ವಿದ್ಯಾರ್ಥಿನಿ ಆತ್ಮಹತ್ಯೆ: ಮಾನಸಿಕ ಕಿರುಕುಳ ಆರೋಪ

7

ವಿದ್ಯಾರ್ಥಿನಿ ಆತ್ಮಹತ್ಯೆ: ಮಾನಸಿಕ ಕಿರುಕುಳ ಆರೋಪ

Published:
Updated:
ವಿದ್ಯಾರ್ಥಿನಿ ಆತ್ಮಹತ್ಯೆ: ಮಾನಸಿಕ ಕಿರುಕುಳ ಆರೋಪ

ಕೆ.ಆರ್‌.ಪೇಟೆ: ಪಟ್ಟಣದ ನವೋದಯ ಮಾದರಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಶಿಕ್ಷಕನ ಮಾನಸಿಕ ಕಿರುಕುಳ ಕಾರಣದಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೆಲ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ವಸತಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಶಿವಮೊಗ್ಗದ ಮಹಮದ್ ಇಬ್ರಾಹಿಂ ಅವರ ಪುತ್ರಿ ಜೈಬುನ್ನಿಸಾ (14) ಬುಧವಾರ ವಸತಿ ನಿಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದ ಮುಖಂಡರು ಘಟನೆಯನ್ನು ತನಿಖೆಗೆ ಒಳಪಡಿಸಬೇಕು. ಮೃತದೇಹವನ್ನು ಮೈಸೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಕಿರುಕುಳ ನೀಡಿದ ಶಿಕ್ಷಕ ಎನ್‌.ಎಸ್‌.ರವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರೋಪ ನಿರಾಕರಣೆ: ಗಣರಾಜ್ಯೋತ್ಸವಕ್ಕಾಗಿ ಬುಧವಾರ ವಿದ್ಯಾರ್ಥಿಗಳಿಂದ ಪರೇಡ್ ಮಾಡಿಸುವಾಗ ವಿದ್ಯಾರ್ಥಿನಿ ಸರಿಯಾಗಿ ಪರೇಡ್ ಮಾಡದ ಕಾರಣ  ಶಿಕ್ಷಕ ಎನ್.ಎಸ್. ರವಿ ಗದರಿಸಿ, ಎಚ್ಚರಿಕೆ ನೀಡಿದರು. ಇದನ್ನು ಬಿಟ್ಟರೆ ಮತ್ತೆ ಯಾವ ಘಟನೆಯೂ ನಡೆದಿಲ್ಲ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿಕ್ಷಕ ರವಿ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಶವದ ಮರಣೋತ್ತರ ಪರಿಕ್ಷೆಯನ್ನು ಕೆ.ಆರ್.ಪೇಟೆಯಲ್ಲಿ ನಡೆಸಲು ಪ್ರತಿಭಟನಾಕಾರರು ಹಾಗೂ ಪೋಷಕರು ಒಪ್ಪದ ಕಾರಣ ಗುರುವಾರ ಬೆಳಿಗ್ಗೆ ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಾಗಿಸಲಾಯಿತು.

ಘಟನೆಯ ಸಂಬಂಧ ವಿದ್ಯಾರ್ಥಿನಿಯ ಸೋದರಮಾವ ದೂರು ನೀಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ.ರತ್ನಾ, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ವೆಂಕಟೇಶಯ್ಯ, ಎಸ್ಐ ವೆಂಕಟೇಶ್, ಗಿರೀಶ್ ಭೇಟಿ ನೀಡಿದ್ದರು. ಘಟನೆಯ ಹಿನ್ನೆಲೆಯಲ್ಲಿ ವಸತಿ ನಿಲಯದ ಸುತ್ತ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry