‘ಉಜ್ವಲ ಅಡುಗೆ ಅನಿಲ ದುರುಪಯೋಗ’

7
ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಆರೋಪ

‘ಉಜ್ವಲ ಅಡುಗೆ ಅನಿಲ ದುರುಪಯೋಗ’

Published:
Updated:
‘ಉಜ್ವಲ ಅಡುಗೆ ಅನಿಲ ದುರುಪಯೋಗ’

ಕುಮಟಾ: ‘ಯಾವುದೇ ಅಧಿಕಾರಿಗಳ ನಿಯಂತ್ರಣ ಇಲ್ಲದೇ ಕೇಂದ್ರ ಸರ್ಕಾರದ ಉಜ್ವಲ ಅಡುಗೆ ಅನಿಲ ಸಿಲಿಂಡರ್ ಅನ್ನು ಕೆಲವರು ತಮಗೆ ಬೇಕಾದವರಿಗೆ ವಿತರಣೆ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಗುರುವಾರ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಕೆಲವು ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಳಕೋಡ ಪಂಚಾಯ್ತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ತಾಲ್ಲೂಕು ಪಂಚಾಯ್ತಿ ಸದಸ್ಯ ಜಗನ್ನಥ ನಾಯ್ಕ, ‘ಉಜ್ವಲ ಅಡುಗೆ ಅನಿಲ ಸಿಲಿಂಡರ್ ವಿತರಿಸುವಾಗ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಖಾಸಗಿ ಸಂಸ್ಥೆಯ ಹೆಸರಿನಲ್ಲೂ ಕಾರ್ಯಕ್ರಮಗಳನ್ನು ನಡೆಸಿ ಕೆಲವರು ಅಡುಗೆ ಅನಿಲ ಸಿಲಿಂಡರ್ ವಿತರಿಸುತ್ತಿದ್ದು, ಇದು ಕೇಂದ್ರ ಸರ್ಕಾರದ ಸೌಲಭ್ಯಗಳ ದುರ್ಬಳಕೆಯಾಗಿದೆ’ ಎಂದರು.

ನಾಡುಮಾಸ್ಕೇರಿ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ಹನೀಫ್, ‘ಮೋದಿ ಗ್ಯಾಸ್ ಹೆಸರಿನಲ್ಲಿ ಸಿಲಿಂಡರ್ ವಿತರಿಸಲಾಗುತ್ತಿದ್ದು, ಇದರ ಬಗ್ಗೆ ಸ್ಥಳೀಯ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಗೆ ಪಂಚಾಯ್ತಿಯಿಂದ ಪತ್ರ ಬರೆಯಲಾಗಿದೆ’ ಎಂದರು.

ಆಹಾರ ನಿರೀಕ್ಷಕ ಆರ್.ಸಿ ಗಟ್ಟುಮನೆ, ‘ಉಜ್ವಲ ಅಡುಗೆ ಸಿಲಿಂಡರ್ ವಿತರಿಸುವ ಬಗ್ಗೆ ನಮ್ಮ ಇಲಾಖೆಗೆ ಯಾವುದೇ ಸೂಚನೆ ಬಂದಿಲ್ಲ. ಇದು ಇಲಾಖೆಗೆ ಸಂಬಂಧಿಸಿಯೂ ಇಲ್ಲ’ ಎಂದು ಹೇಳಿದರು.

ವನ್ನಳ್ಳಿ ಪ್ರಗತಿಪರ ರೈತ ನಿತ್ಯಾನಂದ ನಾಯ್ಕ, ‘ತಹಶೀಲ್ದಾರ್ ಕಚೇರಿಯಲ್ಲಿ ಭೂ ಪರಿವರ್ತನೆಗೆ ಅರ್ಜಿ ಕೊಟ್ಟು 45 ದಿವಸ ಕಳೆದರೂ ಅದಕ್ಕೆ ಯಾವುದೇ ರೀತಿಯ ಉತ್ತರ ನೀಡುತ್ತಿಲ್ಲ. ಜನಸಾಮಾನ್ಯರು, ರೈತರು ಪಹಣಿ ಪತ್ರಿಕೆ ಪಡೆಯಲು ಹೋದರೆ ಹೆಚ್ಚಿನ ಸಂದರ್ಭದಲ್ಲಿ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿ ಇರುವುದಿಲ್ಲ. ಇಂಥ ಸಮಸ್ಯೆಗಳಿಗೆ ತಹಶೀಲ್ದಾರ್ ಅವರು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ಅದಕ್ಕೆ ತಹಶೀಲ್ದಾರ್ ಮೇಘರಾಜ ನಾಯ್ಕ, ‘ತಾಲ್ಲೂಕಿನಲ್ಲಿ 4,740 ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆ ಸೌಲಭ್ಯ ದೊರೆತಿದೆ. ಪಹಣಿ ಪತ್ರಿಕೆ ಪೂರೈಕೆಗೆ ಅಗತ್ಯವಿರುವ ಕಾಗದ ಪೂರೈಕೆಯಾಗಿಲ್ಲ. ಹಾಗಾಗಿ ಪಹಣಿ ಪೂರೈಕೆ ಸಾಧ್ಯವಾಗುತ್ತಿಲ್ಲ. ತೀರಾ ಅಗತ್ಯವುಳ್ಳ ಹಣಕಾಸಿನ ಅನುಕೂಲ ಇದ್ದವರು ಸೈಬರ್ ಕೇಂದ್ರಗಳಿಂದಲೂ ಪಹಣಿ ಪತ್ರಿಕೆ ಪಡೆಯಬಹುದಾಗಿದೆ’ ಎಂದರು.

ನೀರು ಸರಬರಾಜು ಯೋಜನೆ ಎಂಜಿನಿಯರ್ ಕಿರಣ ಚೇಲಕರ್, ‘ಗೋಕರ್ಣ ನೀರು ಸರಬರಾಜು ಯೋಜನೆಗೆ ವಿದ್ಯುತ್ ಪೂರೈಕೆ ತೊಂದರೆ ಆಗದಂತೆ ವಿಶೇಷ ವ್ಯವಸ್ಥೆ ಮಾಡಿ ಸಂಪರ್ಕ ಪಡೆಯಲಾಗಿದೆ. ಮೂರೂರು, ಅಳಕೋಡ, ದೀವಗಿ, ಮಿರ್ಜಾನ, ಹೆಗಡೆ, ಬಾಡ, ಕಾಗಾಲ ಕಲಭಾಗ, ದೇವಗಿರಿ ಗ್ರಾಮ ಪಂಚಾಯ್ತಿಗಳಿಗೆ ಅನುಕೂಲವಾಗುವಂತೆ ಸುಮಾರು ₹ 90 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಮಂಜೂರಾಗಿದ್ದು, ಈ ಯೋಜನೆಗೆ ಅಘನಾಶಿನಿ ನದಿಯ ಮರಾಕಲ್ ನಿಂದ ನೀರು ಪಡೆಲಾಗುತ್ತಿದೆ. ಯೋಜನೆ ಮುಂಬರುವ ಆಯ–ವ್ಯಯದಲ್ಲಿ ಸೇರ್ಪಡೆಯಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಾರದಾ ಶೆಟ್ಟಿ, ‘ಬಹುಗ್ರಾಮ ಯೋಜನೆಯಡಿ ಮಂಜೂರಾದ ₹ 90 ಕೋಟಿ ವೆಚ್ಚದ ಕುಡಿಯುವ ನೀರು ಸೌಲಭ್ಯ ತಾಲ್ಲೂಕಿನ ಕುಡಿಯುವ ನೀರು ವಂಚಿತ ಪ್ರದೇಶಗಳಿಗೆ ವರದಾನ ಆಗಲಿದೆ’ ಎಂದರು.

ಸಭೆಯಲ್ಲಿ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಆನಂದ, ಕೆ.ಎ.ಎಸ್ ಅಧಿಕಾರಿ ಕಿಶನ್, ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ್, ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ನಾಯ್ಕ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry