7
ಮಹದಾಯಿ ಹೋರಾಟಕ್ಕೆ ಕೊಡಗಿನಲ್ಲಿ ಸಿಗದ ಬಲ, ಜನಸಂಚಾರ, ವ್ಯಾಪಾರ–ವಹಿವಾಟು ಸಹಜ

ಜಿಲ್ಲೆಯಲ್ಲಿ ಪರಿಣಾಮ ಬೀರದ ಬಂದ್‌

Published:
Updated:
ಜಿಲ್ಲೆಯಲ್ಲಿ ಪರಿಣಾಮ ಬೀರದ ಬಂದ್‌

ಮಡಿಕೇರಿ: ಮಹದಾಯಿ ವಿಚಾರವಾಗಿ ಕನ್ನಡಪರ ಸಂಘಟನೆಗಳ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ ಕೊಡಗು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಯಲ್ಲಿತ್ತು.

ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಕೆಲವು ಬಸ್‌ಗಳು ಬಸ್‌ ನಿಲ್ದಾಣದಲ್ಲೇ ಠಿಕಾಣಿ ಹೂಡಿದ್ದರೆ ಮತ್ತೆ ಕೆಲವು ಡಿಪೊದಲ್ಲಿ ಬೀಡುಬಿಟ್ಟಿದ್ದವು.

ಖಾಸಗಿ ಬಸ್‌, ಆಟೊ ರಿಕ್ಷಾ ಸಂಚಾರ ಎಂದಿನಂತೆಯೇ ಇತ್ತು. ಅಂಗಡಿ ಮುಂಗಟ್ಟು ತೆರೆದಿದ್ದವು.

ಶಾಲಾ– ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು.

ಮಧ್ಯಾಹ್ನದ ತನಕ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವಿಲ್ಲದ ಕಾರಣ ದೂರ ಊರಿಗೆ ತೆರಳುವ ಪ್ರಯಾಣಿಕರು ಪರದಾಡಿದರು.

ಮಧ್ಯಾಹ್ನ ಬಳಿಕ ಸಂಚಾರ ಆರಂಭವಾಯಿತು. ಮಡಿಕೇರಿಯಲ್ಲಿ ಜನಸಂಚಾರ ಯಥಾಸ್ಥಿತಿಯಲ್ಲಿ ಇತ್ತು. ಕಾಲೇಜು ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು.

ಸೋಮವಾರಪೇಟೆಯಲ್ಲಿ ಮಾತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

ಮಹದಾಯಿ ಹೋರಾಟಕ್ಕೆ ಕಾವೇರಿ ನಾಡಿನಲ್ಲಿ ದೊಡ್ಡಮಟ್ಟದ ಬೆಂಬಲ ಸಿಗಲಿಲ್ಲ.

ಮನವಿ ಸಲ್ಲಿಕೆ

ಸೋಮವಾರಪೇಟೆ ವರದಿ: ಉತ್ತರ ಕರ್ನಾಟಕದ ಕುಡಿಯುವ ನೀರಿನ ಮೂಲವಾದ ಮಹದಾಯಿ ಯೋಜನೆಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ, ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಈ ಭಾಗಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇರುವುದು 7 ಟಿಎಂಸಿ ನೀರು ಮಾತ್ರ. ಆದರೆ, ಸುಮಾರು 199 ಟಿಎಂಸಿ ನೀರು ಹರಿದು ಸಮುದ್ರ ಪಾಲಾಗುತ್ತಿದೆ. ಸ್ಥಳೀಯ ಜನರಿಗೆ ಕುಡಿಯಲು ನೀರು ಕೊಡಲು ಗೋವಾ ಅಡ್ಡಿಪಡಿಸುತ್ತಿದೆ ಎಂದು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ್ ದೂರಿದರು.

ಸಂವಿಧಾನ ಬದ್ಧ ದೇಶದ ಒಕ್ಕೂಟ ವ್ಯವಸ್ಥೆಯ ನೀತಿಗಳನ್ನು ಮನೋಹರ್ ಪರಿಕ್ಕರ್ ಹಾಗೂ ಅವರ ಮಂತ್ರಿಮಂಡಲ ಗಾಳಿಗೆ ತೂರಿದೆ. ಮಹದಾಯಿ ನದಿಯ ನೀರು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದ ಭಾವೈಕ್ಯತೆಯ ಸಂಕೇತವಾಗಿದ್ದು, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ತಾಲ್ಲೂಕು ಘಟಕದ ಉಪಾಧ್ಯಕ್ಷ ಚಂದ್ರು, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಬ್ಬಾಸ್, ಸಂಘಟನಾ ಕಾರ್ಯದರ್ಶಿ ಎಂ.ಎ. ರುಬೀನಾ, ತಾಲ್ಲೂಕು ಸಲಹೆಗಾರ ದಾಮೋದರ್ ಇದ್ದರು.

ಬೆಂಬಲಿಸದ ಜನತೆ

ಸುಂಟಿಕೊಪ್ಪ: ಮಹದಾಯಿ ವಿವಾದ ಪರಿಹಾರಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಸುಂಟಿಕೊಪ್ಪದಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ.

ಸರ್ಕಾರಿ ವೇಗದೂತ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ ಸ್ವಲ್ಪಮಟ್ಟಿಗೆ ಸಮಸ್ಯೆ ಉಂಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry