ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಬಲಿಯಾಗದೇ ಯೋಗ್ಯರಿಗೆ ಮತ ನೀಡಿ

ರಾಷ್ಟ್ರೀಯ ಮತದಾರ ದಿನಾಚರಣೆಯಲ್ಲಿ ನ್ಯಾ. ಬೀಳಗಿ ಸಲಹೆ
Last Updated 26 ಜನವರಿ 2018, 12:27 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯಾದಾನ, ಅನ್ನದಾನಕ್ಕಿಂತಲೂ ಮತದಾನ ಶ್ರೇಷ್ಠವಾದುದು. ಮತದಾನವು ಒಂದು ದೇಶ, ರಾಜ್ಯವನ್ನು ಸುಸ್ಥಿತಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಎಸ್. ಬೀಳಗಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯ ಸಂದರ್ಭದಲ್ಲಿ ಯೋಗ್ಯರನ್ನು ಗುರುತಿಸಿ, ಮತದಾನ ಮಾಡಬೇಕು. ಮುಖ್ಯವಾಗಿ ಮೂರು ರೀತಿಯ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮತದಾನ ಮಾಡಬೇಕು. ವ್ಯಕ್ತಿ, ಪಕ್ಷದ ಚಾರಿತ್ರ್ಯ, ಮತದಾನದ ಸಂದರ್ಭದಲ್ಲಿ ಆಮಿಷಕ್ಕೆ ಒಳಗಾಗದಿರುವುದು, ನಮ್ಮವರು, ನಮ್ಮ ಜಾತಿಯವರು, ನಮ್ಮ ಧರ್ಮದವರು ಎಂದು ನೋಡಿ ಮತದಾನ ಮಾಡಬಾರದು ಎಂದು ಸಲಹೆ ಮಾಡಿದರು.

ಒಂದು ದೇಶ, ಸಂಸ್ಕೃತಿ ಹಾಳಾಗಲು ನಾವು ಕಾರಣರಾಗಬಾರದು. ಯಾವುದೇ ಆಮಿಷಗಳಿಗೆ ಬಲಿಯಾಗದೇ ಯೋಗ್ಯರಿಗೆ ಮತದಾನ ಮಾಡಿದಲ್ಲಿ ಅದುವೇ ಸಮಾಜಕ್ಕೆ ಕೊಡುವ ದೊಡ್ಡ ಗೌರವ ಎಂದರು.

ಮತದಾನ ಮಾಡುವ ಹಕ್ಕನ್ನು ಸಂವಿಧಾನ ನಮಗೆ ಕಲ್ಪಿಸಿದೆ. ಅದನ್ನು ನಾವು, ನೀವು ಯೋಗ್ಯ ರೀತಿಯಲ್ಲಿ ಬಳಸಿದಾಗ ಮಾತ್ರ ಒಂದು ಸದೃಢವಾದ ದೇಶ ಕಟ್ಟಲು ಸಾಧ್ಯ ಎಂದು ತಿಳಿಸಿದರು.

ಹಿಂದಿನವರು ಮಾಡಿದ ತಪ್ಪನ್ನು ಹೊಸ ಪೀಳಿಗೆಯವರು ಮಾಡದೇ, ಒಂದು ಸದೃಢವಾದ ಹೆಜ್ಜೆ ಇಡಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಸೇರಿದವರು ಪ್ರಾರಂಭದಲ್ಲಿಯೇ ಯೋಗ್ಯರನ್ನು ಆಯ್ಕೆ ಮಾಡುವ ವಿಚಾರ ಮಾಡಿದಲ್ಲಿ, ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲೂ ಅತಿ ದೊಡ್ಡದಾಗಿರುತ್ತದೆ ಎಂದು ಹೇಳಿದರು.

‘ನಾನು ಮತದಾರನೆಂದು ಹೆಮ್ಮ ಪಡುತ್ತೇನೆ. ನಾನು ಮತ ಚಲಾಯಿಸಲು ಸಿದ್ಧನಾಗಿದ್ದೇನೆ ಎಂಬ ಧ್ಯೇಯದೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್‌. ರವಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಮಲ್ಲನಗೌಡ, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್‌, ಮಹಾನಗರ ಪಾಲಿಕೆ ಆಯುಕ್ತ ಎಂ. ಮುಹಮ್ಮದ್‌ ನಜೀರ್‌, ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್‌ ಹೆಬ್ಬಾರ್‌ ಸಿ. ವೇದಿಕೆಯಲ್ಲಿದ್ದರು.
***
ಯೋಗ್ಯರಾದವರಿಗೆ ಮತದಾನ ಮಾಡಿದಲ್ಲಿ ಒಳ್ಳೆಯ ಆಡಳಿತ ಸಿಗಲು ಸಾಧ್ಯ. ಇದರಿಂದ ದೇಶದ ನಿರ್ಮಾಣಕ್ಕೆ ಅನುಕೂಲ ಆಗಲಿದೆ.
ಕೆ.ಎಸ್‌. ಬೀಳಗಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT