ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ‘ಡಾನ್ಸ್‌ ಜಾತ್ರೆ’

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಹಂಪಿನಗರದ ‘ಶಾಂಭವಿ ಸ್ಕೂಲ್ ಆಫ್ ಡಾನ್ಸ್’ ಸಂಸ್ಥೆಯು ಜ.27–28ರಂದು ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಸಮೀಪದ ಶಂಕರ ಪ್ರತಿಷ್ಠಾನದಲ್ಲಿ ‘ಡಾನ್ಸ್‌ಜಾತ್ರೆ’ ಆಯೋಜಿಸಿದೆ. ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಿರಂತರ ಕಾರ್ಯಕ್ರಮಗಳಿರುತ್ತವೆ. ಈ ನೃತ್ಯ ಶಾಲೆಯನ್ನು ಹಿರಿಯ ನೃತ್ಯಗುರು ವೈಜಯಂತಿ ಕಾಶಿ ಅವರು ನಡೆಸುತ್ತಿದ್ದಾರೆ.

‘ಏಳು ವರ್ಷಗಳಿಂದ ‘ಡಾನ್ಸ್‌ ಜಾತ್ರೆ’ ನಡೆಸುತ್ತಿದ್ದೇವೆ. ಕಳೆದ ವರ್ಷ ಈ ಉತ್ಸವ ಧಾರವಾಡದಲ್ಲಿ ನಡೆದಿತ್ತು. ನಗರೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ತಕ್ಕುದಾಗಿ ಬದಲಾಗುತ್ತಿರುವ ನೃತ್ಯಸಂಸ್ಕೃತಿಗೆ ವಿಭಿನ್ನ ಆಯಾಮ ಕೊಡುವ ಯತ್ನ ಈ ಡಾನ್ಸ್‌ ಜಾತ್ರೆ’ ಎಂದು ವೈಜಯಂತಿ ಕಾಶಿ ವಿವರಿಸುತ್ತಾರೆ.

ಹೊಸತನ, ಹೊಸ ಪ್ರಯೋಗಗಳು ಈ ಜಾತ್ರೆಯ ವಿಶೇಷ. ಈ ಬಾರಿ ಶಾಸ್ತ್ರೀಯ ನೃತ್ಯಗಳ ವಸ್ತ್ರದ ಆಹಾರ್ಯದಲ್ಲಿ ಆದ ಮಾರ್ಪಾಡುಗಳ ಕುರಿತ ಫ್ಯಾಷನ್‌ ಷೋ ಕೂಡಾ ನಡೆಯಲಿದೆ. ಶಿಲಾಬಾಲಿಕೆಯರಲ್ಲಿ ಕಾಣಬಹುದಾದ ಉಡುಗೆ ತೊಡುಗೆಯಿಂದ ಹಿಡಿದು ವರ್ತಮಾನದವರೆಗಿನ ನಾಟ್ಯ ಕಲಾವಿದೆಯರ ವಸ್ತ್ರವಿನ್ಯಾಸದಲ್ಲಿ ಆದ ಮಾರ್ಪಾಡುಗಳನ್ನು 25ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ವಸ್ತ್ರ ವಿನ್ಯಾಸ ಷೋ ಜೊತೆಗೆ ಕಲಾವಿದರು ಶಾಸ್ತ್ರೀಯ ಸಂಗೀತಕ್ಕೆ ನೃತ್ಯ ಮಾಡಲಿರುವುದು ವಿಶೇಷ. ಇದರಲ್ಲಿ ಚೀನಾ, ಥಾಯ್ಲೆಂಡ್‌ ಮತ್ತು ವಿವಿಧ ರಾಜ್ಯಗಳ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

ಭುವನೇಶ್ವರದ ರತಿಕಾಂತ್‌ ಮೊಹಾಪಾತ್ರ ಹಾಗೂ ತಂಡದಿಂದ ಒಡಿಸ್ಸಿ ನೃತ್ಯ, ನವದೆಹಲಿಯ ರಾಜೇಂದ್ರ ಗಂಗಣಿ ಹಾಗೂ ತಂಡದಿಂದ ಕಥಕ್‌, ವೈಜಯಂತಿ ಕಾಶಿ ಹಾಗೂ ತಂಡದಿಂದ ಕುಚಿಪುಡಿ, ರಾಧಾ ಶ್ರೀಧರ್‌ ತಂಡದಿಂದ ಭರತನಾಟ್ಯ, ಕೋಲ್ಕತ್ತದ ಹೃತಾಳ್‌ ಡಾನ್ಸ್ ಸೆಂಟರ್‌ ಕಲಾವಿದರ ವಿಶಿಷ್ಟ ನೃತ್ಯ ಜಾತ್ರೆಯ ಗಮನಸೆಳೆವ ಅಂಶಗಳು.

ಶಾಸ್ತ್ರೀಯ ನೃತ್ಯ, ಕಳರಿಪಯಟ್ಟು, ಸಮಕಾಲೀನ ನೃತ್ಯ, ಸಾಲ್ಸಾ, ಜನಪದ, ಹಿಪ್‌ ಹಾಪ್‌... ಹೀಗೆ ವಿವಿಧ ನೃತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ 12 ಕಾರ್ಯಾಗಾರಗಳನ್ನು ದೇಶದ ಪ್ರಸಿದ್ಧ ನೃತ್ಯ ಹಾಗೂ ಸಂಗೀತ ವಿದ್ವಾಂಸರು ನಡೆಸಿಕೊಡಲಿದ್ದಾರೆ. ಇದಲ್ಲದೇ ಹಿರಿಯ ನಾಗರಿಕರಿಗಾಗಿ ಪ್ರಾಣಾಯಾಮ ಕಾರ್ಯಾಗಾರವೂ ನಡೆಯಲಿದೆ.

ನೃತ್ಯ ಗುರುಗಳು ಹಾಗೂ ನೃತ್ಯ ಕಲಾವಿದರ ಭಾವಚಿತ್ರ ಪ್ರದರ್ಶನವೂ ನಡೆಯಲಿದೆ.

’ನಾಡಿನ ಪ್ರಸಿದ್ಧ ನೃತ್ಯಗುರುಗಳ ಪರಿಚಯ, ಮಾಹಿತಿಯನ್ನು ಜನಸಾಮಾನ್ಯರಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಗುರುಗಳ, ಶ್ರೇಷ್ಠ ಕಲಾವಿದರ ಭಾವಚಿತ್ರ ಹಾಗೂ ಅವರ ಸಣ್ಣ ಪರಿಚಯ ಇರುವ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 10 ವರ್ಷಗಳಿದ ಭರತನಾಟ್ಯ ರಂಗಪ್ರವೇಶ ಮಾಡಿರುವ ಕಲಾವಿದರ ಭಾವಚಿತ್ರ ಹಾಗೂ ಮಾಹಿತಿಯನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ. ಯುವ ಕಲಾವಿದರಿಗೆ ಸಣ್ಣ ಪ್ರೋತ್ಸಾಹ ಇದು. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’  ಎಂದು ಪ್ರದರ್ಶನದ ಬಗ್ಗೆ ಮಾಹಿತಿ ನೀಡುತ್ತಾರೆ ವೈಜಯಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT