4

ಹೀಗಿರಲಿ ವೈದ್ಯ–ರೋಗಿ ಸಂಭಾಷಣೆ

Published:
Updated:
ಹೀಗಿರಲಿ ವೈದ್ಯ–ರೋಗಿ ಸಂಭಾಷಣೆ

ದೈಹಿಕ ಅಥವಾ ಮಾನಸಿಕ ಸಮಸ್ಯೆಯಿಂದ ವ್ಯಕ್ತಿಯು ವೈದ್ಯನನ್ನು ಭೇಟಿ ಮಾಡಿದಾಗ, ಅವನು ಯಾವ ರೀತಿ ತನ್ನ ಸಮಸ್ಯೆಯನ್ನು ವ್ಯಕ್ತಪಡಿಸಬೇಕು. ಹಾಗೂ ಅದಕ್ಕೆ ವೈದ್ಯನು ಹೇಗೆ ಸ್ಪಂದಿಸಬೇಕು ಎನ್ನುವ ಪ್ರಸಂಗ ಅತಿ ಮುಖ್ಯವಾದದ್ದು. ಇದರಲ್ಲಿ ಇಬ್ಬರೂ ತಮ್ಮ ನಿಖರತೆಯನ್ನು ತೋರಿದರೆ ರೋಗ ಹಾಗೂ ಸಮಸ್ಯೆಯನ್ನು ಗುಣಪಡಿಸುವ ಅಥವಾ ಬಗೆಹರಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಬಹುತೇಕ ರೋಗಿಗಳು ತಮ್ಮ ರೋಗದ ಲಕ್ಷಣಗಳನ್ನು ತಿಳಿಸುವುದರಲ್ಲಿ ವಿಫಲರಾಗಿರುತ್ತಾರೆ. ಸ್ಪಷ್ಟವಾದ ಮತ್ತು ತಿಳಿಯಾದ ಮಾತುಗಳನ್ನು ಬಳಸದೆ ವೈದ್ಯರ ಆಲೋಚನೆ ಮತ್ತು ರೋಗದ ಬಗ್ಗೆ ಅವರ ನಿಶ್ಚಯವಾದ ನಿಲುವನ್ನು ಅಯೋಮಯಗೊಳಿಸುತ್ತಾರೆ. ಈ ವಿಷಯವನ್ನು ವೈದ್ಯರು ತಮ್ಮ ದಿನ ನಿತ್ಯದ ವೃತ್ತಿಯಲ್ಲಿ ಕಾಣುವ ಸನ್ನಿವೇಶಗಳ ಮೂಲಕ ಸ್ಪಷ್ಟಪಡಿಸಲು ಪ್ರಯತ್ನಿಸೋಣ.

ಹೊಟ್ಟೆನೋವು

ಉದರ ಅಥವಾ ಹೊಟ್ಟೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯನ್ನು ಸಾಮಾನ್ಯವಾಗಿ ರೋಗಿಗಳು ಅದನ್ನು ‘ಗ್ಯಾಸ್ಟ್ರಿಕ್‌’ ಎಂಬ ಪದವನ್ನು ಬಳಸಿ ಅದೇ ತಮ್ಮ ಸಮಸ್ಯೆ ಎಂದು ಹೇಳಿಕೊಳ್ಳುತ್ತಾರೆ.

ಉದರದ ಸಮಸ್ಯೆ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳಬಹುದು – ಹೊಟ್ಟೆಯ ಇಬ್ಬರ, ಎದೆಯ ಹಿಂಭಾಗದಲ್ಲಿ ಬೆಂಕಿಯಂತೆ ಸುಡುವುದು, ಮಲಬದ್ಧತೆ, ಅತಿಯಾದ ಅಪಾನವಾಯುವಿನ ನಿರ್ಗಮನ, ಹಸಿವಿನ ಕೊರತೆ, ಪದೇ ಪದೇ ತೇಗುಗಳು ಬರುವುದು, ವಾಂತಿಯ ಸಂಕಟ, ಹೊಟ್ಟೆಯ ಯಾವುದೋ ಭಾಗದಲ್ಲಿ ನೋವು. ಹೀಗೆ ರೋಗಿಗಳು ಅನೇಕ ರೀತಿಯಲ್ಲಿ ಅನುಭವಿಸಬಹುದು.

ಇದರಲ್ಲಿ ಯಾವುದೇ ಲಕ್ಷಣಗಳಿದ್ದರೂ ರೋಗಿಯು ಅದನ್ನು ತಾನು ‘ಗ್ಯಾಸ್ಟ್ರಿಕ್‌’ ಎಂಬ ಕಾಯಿಲೆಯಿಂದ ನರಳುತ್ತಿದ್ದೇನೆ ಎಂದು ತಿಳಿಸುತ್ತಾನೆ.

ಸ್ಪಷ್ಟವಾದ ಮಾಹಿತಿಯನ್ನು ರೋಗಿಯು ನೀಡಿದರೆ, ವೈದ್ಯನು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ಅಥವಾ ತಪಾಸಣೆಯನ್ನು ನಿರ್ಧಾರ ಮಾಡುತ್ತಾನೆ.

ತಲೆನೋವು

ಇದು ಅತ್ಯಂತ ಸಾಮಾನ್ಯವಾದ ಸಮಸ್ಯೆ. ಇದರಿಂದಾಗಿ ರೋಗಿಗಳು ಪದೇ ಪದೇ ವೈದ್ಯರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕಾರಣ, ಅವರಲ್ಲಿ ಅಡಗಿರುವ ಭಯ. ತಲೆನೋವು ಬಂದ ಕೂಡಲೇ ಇದು ಮೆದುಳಿನ ಗಡ್ಡೆ ಅಥವಾ ಕ್ಯಾನ್ಸರ್‌ ಎಂಬುದನ್ನು ರೋಗಿಗಳೇ  ಸ್ವತಃ ನಿರ್ಣಯ ಮಾಡಿಕೊಂಡು, ವೈದ್ಯರನ್ನು ಕಂಡ ಕೂಡಲೇ ‘ತಲೆಯ ಸ್ಕ್ಯಾನ್‌ ಮಾಡಿಸಿಬಿಡಿ’ ಎಂದು ಒತ್ತಾಯಪಡಿಸುತ್ತಾರೆ.

ತಲೆನೋವಿಗೆ ಕಾರಣಗಳು ಹಲವಾರು: ಅದು ಕಣ್ಣಿನ ದೃಷ್ಟಿಯ ವ್ಯತ್ಯಾಸವಿರಬಹುದು, ಶೀತಕಾಯಿಲೆ ಇರಬಹುದು (ಸೈನಸೈಟಿಸ್‌). ಮೈಗ್ರೇನ್‌ ತಲೆನೋವಿರಬಹುದು, ಮನಸ್ಸಿನ ಆತಂಕದಿಂದ ಉಂಟಾಗುವ ತಲೆನೋವು – ಹೀಗೆ ಹಲವಾರು ಕಾರಣಗಳಿರಬಹುದು. ಇದಲ್ಲದೇ, ತಲೆನೋವಿನ ಸಮಸ್ಯೆ ದೀರ್ಘವಾದದ್ದೋ ಅಥವಾ ಇತ್ತೀಚಿನ ದಿನಗಳಿಂದ ಬಂದದ್ದೋ ಎಂಬುದು ಬಹಳ ಮುಖ್ಯ. ಹಾಗೆಯೇ ತಲೆನೋವಿನ ಜೊತೆ ವಾಂತಿಯಾಗುವುದು, ಜ್ವರಸಹಿತ ತಲೆನೋವು ಮತ್ತು ಮುಂಜಾನೆ ಅಥವಾ ಸಂಜೆಯ ವೇಳೆಗಳಲ್ಲಿ ತೀವ್ರವಾಗುವುದು – ಈ ರೀತಿಯ ಸ್ಪಷ್ಟ ಮಾಹಿತಿಯನ್ನು ನೀಡಿದರೆ ವೈದ್ಯರು ಸೂಕ್ತವಾದ ಚಿಕಿತ್ಸೆಯನ್ನು ಮಾಡಬಹುದು.

ಅಂರ್ತಜಾಲದ ಪ್ರಭಾವ

ವೈದ್ಯರನ್ನು ಭೇಟಿ ಮಾಡುವ ಮೊದಲು  ಗೂಗಲ್‌ನಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದು ತಾವೇ ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ತಮ್ಮ ಸಂಭಾಷಣೆಯಲ್ಲಿ  ವೈದ್ಯಕೀಯ ಪಾರಿಭಾಷಿಕ ಪದಗಳನ್ನು ಬಳಸಿಕೊಂಡು ತಮ್ಮ ರೋಗದ ಲಕ್ಷಣಗಳನ್ನೋ ಮತ್ತು ರೋಗದ ಹೆಸರನ್ನೋ ಸೂಚಿಸುವ ಪ್ರಸಂಗಗಳನ್ನು ಬಹುತೇಕವಾಗಿ ಕಾಣುತ್ತಿದ್ದೇವೆ. ಅಂರ್ತಜಾಲದಲ್ಲಿ ರೋಗದ ಬಗ್ಗೆ ಕೇವಲ ಮಾಹಿತಿ ಸಿಗುತ್ತದೆ. ವೈದ್ಯನಾದರೋ ತಾನು ದೀರ್ಘಾಕಾಲದಿಂದ ಪಡೆದ ವೈದ್ಯಶಾಸ್ತ್ರದ ಶಿಕ್ಷಣ ಮತ್ತು ಅನುಭವವನ್ನು ಬಳಸಿಕೊಂಡು ರೋಗಿಯನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಿ, ರೋಗಿಯು ಕೊಡುವ ಮಾಹಿತಿಗೂ ಮತ್ತು ರೋಗದ ಲಕ್ಷಣಕ್ಕೂ ಇರುವ ಹೊಂದಾಣಿಕೆಯನ್ನು ಗಮನಿಸಿ, ಒಂದು ಪ್ರಾಥಮಿಕವಾದ ನಿಶ್ಚಯಕ್ಕೆ ಬಂದು ತಪಾಸಣೆ ಮತ್ತು ಚಿಕತ್ಸೆ ಯಾವ ಮಾರ್ಗದಲ್ಲಿ ನಡೆಸಬೇಕು ಎಂದು ತೀರ್ಮಾನಿಸುತ್ತಾನೆ. ಹಾಗಲ್ಲದೆ ರೋಗಿಯು ತನ್ನ ಮಾಹಿತಿಯನ್ನಿಟ್ಟುಕೊಂಡು ನನ್ನ ಸಮಸ್ಯೆ ಇದೇ ಇರಬೇಕು ಎಂದು ನಿಶ್ಚಯಿಸಿ ವೈದ್ಯನ ಕಾರ್ಯಕ್ಕೆ ಮತ್ತು ಅವನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ವರ್ತಿಸಿದರೆ ಅದು ಸೂಕ್ತವಲ್ಲ. ತಾವು ಭೇಟಿ ಮಾಡುವ ವೈದ್ಯರ ಬಗ್ಗೆ ವಿಶ್ವಾಸ, ಗೌರವ ಹಾಗೂ ಅವರ ಅನುಭವ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರೋಗಿಗಳು ತಮ್ಮ ಸಮಸ್ಯೆಗಳನ್ನು ತಿಳಿಯಾದ ಮಾತುಗಳಲ್ಲಿ ತಿಳಿಸುವುದು ಉತ್ತಮ.

4.ರೋಗದ ಬಗ್ಗೆ ವೈದ್ಯರ ಹತ್ತಿರ ಯಾರು ಮಾತನಾಡಬೇಕು?

ಈ ಅಂಶ ಬಹಳ ಮುಖ್ಯವಾದದ್ದು. ಸಾಮಾನ್ಯವಾಗಿ ರೋಗಿಯ ಸಂಗಡ ಅವರ ಸಂಬಂಧಿಕರೋ ಅಥವಾ ಮಿತ್ರರೋ ಬಂದಿರುತ್ತಾರೆ. ಎಲ್ಲ ಕಾಲದಲ್ಲೂ ರೋಗಿಯೇ ಸ್ವತಃ ತನ್ನ ಸಮಸ್ಯೆಗಳನ್ನು ತಿಳಿಹೇಳುವುದು ಉತ್ತಮ; ಹಾಗಲ್ಲದೆ ಅವನ ಜೊತೆ ಬಂದಿರುವ ವ್ಯಕ್ತಿಗಳೇ ಅವನ ಪರವಾಗಿ ಹೇಳಲು ಮುಂದಾಗುತ್ತಾರೆ. ಇದು ಸೂಕ್ತವಲ್ಲ.

ಕೇವಲ ರೋಗಿಗೆ ಮಾತ್ರ ತನ್ನ ದೇಹಸ್ಥಿತಿಯಲ್ಲಿ ಆಗುತ್ತಿರುವ ಬಾಧೆಗಳು ಗೋಚರವಾಗುತ್ತಿರುತ್ತವೆ. ಅದನ್ನು ಅವನೇ ವ್ಯಕ್ತಪಡಿಸಿದರೆ ವೈದ್ಯನು ನೇರವಾಗಿ ಗ್ರಹಿಸಬಲ್ಲ. ರೋಗಿಯು ಅತ್ಯಂತ ನಿತ್ರಾಣದ ಸ್ಥಿತಿಯಲ್ಲಿರುವಾಗ ಮಾತ್ರ ಇತರರು ಅವನ ಪರವಾಗಿ ಮಾತನಾಡಬಹುದು.

ವೈದ್ಯರ ಅಭಿಪ್ರಾಯ

ಈಗಿನ ಪರಿಸ್ಥಿತಿಯಲ್ಲಿ ರೋಗಿಯು ಅನೇಕ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯುವುದು ಅತಿ ಸಾಮಾನ್ಯವಾಗಿದೆ. ಇದರಿಂದ ಕಾಯಿಲೆಯ ಬಗ್ಗೆ ಅವನಲ್ಲಿ ಒಂದು ದೊಡ್ಡ ಕಡತವೇ ತಯಾರಾಗಿರುತ್ತದೆ. ಹೊಸ ವೈದ್ಯನನ್ನು ಸಂದರ್ಶಿಸುವಾಗ ಹಿಂದಿನ ತಪಾಸಣೆಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿ, ದಾಖಲೆಗಳ ಕಂತನ್ನು ವೈದ್ಯನ ಮುಂದಿಡಬೇಕು. ಯಾವ ಮುಚ್ಚುಮರೆಯಿಲ್ಲದೆ ತಮ್ಮ ಹಿಂದಿನ ಮಾಹಿತಿಗಳನ್ನು ವೈದ್ಯರ ಗಮನಕ್ಕೆ ತಂದರೆ, ಆ ವೈದ್ಯನ ಆಲೋಚನೆ ಹಾಗೂ ನಿರ್ಧಾರ ಒಂದು ಸರಿಯಾದ ಕ್ರಮದಲ್ಲಿ ಸಾಗುತ್ತದೆ ಮತ್ತು ತಪಾಸಣೆ ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ನಿರ್ಧಾರವನ್ನು ಮಾಡಲು ಅನುಕೂಲವಾಗುತ್ತದೆ. ಹಾಗೂ ಅನವಶ್ಯಕವಾದ ಪರೀಕ್ಷೆಗಳನ್ನು ಮಾಡುವುದನ್ನು ತಡೆಯುತ್ತದೆ.

ರೋಗಿಯು ಅನ್ಯ ಕಾರಣವನ್ನಿಟ್ಟುಕೊಂಡು ತನ್ನ ಹಿಂದಿನ ದಾಖಲೆಗಳ ಆಧಾರವನ್ನವಲಂಬಿಸಿ ಹೊಸ ವೈದ್ಯನ ಸಮರ್ಥತೆ ಮತ್ತು ನಿಪುಣತೆಯನ್ನು ಪರೀಕ್ಷಿಸಲು ಪ್ರಯತ್ನಿಸಬಾರದು.

ಈ ಸಂಗತಿಯಿಂದ ಕಲಿಯುವ ಪಾಠವೇನೆಂದರೆ ರೋಗಿಗಳು ಸಾಧ್ಯವಾದಷ್ಟು ಒಂದೇ ವೈದ್ಯನಲ್ಲೇ ವಿಶ್ವಾಸವಿಟ್ಟು ಚಿಕಿತ್ಸೆ ಪಡೆದರೆ ಅದು ಅತಿ ಅನುಕೂಲಕರವಾದದ್ದು. ಅವಶ್ಯವಿದ್ದಲ್ಲಿ ಆ ವೈದ್ಯನೇ ಇತರ ವೈದ್ಯರ ಸಲಹೆಯನ್ನು ಪಡೆಯಲು ಆದೇಶಿಸುತ್ತಾನೆ.

ಈ ರೀತಿಯಾಗಿ ರೋಗಿಯು ತನ್ನ ಸಮಸ್ಯೆಯನ್ನು ವೈದ್ಯನ ಮುಂದಿಟ್ಟಾಗ – ಆ ವೈದ್ಯನ ಪ್ರತಿಕ್ರಿಯೆ ಮತ್ತು ಸ್ಪಂದನೆ ಸಹ ರೋಗವನ್ನು ಗುಣಮಾಡುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

ಈ ಕೆಳಕಂಡ ಅಂಶಗಳ ಅರಿವು ಮತ್ತು ಅನುಭವ ವೈದ್ಯರಿಗೆ ಸಹಜವಾಗಿಯೇ ಸಿದ್ಧವಾಗಿರುತ್ತದೆ. ಕೇವಲ ಓದುಗರ ಮಾಹಿತಿಗಾಗಿ ಇದನ್ನು ಉಲ್ಲೇಖಿಸಲಾಗುತ್ತದೆ.

1. ರೋಗಿಯು ಹೇಳುವ ಮಾತುಗಳನ್ನು ವೈದ್ಯರು ಸಹನೆ ಮತ್ತು ಏಕಾಗ್ರತೆಯಿಂದ ಆಲಿಸಬೇಕು.

2. ರೋಗಿಯು ಪ್ರಪ್ರಥಮವಾಗಿ ಸಂದರ್ಶಿಸುವ ವೈದ್ಯನ ಪಾತ್ರ ಬಹಳ ಮಹತ್ತರವಾದದ್ದು.

ರೋಗದ ಲಕ್ಷಣಗಳನ್ನು ರೋಗಿಯ ಬಾಯಿಂದ ಕೇಳಿದ ಬಳಿಕ, ವೈದ್ಯರು ಅವನನ್ನು ಪರೀಕ್ಷೆ ಮಾಡಿ, ಕಾಯಿಲೆಯನ್ನು ಗುರುತಿಸುವುದರಲ್ಲಿ ಸೂಕ್ತವಾದ ತಪಾಸಣೆಗಳನ್ನು ಮಾಡಿ, ರೋಗಿಯು ಒಂದಾನೊಂದು ನಿರ್ದಿಷ್ಟವಾದ ರೋಗದಿಂದ ಬಳಲುತ್ತಿದ್ದಾನೆ ಎಂದು ದೃಢಪಡಿಸಿಕೊಂಡು ತನ್ನ ಚಿಕಿತ್ಸೆಯನ್ನು ಆರಂಭಿಸುತ್ತಾನೆ.

ಈ ಮೇಲ್ಪಟ್ಟ ಅಂಶಗಳಲ್ಲಾಗಲಿ ಅಥವಾ ಹಂತಗಳಲ್ಲಾಗಲೀ ಯಾವುದೇ ರೀತಿಯ ನ್ಯೂನತೆ ಅಥವಾ ಮಾನವ ಸಹಜವಾಗದ ತಪ್ಪುಗಳು ಸಂಭವಿಸಿದರೆ ರೋಗದ ನಿರ್ಣಯ ಹಾಗೂ ಚಿಕತ್ಸೆ ಬೇರೆಯಾದ ಹಾದಿಯನ್ನೇ ಹಿಡಿಯಬಹುದು.

ನಂತರದಲ್ಲಿ ಪರೀಕ್ಷೆ ಮಾಡುವ ವೈದ್ಯರು ಹಳೆಯ ಜಾಡನ್ನೇ ಅನುಸರಿಸುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣುತ್ತೇವೆ, ಒಂದು ರೀತಿಯ ಪೂರ್ವಭಾವಿ ಅಭಿಪ್ರಾಯ ಏರ್ಪಡುವುದೇ ಇದಕ್ಕೆ ಕಾರಣ.

ಈ ಕಾರಣದಿಂದ ಪ್ರಥಮ ವೈದ್ಯನ ಪಾತ್ರ ಬಹಳ ಮುಖ್ಯ. ರೋಗಿಯ ಮಾತುಗಳಲ್ಲದೇ ಅವನು ವರ್ತಿಸುವ ರೀತಿ, ಅವನ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು, ಉದ್ಯೋಗಕ್ಕೆ ಸೇರಿದ ವಿಷಯಗಳು ಹಾಗೂ ವೈಯಕ್ತಿಕ ವಿಷಯಗಳೂ ರೋಗದ ನಿರ್ಣಯದಲ್ಲಿ ಬಹಳ ಸಹಕಾರಿಯಾಗುತ್ತದೆ.

ರೋಗಿಯು ತನ್ನ ಸಮಸ್ಯೆಗಳನ್ನು ತಿಳಿಸುವುದರಲ್ಲಿ ಮಾತುಗಳಿಂದ ವಿಫಲನಾದರೆ ಅಥವಾ ಅಸಮಂಜಸವೆನಿಸಿದರೆ, ವೈದ್ಯನು ರೋಗಕ್ಕೆ ಸಂಬಂಧಪಟ್ಟ ನೇರ ಪ್ರಶ್ನೆಗಳನ್ನು ಕೇಳಿ ಅವನಿಂದ ಹೊರ ತೆಗೆಯಬೇಕಾಗುತ್ತದೆ.

5. ರೋಗಿಯು ವರ್ಣಿಸುವ ಚಿಹ್ನಗಳೇ ಅತಿಮುಖ್ಯವಾದದ್ದು, ಇದನ್ನು ಆಧಾರ ಮಾಡಿಕೊಂಡು ವೈದ್ಯನು ಮುಂದಿನ ತಪಾಸಣೆ ಮತ್ತು ಚಿಕಿತ್ಸೆಯ ವಿಧಾನದಲ್ಲಿ ಬಹಳ ಸಹಕಾರಿಯಾಗುತ್ತದೆ.

ಈ ಪ್ರಕಾರವಾದ ರೋಗಿ ಮತ್ತು ವೈದ್ಯನ ಸಂದರ್ಶನ ಹಾಗೂ ಸಂಭಾಷಣೆ ಒಂದು ಅನುಕೂಲಕರವಾದ ಮತ್ತು ರಚನಾತ್ಮಕವಾದ ವಾತಾವರಣ ಒದಗಿದಾಗ ರೋಗದ ಸಮಸ್ಯೆ ಬಗೆಹರಿಯಲು ಸಾಧ್ಯವಾಗುತ್ತದೆ. ಪರಸ್ಪರ ಸಾಮರಸ್ಯ ಹಾಗೂ ವಿಶ್ವಾಸ ಮೂಡಿಬಂದರೆ ಇಬ್ಬರಿಗೂ ಸಮಾಧಾನ ಮತ್ತು ತೃಪ್ತಿಯನ್ನು ಒದಗಿಸುತ್ತದೆ.

ವೈದ್ಯಕೀಯ ಚಿಕತ್ಸೆ ಹಾಗೂ ಅದರ ಫಲಿತಗಳು ಜೀವಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಮಾನವಸೃಷ್ಟಿಯಲ್ಲಿ ಕಂಡುಬರುವ ವೈವಿಧ್ಯಗಳು ನಮ್ಮ ಉಹೆಗೂ ನಿಲುಕದು. ಒಂದೇ ರೋಗವು ಅನೇಕ ವ್ಯಕ್ತಿಗಳಲ್ಲಿ ವಿವಿಧ ಬಣ್ಣಗಳಲ್ಲಿ ಕಾಣಿಸಬಹುದು; ಒಂದೇ ಮದ್ದು ನಾನಾ ವ್ಯಕ್ತಿಗಳಲ್ಲಿ ಅವರವರ ದೇಹಕ್ಕನುಗುಣವಾದ ರೀತಿಯಲ್ಲಿ ಸ್ಪಂದಿಸಿ, ಅದು ಫಲಕಾರಿ ಆಗಬಹುದು ಅಥವಾ ವಿಫಲವಾಗಬಹುದು. ಹೀಗೆ ಚಿಕಿತ್ಸೆಯ ಫಲಿತಾಂಶಗಳು ವೈದ್ಯನ ಸಾಮರ್ಥ್ಯ ಹಾಗೂ ನಿಷ್ಠೆಗೂ ಮೀರಿದ್ದು. ಹಾಗಾಗಿ ಜನಸಾಮಾನ್ಯರು ಈ ಎಲ್ಲ ಅಂಶಗಳನ್ನು ಮತ್ತು ನ್ಯೂನತೆಗಳನ್ನೂ ಗಮನಿಸಬೇಕು.

‘ವೈದ್ಯೋ ನಾರಾಯಣೋ ಹರಿಃ’ ಎಂಬ ರೋಗಿಗಳ ಪೂಜ್ಯಭಾವನೆ ಹಾಗೂ ‘ಸರ್ವೇ ಸಂತು ನಿರಾಮಯಾ’ ಎಂಬ ವೈದ್ಯರ ಶುಭ ಕೋರಿಕೆ ಸದಾ ಬೆಳಗಲಿ ಮತ್ತು ಬೆಳೆಯಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry