ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿ ಪಟ್ಟಿ ಅನುಮೋದನೆಗೆ ತೀರ್ಮಾನ

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಚರ್ಚೆ
Last Updated 26 ಜನವರಿ 2018, 12:08 IST
ಅಕ್ಷರ ಗಾತ್ರ

ಕೋಲಾರ: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಗೆ ಕಳುಹಿಸಲು ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ‘ಯೋಜನೆಯಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡದೆ ಅಧಿಕಾರಿಗಳೇ ಫಲಾನುಭವಿಗಳಿಗೆ ನೇರವಾಗಿ ಸೌಕರ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.

ಜನಪರ ಯೋಜನೆಗಳು ಸರ್ಕಾರದಿಂದ ಅನುಷ್ಠಾನ ಆಗುತ್ತಿವೆ ಎಂದಾಕ್ಷಣ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಧ್ಯವರ್ತಿಗಳು ಸೃಷ್ಟಿಯಾಗುತ್ತಾರೆ. ಅವರೇ ಫಲಾನುಭವಿಗಳ ಮನೆಗೆ ಹೋಗಿ ಹಣ ಪಡೆದು ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ. ಯೋಜನೆ ಸಂಬಂಧ ಜಿಲ್ಲೆಯಲ್ಲಿ ಯಾವುದೇ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮನೆಗೆ ಆದೇಶಪತ್ರ: ‘ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆ ಖರೀದಿ ಸುತ್ತಿರುವ ವ್ಯಕ್ತಿಗಳು ಸಿಲಿಂಡರ್ ಬಳಸುತ್ತಿಲ್ಲ. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಯೋಜನೆಗೆ ಫಲಾನುಭವಿ ಗಳನ್ನು ಗುರುತಿಸಲಾಗಿದ್ದು, ಮುಖ್ಯಮಂತ್ರಿ ಕಚೇರಿಯಿಂದಲೇ ಫಲಾನುಭವಿಗಳ ಮನೆಗೆ ಆದೇಶಪತ್ರ ಹೋಗುತ್ತದೆ. ಜತೆಗೆ ಇಲಾಖೆ ಸಿಬ್ಬಂದಿಯೂ ಫಲಾನುಭವಿಗಳಿಗೆ ಮಾಹಿತಿ ನೀಡುತ್ತಾರೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಬಿ.ಪಿ.ದೇವಯ್ಯ ವಿವರಿಸಿದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 19,610 ಫಲಾನುಭವಿಗಳನ್ನು ಗುರುತಿಸಬೇಕೆಂಬ ಗುರಿ ಇತ್ತು. ಈವರೆಗೆ 16,046 ಮಂದಿ ಆಯ್ಕೆಯಾಗಿದ್ದು, ಬಾಕಿ ಫಲಾನುಭವಿಗಳನ್ನು ಶೀಘ್ರವೇ ಆಯ್ಕೆ ಮಾಡುತ್ತೇವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಯೋಜನೆಯ ಫಲಾನುಭವಿಗಳ ಮಾಹಿತಿ ನೀಡುವ ಜವಾಬ್ದಾರಿ ವಹಿಸಲಾಗಿದೆ. ಅವರು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಗೆ ಮಾಹಿತಿ ನೀಡುತ್ತಾರೆ ಎಂದರು.

ಪ್ರತಿ ಫಲಾನುಭವಿಗೆ ₹ 4,040 ವಿತರಿಸಲಾಗುತ್ತಿದ್ದು, ಈ ಪೈಕಿ ಸಿಲಿಂಡರ್‌ಗೆ ₹ 1,450, ರೆಗ್ಯೂಲೇಟರ್‌ಗೆ ₹ 150, ಪೈಪ್‌ಗೆ ₹ 190, ಪುಸ್ತಕಕ್ಕೆ (ಬುಕ್‌) ₹ 50, ಜೋಡಣೆ ಮತ್ತು ಪರಿಶೀಲನೆಗೆ ₹ 100, ಸ್ಟೌವ್ ₹ 1,000 ಹಾಗೂ ಎರಡು ಸಿಲಿಂಡರ್‌ಗಳ ಅನಿಲ ದರ ₹ 1,100 ನೀಡಲಾಗುವುದು ಎಂದು ತಿಳಿಸಿದರು.

ಫಲಕ ಹಾಕಬೇಕು: ‘ಮುಖ್ಯ ಮಂತ್ರಿ ಯವರ ಕಚೇರಿಯಿಂದ ಫಲಾನು ಭವಿಗಳ ಪಟ್ಟಿ ಬರುವುದರಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಪ್ರತಿ ಸೇವಾ ಕೇಂದ್ರ, ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯೋಜಗೆ ಸಂಬಂಧ ಪಟ್ಟಂತೆ ಮಾಹಿತಿ ಫಲಕ ಹಾಕಬೇಕು’ ಎಂದು ಜಿ.ಪಂ ಸಿಇಒ ಬಿ.ಬಿ.ಕಾವೇರಿ ಸೂಚನೆ ನೀಡಿದರು.

ಅರಣ್ಯದ ಅಂಚಿನ ಗ್ರಾಮಗಳಲ್ಲಿ ಯಾರು ಅಡುಗೆ ಅನಿಲ ಸಿಲಿಂಡರ್ ಉಪಯೋಗಿಸುತ್ತಿಲ್ಲವೊ ಅಂತಹ ವ್ಯಕ್ತಿಗಳಿಗೆ ಅರಣ್ಯ ಇಲಾಖೆಯವರೇ ಗ್ಯಾಸ್‌ ಸೌಕರ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಬಾಕಿ ಫಲಾನುಭವಿಗಳ ಪಟ್ಟಿಯನ್ನು ಒಂದು ವಾರದೊಳಗೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಬೇಕು. ಯೋಜನೆಯಡಿ ಫಲಾನುಭವಿಗೆ ಸೌಕರ್ಯ ಕಲ್ಪಿಸುವ ಏಜೆನ್ಸಿಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

*

ಅನಿಲ ಭಾಗ್ಯ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಪ್ರತಿ ನ್ಯಾಯಬೆಲೆ ಅಂಗಡಿ ಬಳಿ ಯೋಜನೆಯ ಮಾಹಿತಿಯನ್ನು ಒಳಗೊಂಡ ಚೀಟಿ ಅಂಟಿಸಬೇಕು.

–ಜಿ.ಸತ್ಯವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT