ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಮಾಂಸದಿಂದಲೂ ಬಿರಿಯಾನಿ

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಚಿಲ್ಲಿ ಪೋರ್ಕ್ ಡ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1/2 ಕೆ.ಜಿ., ಈರುಳ್ಳಿ – 2, ಈರುಳ್ಳಿ ಹೂ (ಸ್ಪ್ರಿಂಗ್ ಆನಿಯನ್) – ಸ್ವಲ್ಪ, ಬೆಳ್ಳುಳ್ಳಿ – 1ಉಂಡೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಕೊತ್ತಂಬರಿ – ಸ್ವಲ್ಪ, ಹಸಿಮೆಣಸಿನಕಾಯಿ – 5, ಕ್ಯಾಪ್ಸಿಕಂ – 1, ಕರಿಬೇವು – 1ಕಡ್ಡಿ, ಖಾರದಪುಡಿ, ಪೆಪ್ಪರ್ ಪುಡಿ – ಸ್ವಲ್ಪ, ಸೋಯಾ ಸಾಸ್, ಚಿಲ್ಲಿ ಸಾಸ್, ವಿನಿಗರ್, ಟೊಮೆಟೊ ಸಾಸ್, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್‍ಗೆ ಅರಿಸಿನಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‍ನಲ್ಲಿ ಬೇಯಿಸಿಕೊಳ್ಳಿ. ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ, ಸ್ಪ್ರಿಂಗ್ ಆನಿಯನ್, ಕೊತ್ತಂಬರಿಯನ್ನು ಕತ್ತರಿಸಿಟ್ಟುಕೊಳ್ಳಿ.
ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕತ್ತರಿಸಿದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಆಮೇಲೆ ಕ್ಯಾಪ್ಸಿಕಂ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪೆಪ್ಪರ್‍ಪುಡಿ ಹಾಕಿ ಸ್ವಲ್ಪ ಫ್ರೈ ಮಾಡಿ. ಬೆಂದ ಪೋರ್ಕ್ (ನೀರನ್ನು ಹಾಕಬೇಡಿ), ಕರಿಬೇವು, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಸಾಸ್, ವಿನೆಗರ್ ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ನಂತರ ಕತ್ತರಿಸಿದ ಕೊತ್ತಂಬರಿ ಮತ್ತು ಈರುಳ್ಳಿಹೂವನ್ನು ಹಾಕಿ ಮುಚ್ಚಳ ಮುಚ್ಚಿ ಸ್ವಲ್ಪ ಬೇಯಿಸಿ.
***

ಪೋರ್ಕ್ ಬ್ಲ್ಯಾಕ್ ಡ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿಪೇಸ್ಟ್ – 1ಚಮಚ, ಬೆಳ್ಳುಳ್ಳಿ ಪೇಸ್ಟ್ – 2ಚಮಚ, ಕೊತ್ತಂಬರಿ ಸೊಪ್ಪು – ಅರ್ಧ ಕಟ್ಟು, ಪುದೀನಸೊಪ್ಪು – ಸ್ವಲ್ಪ, ದನಿಯಾಪುಡಿ – 6ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – ಅರ್ಧಚಮಚ, ಈರುಳ್ಳಿ – 3, ಟೊಮೆಟೊ – 1, ಹಸಿಮೆಣಸಿನಕಾಯಿ – 12, ನಿಂಬೆಹಣ್ಣು – 1, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ದನಿಯಾಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪುಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಚೆನ್ನಾಗಿ ತೊಳೆದ ಪೋರ್ಕ್ ಮತ್ತು ಸ್ವಲ್ಪ ಉಪ್ಪು ಹಾಕಿದ ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನ, ಹಸಿಮೆಣಸಿನಕಾಯಿ, ಅರಿಸಿನಪುಡಿ, ಗರಂಮಸಾಲೆ, ಶುಂಠಿ-ಬೆಳ್ಳುಳಿ ಪೇಸ್ಟ್, ಅರ್ಧ ಹೋಳು ನಿಂಬೆರಸ ಹಾಕಿ ಫ್ರೈ ಮಾಡಿ ನೀರಿನಾಂಶ ಕಡಿಮೆಯಾದಾಗ ಸ್ವಲ್ಪ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಬೇಯಿಸುತ್ತಿರಿ, ಬೇಕೆಂದಾಗ ನೀರನ್ನು ಹಾಕುತ್ತೀರಿ. ಮಾಂಸದಲ್ಲಿ ನೀರಿನಾಂಶವಿಲ್ಲದಂತೆ ಫ್ರೈ ಮಾಡಿ ಬೆಂದ ನಂತರ ರುಚಿ ನೋಡಿ, ಉಪ್ಪು ಕಡಿಮೆಯಿದ್ದರೆ ಸೇರಿಸಿ. ಕೊತ್ತಂಬರಿ ಮತ್ತು ಹುರಿದ ಧನಿಯಾಪುಡಿ ಉದುರಿಸಿ ಆರಿದ ಎರಡು ಗಂಟೆಗಳ ನಂತರ ಉಣಬಡಿಸಿ. (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ)
***

ಪೋರ್ಕ್ ಕೈಮಾ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು:
ಪೋರ್ಕ್ ಕೈಮಾ – 1/2ಕೆ.ಜಿ., (ಕೆಂಪು ಮಾಂಸ ಮತ್ತು ಸ್ವಲ್ಪ ಚರ್ಬಿ), ಸೋನಾಮಸೂರಿ ಅಕ್ಕಿ – 1/2ಕೆ.ಜಿ., ಈರುಳ್ಳಿ – 4, ಟೊಮೆಟೊ – 4, ಹಸಿಮೆಣಸಿನಕಾಯಿ – 6, ಶುಂಠಿ - ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಕೊತ್ತಂಬರಿ – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಖಾರದಪುಡಿ – 1ಚಮಚ, ಅರಿಸಿನಪುಡಿ – ಸ್ವಲ್ಪ, ಕಾಳುಮೆಣಸು(ಪೆಪ್ಪರ್) – 10, ಲವಂಗ – 6, ಚಕ್ಕೆ – 4 ಚಿಕ್ಕ ತುಂಡುಗಳು, ಎಣ್ಣೆ, ಕಾಯಿ ಸ್ವಲ್ಪ, ನಿಂಬೆಹಣ್ಣು ಒಂದು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕೊತ್ತಂಬರಿ, ಪುದೀನ ಕತ್ತರಿಸಿಕೊಳ್ಳಿ.
ಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಸಿನಪುಡಿ, ಚಕ್ಕೆ, ಲವಂಗ ಮತ್ತು ಮೆಣಸು ರುಬ್ಬಿಟ್ಟುಕೊಳ್ಳಿ. ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಟೊಮೆಟೊ, ಕೊತ್ತಂಬರಿ, ಪುದೀನಸೊಪ್ಪು, ಪೋರ್ಕ್ ಕೈಮಾ, ರುಬ್ಬಿದ ಮಿಶ್ರಣ ಮತ್ತು ಉಪ್ಪನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ, ಅಕ್ಕಿ ಹಾಕಿ ಒಂದಕ್ಕೆ ಎರಡಕ್ಕಿಂತ ಸ್ವಲ್ಪ ಕಡಿಮೆ ನೀರನ್ನು ಹಾಕಿ ರುಚಿ ನೋಡಿ ಕಡಿಮೆ ಎನ್ನಿಸುವ ಪದಾರ್ಥಗಳನ್ನು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಹಾಕಿಸಿ. ಬೆಂದ ನಂತರ ಉಣಬಡಿಸುವ ಬೌಲ್‍ಗೆ ಹಾಕಿ ನಿಂಬೆರಸವನ್ನು ಬೆರೆಸಿ.
***

ಪೋರ್ಕ್ ಮಸಾಲ


ಬೇಕಾಗುವ ಸಾಮಗ್ರಿಗಳು:
ಪೋರ್ಕ್ – 1/2ಕೆ.ಜಿ., (ಮಾಂಸ ಮತ್ತು ಚರ್ಬಿ), ಶುಂಠಿ -ಬೆಳ್ಳುಳ್ಳಿ  – 1ಚಮಚ, ಕೊತ್ತಂಬರಿ – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ದನಿಯಾಪುಡಿ – 3ಚಮಚ, ಖಾರದಪುಡಿ – 2ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – 1/2ಚಮಚ, ಈರುಳ್ಳಿ – 2, ಟೊಮೆಟೊ – 1, ಕಾಯಿ – 1/2ಹೋಳು, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿಟ್ಟುಕೊಳ್ಳಿ. ಚೆನ್ನಾಗಿ ತೊಳೆದ ಪೋರ್ಕ್‍ನ್ನು ಕುಕ್ಕರ್‍ನಲ್ಲಿ ಹಾಕಿ ಉಪ್ಪನ್ನು ಬೆರೆಸಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, ಎರಡು ವಿಷಲ್ ಹಾಕಿಸಿ. ಸ್ವಲ್ಪ ಸಮಯದ ನಂತದ ಕುಕ್ಕರ್ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT