ಹೋರಾಟಗಾರರ ಚೈತನ್ಯ ನರಸರಾಜು

7
ತಾಯಿ ಹೃದಯದ ರೈತ ಧ್ವನಿ, ಶಿಸ್ತಿಗೆ ಇನ್ನೊಂದು ಹೆಸರು, ಕಂಚಿನ ಕಂಠ

ಹೋರಾಟಗಾರರ ಚೈತನ್ಯ ನರಸರಾಜು

Published:
Updated:
ಹೋರಾಟಗಾರರ ಚೈತನ್ಯ ನರಸರಾಜು

ಮಂಡ್ಯ: ಅವಿವಾಹಿತರಾಗಿ ತಮ್ಮ ಇಡೀ ಜೀವನವನ್ನು ರೈತಪರ ಹೋರಾಟಕ್ಕೆ ಮುಡುಪಾಗಿಟ್ಟಿದ್ದ ಕೋಣಸಾಲೆ ನರಸರಾಜು ಅವರಿಗೆ ಸಾಯುವ ವಯಸ್ಸಾಗಿರಲಿಲ್ಲ, ಕೇವಲ 65. ಸರ್ಕಾರದ ರೈತವಿರೋಧಿ ನೀತಿಗಳನ್ನು ನೇರ, ನಿಷ್ಠುರ ನುಡಿಗಳಿಂದ ಖಂಡಿಸು ತ್ತಿದ್ದ ಅವರು ಅಜಾತ ಶತ್ರುವಾಗಿದ್ದರು. ಅವರ ಸಾವು ಇಡೀ ರಾಜ್ಯದ ರೈತ ಹೋರಾಟಕ್ಕೆ ಬಲುದೊಡ್ಡ ನಷ್ಟ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕೂರುತ್ತಿದ್ದ ಅವರನ್ನು ಎತ್ತಿ ಗಾಡಿಗೆ ತುಂಬಲು ಪೊಲೀಸರಿಗೆ ಹೆಚ್ಚು ಶ್ರಮ ಇರುತ್ತಿರಲಿಲ್ಲ. ಕೊರಡಿನಂತಿದ್ದ ಆ ದೇಹ ಅದೆಷ್ಟು ಬಾರಿ ಬಂಧನಕ್ಕೆ ಒಳಗಾಗಿದೆಯೋ ಲೆಕ್ಕವಿಲ್ಲ. ಮಗುವಿನಂತಹ ಮುಗ್ಧ ಮನಸ್ಸು ಹೊಂದಿದ್ದ ಅವರು ಸೂಜಿಗಲ್ಲಿನಂತೆ ಚೂಪಾದ ಮಾತುಗಳನ್ನಾಡುತ್ತಿದ್ದರು. ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ, ಜಿಲ್ಲಾಧಿಕಾರಿ ಕಚೇರಿ, ಮೈಷುಗರ್‌ ಕಾರ್ಖಾನೆ ಮುಂತಾದೆಡೆ ದಿಕ್ಕಾರ ಕೂಗುತ್ತಿದ್ದಾಗ ಆ ಧ್ವನಿಯಲ್ಲಿ ಇರುತ್ತಿದ್ದ ಆತ್ಮವಿಶ್ವಾಸ ಹೋರಾಟಗಾರರಲ್ಲಿ ಚೈತನ್ಯ ತುಂಬುತ್ತಿತ್ತು. ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಸೇರಿ ನೂರಾರು ಹೋರಾಟಗಾರರಿಗೆ ಕೋಣಸಾಲೆ ಬೆಳಕಾಗಿದ್ದರು.

ಹೋರಾಟದಲ್ಲಿ ಅವರು ಏನನ್ನೂ ಬಯಸಿದವರಲ್ಲ. 38 ವರ್ಷಗಳ ಹಿಂದೆ ಸಾಮಾನ್ಯ ರೈತನಾಗಿ ಹೋರಾಟ ಆರಂಭಿಸಿದ ಅವರು ರೈತಸಂಘದ ಸಾಮಾನ್ಯ ಕಾರ್ಯಕರ್ತರಾಗಿ, ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಐದು ವರ್ಷ, ಅಧ್ಯಕ್ಷರಾಗಿ ಐದು ವರ್ಷ ಕಾರ್ಯ ನಿರ್ವಹಿಸಿದ್ದರು. ಮೂರು ವರ್ಷಗಳಿಂದ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಹೋರಾಟ ನಡೆಸುತ್ತಿದ್ದರು. ಕಬ್ಬಿಗೆ ನ್ಯಾಯಯುತ ದರ ನಿಗದಿಗಾಗಿ ಅಪಾರ ಶ್ರಮಿಸಿದ್ದ ಅವರು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಚಳವಳಿ ನಡೆಸಿದ್ದರು.

‘ನರಸರಾಜು ಅಣ್ಣನನ್ನು ನೋಡಿಯೇ ನಾನು ರೈತ ಸಂಘಕ್ಕೆ ಬಂದೆ. ಅವರೇ ನನ್ನ ಗುರು. ಅವರು ಇದ್ದಾರೆ ಎಂದರೆ ಯಾವುದೇ ಅಳುಕಿಲ್ಲದೆ ಹೋರಾಟ ಆರಂಭವಾಗುತ್ತಿತ್ತು. ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ರಾಜೀಯಾಗದ ಮನೋಭಾವ: ಹೋರಾಟದಲ್ಲಿ ರಾಜೀಯಾಗದ ಅವರ ಮನೋಭಾವ ಈ ಭಾಗದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಿಸ್ತಿನ ಸಿಪಾಯಿಯಂತೆ ಇದ್ದ ಅವರು ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದೇ ತಪ್ಪುಗಳನ್ನು ನೇರವಾಗಿ ಖಂಡಿಸುತ್ತಿದ್ದರು. ಪ್ರತಿದಿನ ರೈತರ ಕೆಲಸಗಳನ್ನು ತಮ್ಮ ಸ್ವಂತ ಕೆಲಸವೆಂಬು ಬಗೆದು ಮಾಡಿಕೊಡುತ್ತಿದ್ದರು. ಸರ್ಕಾರಿ ಅಧಿಕಾರಿಗಳು ಕೂಡ ಕೋಣಸಾಲೆ ಅವರಿಗೆ ಅಪಾರ ಗೌರವ ನೀಡುತ್ತಿದ್ದರು. ರೈತರ ಸಮಸ್ಯೆಗಳನ್ನು ಅಸಮಾಧಾನ ಇಲ್ಲದೆ ಸ್ನೇಹಯುತವಾಗಿ ಬಗೆಹರಿಸಿಕೊಡುತ್ತಿದ್ದರು. ಖಾಸಗಿ ಹಣಕಾಸು ಸಂಸ್ಥೆಗಳು ರೈತರು ಅಡವಿಟ್ಟ ಚಿನ್ನವನ್ನು ಹರಾಜು ಮಾಡಲು ಮುಂದಾದರೆ ಆಕ್ರೋಶದ ನುಡಿಗಳನ್ನಾಡುತ್ತಿದ್ದರು. ಸಾಲ ತೀರಿಸಲು ಮತ್ತಷ್ಟು ಸಮಯಾವಕಾಶ ಪಡೆಯಲು ಯಶಸ್ವಿಯಾಗುತ್ತಿದ್ದರು. ಕೋಣಸಾಲೆ ಇದ್ದಕಡೆ ಸದಾ ಸ್ನೇಹದ ಚಿಗುರು ಅರಳುತ್ತಿತ್ತು. ತಮಗಿಂತ ಚಿಕ್ಕವರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಕಾವೇರಿ ಹೋರಾಟ ರೂಪಿಸುವಲ್ಲಿ ನರಸರಾಜು ಅವರು ಹಗಲು–ರಾತ್ರಿ ಎನ್ನದೇ ದುಡಿದಿದ್ದಾರೆ.

‘1985ರಿಂದಲೂ ನಾನು ಅವರೊಂದಿಗೆ ಹೋರಾಟದಲ್ಲಿದ್ದೇನೆ. ಅವರ ಕಂಚಿನ ಕಂಠ ಹೋರಾಟದ ಬಲುದೊಡ್ಡ ಧ್ವನಿಯಾಗಿತ್ತು. ಸಂಘಟನೆಯಲ್ಲಿ ಅವರೊಂದು ಶಕ್ತಿಯಾಗಿದ್ದರು. ರೈತ ಚಳವಳಿ, ಶಿಕ್ಷಣ ಚಳವಳಿ, ಪರಿಸರ ಚಳವಳಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ರಾಜ್ಯ ರೈತ ಚಳವಳಿಯ ಒಂದು ಪ್ರಮುಖ ಭಾಗವಾಗಿದ್ದರು’ ಎಂದು ರೈತ ಸಂಘದ ಹಿರಿಯ ನಾಯಕಿ ಸುನಂದಾ ಜಯರಾಂ ತಿಳಿಸಿದರು.

‘ರೈತಸಂಘದ ಭಾಗವಾಗಿದ್ದ ಅವರು ಅತ್ಯುತ್ತಮ ಸಂಘಟಕನಾಗಿದ್ದರು. ಅವರ ಸಾವು ಜಿಲ್ಲೆಯ ರೈತ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ’ ಎಂದು ಹಿರಿಯ ಸಾಹಿತಿ ಜಿ.ಟಿ.ವೀರಪ್ಪ ತಿಳಿಸಿದರು.

ಶಿಕ್ಷಣ ಚಳವಳಿಯಲ್ಲೂ ಭಾಗವಹಿಸಿದ್ದ ಅವರು ಕೋಣಸಾಲೆ ಗ್ರಾಮದಲ್ಲಿ ಸರ್ಕಾರಿ ಶಾಲೆ ಸ್ಥಗಿತಗೊಳ್ಳುವ ಸ್ಥಿತಿಯಲ್ಲಿದ್ದಾಗ ಅದರ ಉಳಿವಿಗಾಗಿ ಶ್ರಮಿಸಿದ್ದರು. ಗ್ರಾಮಸ್ಥರು, ಎಸ್‌ಡಿಎಂಸಿ ಸಹಾಯದೊಂದಿಗೆ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ಶಾಲೆಗೆ ಮರುಜೀವ ನೀಡಿದರು.

ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಅವರು ಜನಿಸಿದರು. ತಂದೆ ನರಸಿಂಹಯ್ಯ, ತಾಯಿ ನಂಜಮ್ಮ. ಮೂರು ಮಕ್ಕಳಲ್ಲಿ ಇವರು ಜೇಷ್ಠ ಪುತ್ರ. ತಮ್ಮ ಪಾಲಿಗೆ ಬಂದ ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು ಶ್ರೇಷ್ಠತೆ ಮೆರೆದಿದ್ದರು.

***

ರೈತಸಂಘದ ಕ್ಯಾಪ್ಟನ್‌

‘ನರಸರಾಜು ಅವರು ರೈತಸಂಘದ ಕ್ಯಾಪ್ಟನ್‌ನಂತಿದ್ದರು. ನೋಡಲು ಕಠಿಣವಾಗಿ ಕಂಡರೂ ಅವರೊಳಗೆ ಮಾತೃಹೃದಯವಿತ್ತು. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಅವರ ಗುಣಕ್ಕೆ ಮತ್ತಾರೂ ಸಾಟಿ ಇಲ್ಲ. ಅವರ ಸಾವಿನಿಂದ ರೈತಧ್ವನಿಯೊಂದು ಅಡಗಿದಂತಾಗಿದೆ’ ಎಂದು ರೈತ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ, ಬಿಜೆಪಿ ಮುಖಂಡ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

ಕಣ್ಣೀರು ಹಾಕಿದ್ದರು

ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಈಚೆಗೆ ಬಿಜೆಪಿ ಸೇರಿದಾಗ ಕೋಣಸಾಲೆ ನರಸರಾಜು ಕಣ್ಣೀರು ಹಾಕಿದ್ದರು. ಎಚ್‌.ಶ್ರೀನಿವಾಸ್‌, ಎಸ್‌.ಡಿ.ಜಯರಾಂ, ಎಂ.ಶ್ರೀನಿವಾಸ್‌ ಅವರೂ ವಿವಿಧ ಪಕ್ಷಗಳಿಗೆ ಹೊರಟು ನಿಂತಾಗ ಕೋಣಸಾಲೆ ನೋವು ಅನುಭವಿಸಿದ್ದರು.

ಬೆಟ್ಟ ಹತ್ತಿದ್ದೇ ಮುಳುವಾಯಿತು

ಈಚೆಗೆ ಕೋಣಸಾಲೆ ನರಸರಾಜು ಅವರು ಶ್ರವಣಗೊಳಗೊಳದ ಬೆಟ್ಟ ಹತ್ತಿದ್ದರು. ಇದರಿಂದ ಅವರಿಗೆ ಉಸಿರಾಟದ ಸಮಸ್ಯೆ ಉಬ್ಬಣಿಸಿತ್ತು. ಕುಟುಂಬದ ಸದಸ್ಯರು ಅವರನ್ನು ಉಳಿಸಿಕೊಳ್ಳಲು ಅವಿರತ ಶ್ರಮಿಸಿದ್ದರು. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಇಹಲೋಕ ತ್ಯಜಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry