ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಹಣಕೊಟ್ಟರೂ ನಿಲ್ಲದ ಟೀಕೆ

ಪರಿವರ್ತನಾ ಯಾತ್ರೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
Last Updated 26 ಜನವರಿ 2018, 11:33 IST
ಅಕ್ಷರ ಗಾತ್ರ

ಮೈಸೂರು: ಮಾತುಮಾತಿಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಗ್ಯತೆ ಏನೆಂಬುದು ರಾಜ್ಯದ ಆರೂವರೆ ಕೋಟಿ ಜನರಿಗೆ ಗೊತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಸಾವಿರಾರು ಕೋಟಿ ನೀಡಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಪ್ರಧಾನಿ ತನ್ನ ಮನೆಯಿಂದ ಕೊಡುತ್ತಾರಾ ಆಂತ ಕೇಳುತ್ತಾರೆ. ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿರುವ ಮೋದಿ ಅವರನ್ನು ಟೀಕಿಸುವ ಯೋಗ್ಯತೆ ಮುಖ್ಯಮಂತ್ರಿಗೆ ಇಲ್ಲ ಹರಿಹಾಯ್ದರು.

‘ಪ್ರಧಾನಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ಅನುದಾನದ ವಿವರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಿಮ್ಮ ಮುಂದಿಟ್ಟಿದ್ದಾರೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯನವರೇ, ನನ್ನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ ಅಂತ ಹೋದಲ್ಲೆಲ್ಲ ಹೇಳುತ್ತಿದ್ದೀರಿ. ನಿಮ್ಮ ಮೇಲಿನ ಆರೋಪಗಳ ದೊಡ್ಡ ಪಟ್ಟಿಯನ್ನೇ ಷಾ ಕೊಟ್ಟಿದ್ದಾರೆ’ ಎಂದು ಕುಟುಕಿದರು.

‘ಮಲೇಷ್ಯಾದಿಂದ ಮರಳು ತಂದು ಹಲವು ಕೋಟಿ ಕೋಟಿ ಹಣ ಲೂಟಿ ಮಾಡಲು ಹೊರಟಿದ್ದೀರಿ. ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಮಗ ಮರಳು ದಂಧೆಯಲ್ಲಿ ಶಾಮೀಲಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್‌ನ ಕೆಲ ಮುಖಂಡರು ಅಕ್ರಮ ಮರಳು ಗಣಿಕಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಕೇಳಿದಾಗ ಉಡಾಫೆಯ ಉತ್ತರ ಕೊಡುತ್ತೀರಿ’ ಎಂದು ಟೀಕಿಸಿದರು.

ಇನ್ನೆರಡು ತಿಂಗಳಲ್ಲಿ ಅಧಿಕಾರ ಕೈತಪ್ಪಲಿದೆ ಎಂಬುದು ಖಚಿತವಾಗಿರುವ ಕಾರಣ ಸಿದ್ದರಾಮಯ್ಯ ಮನಬಂದಂತೆ ಬೊಬ್ಬೆ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಒಡೆದ ಮನೆಯಂತಾಗಿದ್ದು, ಯಾವುದೇ ಸಚಿವರು ಮುಖ್ಯಮಂತ್ರಿ ಪರ ನಿಲ್ಲುತ್ತಿಲ್ಲ. ಸಿದ್ದರಾಮಯ್ಯ ಒಂದು ಕಡೆ ಹೊರಟರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಇನ್ನೊಂದು ಕಡೆ ಹೊರಡುತ್ತಾರೆ ಎಂದು ವ್ಯಂಗ್ಯವಾಡಿದರು.

ಅಮಿತ್‌ ಷಾ ಮಾತನಾಡಿ, ಕೇಂದ್ರ ಸರ್ಕಾರ 106 ಯೋಜನೆಗಳನ್ನು ಜಾರಿಗೊಳಿಸಿದೆ. ಕರ್ನಾಟಕದ ಜನರಿಗೆ ಅದು ತಲುಪಿಲ್ಲ. ಪ್ರಧಾನಿ ಮೋದಿ ಅವರ ಜನಪ್ರಿಯತೆ ಹೆಚ್ಚಬಹುದು ಎಂಬ ಭಯದಿಂದ ರಾಜ್ಯ ಸರ್ಕಾರ ಆ ಯೋಜನೆಗಳನ್ನು ಜನರನ್ನು ತಲುಪಲು ಬಿಡುತ್ತಿಲ್ಲ. ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಎಲ್ಲ ಯೋಜನೆಗಳು ನಿಮಗೆ ತಲುಪಲಿವೆ ಎಂದು ಭರವಸೆ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಪ್ರಧಾನಿ ಮೋದಿ ಮತ್ತು ಷಾ ಬರುತ್ತಾರೆ ಅಂದರೆ ಸಿದ್ದರಾಮಯ್ಯಗೆ ನಡುಕ ಉಂಟಾಗುತ್ತದೆ. ಅದಕ್ಕಾಗಿ ಸರ್ಕಾರಿ ಪ್ರಾಯೋಜಿತ ಬಂದ್‌ ಏರ್ಪಡಿಸಿದೆ. ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡಿದ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ’ ಎಂದು ಟೀಕಿಸಿದರು.

ನರಸಿಂಹರಾಜ, ಚಾಮರಾಜ ಮತ್ತು ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪರಿವರ್ತನಾ ಯಾತ್ರೆ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಸಂಸದ ಪ್ರತಾಪಸಿಂಹ, ಮುಖಂಡರಾದ ಸಿ.ಟಿ.ರವಿ, ವಿ.ಶ್ರೀನಿವಾಸಪ್ರಸಾದ್‌, ಎಚ್‌.ಪಿ.ಮಂಜುನಾಥ್‌, ಕೋಟೆ ಎಂ.ಶಿವಣ್ಣ ಹಾಜರಿದ್ದರು.
**
‘ಸಿ.ಎಂ ಸವಾಲು ಪುಡಿಪುಡಿ’

ರಾಜ್ಯದಲ್ಲಿ ಬಂದ್‌ ನಡೆಸಿ ಸಮಾವೇಶಕ್ಕೆ ಅಡ್ಡಿಪಡಿಸಲು ಸರ್ಕಾರ ನಡೆಸಿದ ಪ್ರಯತ್ನ ವಿಫಲವಾಗಿದೆ. ಮುಖ್ಯಮಂತ್ರಿ ಹಾಕಿದ ಸವಾಲನ್ನು ಇಲ್ಲಿ ಸೇರಿರುವ ಸಾವಿರಾರು ಮಂದಿ ಪುಡಿಪುಡಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಬಿಜೆಪಿ ಮುಖಂಡ ಆರ್‌.ಅಶೋಕ್‌, ‘ಬಂದ್‌ ಮೂಲಕ ಅಡ್ಡಗಾಲು ಹಾಕಲು ಪ್ರಯತ್ನಿಸಿದ ಸಿದ್ದರಾಮಯ್ಯನೇ ನೀನೊಬ್ಬ ಹೇಡಿ’ ಎಂದು ಏಕವಚನದಲ್ಲೇ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT