ನಗು: ಆರೋಗ್ಯದ ಹೊನಲು

7

ನಗು: ಆರೋಗ್ಯದ ಹೊನಲು

Published:
Updated:
ನಗು: ಆರೋಗ್ಯದ ಹೊನಲು

ವೈದ್ಯರು ಸಂಪೂರ್ಣವಾಗಿ ಎಲ್ಲ ರೀತಿಯ ಪರೀಕ್ಷೆಗಳನ್ನೂ ಮಾಡಿ, ‘ನೋಡಿ ಸ್ವಾಮಿ, ಸತ್ಯ ಹೇಳಬೇಕೆಂದರೆ ನಿಮಗೆ ಇನ್ನು ಹೆಚ್ಚು ಕಾಲ ಇಲ್ಲ. ನಿಮ್ಮ ಕೊನೆಯ ಆಸೆಯೇನಾದರೂ ಇದ್ದರೆ, ನನ್ನಲ್ಲಿ ಹೇಳಿ’ ಎನ್ನುತ್ತಾರೆ. ಆಗ ಆತ, ‘ಹೌದು ಸ್ವಾಮಿ, ಇನ್ನೊಬ್ಬ ವೈದ್ಯನನ್ನು ಕಾಣಬೇಕೆಂದಿದ್ದೇನೆ’ ಎನ್ನುತ್ತಾನೆ.

ನಾವುಗಳು ಇತ್ತೀಚೆಗೆ ಕ್ಷುಲ್ಲಕ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎನ್ನಬಹುದು. ಪಾಂಡಿತ್ಯದ ಜೊತೆಗೆ ನಗು ಮುಖ ಕಾಣುವುದೇ ಅಪರೂಪ. ವಿದ್ಯಾವಂತರು, ಸಾಹಿತಿಗಳು, ಕಲಾವಿದರು, ಉದ್ಯೋಗಪತಿಗಳು – ಎಲ್ಲರ ಮುಖದಲ್ಲಿಯೂ ಗಡುಸುತನ, ಗಾಂಭೀರ್ಯದ ಗಾಢವಾದ ರೇಖೆಗಳು ಮುಖದ ಮೇಲೆ ಎದ್ದುಕಾಣುತ್ತವೆ.

ಬದುಕಿನ ಅನುಭವ ಒಂದು ರೀತಿಯಲ್ಲಿ ದುರಂತ ನಾಟಕದಿಂದ ಹರ್ಷ ನಾಟಕದತ್ತ ಹೊರಳುವುದೇ ಆಗಿದೆ. ಷೇಕ್ಸ್‌ಪಿಯರ್ ನಾಟಕಗಳ ವಿಮರ್ಶಕ ಪ್ರೊ. ಪಾಲ್ ಕ್ಯಾಂಟರ್ ಹೇಳುವ ಪ್ರಕಾರ ಆತನ ಹರ್ಷ ನಾಟಕಗಳು, ದುರಂತ ನಾಟಕಗಳಿಗಿಂತ ಹೆಚ್ಚು ಅರ್ಥಗರ್ಭಿತ. ಹರ್ಷ ಮತ್ತು ಹಾಸ್ಯಗಳು ದುರಂತವನ್ನು ಬೇಧಿಸಿದಾಗ, ಹೊರಹೊಮ್ಮುವ ಚಿಲುಮೆ. ಶ್ರೇಷ್ಠ ವಿಮರ್ಶಕ ಹೆರಾಲ್ಡ್ ಬ್ಲೂಮ್ ಮೆಚ್ಚಿಕೊಳ್ಳುವ ಷೇಕ್ಸ್‌ಪಿಯರ್‌ ಪಾತ್ರ ಎಂದರೆ ವಿದೂಷಕ ಸರ್ಜಾನ್ ಫಾಲ್ಸ್‌ಸ್ಟಾಪ್‌. ಅವನೇ ಹೇಳುವ ಪ್ರಕಾರ ಆತ ತಾನೆಂಬ ನೀರ್ಗುಳ್ಳೆಯನ್ನು ತಾನೇ ಊದಿ ಊದಿ ಒಡೆದು ಆನಂದ ಪಡುತ್ತಾನೆ.

ನಾವುಗಳು ಆರೋಗ್ಯವಾಗಿರಲು ಬದುಕಿನಲ್ಲಿ ಹಾಸ್ಯ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಎಂತಹ ಗಂಭೀರ ಸಮಸ್ಯೆಗಳನ್ನೂ ಹಗುರವಾಗಿ ಸ್ವೀಕಾರ ಮಾಡಬಹುದು. ವೈಜ್ಞಾನಿಕವಾಗಿ ಇದುವರೆಗೆ ಕಂಡುಬಂದಿರುವ ಎಲ್ಲ ವಿಶ್ಲೇಷಣೆಗಳೂ ಹಾಸ್ಯ ಮತ್ತು ವಿನೋದ ಹತ್ತು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಮೆದುಳಿನಲ್ಲಿ ಉಂಟಾಗುವ ಹಾರ್ಮೋನ್‍ಗಳು ರಕ್ತನಾಳಗಳನ್ನು ಸ್ವಚ್ಛಗೊಳಿಸುವ ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುವುದರಿಂದ ಹಿಡಿದು ಸರ್ವ ಅಂಗಾಂಗಗಳ ಚಟುವಟಿಕೆ ಮತ್ತು ಚಲನಶೀಲತೆಗೆ ನಾಂದಿ ಹಾಡುತ್ತವೆ.

ಅನೇಕ ಕಾಯಿಲೆಗಳು ಮನಸ್ಸಿನ ಅಂಗಳದಲ್ಲಿಯೇ ಹುಟ್ಟುವಂಥವು. ಇವುಗಳನ್ನು ‘ಸೈಕೋ ಸೊಮ್ಯಾಟಿಕ್ ಡಿಸೀಸಸ್’ ಎಂದು ಕರೆಯುತ್ತಾರೆ. ಹಾಗೆಯೇ ವೈದ್ಯರು ಇಂಜೆಕ್ಷನ್ ಕೊಡುವ ಬದಲು ಶುದ್ಧೀಕರಿಸಿದ ನೀರನ್ನೇ ಕೊಟ್ಟರೂ ಅದರ ಮಾನಸಿಕ ಪರಿಣಾಮ ಕಾಯಿಲೆಯನ್ನು ಗುಣಪಡಿಸುವಲ್ಲಿ ಕೆಲಸ ಮಾಡುವುದು ಉಂಟು ಎಂದು ಇಂದು ವಿಜ್ಞಾನ ಒಪ್ಪಿಕೊಳ್ಳುತ್ತದೆ. ಹಲವರು ಹೀಗೂ ಹೇಳುವುದುಂಟು: ‘Only thing that works for sure in modern medicine is placebo’. ಸಮಸ್ಯೆಯ ಗಾಂಭೀರ್ಯತೆ ಅದು ಸಮಸ್ಯೆಯಲ್ಲಿಯೇ ಇರುವುದಿಲ್ಲ. ನಾವು ಅದಕ್ಕೆ ಸ್ಪಂದಿಸುವ ಪ್ರೀತಿಯಲ್ಲಿರುತ್ತದೆ. ಕೆಲವು ವರ್ಷಗಳ ಹಿಂದೆ ಕಿದ್ವಾಯ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಧ್ವನಿಪೆಟ್ಟಿಗೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಸಿಕೊಂಡಿದ್ದ ವ್ಯಕ್ತಿಯೊಬ್ಬ ವಿವಿಧ ರೀತಿಯ ಶಬ್ದಗಳನ್ನು ಹೊರಹೊಮ್ಮಿಸಿ ಅಲ್ಲಿ ಸುತ್ತಮುತ್ತಲಿನ ರೋಗಿಗಳನ್ನು ಆನಂದದಲ್ಲಿ ತೇಲಿಸುತ್ತಿದ್ದ. ಸಣ್ಣ ಸಮಸ್ಯೆಗಳಲ್ಲಿ ಮುಳುಗಿ ನೀರು ಕುಡಿಯುವುದುಂಟು ಅಥವಾ ಸಂಸಾರಸಾಗರದಲ್ಲೇ ಸರಳವಾಗಿ ತಿಳಿಯಾಗಿ ತೇಲುವವರೂ ಇದ್ದಾರೆ.

ಕೊನೆಗೂ ಬದುಕನ್ನು ಅಷ್ಟು ಗಾಂಭೀರ್ಯದಿಂದ ನೋಡಬೇಕೇ? ಈ ಪ್ರಶ್ನೆ ಆಗಾಗ ಕಾಡುವುದುಂಟು. ಉಡ್ಡಿ ಆ್ಯಲನ್ ಹೀಗೆ ಹೇಳುತ್ತಾನೆ: ‘ನನಗೆ ಸಾವಿನ ಭಯವಿಲ್ಲ. ಸಾವು ಬಂದಾಗ, ನಾನು ಅಲ್ಲಿರುವುದಿಲ್ಲ’. ಆತನೇ ಇನ್ನೊಂದೆಡೆ, ‘to die, that’s the last thing I would do in my life’ ಎನ್ನುತ್ತಾನೆ. ಸಾಕ್ರೆಟಿಸ್ ‘ತತ್ತ್ವ ಆನಂದದಿಂದ ಬದುಕನ್ನು ನಿರ್ಗಮಿಸುವುದು ಕಲಿಸುತ್ತದೆ’ ಎನ್ನುತ್ತಾನೆ. ಭಯ, ಮೋಹ, ಶೋಕಗಳಿಗೆ ಹಾಸ್ಯದ ಗುಳಿಗೆ ಸರಿಯಾದ ಮದ್ದು. ಇತ್ತೀಚೆಗೆ ಆರೋಗ್ಯದ ವ್ಯಾಮೋಹ ಮತ್ತು ವ್ಯಸನ ಎಲ್ಲರನ್ನೂ ಕಾಡತೊಡಗಿದೆ. ಆಹಾರ, ನಿದ್ರಾ, ಮೈಥುನಗಳ ಬಗ್ಗೆಯೂ ವಿಶ್ಲೇಷಣೆಗಳೇ ಹೆಚ್ಚಾಗಿದ್ದು, ಆನಂದಮಯ ಅನುಭವಗಳು ಕಮ್ಮಿಯಾಗಿದೆ ಎನ್ನಬಹುದು. ಕಣ್ಣೀರಿಗೆ ಕಣ್ಣೀರು ಸೇರಿಸುವವರೇ ನಮ್ಮಲ್ಲಿ ಹೆಚ್ಚು.

ಆಸ್ಪತ್ರೆಯಲ್ಲಿರುವವರನ್ನು ನೋಡಲು ಬರುವವರು, ಗ್ಲಿಸರಿನ್ ಹಾಕಿಕೊಂಡೇ ಬಂದಿರುತ್ತಾರೆ. ಸಮಸ್ಯೆಗೆ ಸಮಸ್ಯೆಯ ಹೊರೆಯನ್ನೇ ಪೋಣಿಸಿ ದುಃಖದ ರಾಶಿಯನ್ನು ಪೇರಿಸುತ್ತಾರೆ. ಅನಾರೋಗ್ಯ, ಸಾವು–ನೋವುಗಳಲ್ಲಿ ಮನಸ್ಸನ್ನು ಹಗುರ ಮಾಡುವ ಉಪಾಯ ನಮ್ಮಲ್ಲಿದ್ದರೆ, ನಾವು ಸಹಾಯ ಮಾಡಿದಂತೆಯೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry