‘ಕನಕ’ನ ಪ್ರಲಾಪ

7

‘ಕನಕ’ನ ಪ್ರಲಾಪ

Published:
Updated:
‘ಕನಕ’ನ ಪ್ರಲಾಪ

ಚಿತ್ರ: ಕನಕ

ನಿರ್ಮಾಪಕ/ ನಿರ್ದೇಶಕ: ಆರ್. ಚಂದ್ರು

ತಾರಾಗಣ: ದುನಿಯಾ ವಿಜಯ್, ಮಾನ್ವಿತಾ ಹರೀಶ್‌, ಹರಿಪ್ರಿಯಾ, ರಂಗಾಯಣ ರಘು, ರವಿಶಂಕರ್, ಕೆ.ಪಿ. ನಂಜುಂಡಿ

ಕನಕ ಹುಟ್ಟಿದ್ದು ಅಮಾವಾಸ್ಯೆಯಂದು. ಹಾಗಾಗಿ, ಅವನ ಬಗ್ಗೆ ಅಪ್ಪನಿಗೆ ತಿರಸ್ಕಾರ. ಮಗನಿಂದಲೇ ಕುಟುಂಬಕ್ಕೆ ಕೇಡು ಎಂಬುದು ತಂದೆಯ ಕುರುಡು ನಂಬಿಕೆ. ಇದರಿಂದ ನೊಂದ ಬಾಲಕ ಕನಕ ಮನೆ ತೊರೆಯುತ್ತಾನೆ. ನಗರಕ್ಕೆ ಬರುವ ಅವನಿಗೆ ಸಿನಿಮಾಗಳ ಪೋಸ್ಟರ್ ಅಂಟಿಸುವ ಅಪ್ಪಣ್ಣನೇ ಆಶ್ರಯದಾತ.

ಕನಕ ವರನಟ ಡಾ.ರಾಜಕುಮಾರ್‌ ಅವರ ಅಭಿಮಾನಿ. ಬದುಕಿನ ಬಂಡಿ ಎಳೆಯಲು ಆಟೊ ಓಡಿಸುವುದು ಅವನ ವೃತ್ತಿ. ಈ ಕೆಲಸದಲ್ಲೂ ಅವನದ್ದು ಸಮಾಜ ಸೇವೆ. ಅನಿರೀಕ್ಷಿತವಾಗಿ ಕನಸು ಎಂಬ ವೈದ್ಯಕೀಯ ವಿದ್ಯಾರ್ಥಿನಿ ಸಿಗುತ್ತಾಳೆ. ಇಬ್ಬರ ನಡುವೆ ಪ್ರೀತಿ ಅಂಕುರವಾಗುತ್ತದೆ. ಆದರೆ, ಆಕೆಯು ಕನಕನ ಬದುಕಿನಲ್ಲಿ ಸ್ವಪ್ನವಾಗಿಯೇ ಉಳಿದುಬಿಡುತ್ತಾಳೆ.

ಆಪ್ತ ಪ್ರೇಮಕಥಾನಕಗಳ ಮೂಲಕವೇ ಪ್ರೇಕ್ಷಕರ ಮನಗೆದ್ದವರು ನಿರ್ದೇಶಕ ಆರ್. ಚಂದ್ರು. ‘ಕನಕ’ ಚಿತ್ರದಲ್ಲಿ ರಾಜಕುಮಾರ್‌ ಅವರ ಚಿತ್ರಗಳ ಮಹತ್ವ, ತಾಯಿಯ ಸೆಂಟಿಮೆಂಟ್‌ ಮತ್ತು ಪ್ರೀತಿಯ ಮಹತ್ವ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ವಸ್ತುವಿನ ಆಯ್ಕೆಯಲ್ಲಿ ಅವರು ತೋರಿಸಿರುವ ಆಸ್ಥೆಯು ಪರದೆ ಮೇಲಿನ ಪ್ರಸ್ತುತಿಯಲ್ಲಿ ಕಾಣುವುದಿಲ್ಲ.

ದುರ್ಬಲ ಚಿತ್ರಕಥೆ, ಮಂದಗತಿಯಲ್ಲಿ ಸಾಗುವ ನಿರೂಪಣೆಯಿಂದಾಗಿ ಚಿತ್ರ ನೋಡುಗರಲ್ಲಿ ಆಸಕ್ತಿ ಕೆರಳಿಸುವುದಿಲ್ಲ. ಅಬ್ಬರದ ಸಾಹಸ ದೃಶ್ಯಗಳು, ಕೆಲವೆಡೆ ಅಸಂಬದ್ಧ ಡೈಲಾಗ್‌ಗಳು ಪ್ರೇಕ್ಷಕರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಡ್ಡುತ್ತವೆ. ಅನ್ಯಭಾಷೆಯ ಯಶಸ್ವಿ ಚಿತ್ರಗಳಿಗೆ ಕನ್ನಡದ ಚಿತ್ರಗಳೇ ಪ್ರೇರಣೆ ಎಂದು ನಾಯಕನ ಮೂಲಕ ಹೇಳಿಸುವ ‍ಪ್ರಯತ್ನವನ್ನೂ ಮಾಡಿದ್ದಾರೆ ನಿರ್ದೇಶಕರು.

ಕನಸು ಅವರ ಅಪ್ಪ ಆಗರ್ಭ ಶ್ರೀಮಂತ. ಅವಳಿಗೆ ತಾನು ವೈದ್ಯೆಯಾಗಬೇಕೆಂಬ ಆಸೆ. ಇದಕ್ಕೆ ಅಪ್ಪನ ವಿರೋಧಿವೇ ಅಡ್ಡಿ. ಕೊನೆಗೆ, ಕನಕನೇ ಅವಳ ರಕ್ಷಣೆಗೆ ನಿಲ್ಲುತ್ತಾನೆ. ಆದರೆ, ಅಪ್ಪನ ತಪ್ಪು ನಿರ್ಧಾರದಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅನಿರೀಕ್ಷಿತ ಆಘಾತದಿಂದ ನೊಂದ ನಾಯಕ, ಕುಟುಂಬದ ಮಹತ್ವ ಅರಿಯಲು ಮತ್ತೆ ಹುಟ್ಟೂರಿಗೆ ಪ್ರಯಾಣ ಬೆಳೆಸುತ್ತಾನೆ. ಊರಿನಲ್ಲಿ ಅಪ್ಪನ ಆಸೆಯಂತೆ ತಮ್ಮನನ್ನು ಹಾಲು ಒಕ್ಕೂಟದ ಅಧ್ಯಕ್ಷನನ್ನಾಗಿ ಮಾಡುತ್ತಾನೆ. ಬಾಲ್ಯದ ಗೆಳತಿಯ ಸ್ನೇಹವೂ ದಕ್ಕುತ್ತದೆ.

ಚಿತ್ರದ ಮೊದಲಾರ್ಧದಲ್ಲಿ ದುನಿಯಾ ವಿಜಯ್‌ ಅವರ ಮೈನವಿರೇಳಿಸುವ ಸಾಹಸ ದೃಶ್ಯಗಳು, ಡೈಲಾಗ್‌ಗಳಿಗೆ ಒತ್ತು ಕೊಟ್ಟಿದ್ದಾರೆ ನಿರ್ದೇಶಕರು. ದ್ವಿತೀಯಾರ್ಧದಲ್ಲಿಯೂ ಇದು ಮುಂದುವರಿದಿದೆ. ಅಣ್ಣಾವ್ರ ಅಭಿಮಾನಿಯಾದ ಕನಕನ ಪಾತ್ರವನ್ನು ಮತ್ತಷ್ಟು ಬಿಗಿಗೊಳಿಸಿದ್ದರೆ ಚಿತ್ರ ಮತ್ತೊಂದು ಮಜಲಿಗೆ ಏರುವ ಸಾಧ್ಯತೆಯಿತ್ತು. ಅಂತಹ ಸಾಧ್ಯತೆ ನಿರ್ದೇಶಕರಿಗೆ ದಕ್ಕಿಲ್ಲ.

ಮಾನ್ವಿತಾ ಹರೀಶ್‌ ಮತ್ತು ಹರಿಪ್ರಿಯಾ ಅವರ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ರವಿಶಂಕರ್‌ ಮತ್ತು ರಂಗಾಯಣ ರಘು ಅವರದ್ದು ಅಚ್ಚುಕಟ್ಟಾದ ಅಭಿನಯ. ಸಾಹಸ ದೃಶ್ಯಗಳಲ್ಲಿ ವಿಜಯ್ ವಿಜೃಂಭಿಸಿದ್ದಾರೆ. ನವೀನ್‌ ಸಜ್ಜು ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry