ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿದಿರಬೇಕು ಈ ಹತ್ತು ವಿಷಯಗಳು

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಸಂತಾನಹೀನತೆ ಸಮಸ್ಯೆ, ಅದಕ್ಕೆ ಕಾರಣಗಳು, ಚಿಕಿತ್ಸೆಗಳು – ಈ ಕುರಿತು ಇನ್ನೂ ಎಷ್ಟೋ ಮಂದಿಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ಪ್ರಕರಣವೂ ಹೆಚ್ಚುತ್ತಿರುವ ಕಾರಣ ಕೆಲವು ಮೂಲವಿಷಯಗಳನ್ನಾದರೂ ತಿಳಿದಿರಲೇಬೇಕಾದ ಅವಶ್ಯಕತೆಯಿದೆ. ಅವು ಇಂತಿವೆ:

1. ಹಲವು ಪ್ರಕರಣಗಳಲ್ಲಿ ಮಹಿಳೆಯರಲ್ಲಿನ ಸಂತಾನಹೀನತೆ ಸಮಸ್ಯೆಯನ್ನು ಗುರುತಿಸುವುದು, ಅರ್ಥೈಸಿಕೊಳ್ಳುವುದು, ಹಾಗೆಯೇ ಸಮಸ್ಯೆಯ ನಿಖರತೆಗೆ ತಕ್ಕಂತೆ ಚಿಕಿತ್ಸೆಯೂ ಸುಲಭವಾಗಿ ಲಭ್ಯವಿದೆ. ಆದರೆ ಪುರುಷರ ವಿಷಯದಲ್ಲಿ ಇದು ಸಾಧ್ಯವಾಗಿಲ್ಲ. ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಕಂಡುಕೊಳ್ಳುವುದು, ಅದಕ್ಕೆ ನಿಖರ ಕಾರಣ ತಿಳಿಯುವುದೂ ಅಷ್ಟು ಸರಳವಿಲ್ಲ.

2. ಭಾರತದ ನಗರಪ್ರದೇಶಗಳಲ್ಲಿ ಸಂತಾನಹೀನತೆ ಸಮಸ್ಯೆ ಹೆಚ್ಚಲು 'ಒತ್ತಡ'ವೂ ಒಂದು ಕಾರಣ. ವೃತ್ತಿಸಂಬಂಧಿತ ಒತ್ತಡ, ದೀರ್ಘಾವಧಿಯ ಜೊತೆಗೆ ಅನಿಯಮಿತ ಕೆಲಸ, ಈ ರೀತಿಯ ಅಂಶಗಳು ಸಮಸ್ಯೆಯನ್ನು ದುಪ್ಪಟ್ಟುಗೊಳಿಸಿವೆ. ಹಾಗಾಗಿ ಒತ್ತಡದ ನಿರ್ವಹಣೆ ಅತ್ಯವಶ್ಯಕವಾಗಿದ್ದು, ಇದು ಗರ್ಭ ಧರಿಸುವ ಸಾಧ್ಯತೆಯ ಮಟ್ಟವನ್ನೂ ಹೆಚ್ಚಿಸುತ್ತದೆ.

3. ಪ್ರತಿಯೊಬ್ಬರೂ ಪೌಷ್ಟಿಕಾಂಶಗಳ ಕೊರತೆ ಬಗ್ಗೆ ನಿಗಾ ವಹಿಸಬೇಕು. ಆರೋಗ್ಯಯುತ ಜೀವನಕ್ಕೆ ಸಮತೋಲಿತ ಆಹಾರ ಕ್ರಮವನ್ನೂ ಅನುಸರಿಸಬೇಕು. ವೈದ್ಯರ ಅನುಮತಿ ಮೇರೆಗೆ ಸಂತಾನಶಕ್ತಿಗೆ ಅವಶ್ಯಕವಾದ ಎಲ್ಲಾ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವೆಡೆ ಗಮನ ಹರಿಸಬೇಕು.

4. ಸಂತಾನಹೀನತೆಯ ಹಲವು ಪ್ರಕರಣಗಳಲ್ಲಿ ಫ್ಯಾಲೊಪೀನ್ ಟ್ಯೂಬ್ (ಡಿಂಬನಾಳ)ಗಳಲ್ಲಿನ ಅಡೆತಡೆಯೇ ಬಹು ಮುಖ್ಯ ಕಾರಣವಾಗಿರುತ್ತದೆ. ಇದಕ್ಕಾಗಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

5. ಸಂತಾನಶಕ್ತಿ ವೃದ್ಧಿ ಸೇರಿದಂತೆ ಆರೋಗ್ಯಯುತ ಜೀವನಕ್ಕೆ ಆರೋಗ್ಯಯುತ ಜೀವನಶೈಲಿ ಅಳವಡಿಸಿಕೊಳ್ಳುವುದೂ ಅವಶ್ಯಕ. ಜೀವನಶೈಲಿ ಅವಲಂಬಿತ ಸಮಸ್ಯೆಗಳಾದ ಎಂಡೋಮೆಟ್ರಿಯಾಸಿಸ್, ಸ್ಥೂಲಕಾಯ, ಅನಿಯಮಿತ ಋತುಚಕ್ರಗಳಿಗೂ ಸಂತಾನಹೀನತೆಗೂ ಒಂದಕ್ಕೊಂದು ಸಂಬಂಧವಿರುವುದು ಸಾಕಷ್ಟು ಅಧ್ಯಯನಗಳಿಂದ ದೃಢಪಟ್ಟಿದೆ.

6. ವಯಸ್ಸಿಗೂ ಸಂತಾನಶಕ್ತಿಗೂ ನೇರಾನೇರ ಸಂಬಂಧವಿದೆ. ದೈಹಿಕ ಶಕ್ತಿ, ರೋಗನಿರೋಧಕ ಗುಣ ಹಾಗೂ ಹಾರ್ಮೋನಿನ ಮಟ್ಟವು ಆಯಾ ವಯಸ್ಸಿಗೆ ತಕ್ಕಂತೆ ಇರುತ್ತದೆ. ಆದ್ದರಿಂದ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ದೇಹದ ಹುರುಪು ಹಾಗೂ ಶಕ್ತಿಯೂ ವಯಸ್ಸಾಗುತ್ತಿದ್ದಂತೆ ಕುಗ್ಗುತ್ತದೆ ಎಂಬುದನ್ನು ಮರೆಯಬಾರದು. ಆದ್ದರಿಂದ ಸಂತಾನಹೀನತೆ ಸಮಸ್ಯೆಗೆ ಸಂಬಂಧಿಸಿದ ಚಿಕಿತ್ಸೆಯನ್ನೂ ಬಹುಬೇಗನೇ ಆರಂಭಿಸಿದರೆ ಒಳಿತು.

7. ಸಮಸ್ಯೆಗೆ ಮೂಲ ಕಾರಣವನ್ನು ಪರಿಶೀಲಿಸುವುದು ಹಾಗೂ ಅದಕ್ಕೆ ನಿಖರ ಚಿಕಿತ್ಸೆಯನ್ನು ಪಡೆಯುವ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಇಡೀ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ತಜ್ಞರ ಪಾಲೂ ಹೆಚ್ಚಿರುತ್ತದೆ.

8. ಪುರುಷಸಂಬಂಧಿತ ಸಂತಾನಹೀನತೆ ಸಮಸ್ಯೆ ಕಂಡುಕೊಳ್ಳುವುದು ಹಾಗೂ ಅದಕ್ಕೆ ಪರಿಹಾರ ನೀಡುವುದು ಬಹು ಕ್ಲಿಷ್ಟಕರ. ಅದಕ್ಕಾಗಿ, ನಿರ್ದಿಷ್ಟ ಮೂಲ ಕಾರಣ ಕಂಡುಕೊಳ್ಳಲು ಹಲವು ಪರೀಕ್ಷೆ ಹಾಗೂ ಸಂಶೋಧನೆಗಳನ್ನೂ ಪ್ರಯತ್ನಿಸಲಾಗಿದೆ. ವೀರ್ಯದ ಗುಣಮಟ್ಟ, ಪ್ರಮಾಣ ಹಾಗೂ ವೀರ್ಯದ ಡಿಎನ್‌ಎ ಕುರಿತು ತಿಳಿದುಕೊಳ್ಳಲು ವೀರ್ಯದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಗುವಿನ ಬೆಳವಣಿಗೆಯಲ್ಲಿ ವೀರ್ಯದ ಡಿಎನ್ಎ ಅತಿ ನಿರ್ಣಾಯಕ ಅಂಶವಾಗಿರುತ್ತದೆ. ಭ್ರೂಣದ ಸಹಜ ಬೆಳವಣಿಗೆಗೆ ವೀರ್ಯದ ವಂಶವಾಹಿ ನಿರ್ಣಾಯಕವಾಗಿರುತ್ತದೆ. ವೀರ್ಯದ ಡಿಎನ್‌ಎ ವಿಘಟನೆ (ಸ್ಪರ್ಮ್‌ ಡಿಎನ್‌ಎ ಫ್ರಾಗ್ಮೆಂಟೇಷನ್) ಈ ನಿಟ್ಟಿನಲ್ಲಿ ಮುಖ್ಯ ಅಂಶವಾಗಿದೆ.

ಸಂತಾನಹೀನತೆ ಸಮಸ್ಯೆ, ನಿರಂತರ ಗರ್ಭಪಾತ, ಜನ್ಮಜಾತ ವೈಪರೀತ್ಯಗಳ ಕುರಿತಂತೆ 2005ರಿಂದಲೂ ಸಾಕಷ್ಟು ಅಧ್ಯಯನಗಳೂ ನಡೆದಿವೆ. ಇದಕ್ಕೆ ಅನುವಾಗಿ ವೀರ್ಯದ ಗುಣಮಟ್ಟವನ್ನೂ ಪರಿಶೀಲಿಸಲಾಗುತ್ತಿದ್ದು, ವೀರ್ಯದಲ್ಲಿನ ಡಿಎನ್‌ಎ ಅವನತಿಯು ಈ ಸಮಸ್ಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಮೆಸಾಚುಸೆಟ್‌ ಆಮಹರ್ಟ್ಸ್‌ನ ವಿಶ್ವವಿದ್ಯಾಯಲಯವು, ಥಾಲೇಟ್‌ನ ಮಟ್ಟ, ದಂಪತಿಯ ಸಂತಾನಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಲಹೆ ನೀಡಿದೆ. ಪ್ಲಾಸ್ಟಿಕ್ ಹಾಗೂ ಶೇವಿಂಗ್ ಕ್ರೀಂನಂಥ ಪರ್ಸನಲ್ ಕೇರ್ ಉತ್ಪನ್ನಗಳಲ್ಲಿ ಈ ಥಾಲೇಟ್‌ ಅಂಶಗಳು ಕಂಡುಬಂದಿದ್ದು, ಇವು ಪುರುಷರಲ್ಲಿನ ಸಂತಾನಹೀನತೆಗೆ ಅತಿ ಮುಖ್ಯ ಕಾರಣ ಎಂದು ಪರಿಗಣಿಸಲಾಗಿದೆ. ಈ ಅಂಶಕ್ಕೆ ದೇಹವು ತೆರೆದುಕೊಂಡಷ್ಟು ಹಾರ್ಮೋನಿನ ಮೇಲೂ ಪರಿಣಾಮ ಹೆಚ್ಚುತ್ತದೆ.

9. ಹಾರ್ಮೋನಿನ ಮಟ್ಟವನ್ನು ಟೆಸ್ಟೊಸ್ಟೆರೋನ್ ಮಟ್ಟವನ್ನು ನಿರ್ಧರಿಸಲು ಪರೀಕ್ಷಿಸಲಾಗುತ್ತದೆ. ಶಾರೀರಿಕ ಸಮಸ್ಯೆಗಳಾದ ಜನನಾಂಗದ ದೋಷಗಳು, ಲೈಂಗಿಕ ಸಂಬಂಧಿ ಸೋಂಕು, ವೀರ್ಯದ ಹಿಮ್ಮುಖ ಚಲನೆ ಕುರಿತೂ ಸಾಕಷ್ಟು ಪರೀಕ್ಷೆಗಳಿವೆ.

10. ಸಂತಾನಹೀನತೆ ಸಮಸ್ಯೆಯು ದಾಂಪತ್ಯ ಸಂಬಂಧದಲ್ಲಿನ ತೊಡಕಿನಿಂದ ಇನ್ನಷ್ಟು ಜಟಿಲವಾಗುತ್ತದೆ. ಆದ್ದರಿಂದ ದಂಪತಿಗಳಲ್ಲಿ ಅನ್ಯೋನ್ಯತೆಯೂ ಈ ವಿಷಯದಲ್ಲಿ ಅವಶ್ಯಕವಾಗಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಸಮಯವು ಸಂಪೂರ್ಣ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲವನ್ನು ಒಬ್ಬರಿಗೊಬ್ಬರು ನೀಡಿದಂತೆ ಎಂದು ಭಾವಿಸಬೇಕು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT