ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆ ಅಭಿವೃದ್ಧಿಗೆ ಮಲ್ಯರ ನಿಸ್ವಾರ್ಥ ಶ್ರಮ’

ಉಳ್ಳಾಲ ಶ್ರೀನಿವಾಸ ಮಲ್ಯ ಅಂಚೆ ಲಕೋಟೆ ಬಿಡುಗಡೆ
Last Updated 26 ಜನವರಿ 2018, 12:32 IST
ಅಕ್ಷರ ಗಾತ್ರ

ಮಂಗಳೂರು: ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಅವರ 115ನೇ ಜನ್ಮ ದಿನದ ನೆನಪಿಗಾಗಿ ಮಂಗಳೂರಿನ ಕಸ್ತೂರಿ ಬಾಲಕೃಷ್ಣ ಪೈ, ಗೋಪಾಲಕೃಷ್ಣ ಪ್ರಭು ಹಾಗೂ ಗುರುಚರಣ್‌ ಮಲ್ಯ ಅವರ ಸಾರಥ್ಯದಲ್ಲಿ ಅಂಚೆ ಇಲಾಖೆ ಸಹಕಾರದಲ್ಲಿ ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಸುರತ್ಕಲ್‌ ಎನ್‌ಐಟಿಕೆ ಸಭಾಂಗಣದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.

ಲಕೋಟೆ ಬಿಡುಗಡೆ ಮಾಡಿದ ದಕ್ಷಿಣ ಕರ್ನಾಟಕ ವಿಭಾಗ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ನಿಸ್ವಾರ್ಥಿಯಾಗಿ ಶ್ರಮಿಸಿ ಮೇಲ್ಪಂಕ್ತಿ ಹಾಕಿಕೊಟ್ಟ ದಿ. ಮಲ್ಯರ ಗೌರವಾರ್ಥ ಅಂಚೆ ಲಕೋಟೆಯನ್ನು ಹೊರತಂದಿರುವುದು ಶ್ಲಾಘನೀಯ. ಅವರ ಅಂಚೆ ಚೀಟಿ ದೇಶದಾದ್ಯಂತ ಮೌಲ್ಯವರ್ಧಿತವಾಗುವಂತೆ ನಾವೆಲ್ಲ ಶ್ರಮ ಪಡಬೇಕಾಗಿದೆ. ಇದಕ್ಕೆ ಅಂಚೆ ಇಲಾಖೆಯೂ ಸಹಕಾರ ನೀಡಲಿದೆ ಎಂದರು.

ಈಗಾಗಲೇ ಅವಿಭಜಿತ ಜಿಲ್ಲೆಗೆ ಸಂಬಂಧಪಟ್ಟಂತೆ ಟಿ.ಎಂ.ಎ. ಪೈ, ಡಾ. ಶಿವರಾಮ ಕಾರಂತ, ರಮಾಬಾಯಿ, ಸೇಂಟ್‌ ಅಲೋಶಿಯಸ್‌ ಚಾಪೆಲ್‌, ಕವಿ ಮುದ್ದಣ, ಅತ್ತೂರು ಚರ್ಚ್‌ ಹೀಗೆ ಐತಿಹಾಸಿಕ ಸ್ಥಳ ಹಾಗೂ ಸಾಧನೆಮಾಡಿದ ಮಹನೀಯರ ಸವಿನೆನಪಿಗಾಗಿ ಅಂಚೆ ಚೀಟಿ ಹೊರತರಲಾಗಿದೆ ಎಂದು ತಿಳಿಸಿದರು.

ಕೆಎಂಸಿ ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ಪ್ರಭು ಮಾತನಾಡಿ, ದಿ. ಮಲ್ಯರು ರಾಜಕಾರಣಿಯಾಗಿ ನುಡಿದಂತೆ ನಡೆದು, ಮಾಡಿದ ಸಾಧನೆಯಿಂದ ನಮ್ಮ ಜಿಲ್ಲೆ ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎನ್‌ಐಟಿಕೆ ನಿರ್ದೇಶಕ ಪ್ರೊ. ಕರ್ಣಂ ಉಮಾಮಹೇಶ್ವರ ರಾವ್‌, ಎನ್‌ಐಟಿಕೆ, ಬಂದರು ಸಹಿತ ಅವಿಭಜಿತ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ದಿ. ಮಲ್ಯರನ್ನು ಈ ಮೂಲಕ ದೇಶದಾದ್ಯಂತ ನೆನಪಿಸಿಕೊಳ್ಳುವಂತೆ ಮಾಡುವ ಕಾರ್ಯಕ್ರಮ ನಿಜಕ್ಕೂ ಮಾದರಿ ಎಂದರು.

ಕಸ್ತೂರಿ ಬಾಲಕೃಷ್ಣ ಪೈ ಮಾತನಾಡಿ, ಬಂದರು, ಎಂಜಿನಿಯರಿಂಗ್‌ ಕಾಲೇಜು, ಸೇತುವೆಗಳು, ವಿಮಾನ ನಿಲ್ದಾಣ ಮತ್ತಿತರ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಗಳಿಂದ ಜನರು ಇಂದಿಗೂ ಅವರನ್ನು ನೆನೆಯುತ್ತಿದ್ದಾರೆ. ಇದೀಗ ಅವರ 115ನೇ ಜನ್ಮದಿನ ಹಾಗೂ ಅವರ ಐತಿಹಾಸಿಕ ಅಭಿವೃದ್ಧಿ ಸಾಧನೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಅಂಚೆ ಇಲಾಖೆಯ ಸಹಕಾರದಲ್ಲಿ ವಿಶೇಷ ಲಕೋಟೆ ಹೊರ ತಂದಿದ್ದೇವೆ ಎಂದು ತಿಳಿಸಿದರು.

ಕಾಲೇಜಿನ ನಿವೃತ್ತ ಡೀನ್‌ ಪ್ರೊ. ಬಿ.ಆರ್‌. ಸಾಮಗ, ಶ್ರೀನಿವಾಸ ರೈ, ಗೋಪಾಲಕೃಷ್ಣ ಪ್ರಭು, ಗುರುಚರಣ್‌ ಮಲ್ಯ ಉಪಸ್ಥಿತರಿದ್ದರು. ಶ್ವೇತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT