೇದಾರ, ಜಗದೇವ ಗುತ್ತೇದಾರ, ನಿಂಬೇಣಪ್ಪ ಸಾಹು, ರೇಣುಕಾ ಅಶೋಕ ಚವ್ಹಾಣ, ಸಲ್ಮಾ ಶೇಖ್, ಅನುಸಾಬಾಯಿ, ಅಸುಯಾಬಾಯಿ, ಅನಿಲ ಜಮಾದಾರ, ಗೋಪಾಲರಾವ್ ಕಟ್ಟಿಮನಿ, ವಿಜಯಕುಮಾರ ಗಂಗನಪಳ್ಳಿ, ಮಧುಸೂದನರೆಡ್ಡಿ, ಜಗನ್ನಾಥ ಈದಲಾಯಿ, ರಾಮರಾವ್ ರಾಠೋಡ್, ಹಣಮಂತ ರಾಜಗಿರಾ, ಬಲಭೀಮ ನಾಯಕ್, ಅಣವೀರಯ್ಯ, ಸಂಗಯ್ಯಸ್ವಾಮಿ, ಮಲ್ಲಿಕಾರ್ಜುನ ರಾಮತೀರ್ಥಕರ, ರಾಜು ಪವಾರ, ರಾಮಶೆಟ್ಟಿ ಪವಾರ ಇದ್ದರು. ಗ್ರಾ.ಪಂ. ಅಧ್ಯಕ್ಷ ಶಾಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಗದೇವ ಇದ್ದರು.

**

ಅಂಬೇಡ್ಕರ್‌ ಬಗ್ಗೆ ಏನೆಲ್ಲಾ ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು, ಸಂವಿಧಾನ ಬದಲಾವಣೆಗೆ ನಾವು ಬಂದಿರೋದು ಎಂದು ಕೇಂದ್ರ ಸಂಪುಟದ ಸಚಿವರೊಬ್ಬರು ಹೇಳಿದರೆ ಮೌನ ವಹಿಸಿರುವುದೇಕೆ. ಇದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ.

–ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ

*

ಹೈಕ ಭಾಗದಲ್ಲಿ ನಮ್ಮ ನಾಯಕರಾದ ವೀರೇಂದ್ರ ಪಾಟೀಲ, ಧರಂಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಅಭಿವೃದ್ಧಿ ಮಾಡದವರನ್ನು ನಾಲಾಯಕ್ ಎಂದು ಟೀಕಿಸಿದ ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರ ಬದಲಿಗೆ ಬಿಜೆಪಿ ನಾಯಕರನ್ನು ಉದ್ದೇಶಿಸಿ ಹೇಳಿದಂತಿದೆ.

–ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry