ಮನೆಯೆಂಬ ಸ್ನೇಹಸೌಧ

7

ಮನೆಯೆಂಬ ಸ್ನೇಹಸೌಧ

Published:
Updated:
ಮನೆಯೆಂಬ ಸ್ನೇಹಸೌಧ

ನನ್ನ ಬಾಲ್ಯದಲ್ಲಿ ದಸರಾ ರಜೆ ಅಥವಾ ಬೇಸಿಗೆ ರಜೆ ಯಾವುದೇ ಬರಲಿ, ನಾವು ಮಕ್ಕಳೆಲ್ಲಾ ಸೇರಿ ಸಣ್ಣ ಗುಡಿಸಲಿನಂತಹ ಆಟದ ಮನೆ ಕಟ್ಟುತ್ತಿದ್ದೆವು. ಆಗ ನಮ್ಮೂರಲ್ಲಿ ಹುಲ್ಲಿನ ಛಾವಣಿಯ ಹಾಗೂ ಹೆಂಚಿನ ಛಾವಣಿಯ ಮನೆಗಳು ಅಧಿಕವಾಗಿದ್ದವು. ಹುಲ್ಲಿನ ಛಾವಣಿಯನ್ನು ವರ್ಷಕ್ಕೊಮ್ಮೆ ಬದಲಿಸಿ ಹೊಸ ಹುಲ್ಲು ಹೊದೆಸುವುದನ್ನು ನಾವೆಲ್ಲಾ ಕುತೂಹಲದಿಂದ ನೋಡುತ್ತಿದ್ದೆವು. ಅದು ನಮ್ಮ ಆಟದ ಮನೆಗೆ ಪ್ರೇರಣೆ. ಮನೆ ತಯಾರಾದ ಮೇಲೆ ಅಲ್ಲಿ ಅಪ್ಪ, ಅಮ್ಮ, ಮಕ್ಕಳ ಪಾತ್ರಗಳನ್ನು ಹಂಚಿಕೊಂಡು ಅಡುಗೆ, ದಿನಸಿ ತರುವುದು ಇತ್ಯಾದಿ (ನಾಟಕರೂಪದ) ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದೆವು. ನಮ್ಮ ಕಲ್ಪನೆಯ ಆದರ್ಶ ಕುಟುಂಬವನ್ನು ನಾವು ಆಟದ ರೂಪದಲ್ಲಿ ಪ್ರದರ್ಶಿಸುತ್ತಿದ್ದೆವು.

ಈಗ ನಾನು ಪಟ್ಟಣವಾಸಿ. ನನ್ನ ಮಕ್ಕಳಿಗೆ ಮನೆ ಕಟ್ಟಿ ಆಟ ಆಡುವ ಪರಿಸರವಿಲ್ಲ. ಅದರ ಕಲ್ಪನೆಯೇ ಬಹುಶಃ ಅವರಿಗಿಲ್ಲ. ಆದರೆ ಮನೆಯಾಟದಿಂದ ಅವರೂ ಹೊರತಲ್ಲ. ಅಪ್ಪ, ಅಮ್ಮ, ಮಗು - ಈ ಪಾತ್ರಗಳನ್ನು ತಮ್ಮೊಳಗೆ ಹಂಚಿಕೊಂಡು, ಅವರ ಆಟದ ಗೊಂಬೆಯನ್ನು ಮಗು ಎಂದು ಪರಿಗಣಿಸಿ ಅದನ್ನು ಶಾಲೆಗೆ ಕಳುಹಿಸುವ, ಮನೆಗೆ ಕರೆತರುವ, ಡಾಕ್ಟರ್ ಬಳಿ ಒಯ್ಯುವ ಆಟಗಳನ್ನು ಅವರು ಆಡುತ್ತಾರೆ.

ಕಾಲ ಯಾವುದೇ ಇರಲಿ. ಮಕ್ಕಳ ಆಟ ಬದಲಾಗಿಲ್ಲ. ಬಹುಶಃ ಯಾವ ಕಾಲದಲ್ಲೂ ಈ ಆಟವನ್ನು ಅವರು ಮರೆಯಲಾರರು. ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿ. ಅವರ ಕಲ್ಪನೆಯ ಮನೆ ಅಥವಾ ಕುಟುಂಬ ಅತ್ಯಂತ ಆದರ್ಶಪ್ರಾಯವಾಗಿರುತ್ತದೆ. ಮನೆಯೆಂದರೆ ಹೇಗಿರಬೇಕು ಎಂದು ತಿಳಿಯಲು ನಾವು ಸಣ್ಣ ಮಕ್ಕಳ ಈ ಆಟ ಗಮನಿಸಿದರೆ ಸಾಕು. ಮನೆಯ ಬಗ್ಗೆ ಪ್ರತಿಯೊಬ್ಬರಿಗೂ ಒಂದು ಉದಾತ್ತವಾದ ಕಲ್ಪನೆ ಹಾಗೂ ಕನಸಿರುತ್ತದೆ. ಆ ಕನಸಿನ ಸಾಕ್ಷಾತ್ಕಾರಕ್ಕೆ ಹಲವರು ಪರಿಶ್ರಮಿಸುತ್ತಾರೆ ಕೂಡ. ಆದರೆ ಕುಟುಂಬದ ಸದಸ್ಯರಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಹಂಚಿಕೊಳ್ಳುವಿಕೆ, ಸಾಮರಸ್ಯ ಇಲ್ಲದೇ ಇದ್ದರೆ ಅದು ಕೇವಲ ಮನೆಯಷ್ಟೇ ಆಗುತ್ತದೆ. ಕುಟುಂಬ ಆಗಲಾರದು.

ಈಗಿನ ಆಧುನಿಕ ತಲೆಮಾರಿನವರು ಕಟ್ಟುವ ಮನೆಗಳನ್ನು ಮಹಾಸೌಧಗಳೆನ್ನಬೇಕು. ಒಂದೇ ಮಗು ಇದ್ದರೂ ಹೆತ್ತವರು ಎರಡು ಅಥವಾ ಮೂರು ಮಹಡಿಯ ಮನೆ ಕಟ್ಟಿಸುತ್ತಾರೆ. ಕನಿಷ್ಠ ನಾಲ್ಕರಿಂದ ಐದು ಮಲಗುವ ಕೋಣೆಗಳು, ಹಾಲ್, ಕಿಚನ್, ಡೈನಿಂಗ್ - ಇತ್ಯಾದಿ ಹಲವು ಕೋಣೆಗಳಿರುವ ಇಂತಹ ಮನೆಗಳಲ್ಲಿ ಆಧುನಿಕ ಸೌಕರ್ಯಗಳೆಲ್ಲಾ ಇರುತ್ತವೆ. ಮನೆಯಲ್ಲಿರುವ ಕೇವಲ ಮೂರು ಅಥವಾ ನಾಲ್ಕು ಜನರಿಗೆ ಪರಸ್ಪರ ನೋಡಲು, ಮಾತನಾಡಲು ಸಮಯವಿರುವುದಿಲ್ಲ. ಮುದಿ ಹೆತ್ತವರನ್ನು ವೃದ್ಧಾಶ್ರಮಕ್ಕೆ ನೂಕಿ, ಈ ಮನೆಯಲ್ಲಿ ಮಜಾ ಮಾಡಲು ಬಯಸುವವರಿಗೆ ಬಹುಶಃ ತಮ್ಮ ಕುಟುಂಬದ ಶಿಥಿಲತೆ ಗಮನಕ್ಕೆ ಬರುವುದಿಲ್ಲ. ಯುವಪ್ರಾಯದ ಅಥವಾ ಮಧ್ಯ ವಯಸ್ಸಿನ ದಂಪತಿಗಳಿಗೆ ಹೆತ್ತವರು ಬೇಡದಿರಬಹುದು. ಆದರೆ ಮೊಮ್ಮಕ್ಕಳ ಪಾಲಿಗೆ ಅವರೊಂದು ಅಮೂಲ್ಯ ಸಂಪತ್ತು. ಮೊಮ್ಮಕ್ಕಳು ಅದನ್ನು ಅರ್ಥಮಾಡಿಕೊಳ್ಳದಿದ್ದರೂ, ಅವರ ಬದುಕಿಗೆ ಅಗತ್ಯವಾದ ಹಲವು ಮೌಲ್ಯಗಳನ್ನು ಅವರು ತಮ್ಮ ಅಜ್ಜ-ಅಜ್ಜಿಯರಿಂದ ಪಡೆಯುತ್ತಾರೆ. ಸಂಸ್ಕೃತಿ, ಸಂಪ್ರದಾಯ, ಜೀವನಮೌಲ್ಯಗಳ ಕುರಿತು ಅವರು ಮೊಮ್ಮಕ್ಕಳಿಗೆ ತಿಳಿಸಿಕೊಡುತ್ತಾರೆ.

ಸದಾ ಕೆಲಸದೊತ್ತಡದಲ್ಲಿದ್ದು ಮಕ್ಕಳೊಂದಿಗೆ ಮಾತನಾಡಲು ಕೂಡ ಸಮಯವಿಲ್ಲದ ಹೆತ್ತವರಿಗೆ ತಮ್ಮ ಮಕ್ಕಳ ಏಕಾಂತ ದೂರವಾಗಲು ಕನಿಷ್ಠಪಕ್ಷ ಈ ಮುದುಕರ ಸಂಗವಾದರೂ ಬೇಕು ಎಂಬ ಪರಿಜ್ಞಾನವೂ ಇಲ್ಲ. ಅಜ್ಜ–ಅಜ್ಜಿಯರು ಹೇಳುವ ಕತೆಗಳು, ಹಳೆಯ ಘಟನೆಗಳ ವಿವರಣೆ ಕಿರಿಯರಿಗೆ ಮಹತ್ವದ ಸಂದೇಶವನ್ನು ನೀಡಬಲ್ಲದು. ಜೀವನದ ಪಾಠವನ್ನು ಕಲಿಸಬಲ್ಲದು. ತುಂಬಿದ ಮನೆಯಲ್ಲಷ್ಟೇ ಮಕ್ಕಳ ಸಾಮಾಜೀಕರಣ ಸರಿಯಾಗಿ ಆಗಲು, ವ್ಯಕ್ತಿತ್ವ ಸರಿಯಾಗಿ ವಿಕಾಸಗೊಳ್ಳಲು ಸಾಧ್ಯ. ನೊಂದ ಸಂದರ್ಭದಲ್ಲಿ ಮನಸ್ಸಿಗೆ ಹಿತ ನೀಡಲು ಈ ಹಿರಿಯರ ಸಾನಿಧ್ಯ ನೆರವಾಗುತ್ತದೆ.

ಮನೆಯೆಂದರೆ ಕಲ್ಲು, ಸಿಮೆಂಟ್ ಕಾಂಕ್ರೀಟ್‌ಗಳಿಂದ ಕಟ್ಟಿದ ಕಟ್ಟಡವಾಗುವ ಬದಲು, ಪ್ರೀತಿಯೆಂಬ ಇಟ್ಟಿಗೆಯಿಂದ ಕಟ್ಟಿದ ಮನೆಯಾಗಬೇಕು. ಅಲ್ಲಿ ಮನಸ್ಸು ಮನಸ್ಸುಗಳು ಬೆಸೆದಿರಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಮಾತುಕತೆಗಳಿರಬೇಕು. ಮನೆಯ ಸದಸ್ಯರು ಸಣ್ಣಪುಟ್ಟ ತ್ಯಾಗಗಳಿಗೂ, ಪರಸ್ಪರ ಕ್ಷಮಿಸುವುದಕ್ಕೂ, ಸಹಿಸುವುದಕ್ಕೂ ತಯಾರಾದಾಗ ಮಾತ್ರ ಆ ಬಾಂಧವ್ಯ ಸ್ಥಿರವಾಗಿ, ಉತ್ತಮವಾಗಿ ಉಳಿಯುತ್ತದೆ. ಗಂಡ–ಹೆಂಡಿರ ನಡುವಿನ ಸಾಮಾನ್ಯ ಜಗಳವು ವಿಚ್ಛೇದನದಲ್ಲಿ ಅಂತ್ಯವಾಗಲು ಇಂದಿನ ಮನೆಗಳಲ್ಲಿ ಸಲಹೆ ನೀಡುವವರು ಹಾಗೂ ಪ್ರೀತಿಸುವವರು ಇಲ್ಲದಿರುವುದು, ಹಿರಿಯರ ಅನುಪಸ್ಥಿತಿ ಇತ್ಯಾದಿಗಳೇ ಕಾರಣ. ಆದುದರಿಂದ ಮನೆಯ ಕುರಿತ ನಮ್ಮ ಕಲ್ಪನೆಯ ವ್ಯಾಪ್ತಿಯನ್ನು ಹೆಚ್ಚಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry